ಬೇಜವಾಬ್ದಾರಿಯ ತಪ್ಪಿಗೆ 3 ಡಬ್ಲ್ಯುಟಿಸಿ ಅಂಕ ಕಳೆದುಕೊಂಡ ನ್ಯೂಜಿಲೆಂಡ್; ಭಾರತದ ಫೈನಲ್ ಹಾದಿ ಸುಗಮ
ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಸೆ ಮತ್ತಷ್ಟು ಬಲಿಷ್ಟವಾಗಿದೆ. ನ್ಯೂಜಿಲೆಂಡ್ ಮಾಡಿದ ತಪ್ಪಿನಿಂದ ರೋಹಿತ್ ಶರ್ಮಾ ಪಡೆಗೆ ಲಾಭವಾಗಿದೆ. ಡಬ್ಲ್ಯುಟಿಸಿ ಅಂಕಪಟ್ಟಿ ಇಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025ರ ಆವೃತ್ತಿಯ ಅಂತಿಮ ಹಂತದ ಪಂದ್ಯಗಳು ನಡೆಯುತ್ತಿವೆ. 2025ರ ಜೂನ್ ತಿಂಗಳಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾವ ಎರಡು ತಂಡಗಳು ಸೆಣಸಲಿವೆ ಎಂಬುದು ಇನ್ನೂ ಖಚಿತವಾಗಿಲ್ಲ. ಫೈನಲ್ ಪ್ರವೇಶಿಸಲು ಹಲವಾರು ತಂಡಗಳು ಕಣದಲ್ಲಿವೆ. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳು ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸುವ ಹೆಚ್ಚಿನ ಅವಕಾಶಗಳನ್ನು ಹೊಂದಿವೆ.
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 0-3 ಅಂತರದಲ್ಲಿ ಸರಣಿ ಸೋತ ಭಾರತಕ್ಕೆ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರಿ ಹಿನ್ನಡೆಯಾಯ್ತು. ಸರಣಿ ಮುಗಿದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕಿಳಿದ ಭಾರತ, ಆ ಬಳಿಕ ಆಸೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗೆದ್ದ ಬಳಿಕ ಮತ್ತೆ ಅಗ್ರಸ್ಥಾನಕ್ಕೆ ಮರಳಿತು. ಇದೀಗ ಫೈನಲ್ ಪ್ರವೇಶಿಸಲು ಕಠಿಣ ಹೋರಾಟ ನಡೆಸುತ್ತಿದೆ. ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಪರ್ತ್ ಟೆಸ್ಟ್ ಗೆದ್ದ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಶೇಕಡಾವಾರು ಅಂಕ 60ಕ್ಕಿಂತ ಹೆಚ್ಚಾಗಿದೆ. ಆದರೆ, ಹೊಸ ಬೆಳವಣಿಗೆಯೊಂದು ಇದೀಗ ಒಂದಷ್ಟು ಬದಲಾವಣೆ ತಂದಿದೆ.
ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನ್ಯೂಜಿಲೆಂಡ್ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ. ಇದು ಭಾರತಕ್ಕೆ ಲಾಭ ಮಾಡಿದೆ.
ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ದಂಡ ವಿಧಿಸಲಾಗಿದೆ. ಎರಡೂ ತಂಡಗಳ ಮೂರು ಡಬ್ಲ್ಯುಟಿಸಿ ಅಂಕಗಳನ್ನು ಕಡಿತ ಮಾಡಲಾಗಿದೆ. ಇದೇ ವೇಳೆ ಉಭಯ ದೇಶಗಳ ಪಂದ್ಯದ ಸಂಭಾವನೆಯ ಶೇ.15ರಷ್ಟು ದಂಡ ವಿಧಿಸಲಾಗಿದೆ.
ಐಸಿಸಿ ನಿಯಮವೇನು?
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಪಂದ್ಯದ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ. ಇದೇ ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡುವ ಪರಿಸ್ಥಿತಿಗಳ ಆರ್ಟಿಕಲ್ 16.11.2 ರ ಪ್ರಕಾರ, ಒಂದು ತಂಡಕ್ಕೆ ಪ್ರತಿ ಓವರ್‌ಗೆ ಒಂದು ಪಾಯಿಂಟ್‌ನಂತೆ ದಂಡ ವಿಧಿಸಲಾಗುತ್ತದೆ.
ಡಬ್ಲ್ಯುಟಿಸಿ ಫೈನಲ್‌ಗೆ ನೇರವಾಗಿ ಪ್ರವೇಶಿಸಲು ಭಾರತ ತಂಡವು ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 4-0 ಅಂತರದಿಂದ ಗೆಲ್ಲಬೇಕಾಗಿದೆ.
ಡಬ್ಲ್ಯುಟಿಸಿ ಅಪ್ಡೇಟೆಡ್ ಅಂಕಪಟ್ಟಿ
- ಭಾರತ (ಪಿಸಿಟಿ 61.11)
- ದಕ್ಷಿಣ ಆಫ್ರಿಕಾ (ಪಿಸಿಟಿ 59.25)
- ಆಸ್ಟ್ರೇಲಿಯಾ (ಪಿಸಿಟಿ 57.69)
- ಶ್ರೀಲಂಕಾ (ಪಿಸಿಟಿ 50.00)
- ನ್ಯೂಜಿಲೆಂಡ್ (ಪಿಸಿಟಿ 47.92)
- ಇಂಗ್ಲೆಂಡ್ (ಪಿಸಿಟಿ 42.50)
- ಪಾಕಿಸ್ತಾನ (ಪಿಸಿಟಿ 33.33)
- ವೆಸ್ಟ್ ಇಂಡೀಸ್ (ಪಿಸಿಟಿ 26.67)
- ಬಾಂಗ್ಲಾದೇಶ (ಪಿಸಿಟಿ 25.0)
ಇದನ್ನೂ ಓದಿ | ವಿರಾಟ್ ಕೊಹ್ಲಿ ಮೊಣಕಾಲಿನಲ್ಲಿ ಬ್ಯಾಂಡೇಜ್; ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಗಾಯದ ಭೀತಿ