Kannada Serial TRP: ಮತ್ತೆ ಪುಟಿದೆದ್ದ ಪುಟ್ಟಕ್ಕನ ಮಕ್ಕಳು, ಸೀತಾ ರಾಮ ಸೀರಿಯಲ್‌ಗೂ ಮುನ್ನಡೆ, ಯಾವ ಸ್ಥಾನದಲ್ಲಿದೆ ಲಕ್ಷ್ಮೀ ನಿವಾಸ?
ಟಿಆರ್‌ಪಿ ಪಟ್ಟಿಯಲ್ಲಿ ಈ ವಾರ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ನಿವಾಸ ಧಾರಾವಾಹಿಗಳ ನಡುವೆ ಪೈಪೋಟಿ ಏರ್ಪಟ್ಟರೆ, ಸೀತಾ ರಾಮ ಮುನ್ನಡೆ ಸಾಧಿಸಿದೆ. ರಾಮಾಚಾರಿ ಧಾರಾವಾಹಿಯೂ ಟಾಪ್ ಐದರಲ್ಲಿದೆ. ಹೀಗಿದೆ ಈ ವಾರದ ಟಾಪ್ ಐದು ಸೀರಿಯಲ್‌ಗಳ ಮಾಹಿತಿ.
Kannada Serial TRP: ಲೋಕಸಭಾ ಚುನಾವಣೆಯ ಕಾವಿನಲ್ಲಿ ಕನ್ನಡದ ಸೀರಿಯಲ್‌ಗಳಲ್ಲೂ ಮೊದಲ ಸ್ಥಾನಕ್ಕೆ ತೀವ್ರ ಹಣಾಹಣಿ ಏರ್ಪಟ್ಟಿದೆ. ರೋಚಕತೆ ಕಂಟೆಂಟ್ ನೀಡುವ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿವೆ ಸೀರಿಯಲ್‌ಗಳು. ಅದರಂತೆ, ಈ ವಾರದ ಟಿಆರ್‌ಪಿ ಲಿಸ್ಟ್ ಹೊರಬಿದ್ದಿದೆ. ಅಂಕಿ ಸಂಖ್ಯೆಯ ಲೆಕ್ಕಾಚಾರವನ್ನು ನೋಡಿದರೆ, ಈ ಸಲ ಒಂದಷ್ಟು ಅಚ್ಚರಿಯ ಬದಲಾವಣೆಗಳು ಘಟಿಸಿವೆ. ಹಾಗಾದರೆ, ಯಾವ ಸೀರಿಯಲ್ ಮೊದಲ ಸ್ಥಾನದಲ್ಲಿದೆ? ನಂತರದ ಸ್ಥಾನದಲ್ಲಿರುವ ಸೀರಿಯಲ್‌ಗಳು ಯಾವವು? ಇಲ್ಲಿದೆ ಮಾಹಿತಿ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್, ಟಿಆರ್‌ಪಿ ವಿಚಾರದಲ್ಲಿ ಸದಾ ಮುಂದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸೀರಿಯಲ್ ಶುರುವಾಗಿ ಎರಡು ವರ್ಷದ ಮೇಲಾದರೂ, ಹೊಸ ಸೀರಿಯಲ್‌ಗಳ ಭರಾಟೆಯ ನಡುವೆಯೂ ಉಳಿದ ಧಾರಾವಾಹಿಗಳಿಗೆ ಟಕ್ಕರ್ ಕೊಡುವ ಕೆಲಸವನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮುಂದುವರಿಸಿದೆ. ಈಗ ಈ ವಾರದ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದ್ದು, ಮತ್ತೆ ಮೊದಲ ಸ್ಥಾನಕ್ಕೆ ಬಂದು ಕೂತಿದೆ. ಸಹನಾಗೆ ಶಿಕ್ಷೆ ಆಗುತ್ತಾ? ಎಂಬ ರೋಚಕ ಘಟ್ಟದಲ್ಲಿ ಈ ಸೀರಿಯಲ್ ಸಾಗುತ್ತಿದೆ.
ಲಕ್ಷ್ಮೀ ನಿವಾಸ
ಅದೇ ರೀತಿ ಕಲೆದ ಮೂರು ತಿಂಗಳ ಹಿಂದಷ್ಟೇ ಶುರುವಾಗಿರುವ ಲಕ್ಷ್ಮೀ ನಿವಾಸ ಸೀರಿಯಲ್ ಸಹ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಶುರುವಾದ ಕೆಲವೇ ವಾರಕ್ಕೆ ಟಿಆರ್‌ಪಿ ವಿಚಾರದಲ್ಲಿ ಅಗ್ರಸ್ಥಾನಕ್ಕೆ ಬಂದು ಕೂತಿತ್ತು ಈ ಸೀರಿಯಲ್. ಬಲಿಷ್ಠ ಪುಟ್ಟಕ್ಕನಿಗೆ ಲಕ್ಷ್ಮೀ ಸವಾಲೆಸಿದಿದ್ದಳು. ಸದ್ಯ ಮೊದಲ ಮತ್ತು ಎರಡನೇ ಸ್ಥಾನಕ್ಕೆ ಈ ಎರಡು ಸೀರಿಯಲ್‌ಗಳು ಪೈಪೋಟಿ ನಡೆಸುತ್ತಿವೆ. ಒಮ್ಮೆ ಮೊದಲ ಸ್ಥಾನಕ್ಕೆ ಲಕ್ಷ್ಮೀ ಬಂದರೆ ಇನ್ನೊಮ್ಮೆ ಪುಟ್ಟಕ್ಕನ ಆಗಮನವಾಗುತ್ತಿದೆ. ಈ ವಾರ ಲಕ್ಷ್ಮೀ ನಿವಾಸ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ವಾರ ಸಮಬಲ ಸಾಧಿಸಿದ್ದವು.
ಸೀತಾ ರಾಮ
ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ರಾಮನ ಮದುವೆಯ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ತಾತ ಸೂರ್ಯಪ್ರಕಾಶ್ ದೇಸಾಯಿಗೆ ಸೀತಾಗೆ ಒಬ್ಬಳು ಮಗಳಿದ್ದಾಳೆ ಎಂಬ ಸತ್ಯವೂ ತಿಳಿದಿದೆ. ಇತ್ತ ಆಸ್ತಿಯಲ್ಲಿ ಪಾಲು ಕೇಳಿ ಅಪ್ಪನ ಕೆಂಗಣ್ಣಿಗೆ ಗುರಿಯಾಗಿದ್ದಾನೆ ವಿಶ್ವಜೀತ್. ಈ ನಡುವೆ ವಿಶ್ವನನ್ನೇ ದಾಳವಾಗಿಸಿಕೊಂಡು, ತನ್ನ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾಳೆ ಭಾರ್ಗವಿ. ಹೀಗೆ ಒಂದಷ್ಟು ಕುತೂಹಲದ ಘಟ್ಟದಲ್ಲಿ ನೋಡಿಸಿಕೊಂಡು ಹೋಗುತ್ತಿರುವ ಸೀತಾ ರಾಮ ಸೀರಿಯಲ್, ಟಿಆರ್‌ಪಿ ಲೆಕ್ಕಾಚಾರದಲ್ಲಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಈ ವಾರ ಮೇಲ್ಪಂಕ್ತಿಗೆ ಬಂದು ನಿಂತಿದೆ. ಅಂದರೆ, ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದೆ ಈ ಸೀರಿಯಲ್.
ರಾಮಾಚಾರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ಗೂ ಅಪಾರ ವೀಕ್ಷಕರಿದ್ದಾರೆ. ಆ ವಾಹಿನಿ ಟಾಪ್ ಸೀರಿಯಲ್ ಸಹ ಇದಾಗಿದ್ದು, ರಾಮಾಚಾರಿಯನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ. ಮಾನ್ಯತಾ ಮತ್ತು ದೇವ್ ಅವರ ಈ ಪ್ಲಾನ್‌ಗೆ ಭಂಗ ಉಂಟಾಗಿದೆ. ಕೃಷ್ಣನ ಮೇಲೆ ಕೇಸ್ ಇವೆ ಎಂದು ಕೃಷ್ಣನಂತೆ ಆಕ್ಟ್ ಮಾಡುತ್ತಿದ್ದ ರಾಮಾಚಾರಿಯನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ. ಇದು ಕುಟುಂಬಕ್ಕೂ ಶಾಕ್ ನೀಡಿದೆ. ಸೀರಿಯಲ್‌ನಲ್ಲೂ ಟ್ವಿಸ್ಟ್ ಸಿಕ್ಕಿದೆ. ಹೀಗೆ ಒಂದಷ್ಟು ಕಾರಣಕ್ಕೆ ರೋಚಕತೆ ಒಗ್ಗರಣೆ ಹಾಕುತ್ತಿರುವ ಈ ಧಾರಾವಾಹಿ ಈ ವಾರ ಟಾಪ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವಾರವೇ ಇದೇ ಸೀರಿಯಲ್ ಮೂರನೇ ಸ್ಥಾನದಲ್ಲಿತ್ತು.
ಶ್ರಾವಣಿ ಸುಬ್ರಮಣ್ಯ
ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಮದನ್ ಮತ್ತು ವಿಜಯಾಂಬಿಕೆಯ ಅಟ್ಟಹಾಸ ಮುಂದುವರಿದಿದೆ. ಹೇಗಾದ್ರೂ ಮಾಡಿ ಸುಬ್ರಮಣ್ಯನನ್ನು ಮುಗಿಸಬೇಕೆಂದು ಅವನಿಗೆ ಆಕ್ಸಿಡೆಂಟ್ ಮಾಡಿಸಿದ್ದಾರೆ. ರಕ್ತ ನೀರಂತೆ ಹರಿದಿದೆ. ತೀವ್ರ ಗಾಯದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೂ ದಾಖಲಿಸಲಾಗಿದೆ. ಈ ವೇಳೆ ಆತನಿಗೆ ರಕ್ತ ನೀಡಿ ಜೀವದಾನ ಮಾಡಿದ್ದಾಳೆ ಶ್ರಾವಣಿ. ಅಪಘಾತದ ವಿಚಾರ ತಿಳಿದು ಆಸ್ಪತ್ರೆಗೆ ದೌಡಾಯಿಸಿದ ವೀರೇಂದ್ರನಿಗೆ, ತನ್ನ ಮಗಳೇ ರಕ್ತ ನೀಡಿದ ವಿಚಾರವೂ ತಿಳಿದಿದೆ. ಮನೆಯಲ್ಲಿ ಆಕೆಯೊಂದಿಗೆ ಮಾತನಾಡಿದ್ದಾನೆ. ಇದು ಶ್ರಾವಣಿಯ ಸಂಭ್ರಮಕ್ಕೂ ಕಾರಣವಾಗಿದೆ. ಹೀಗೆ ಕುತೂಹಲಭರಿತವಾಗಿ ನೋಡಿಸಿಕೊಂಡು ಹೊರಟ ಈ ಸೀರಿಯಲ್ ಈ ವಾರ ಐದನೇ ಸ್ಥಾನದಲ್ಲಿದೆ.
ಅಮೃತಧಾರೆ
ಅಮೃತಧಾರೆ ಸೀರಿಯಲ್‌ನಲ್ಲಿ ಡುಮ್ಮ ಸರ್ ಗೌತಮ್ ಬರ್ತ್‌ಡೇ ಸಂಭ್ರಮ ಮನೆ ಮಾಡಿದೆ. ಕಳೆದ ಒಂದು ವಾರದಿಂದ ಈ ಸೀರಿಯಲ್‌ನಲ್ಲಿ ಒಂದಷ್ಟು ಬದಲಾವಣೆಗಳು ಘಟಿಸಿವೆ. ಪಾರ್ಥ ಮತ್ತು ಅಪ್ಪಿಯ ಲವ್ವಿ ಡವ್ವಿ ಅಮ್ಮ ಶಕುಂತಲಾದೇವಿ ಮತ್ತು ಜೈದೇವ್‌ಗೂ ಗೊತ್ತಾಗಿದೆ. ಇನ್ನೊಂದು ಕಡೆ ಜೀವನ್ ಜೀವನಕ್ಕೆ ಸಾಲ ಮಾಡಲು ಭೂಮಿಕೆ ಮುಂದಾಗಿದ್ದಾಳೆ. ಈ ನಡುವೆ ಪತಿಗೆ ಸರ್ಪ್ರೈಸ್ ಬರ್ತ್‌ಡೇ ಗಿಫ್ಟ್ ನೀಡುವ ಪ್ಲಾನ್ ಸಹ ಆಕೆಯ ತಲೆಯಲ್ಲಿದೆ. ಹೀಗೆ ಸಾಗಿರುವ ಈ ಸೀರಿಯಲ್ ಈ ವಾರ ಶ್ರಾವಣಿ ಸುಬ್ರಮಣ್ಯ ಜತೆಗೆ ಜಂಟಿಯಾಗಿ ಐದನೇ ಸ್ಥಾನವನ್ನು ಅಲಂಕರಿಸಿವೆ.
ವಿಭಾಗ