HanuMan OTT: ಹನುಮಾನ್ ಒಟಿಟಿ ಬಿಡುಗಡೆ ದಿನಾಂಕ ಪಕ್ಕಾ ಆಯ್ತು; ಮನೆಯಲ್ಲೇ ನೋಡಿ ತೇಜಾ ಸಜ್ಜಾ ನಟನೆಯ ಸಿನಿಮಾ
HanuMan OTT Release Date And Platform: ತೇಜಾ ಸಜ್ಜಾ ನಟನೆಯ ಹನುಮಾನ್ ಸಿನಿಮಾವು ಮಾರ್ಚ್ 2ರಂದು ಝೀ5 ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾವನ್ನು ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲೂ ವೀಕ್ಷಿಸಬಹುದು.
ತೇಜಾ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ "ಹನುಮಾನ್" ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಟಾಲಿವುಡ್‌ನ ಈ ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜನರ ಬಾಯ್ಮಾತಿನಿಂದಲೇ ದೊಡ್ಡ ಮಟ್ಟದ ಯಶ ಕಂಡಿತ್ತು. ತೇಜ ಸಜ್ಜಾ, ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್‌ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ನಟನೆಯ ಈ ಚಿತ್ರವು ಮಾರ್ಚ್ 2ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಈ ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಈ ಸಿನಿಮಾವನ್ನು ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅಂದರೆ ಜನವರಿ 12ರಂದು ಬಿಡುಗಡೆ ಮಾಡಿತ್ತು.
ಹನುಮಾನ್ ಸಿನಿಮಾ ಒಟಿಟಿ ಹಕ್ಕುಗಳು
ತೇಜಾ ಸಜ್ಜಾ ನಟನೆಯ ಹನುಮಾನ್ ಸಿನಿಮಾದ ಒಟಿಟಿ ಹಕ್ಕುಗಳನ್ನು ಝೀ5 ತನ್ನದಾಗಿಸಿಕೊಂಡಿದೆ. ತೆಲುಗು ಮಾತ್ರವಲ್ಲದೆ ಈ ಸಿನಿಮಾ ಹಿಂದಿ, ಮರಾಠಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಸೂಪರ್‌ಹೀರೋ ಸಿನಿಮಾಗಳಿಗೆ ಜಾಗತಿಕವಾಗಿ ಬೇಡಿಕೆ ಇರುವುದರಿಂದ ಹನುಮಾನ್ ಸಿನಿಮಾವನ್ನು ಇಂಗ್ಲಿಷ್, ಸ್ಪ್ಯಾನಿಷ್, ಕೊರಿಯನ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗಿದೆ.
ಹನುಮಾನ್ ಒಟಿಟಿ ಬಿಡುಗಡೆ ದಿನಾಂಕ
ಟಾಲಿವುಡ್‌ನ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾವು ಝೀ5 ಒಟಿಟಿಯಲ್ಲಿ ಮಾರ್ಚ್ 2ರಂದು ಬಿಡುಗಡೆಯಾಗಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಹನುಮಾನ್ ಸಾಹಸಗಳನ್ನು ಕಣ್ತುಂಬಿಕೊಳ್ಳಬಹುದು.
ಹನುಮಾನ್ ಸಿನಿಮಾವು ಪ್ರಶಾಂತ್ ವರ್ಮಾ ಬರೆದ ಮತ್ತು ನಿರ್ದೇಶನ ಮಾಡಿರುವ ಸೂಪರ್ ಹೀರೋ ಸಿನಿಮಾವಾಗಿದೆ. ಪ್ರೈಮ್‌ಶೋ ಎಂಟರ್‌ಟೇನ್‌ಮೆಂಟ್ ನಿರ್ಮಾಣ ಮಾಡಿದ ಈ ಸಿನೆಮಾದಲ್ಲಿ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಹನುಮಾನ್ ಸಿನಿಮಾ ಬಿಡುಗಡೆಯಾದ ಸಮಯದಲ್ಲೇ ಗುಂಟೂರು ಖಾರಂ ಸಿನಿಮಾ ಬಿಡುಗಡೆಯಾಗಿತ್ತು. ಜನವರಿ 12ರಂದು ಗುಂಟೂರು ಖಾರಂ ಸಿನಿಮಾವು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ತ್ರಿವಿಕ್ರಮ್ ಶ್ರೀನಿವಾಸ್ ಅವರ ನಿರ್ದೇಶನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಲೋಕಲ್ ಡಾನ್ ಒಬ್ಬರ ಜೀವನ ಕಥೆ ಆಧರಿತ ಚಿತ್ರ ಇದಾಗಿದೆ. ಮಹೇಶ್ ಬಾಬು ಮಾತ್ರವಲ್ಲದೆ ಪ್ರಕಾಶ್ ರಾಜ್, ರಮ್ಯಾ ಕೃಷ್ಣನ್, ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ನಮ್ಮ ಕರ್ನಾಟಕದ ಶ್ರೀಲೀಲಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾವು ಹನುಮಾನ್ ಸಿನಿಮಾದಷ್ಟು ಬಾಕ್ಸ್ ಆಫೀಸ್ ಗಳಿಕೆ ಮಾಡಿಲ್ಲ.