ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಪತ್ನಿ ಜಾಹ್ನವಿ ಮೈ ಕೈ ಮುಟ್ಟಿದ ವೈದ್ಯನ ಕೈ ಲೊಟಕ್! ಸೈಕೋ ಜಯಂತನ ಮಾಸ್‌ ಅವತಾರ ಅನಾವರಣ

Lakshmi nivasa Serial: ಪತ್ನಿ ಜಾಹ್ನವಿ ಮೈ ಕೈ ಮುಟ್ಟಿದ ವೈದ್ಯನ ಕೈ ಲೊಟಕ್! ಸೈಕೋ ಜಯಂತನ ಮಾಸ್‌ ಅವತಾರ ಅನಾವರಣ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತನ ಮಾಸ್‌ ಅವತಾರ ಇದೀಗ ಅನಾವರಣವಾಗಿದೆ. ಆಸ್ಪತ್ರೆಯಲ್ಲಿ ಪತ್ನಿಯ ಮೈ, ಕೈ ಮುಟ್ಟಿದ ಅನ್ನೋ ಕಾರಣಕ್ಕೆ ಡಾಕ್ಟರ್‌ ಕೈ ಮುರಿದಿದ್ದಾನೆ ಜಯಂತ್.‌

ಪತ್ನಿ ಜಾಹ್ನವಿ ಮೈ ಕೈ ಮುಟ್ಟಿದ ವೈದ್ಯನ ಕೈಯನ್ನೇ ಮುರಿದ ಜಯಂತ್!‌ ಸೈಕೋನ ಮಾಸ್‌ ಅವತಾರ ಅನಾವರಣ
ಪತ್ನಿ ಜಾಹ್ನವಿ ಮೈ ಕೈ ಮುಟ್ಟಿದ ವೈದ್ಯನ ಕೈಯನ್ನೇ ಮುರಿದ ಜಯಂತ್!‌ ಸೈಕೋನ ಮಾಸ್‌ ಅವತಾರ ಅನಾವರಣ

Lakshmi nivasa Serial: ಅತಿಯಾದರೆ ಅಮೃತವೂ ವಿಷ ಅನ್ನೋ ಮಾತಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲೂ ಅದೇ ಆಗುತ್ತಿದೆ. ಪತ್ನಿ ಜಾಹ್ನವಿ ಮೇಲಿನ ಪತಿ ಜಯಂತನ ಅತಿಯಾದ ಪ್ರೀತಿ, ಕಾಳಜಿ ನೋಡುಗನಿಗೆ ಅಸಹನೀಯ ಎನಿಸುತ್ತಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ಮಟ್ಟಿಗಿನ ಪ್ರೀತಿ ಉರುಳಾಗುವ ಸಂಭವವೇ ಹೆಚ್ಚು ಎನ್ನುತ್ತಿದ್ದಾರೆ. ಈ ನಡುವೆ ಜಾಹ್ನವಿ ಮಾತ್ರ ಪತಿ ಜಯಂತನ ಪ್ರೀತಿಗೆ ಕರಗಿದ್ದಾಳೆ ನಿಜ. ಆದರೆ, ಈ ಪ್ರೀತಿಯ ವಿಚಾರದಲ್ಲಿ ಆಕೆಗೂ ಒಂದಷ್ಟು ಗೊಂದಲಗಳಿವೆ. ಮನದಲ್ಲಿ ಒಂದಷ್ಟು ಪ್ರಶ್ನೆಗಳೂ ಉದ್ಭವವಾಗಿವೆ.

ಟ್ರೆಂಡಿಂಗ್​ ಸುದ್ದಿ

ಪತ್ನಿಯನ್ನು ಯಾರೂ ಹೆಜ್ಜೆ ಇಡದ ಬಂಗಲೆಯಲ್ಲಿ ಅತಿಯಾದ ಪ್ರೀತಿ ಅನ್ನೋ ಕೀಲಿಕೈ ಹಾಕಿ ಬಂಧಿಸಿದ್ದಾನೆ ಜಯಂತ್.‌ ತಾನಿಲ್ಲಿ ಒಬ್ಬಂಟಿ ಎಂಬುದಷ್ಟೇ ಜಾಹ್ನವಿಗೆ ಗೊತ್ತಿರುವ ಸಂಗತಿ. ಅದರಾಚೆಗೆ ಪತಿ ತನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ, ಮನೆ ಪ್ರವೇಶಕ್ಕೂ ಯಾರಿಗೂ ಅನುಮತಿ ಇಲ್ಲ ಎಂಬ ಸತ್ಯ ಇನ್ನೂ ಗೊತ್ತಾಗಿಲ್ಲ. ಈ ನಡುವೆ, ಯುಗಾದಿ ಹಬ್ಬಕ್ಕೆಂದು ಮದುವೆ ಬಳಿಕ ಮೊದಲ ಸಲ ಅಳಿಯ ಜಯಂತ್‌, ಜಾಹ್ನವಿ ಜತೆಗೆ ಅವರ ತವರು ಮನೆಗೆ ತೆರಳಿದ್ದಾನೆ. ಎಣ್ಣೆ ಸ್ನಾನದ ಮಾಡಿ ಭರ್ಜರಿಯಾಗಿಯೇ ಹಬ್ಬ ಆಚರಿಸಿದ್ದಾರೆ.

ಜಾಹ್ನವಿಗೆ ಅನಾರೋಗ್ಯ

ಹೀಗೆ ಒಂದೇ ದಿನ ಹಬ್ಬ ಮಾಡಿ, ಮಾರನೇ ದಿನವೇ ಜಯಂತ್‌ ಜತೆಗೆ ಮರಳಿ ಗಂಡನ ಮನೆ ಸೇರಿದ ಜಾಹ್ನವಿ ಆರೋಗ್ಯದಲ್ಲಿ ಏರುಪೇರಾಗಿದೆ. ಗಂಟಲು ಕಟ್ಟಿದ ಅನುಭವ ಆಗಿದೆ. ಮೊದಲೇ ಪತ್ನಿ ಎಂದರೆ ಅತೀವ ಪ್ರೀತಿ ತೋರುವ ಜಯಂತ್‌, ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆ ತಂದಿದ್ದಾನೆ. ಪತ್ನಿ ಮೇಲೆ ಯಾರೇ ಕಣ್ಣು ಹಾಕಿದರೂ, ಅವರನ್ನು ಬೇರೆ ದೃಷ್ಟಿಯಲ್ಲಿಯೇ ನೋಡುವ ಜಯಂತ್‌ಗೆ ಆಸ್ಪತ್ರೆಯಲ್ಲೂ ಅಂಥದ್ದೇ ಸಂದರ್ಭ ಎದುರಾಗಿದೆ. ಜಾಹ್ನವಿಯನ್ನು ಪುರುಷ ವೈದ್ಯ ಟ್ರೀಟ್‌ ಮಾಡುತ್ತಿದ್ದಾನೆ. ವೈದ್ಯನ ವರ್ತನೆ ಕಂಡು ಕುಪಿತನಾಗಿದ್ದಾನೆ ಜಯಂತ್.‌

ಪತ್ನಿ ಜತೆಗೆ ವೈದ್ಯನ ಸಲುಗೆ ಸಹಿಸದ ಜಯಂತ್

ಆಸ್ಪತ್ರೆಯಲ್ಲಿ ಜಾಹ್ನವಿಗೆ ಏನಾಗಿದೆ ಎಂದು ತಿಳಿಯಲು ವೈದ್ಯ, ಸ್ಟೆತಾಸ್ಕೋಪ್‌ನಿಂದ ಪರೀಕ್ಷೆ ಮಾಡಿದ್ದಾನೆ. ಕಣ್ಣು, ನಾಲಿಗೆ ನೋಡಿದ್ದಾನೆ. ಕೈ ಮುಟ್ಟಿ ಪರೀಕ್ಷೆ ಮಾಡಿದ್ದಾನೆ. ನೀರು ಬದಲಾವಣೆಯಿಂದ ನಿಮಗೆ ಗಂಟಲು ಕಟ್ಟಿದೆ ಎಂದಿದ್ದಾನೆ. ಜತೆಗೆ ನಿಮ್ಮದು ಯಾವ ಊರು ಎಂದೂ ಕೇಳಿದ್ದಾನೆ. ನಮ್ಮದು ತುಮಕೂರು ಎಂದು ಜಾಹ್ನವಿ ಹೇಳುತ್ತಿದ್ದಂತೆ, ಅರೇ ನಮ್ಮದು ಅಲ್ಲೇ ಗುಬ್ಬಿ ಎಂದಿದ್ದಾನೆ. ಪತ್ನಿ ಜಾಹ್ನವಿ ಜತೆಗಿನ ವೈದ್ಯನ ಈ ಸಲುಗೆ ಪಕ್ಕದಲ್ಲೇ ನಿಂತಿದ್ದ ಜಯಂತನಿಗೆ ರೋಷ ಉಕ್ಕಿಸಿದೆ. ಅದಕ್ಕಾಗಿ ಆತ ತನ್ನ ರೂಪ ತೋರಿಸಿದ್ದಾನೆ.‌

ವೈದ್ಯನ ಕೈ ಮುರಿದ ಸೈಕೋ

ನೀವು ಹೊರಗಡೆ ಕೂತಿರಿ, ನಾನು ಒಳಗೆ ಹೋಗಿ ಡಾಕ್ಟರ್‌ ಹತ್ತಿ ಹೋಗಿ ಮಾತ್ರೆ ತರ್ತಿನಿ ಎಂದಿದ್ದಾನೆ ಜಯಂತ್.‌ ಒಳಗಡೆ ಬಂದ ಜಯಂತ್‌, ನನ್ನ ಕಣ್ಣ ಮುಂದೆಯೇ ನನ್ನ ಪತ್ನಿಯ ಮೈ ಕೈ ಮುಟ್ಟೋವಷ್ಟು ಧೈರ್ಯನ ನಿನಗೆ ಎಂದು ಆತನ ಕೈ ತಿರುಗಿಸಿ ಎಚ್ಚರಿಕೆ ನೀಡಿದ್ದಾನೆ. ಅವಳು ನನ್ನ ಹೆಂಡತಿ, ಆಕೆಯನ್ನು ಮುಟ್ಟುವ ಅಧಿಕಾರಿ ನನಗಷ್ಟೇ ಇರೋದು ಎಂದು ಕೈ ಮುರಿದಿದ್ದಾನೆ. ಈ ಮೂಲಕ ಜಯಂತನ ಅಸಲಿ ಮುಖದ ಅನಾವರಣ ಮತ್ತೊಮ್ಮೆ ವೀಕ್ಷಕನ ಕಣ್ಣಿಗೆ ಬಿದ್ದಿದೆ. ಇವನ್ಯಾವನು ಗುರೂ, ಸೈಕೋ. ಇಂಥವರಿಗೆ ಹುಡುಗಿ ಕೊಟ್ರೆ ಅಷ್ಟೇ ಕಥೆ ಎನ್ನುತ್ತಿದ್ದಾರೆ.

ಪತಿಯ ಪ್ರೀತಿಗೆ ಜಾಹ್ನವಿ ಕಣ್ಣೀರು

ಈ ನಡುವೆ ಆಸ್ಪತ್ರೆಯಿಂದ ಆಕೆಯನ್ನು ಮನೆಗೆ ಕರೆತಂದು, ಅಷ್ಟೇ ಜೋಪಾನ ಮಾಡಿದ್ದಾನೆ. ಊಟ ಬೇಡ ಎಂದ ಪತ್ನಿಗೆ ತಾನೇ ಕೈತುತ್ತು ನೀಡಿದ್ದಾನೆ ಜಯಂತ. ಪತಿಯ ಪ್ರೀತಿಗೆ ಜಾಹ್ನವಿ ಕಣ್ಣಲ್ಲಿ ನೀರು ಬಂದಿದೆ. ಇದನ್ನು ನೋಡಿದ ಜಯಂತ್‌, ಯಾಕೆ ಈ ಕಣ್ಣೀರು ಎಂದು ಕೇಳಿದ್ದಾನೆ. ನಿಮ್ಮ ಪ್ರೀತಿಗೆ ಎಂದಿದ್ದಾಳೆ. ಸರಿ ಸರಿ ಮೊದಲ ಊಟ ಮಾಡಿ ಎಂದಿದ್ದಾನೆ. ಬಳಿಕ ಮಾತ್ರೆ ಕೊಟ್ಟು, ಮಲಗಿಸಿದ್ದಾನೆ. ಆದರೆ, ಜಯಂತನ ಈ ಅತಿಯಾದ ಪ್ರೀತಿ ಹಿಂದಿನ ಇನ್ನೊಂದು ಮುಖ ಜಾಹ್ನವಿಗೆ ಇನ್ನೂ ತಿಳಿದಿಲ್ಲ. ನೋಡುಗನ ಕಣ್ಣಿಗೆ ಮಾತ್ರ ಅದರ ದರ್ಶನವಾಗುತ್ತಿದೆ. ಮುಂದೇ ಇನ್ನೂ ಏನೆನು ಕಾದಿದೆಯೋ ಎನ್ನುತ್ತಿದ್ದಾನೆ ವೀಕ್ಷಕ.

IPL_Entry_Point