Kichcha Sudeep: ಕೊನೆಗೂ ತಾಯಿಯ ಆಸೆ ಈಡೇರಿಸಲು ಸಾಧ್ಯವಾಗಲಿಲ್ಲ; ಮ್ಯಾಕ್ಸ್ ಚಿತ್ರದ ಮಾತುಕತೆ ವೇಳೆ ಕಿಚ್ಚ ಸುದೀಪ್ ಬೇಸರ
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೇ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಮಾಹಿತಿ ನೀಡಲು ಕಿಚ್ಚ ಸುದೀಪ್ ಸೇರಿ, ಚಿತ್ರತಂಡದ ಕೆಲವರು ಮಾಧ್ಯಮದ ಮುಂದೆ ಬಂದಿದ್ದರು. ಇದೇ ವೇಳೆ ಬೇಸರದ ವಿಚಾರವನ್ನೂ ಸುದೀಪ್ ಹೇಳಿಕೊಂಡರು.
Kichcha Sudeep: ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಇತ್ತೀಚೆಗೆ ನಿಧನರಾಗಿದ್ದು ಗೊತ್ತೇ ಇದೆ. ಅವರ ನಿಧನಕ್ಕೂ ಮುನ್ನ ಅವರ ಆಸೆಯೊಂದನ್ನು ಈಡೇರಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಅವರ ಆಸೆ ಏನಾಗಿತ್ತು? ಎಂದರೆ, ‘ಮ್ಯಾಕ್ಸ್’ ಚಿತ್ರವನ್ನು ನೋಡುವ ಆಸೆ ಅವರಿಗಿತ್ತಂತೆ. ಆದರೆ, ಅವರ ನಿಧನದಿಂದ ಆ ಆಸೆಯನ್ನು ಸುದೀಪ್ ಅವರಿಂದ ಈಡೇರಿಸುವುದಕ್ಕೆ ಸಾಧ್ಯವಾಗಿಲ್ಲ.
ಅಮ್ಮನ ಆಸೆ ಈಡೇರಿಸಲಿಲ್ಲ..
ಹೋಟೆಲ್ ಶೆರಟಾನ್‍ನಲ್ಲಿ ಭಾನುವಾರ ಸಂಜೆ ನಡೆದ ‘ಮ್ಯಾಕ್ಸ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘ಈ ಚಿತ್ರವನ್ನು ನೋಡಬೇಕು ಎಂದು ತಾಯಿ ಹೇಳಿದ್ದರು. ಆ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲೆ ಸದಾ ಇರುತ್ತದೆ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಅದು ಬಿಟ್ಟರೆ, ಅವರು ಪೂರ್ತಿ ಚಿತ್ರವನ್ನು ನೋಡುವುದಕ್ಕೆ ಸಾಧ್ಯವೇ ಆಗಲಿಲ್ಲ’ ಎಂದು ಹೇಳಿದರು.
2 ದಶಕದ ಹಿಂದಿನ ಘಟನೆ ನೆನೆದ ಕಿಚ್ಚ
ತಮಿಳು ನಿರ್ಮಾಪಕ ಕಲೈಪುಲಿ ಧಾನು ನಿರ್ಮಾಣದಲ್ಲಿ ನಟಿಸಿದ್ದು ಒಂದು ಸೌಭಾಗ್ಯ ಎಂದ ಸುದೀಪ್, ‘2004ರಲ್ಲಿ ಚೆನ್ನೈನಲ್ಲಿ ‘ನಲ್ಲ’ ಚಿತ್ರಕ್ಕೆ ಚಿತ್ರೀಕರಣ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ‘ಕಾಕ್ಕಾ ಕಾಕ್ಕಾ’ ಎಂಬ ಚಿತ್ರ ಬಹಳ ಚೆನ್ನಾಗಿ ಓಡುತ್ತಿತ್ತು. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಯೋಚನೆ ಇತ್ತು. ಅದನ್ನು ನಿರ್ಮಿಸಿದ್ದು ಅದೇ ಧಾನು. ಈ ವಿಷಯವಾಗಿ ಅವರನ್ನು ಭೇಟಿಯಾದೆ. ‘ಕಾಕ್ಕಾ ಕಾಕ್ಕಾ’ ಚಿತ್ರದ ಹಕ್ಕುಗಳನ್ನು ಕೇಳಿದೆ. ಅವರು ದುಡ್ಡು ಸಹ ಕೇಳಲಿಲ್ಲ. ‘ಆಸೆಪಟ್ಟು ಬಂದಿದ್ದೀರಾ. ನನಗೇನು ಬೇಡ’ ಎಂದು ತಕ್ಷಣವೇ ಉಚಿತವಾಗಿ ಹಕ್ಕುಗಳನ್ನು ಬರೆದುಕೊಟ್ಟರು.
ಕಾರಣಾಂತರಗಳಿಂದ ಆ ಚಿತ್ರವನ್ನು ನನಗೆ ಕನ್ನಡದಲ್ಲಿ ರೀಮೇಕ್ ಮಾಡಲು ಸಾಧ್ಯವಾಗಲಿಲ್ಲ. ಒಂದು ದಿನ ಅವರೇ ಫೋನ್ ಮಾಡಿ, ‘ನೀವು ಮಾಡದಿದ್ದರೆ ವಾಪಸ್ಸು ಕೊಡಬಹುದಾ? ಬೇರೆಯವರು ಕೇಳುತ್ತಿದ್ದಾರೆ. ಅದರಿಂದ ಅನುಕೂಲವಾಗುತ್ತದೆ’ ಎಂದರು. ನಾನು ತಕ್ಷಣ ಅವರಿಗೆ ಹಕ್ಕುಗಳನ್ನು ವಾಪಸ್ಸು ಕೊಟ್ಟೆ. 2004ರಲ್ಲಿ ನಾನು ಹೊಸಬ. ಗೌರವ ಕೊಟ್ಟು ಕೂರಿಸಿ, ಹಕ್ಕುಗಳನ್ನು ಕೊಟ್ಟರು. ಅವರು ನನ್ನಿಂದ ಎಷ್ಟು ಬೇಕಾದರೂ ಹಣ ಕೇಳಬಹುದಿತ್ತು. ಆದರೆ, ಕೇಳಲಿಲ್ಲ. ಅವರೊಬ್ಬ ಜಂಟಲ್‍ಮ್ಯಾನ್ ನಿರ್ಮಾಪಕ. ಹಾಗಾಗಿ, ಅವರು ಈ ಚಿತ್ರವನ್ನು ನಿರ್ಮಿಸುವುದಕ್ಕೆ ಬಂದಾಗ ತಕ್ಷಣ ಒಪ್ಪಿಕೊಂಡೆ’ ಎಂದರು.
‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್‍ಗೆ ನಾಯಕಿ ಇಲ್ಲ. ಅವರ ತಾಯಿಯಾಗಿ ಸುಧಾ ಬೆಳವಾಡಿ ನಟಿಸಿದ್ದಾರೆ. ಮಿಕ್ಕಂತೆ ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್ ಚೆಂಡೂರು, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿಜಯ್ ಕಾರ್ತಿಯೇಯ ನಿರ್ದೇಶನ
‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ವಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ವರದಿ: ಚೇತನ್ ನಾಡಿಗೇರ್