UI ಸಿನಿಮಾದ ಯಶಸ್ವಿಗಾಗಿ ರಿಯಲ್ ಸ್ಟಾರ್ ಉಪೇಂದ್ರ ದೇಗುಲ ದರ್ಶನ; ವನದುರ್ಗೆಗೆ ಸರ್ವಾಲಂಕಾರ ಸೇವೆ ಸಲ್ಲಿಸಿದ ನಟ
UI The Movie: ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾವು ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಉಪೇಂದ್ರ ಅವರು ಚಿತ್ರದ ಯಶಸ್ಸಿಗಾಗಿ ವಿವಿಧ ದೇಗುಲಗಳ ದರ್ಶನ ಮಾಡುತ್ತಿದ್ದಾರೆ. ಬಂಟ್ವಾಳದ ಮೊಡಂಕಾಪು ಎಂಬಲ್ಲಿರುವ ವನದುರ್ಗಾ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ತನ್ನ ತಂಡದೊಂದಿಗೆ ಭೇಟಿ ನೀಡಿದ್ದಾರೆ.
ಮಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ (UI The Movie) ಸಿನಿಮಾವು ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಉಪೇಂದ್ರ ಅವರು ಚಿತ್ರದ ಯಶಸ್ಸಿಗಾಗಿ ವಿವಿಧ ದೇಗುಲಗಳ ದರ್ಶನ ಮಾಡುತ್ತಿದ್ದಾರೆ. ಉಪೇಂದ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದು, ಬಂಟ್ವಾಳದ ಮೊಡಂಕಾಪು ಎಂಬಲ್ಲಿರುವ ವನದುರ್ಗಾ ದೇವಸ್ಥಾನಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಈ ಸಂದರ್ಭ ತನ್ನ ಹೊಸ ಸಿನಿಮಾ ಯುಐ ಯಶಸ್ವಿಯಾಗಲಿ ಎಂದು ದೇವರಿಗೆ ಪ್ರಾರ್ಥಿಸಿದ್ದಾರೆ.
ಸ್ವತಃ ನಿರ್ದೇಶಿಸಿ ನಟಿಸಿರುವ ಹೊಸ ಚಲನಚಿತ್ರ ‘ಯುಐ’ ಕುರಿತು ಭಾರೀ ನಿರೀಕ್ಷೆಗಳಿದ್ದು, ಈ ಸಿನಿಮಾ ಯಶಸ್ವಿಯಾಗಲೆಂದು ವನದುರ್ಗಾ ಕ್ಷೇತ್ರದಲ್ಲಿ ಸರ್ವಾಲಂಕಾರ ಸೇವೆ ಸಲ್ಲಿಸಿದರು. ಚಲನಚಿತ್ರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ‘ವೇಲುಹರಿ’ ನವೀನ್ ಮನೋಹರ್ ಅವರು ಉಪೇಂದ್ರ ಜೊತೆಗಿದ್ದರು. ಮಧ್ಯಾಹ್ನ ಪೂಜೆ ಬಳಿಕ ಕ್ಷೇತ್ರದಲ್ಲಿ ಅನ್ನದಾನ ಪ್ರಸಾದ ಪಡೆದು ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದರು. ಮೊಡಂಕಾಪು ವನದುರ್ಗ ಕ್ಷೇತ್ರದ ಗುರುದತ್ ಶೆಣೈ, ಪಾಂಡುರಂಗ ಶೆಣೈ ಉಪಸ್ಥಿತರಿದ್ದು, ಶುಭ ಹಾರೈಸಿದರು.
ಡಿಸೆಂಬರ್ 20ರಂದು ಯುಐ ಸಿನಿಮಾ ಬಿಡುಗಡೆ
ಯುಐ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಚಿತ್ರತಂಡ ನಿರತವಾಗಿದೆ. ಈಗಾಗಲೇ ಚಿತ್ರತಂಡವು ಯುಐ ಸಿನಿಮಾದ ಟ್ರೇಲರ್/ ವಾರ್ನರ್ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಜಾಗತಿಕ ತಾಪಮಾನ, ಕೋವಿಡ್ 19, ಹಣದುಬ್ಬರ, ಎಐ ತಂತ್ರಜ್ಞಾನ ಮತ್ತು ಇತ್ತೀಚೆಗೆ ಸದ್ದು ಮಾಡಿದ ಯುದ್ಧಗಳ ಬಗ್ಗೆ ತೋರಿಸಲಾಗಿದೆ. ರಾಜಕೀಯ, ಜಾತಿ ಸಮಸ್ಯೆಯೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದೆ. 2040ರಲ್ಲಿ ಜಗತ್ತು ಹೇಗಿರಲಿದೆ ಎಂದು ಈ ಟ್ರೇಲರ್‌ನಲ್ಲಿ ತೋರಿಸಲಾಗಿದೆ.
ಉಪೇಂದ್ರ ನಾಯಕ ನಟನಾಗಿ ನಟಿಸಿರುವ, ನಿರ್ದೇಶನ ಮಾಡಿರುವ ಯುಐ ಸಿನಿಮಾವು ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಜೀ ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರನ್ ಈ ಸಿನಿಮಾದ ಸಹ ನಿರ್ಮಾಪಕ. ಎಚ್ ಸಿ ವೇಣು ಛಾಯಾಗ್ರಹಣ ಇರುವ ಈ ಸಿನಿಮಾಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಜ್ ಬಿಜಿ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಚೇತನ್ ಡಿಸೋಜಾ, ರವಿ ವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಈ ತಿಂಗಳ ಕೊನೆಗೆ ಯುಐ ಜತೆಗೆ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾವೂ ರಿಲೀಸ್ ಆಗಲಿದೆ. ಸ್ಯಾಂಡಲ್‌ವುಡ್‌ನಲ್ಲಿ ಎರಡು ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿವೆ. ಈ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಉಪೇಂದ್ರ ಈಗಾಗಲೇ ಮಾತನಾಡಿದ್ದಾರೆ. "ಮ್ಯಾಕ್ಸ್’ ಚಿತ್ರಕ್ಕೂ ಒಳ್ಳೆಯದಾಗಲಿ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾದಾಗ, ಎರಡೂ ಚಿತ್ರಗಳನ್ನು ನೋಡಿ, ಯಶಸ್ವಿಯಾದ ಉದಾಹರಣೆಗಳಿವೆ. ಅದು ರಜೆಯ ಸೀಸನ್ ಆಗಿರುವುದರಿಂದ, ಅವರೂ ಬರುತ್ತಿದ್ದಾರೆ. ಅವರಿಗೂ ಒಳ್ಳೆಯದಾಗಲಿ. ಜನ ಎರಡೂ ಚಿತ್ರಗಳನ್ನು ನೋಡುತ್ತಾರೆ ಎಂಬ ನಂಬಿಕೆ ಇದೆ. ನಾವೆಲ್ಲಾ ಕನ್ನಡ ಚಿತ್ರರಂಗದವರು, ಕನ್ನಡ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳು ಬೆಳೆಯುತ್ತಿವೆ. ಅದಕ್ಕೆ ಹೆಮ್ಮೆ ಪಡಬೇಕು ನಾವು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಬೇಕು. ಸುದೀಪ್ ಅವರು ನಮ್ಮ ಚಿತ್ರಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ನಾವು ಬೆಂಬಲ ಕೊಡುತ್ತೇವೆ" ಎಂದು ಉಪೇಂದ್ರ ಹೇಳಿದ್ದಾರೆ.