ಸೀತಾ ರಾಮ ಸೀರಿಯಲ್ ಸಿಹಿಗೆ ಗೊಜ್ಜವಲಕ್ಕಿ ಅಂದ್ರೆ ಬಲು ಇಷ್ಟ; ಅಷ್ಟಕ್ಕೂ ಈ ರೆಸಿಪಿಯಲ್ಲಿ ಅಂಥದ್ದೇನು ಸ್ಪೇಷಲ್? ಇಲ್ಲಿದೆ ಸಿಂಪಲ್ ಪಾಕವಿಧಾನ
Gojju Avalakki Recipe: ಸೀತಾ ರಾಮ ಸೀರಿಯಲ್‌ನ ಪುಟಾಣಿ ಸಿಹಿಗೆ ಸೀತಮ್ಮ ಮಾಡೋ ಗೊಜ್ಜವಲಕ್ಕಿ ಎಂದರೆ ಬಲು ಇಷ್ಟ. ಹಾಗಾದರೆ ಈ ಗೊಜ್ಜವಲಕ್ಕಿ ಮಾಡೋದು ಹೇಗೆ? ಇಲ್ಲಿದೆ ನೋಡಿ ಸರಳ ಪಾಕವಿಧಾನ.
Seetha Rama Serial: ಸೀತಾ ರಾಮ ಸೀರಿಯಲ್ ಇದೀಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಈಗತಾನೇ ಕೋರ್ಟ್‌ನಿಂದ ಕೇಸ್ ಗೆದ್ದು ಸಿಹಿಯನ್ನು ತಮ್ಮ ಮಡಿಲಿಗೆ ಮತ್ತೆ ಹಾಕಿಕೊಂಡಿದ್ದಾರೆ ಸೀತಾ ರಾಮ. ಹೀಗಿರುವಾಗ ಇದೇ ಧಾರಾವಾಹಿಯಲ್ಲಿ ಸೀತಾ ಮಾಡಿಕೊಡುವ ಆ ಒಂದು ಖಾದ್ಯ ಸಿಹಿಗೆ ಬಲು ಇಷ್ಟ. ಒಂದರ್ಥದಲ್ಲಿ ಸೀತಮ್ಮನ ಆ ರೆಸಿಪಿಗೆ ಸಿಹಿ ಸಹ ಫಿದಾ ಆಗಿದ್ದಾಳೆ. ಅಷ್ಟಕ್ಕೂ ಆ ರೆಸಿಪಿ ಯಾವುದು ಎಂಬುದು ನಿಮಗೆ ಈಗಾಗಲೇ ತಿಳಿದಿರುತ್ತದೆ. ಅದೇ ಗೊಜ್ಜವಲಕ್ಕಿ ಅಥವಾ ಹುಳಿ ಅವಲಕ್ಕಿ.
ಶ್ಯಾಮ್ ಮತ್ತು ಶಾಲಿನಿ ಜತೆಗೆ ಕೋರ್ಟ್‌ಗೆ ಸಿಹಿಯೂ ಬಂದಿರ್ತಾಳೆ. ಅತ್ತ ಕಡೆ ಸೀತಾ ಸಿಹಿಗಿಷ್ಟ ಎಂದು ಗೊಜ್ಜವಲಕ್ಕಿ ಮಾಡಿಕೊಂಡು, ರಾಮ್ ಜತೆಗೆ ಕೋರ್ಟ್ ಆವರಣಕ್ಕೆ ಬರುತ್ತಿದ್ದಂತೆ, ಓಡಿ ಬಂದ ಸಿಹಿ, ಸೀತಮ್ಮನ ಕೈಯಲ್ಲಿನ ಬ್ಯಾಗ್ ಕಸಿದು ಅದರಲ್ಲಿ ಗೊಜ್ಜವಲಕ್ಕಿಯ ರುಚಿ ನೋಡುತ್ತಾಳೆ. ಆಗ ಆ ಪುಟಾಣಿ ಬಾಯಿಂದ ಬರೋ ಪದ, "ಸೀತಮ್ಮ ನಿನ್ನ ಥರ ಯಾರೂ ಗೊಜ್ಜವಲಕ್ಕಿ ಮಾಡಲ್ಲ" ಎಂದು. ಹಾಗಾದರೆ, ನಾವಿಲ್ಲಿ ಇದೇ ಗೊಜ್ಜವಲಕ್ಕಿ ರೆಸಿಪಿ ಮಾಡುವ ವಿಧಾನ ಹೇಗೆ ಎಂಬುದನ್ನು ನೋಡೋಣ.
ಗೊಜ್ಜವಲಕ್ಕಿಗೆ ಬೇಕಿರೋ ಸಾಮಗ್ರಿಗಳು
- ಒಂದೂವರೆ ಗ್ಲಾಸ್ ಗಟ್ಟಿ ಅವಲಕ್ಕಿ
- ನಿಂಬೆಹಣ್ಣು ಗಾತ್ರದ ಹುಣಸೆಹಣ್ಣು
- ಒಂದು ಟೇಬಲ್ ಸ್ಪೂನ್ ಕಪ್ಪು ಎಳ್ಳು
- ಎರಡು ಟೇಬಲ್ ಸ್ಪೂನ್ ಒಣಕೊಬ್ಬರಿ
- ಅಳತೆಗೆ ತಕ್ಕಷ್ಟು ಎಣ್ಣೆ
- ಎರಡು ಚಿಟಿಕೆ ಅರಿಶಿಣ ಪುಡಿ
- ಅರ್ಧ ಸ್ಪೂನ್ ಜೀರಿಗೆ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಒಂದು ಟೇಬಲ್ ಸ್ಫೂನ್ ಬೆಲ್ಲ
- ಎರಡು ಟೇಬಲ್ ಸ್ಫೂನ್ ಸಾಂಬಾರ್ ಪುಡಿ\ ರಸಮ್ ಪುಡಿ ಸಹ ಬಳಸಬಹುದು
ಇದನ್ನೂ ಓದಿ: ಚಳಿಗಾಲದ ಸಂಜೆ ವೇಳೆ ಗರಿಗರಿಯಾದ ತಿಂಡಿ ಬೇಕೆನಿಸಿದರೆ ಈ ರೆಸಿಪಿ ಮಾಡಿ ನೋಡಿ: ಇಲ್ಲಿದೆ ಸಬ್ಬಕ್ಕಿ ಪಕೋಡ ಮಾಡುವ ವಿಧಾನ
ಒಗ್ಗರಣೆಗೆ
- ಎರಡು ಸ್ಫೂನ್ ಶೇಂಗಾ
- ಅರ್ಧ ಸ್ಫೂನ್ ಕಡಲೇ ಬೇಳೆ
- ಅರ್ಧ ಸ್ಫೂನ್ ಉದ್ದಿನಬೇಳೆ
- ಕರಿಬೇವು
- ಒಣಮೆಣಸಿನಕಾಯಿ
- ಇಂಗು
ಇದನ್ನೂ ಓದಿ: ನಾನ್‌ವೆಜ್‌ನಲ್ಲಿ ಏನಾದ್ರೂ ಸ್ಪೆಷಲ್ ತಿನ್ಬೇಕು ಅಂತಿದ್ರೆ ಚಿಕನ್ ಪಕೋಡ ಟ್ರೈ ಮಾಡಿ; ಸಖತ್ ಸಿಂಪಲ್, ಟೇಸ್ಟಿ ರೆಸಿಪಿಯಿದು
ಮಾಡುವ ವಿಧಾನ
- ಮೊದಲಿಗೆ ಗಟ್ಟಿ ಅವಲಕ್ಕಿಯನ್ನು ಒಂದು ಮಿಕ್ಸರ್‌ನಲ್ಲಿ ತರಿ ತರಿಯಾಗಿ ಗ್ರೈಂಡ್ ಮಾಡಿ. ಯಾವುದೇ ಕಾರಣಕ್ಕೂ ಪುಡಿ ಮಾಡಬೇಡಿ. ಬಳಿಕ ಒಂದು ಜರಡಿಯಲ್ಲಿ ಪುಡಿ ಬೇರೆ, ಅವಲಕ್ಕಿ ನುಚ್ಚು ಬೇರೆ ಬೇರೆ ಮಾಡಿಡಿ.
- ಈಗ ಆ ತರಿ ತರಿಯಾದ ಅವಲಕ್ಕಿಗೆ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಬಳಿಕ ನೀರನ್ನು ಬಸಿದು ಚೂರು ಮೇಲೆ ನೀರು ಚುಮುಕಿಸಿ ಪಕ್ಕಕ್ಕಿಡಿ. ಹಾಗೇ ನೀರು ಚುಮುಕಿಸುವುದರಿಂದ ಅವಲಕ್ಕಿ ಯಾವುದೇ ಕಾರಣಕ್ಕೂ ಗಟ್ಟಿಯಾಗುವುದಿಲ್ಲ.
- ಇತ್ತ ನಿಂಬೆ ಹಣ್ಣಿನ ಗಾತ್ರದ ಹುಣಸೆಹಣ್ಣನ್ನು ಒಂದು ಕಪ್ ನೀರಿನಲ್ಲಿ ನೆನೆಯಿಡಿ. ಕಾಲು ಗಂಟೆ ನೆನೆದ ಬಳಿಕ ಅದನ್ನು ಚನ್ನಾಗಿ ಸ್ಮ್ಯಾಷ್ ಮಾಡಿ, ಹುಳಿ ನೀರನ್ನು ಪ್ರತ್ಯೇಕ ಮಾಡಿಕೊಳ್ಳಿ.
- ಗ್ಯಾಸ್ ಆನ್ ಮಾಡಿ, ಬಾಣಲೆ ಇಟ್ಟು ಅದಕ್ಕೆ ಕಪ್ಪು ಎಳ್ಳು ಮತ್ತು ಒಣಕೊಬ್ಬರಿ ಹಾಕಿ ಬಿಸಿ ಆಗುವವರೆಗೂ ಹುರಿದುಕೊಂಡು ಮಿಕ್ಸರ್‌ನಲ್ಲಿ ತರಿ ತರಿಯಾಗಿ ಪೌಡರ್ ಮಾಡಿಕೊಳ್ಳಿ.
- ಕಾದ ಪ್ಯಾನ್‌ಗೆ ಒಂದು ಸ್ಪೂನ್ ಎಣ್ಣೆ ಹಾಕಿ. ಅದಕ್ಕೆ ಅರಿಶಿನ ಪುಡಿ ಹಾಕಿ ಬಳಿಕ ಹುಣಸೆ ಹಣ್ಣಿನ ನೀರನ್ನು ಹಾಕಿ ಸ್ವಲ್ಪ ಹೊತ್ತು ಕುದಿಯಲು ಬಿಡಿ. ಈಗ ಈ ಮಿಶ್ರಣಕ್ಕೆ ಅರ್ಧ ಸ್ಪೂನ್ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
- ಕುದಿ ಬಂದ ಬಳಿಕ ಒಂದು ಸ್ಪೂನ್ ಬೆಲ್ಲ ಹಾಕಿ. ಎರಡು ಸ್ಪೂನ್ ಸಾಂಬಾರ್ ಪುಡಿ ಅಥವಾ ರಸ ಪೌಡರ್ ಅನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ಎರಡರಿಂದ ಮೂರು ನಿಮಿಷಗಳ ಕಾಲ ನೀರು ಸ್ವಲ್ಪ ಕಡಿಮೆ ಆಗುವವರೆಗೂ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
- ಈಗ ಇದೇ ಮಿಶ್ರಣಕ್ಕೆ ಪೌಡರ್ ಮಾಡಿದ ಎಳ್ಳು ಕೊಬ್ಬರಿ ಪುಡಿಯನ್ನು ಸೇರಿಸಿ. ಮತ್ತೆ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣಕ್ಕೆ ನೆನೆಯಿಟ್ಟಿದ್ದ ಅವಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
- ಇದಾದ ಮೇಲೆ ಒಂದು ಒಗ್ಗರಣೆ ಪಾತ್ರೆ ತೆಗೆದುಕೊಂಡು, ಅದರಲ್ಲಿ ಎರಡು ಟೇಬಲ್ ಸ್ಫೂನ್ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಎರಡು ಟೇಬಲ್ ಸ್ಫೂನ್ ಶೇಂಗಾ ಕಾಳು, ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ. ಚೂರು ಕಂದು ಬಣ್ಣಕ್ಕೆ ಬಂದ ಬಳಿಕ, ಕರಿಬೇವು ಮತ್ತು ಒಣ ಮೆಣಸು ಹಾಕಿ ಮಿಕ್ಸ್ ಮಾಡಿ.
- ಇದೇ ಒಗ್ಗರಣೆ ಮಿಶ್ರಣಕ್ಕೆ ಚೂರು ಇಂಗು ಜತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಅವಲಕ್ಕಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಲ್ಲಿಗೆ ರುಚಿ ರುಚಿಯಾದ ಗೊಜ್ಜವಲಕ್ಕಿ ರೆಡಿ.