ಹಿಂದಿಯ Indian Idol ಶೋನಲ್ಲಿ ಸರಿಗಮಪ ದಿಯಾ ಹೆಗ್ಡೆ ಮಿಂಚು; ಪುಟಾಣಿ ಹಾಡಿಗೆ ಹುಬ್ಬೇರಿಸಿದ ಶ್ರೇಯಾ ಘೋಷಾಲ್! VIDEO
ಜೀ ಕನ್ನಡದ ಸರಿಗಮಪ ಸೀಸನ್ 19ರಲ್ಲಿ ಮಿಂಚಿದ್ದ ಸಾಗರದ ಪುಟಾಣಿ ದಿಯಾ ಹೆಗ್ಡೆ, ಇದೀಗ ರಾಷ್ಟ್ರ ಮಟ್ಟದ ಸಿಂಗಿಂಗ್ ವೇದಿಕೆ ಏರಿದ್ದಾಳೆ. ಇಂಡಿಯನ್ ಐಡಲ್ ಫಿನಾಲೆಯಲ್ಲಿ ಎಲ್ಲರನ್ನು ರಂಜಿಸಿರುವ ದಿಯಾ, ಇದೇ ಮಾರ್ಚ್ 9ರಿಂದ ಸೋನಿ ಟಿವಿಯಲ್ಲಿ ಪ್ರಸಾರವಾಗಲಿರುವ ಸೂಪರ್ ಸ್ಟಾರ್ ಸಿಂಗರ್ 3ರಲ್ಲಿ ಸ್ಪರ್ಧಿಯಾಗಿಯೂ ಕಣಕ್ಕಿಳಿಯಲಿದ್ದಾಳೆ ದಿಯಾ.
Diya Hegde at Indian Idol Singing Show: ಕನ್ನಡ ಕಿರುತೆರೆಯಲ್ಲಿ ಹಾಡು ಮತ್ತು ನೃತ್ಯದ ಮೂಲಕವೇ ಸೈ ಎನಿಸಿಕೊಂಡು, ಕರುನಾಡ ಮನೆ ಮಂದಿಯಿಂದಲೂ ಶಹಬ್ಬಾಷ್ ಹೇಳಿಸಿಕೊಂಡ ಪುಟಾಣಿ ಪ್ರತಿಭೆ ದಿಯಾ ಹೆಗ್ಡೆ. ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಶೋನಲ್ಲಿ ತಮ್ಮ ಗಾಯನದ ಮೂಲಕವೇ ಮಿಂಚು ಹರಿಸಿದ್ದರು. ಇದೀಗ ಇದೇ ಪುಟಾಣಿ ರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ್ದಾರೆ. ಸೋನಿ ಟಿವಿಯಲ್ಲಿ ಪ್ರಸಾರವಾದ ಇಂಡಿಯನ್ ಐಡಲ್ ಸಿಂಗಿಂಗ್ ಶೋನ ಫಿನಾಲೆಯಲ್ಲಿ ದಿಯಾ ಹೆಗ್ಡೆ ಸಹ ಗಾಯನದ ಮೂಲಕವೇ ಗಮನ ಸೆಳೆದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬಂದಗದ್ದೆ ಗ್ರಾಮದ ವೆಂಕಟೇಶ್ ಹೆಗ್ಡೆ ಮತ್ತು ಅಪರ್ಣಾ ದಂಪತಿಯ ಪುತ್ರಿ ಈ ದಿಯಾ ಹೆಗ್ಡೆ. ಜೀ ಕನ್ನಡ ವಾಹಿನಿಯಲ್ಲಿ ಸರಿಗಮಪ ಸೀಸನ್ 19ರಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನಸೆಳೆದ್ದರು. ಗಾಯನವಷ್ಟೇ ಅಲ್ಲ ಡಾನ್ಸ್ ಮೂಲಕವೂ ಎಲ್ಲರ ನೆಚ್ಚಿನ ಗಾಯಕಿಯಾಗಿದ್ದರು ದಿಯಾ. ಈ ಪುಟಾಣಿಗೆ ಶೋನ ಕೊನೆಯಲ್ಲಿ ಬೆಸ್ಟ್ ಎಂಟರ್‌ಟೈನರ್ ಅವಾರ್ಡ್ ಸಹ ನೀಡಿ ಗೌರವಿಸಲಾಗಿತ್ತು. ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದಡಿ ಇರಿಸಿದ್ದಾರೆ.
ಹಿಂದಿ ಸಿಂಗಿಂಗ್ ಶೋಗೆ ದಿಯಾ ಹೆಗ್ಡೆ
ಸೋನಿ ಟಿವಿಯಲ್ಲಿ ಇದೀಗ ಇಂಡಿಯನ್ ಐಡಲ್ ಸೀಸನ್ 14ರ ಗ್ರ್ಯಾಂಡ್ ಫಿನಾಲೆ ನಡೆದಿದೆ. ಈ ಶೋನಲ್ಲಿಯೇ ಸೂಪರ್ ಸ್ಟಾರ್ ಸಿಂಗ್ ಸೀಸನ್ 3ರಲ್ಲಿ ಭಾಗವಹಿಸಲಿರುವ ಪುಟಾಣಿಗಳನ್ನು ರಿವೀಲ್ ಮಾಡಿದ್ದಾರೆ. ಆ ಪೈಕಿ ಸಾಗರದ ದಿಯಾ ಹೆಗ್ಡೆ ಸಹ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಹಿಂದಿನ ಗಾಯನ ಸ್ಪರ್ಧಾ ಕಣಕ್ಕೂ ಕನ್ನಡದ ಪುಟಾಣಿ ಕಾಲಿರಿಸಿದೆ. ಮಾರ್ಚ್ 9ರಿಂದ ಸೂಪರ್ ಸ್ಟಾರ್ ಸಿಂಗರ್ 3 ಶೋ ಶುರುವಾಗಲಿದೆ.
ಶ್ರೇಯಾ ಘೋಷಾಲ್ ಅಚ್ಚರಿ..
ಇಂಡಿಯನ್ ಐಡಲ್ ಶೋನ ಫಿನಾಲೆ ವೇದಿಕೆ ಮೇಲೆ ನಿರೂಪಕ, ಈ ವೇದಿಕೆ ಮೇಲೆ ಆಗಾಗ ಧಮಾಕಾ ನಡೆಯುತ್ತಲೇ ಇರುತ್ತದೆ ಈ ಸಲ ಯಾವ ರೀತಿಯ ಧಮಾಕಾ ಇರಲಿದೆ ಎಂದು ಫಿನಾಲೆ ಶೋಗೆ ಅತಿಥಿಯಾಗಿ ಬಂದ ನೇಹಾ ಕಕ್ಕರ್‌ಗೆ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ನೇಹಾ, ಸೂಪರ್ ಸ್ಟಾರ್ ಸಿಂಗರ್ 3 ಸೀಸನ್‌ನ ಮೂವರು ಸೂಪರ್ ಮಕ್ಕಳು ಈ ವೇದಿಕೆಗೆ ಬರಲಿದ್ದಾರೆ ಎಂದು ಅವರನ್ನು ಸ್ವಾಗತಿಸಿದ್ದಾರೆ. "ನಿಜಕ್ಕೂ ಈ ಮಗು ಹಾಡು ಹೇಳುತ್ತಾ?" ಎಂದು ಶ್ರೇಯಾ ಘೋಷಾಲ್ ದಿಯಾಳನ್ನು ನೋಡಿ ಅಚ್ಚರಿ ಹೊರಹಾಕಿದ್ದಾರೆ. "ಚೋಟಾ ಪಾಕೆಟ್ ಬಡಾ ಧಮಾಕಾ" ಎಂದೂ ಹೇಳಿದ್ದಾರೆ. ಶ್ರೇಯಾ ಘೋಷಾಲ್, ವಿಶಾಲ್ ದದ್ಲಾನಿ, ಕುಮಾರ್ ಸಾನು ಈ ಶೋನ ತೀರ್ಪುಗಾರರು.
ಮೇರೆ ಖಾಬೋ ಮೇ ಜೋ ಆಯೇ..
ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಚಿತ್ರದ ಮೇರೆ ಖಾಬೋ ಮೇ ಜೋ ಆಯೇ.. ಹಾಡು ಹೇಳಿ ತೀರ್ಪುಗಾರರ ಗಮನ ಸೆಳೆದಿದ್ದಾಳೆ ದಿಯಾ. ದಿಯಾಳ ಹಾಡು ಕೇಳಿ ಶ್ರೇಯಾ ಘೋಷಾಲ್, ನೇಹಾ ಕಕ್ಕರ್, ಸೋನು ನಿಗಮ್ ಸಹ ಫಿದಾ ಆಗಿದ್ದಾರೆ. ಅಂದಹಾಗೆ, ಇಂಡಿಯನ್ ಐಡಲ್ ಸೀಸನ್ 14ರ ವಿಜೇತರಾಗಿ ವೈಭವ್ ಗುಪ್ತಾ ಹೊರಹೊಮ್ಮಿದ್ದಾರೆ. ಇನ್ನೇನು ಮುಂದಿನ ಕೆಲ ದಿನಗಳಲ್ಲಿ ಸೂಪರ್ ಸ್ಟಾರ್ ಸಿಂಗರ್ 3 ಶುರುವಾಗಲಿದೆ.