ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa Arrested: ಹಿಂದುತ್ವದ ವಿರುದ್ದ ಟ್ವೀಟ್‌... ನಟ ಚೇತನ್‌ ಅಹಿಂಸಾ ಬಂಧನ

Chetan Ahimsa Arrested: ಹಿಂದುತ್ವದ ವಿರುದ್ದ ಟ್ವೀಟ್‌... ನಟ ಚೇತನ್‌ ಅಹಿಂಸಾ ಬಂಧನ

ಚೇತನ್‌ ಅಹಿಂಸಾ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಶಿವಕುಮಾರ್‌ ಎಂಬುವವರು ಚೇತನ್‌ ಅಹಿಂಸಾ ವಿರುದ್ಧ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ನಟ ಚೇತನ್‌ ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಎಫ್‌ಐಆರ್‌ ಕೂಡಾ ದಾಖಲಿಸಿದ್ದಾರೆ.

ನಟ ಚೇತನ್‌ ಅಹಿಂಸಾ ಬಂಧನ
ನಟ ಚೇತನ್‌ ಅಹಿಂಸಾ ಬಂಧನ

ಹಿಂದೂ ಧರ್ಮದ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಹಂಚಿಕೊಂಡ ಕಾರಣ ನಟ ಚೇತನ ಅಹಿಂಸಾ ಅವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಚೇತನ್‌ ಬಂಧಿಸಿದ ಪೊಲೀಸರು ಅವರನ್ನು ಕೋರ್ಟ್‌ಗೆ ಕರೆದೊಯ್ದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದುತ್ವವನ್ನು ಸುಳ್ಳಿನ ಅಧಾರದ ಮೇಲೆ ಕಟ್ಟಲಾಗಿದೆ ಎಂದು ಚೇತನ್‌ ಅಹಿಂಸಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಜೊತೆಗೆ ಬಾಬರಿ ಮಸೀದಿ, ರಾಮ ಜನ್ಮಭೂಮಿ, ಇತ್ತೀಚೆಗೆ ಸುದ್ದಿಯಲ್ಲಿರುವ ಉರಿಗೌಡ ಹಾಗೂ ನಂಜೇಗೌಡ ಬಗ್ಗೆ ಬರೆದುಕೊಂಡಿದ್ದರು. ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ಶಿವಕುಮಾರ್‌ ಎಂಬುವವರು ಚೇತನ್‌ ಅಹಿಂಸಾ ವಿರುದ್ಧ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇರೆಗೆ ಪೊಲೀಸರು ನಟ ಚೇತನ್‌ ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಎಫ್‌ಐಆರ್‌ ಕೂಡಾ ದಾಖಲಿಸಿದ್ದಾರೆ.

ನ್ಯಾಯಾಂಗ ನಿಂದನೆ ಮಾಡಿ ಕಳೆದ ವರ್ಷ ಕೂಡಾ ಅರೆಸ್ಟ್‌ ಆಗಿದ್ದ ನಟ

ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ಹಾಗೂ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳ ವಿರುದ್ಧ ಚೇತನ್‌ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು. ನ್ಯಾಯಾಂಗ ನಿಂದನೆ ಮಾಡುವ ಮೂಲಕ ಚೇತನ್‌ ಆಗ ಅರೆಸ್ಟ್‌ ಆಗಿದ್ದರು. ಐಪಿಸಿ ಸೆಕ್ಷನ್ 505 (2), 504 ಅಡಿ ಚೇತನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ದಿನಗಳ ನ್ಯಾಯಾಂಗ ಬಂಧನದ ನಂತರ ಚೇತನ್‌ಗೆ ಜಾಮೀನು ದೊರೆತು ಬಿಡುಗಡೆ ಆಗಿದ್ದರು. ಇದೀಗ ಮತ್ತೆ ಚೇತನ್‌ ಹಿಂದೂ ಧರ್ಮದ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಹಂಚಿಕೊಂಡು ಮತ್ತೆ ಬಂಧನವಾಗಿದ್ದಾರೆ.

ಚೇತನ್‌ ಅಹಿಂಸಾ ಟ್ವೀಟ್
ಚೇತನ್‌ ಅಹಿಂಸಾ ಟ್ವೀಟ್

'ಕಾಂತಾರ' ಚಿತ್ರದ ಕಥೆಯನ್ನು ಟೀಕಿಸಿದ್ದ ಚೇತನ್‌

ಚಿತ್ರಪ್ರೇಮಿಗಳು, ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದ 'ಕಾಂತಾರ' ಚಿತ್ರದ ಬಗ್ಗೆ ಕೂಡಾ ನಟ ಚೇತನ್‌ ಕಮೆಂಟ್‌ ಮಾಡಿದ್ದರು. "ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ' ಚಿತ್ರ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ" ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದು ಕೂಡಾ ಭಾರೀ ಸುದ್ದಿಯಾಗಿತ್ತು.

ಭಾರತೀಯ ಕ್ರಿಕೆಟ್‌ ತಂಡದ ಬಗ್ಗೆ ಕಮೆಂಟ್‌ ಮಾಡಿದ್ದ ನಟ

ಸೌತ್‌ ಆಫ್ರಿಕಾ ತಂಡದಲ್ಲಿ ಆರು ಜನ ಕಪ್ಪು ವರ್ಣೀಯರಿಗೆ ಆಟವಾಡಲು ಕಡ್ಡಾಯವಾಗಿ ಅವಕಾಶ ನೀಡಲೇಬೇಕು ಎಂದು ಅಲ್ಲಿನ ಸರ್ಕಾರ ಕಾನೂನು ರೂಪಿಸಿದೆ. ಆದರೆ, ಭಾರತದ ಕ್ರಿಕೆಟ್‌ ತಂಡ ಹೇಗಿದೆ ಎಂದು ಎಲ್ಲರಿಗೂ ಗೊತ್ತು. ಅದು ಎಷ್ಟು ದುಡ್ಡು ಮಾಡುತ್ತಿದೆ, ಮೀಡಿಯಾ ಪ್ರಭಾವ ಎಷ್ಟಿದೆ ಎಂಬುದೂ ಗೊತ್ತಿರುವ ವಿಚಾರ. ಅದೇ ರೀತಿ ಕೆಲ ಮಾಹಿತಿಯ ಪ್ರಕಾರ ಟೀಮ್‌ ಇಂಡಿಯಾದಲ್ಲಿ ಶೇ. 70ರಷ್ಟು ಮಂದಿ ಆಟಗಾರರು ಮೇಲು ಜಾತಿಯವರು. ನಿಜವಾಗಲೂ, ಇಂಡಿಯನ್‌ ಕ್ರಿಕೆಟ್‌ ಟೀಂ ಇನ್ನೂ ಉತ್ತಮವಾಗಬೇಕಿದ್ದರೆ, ಅಲ್ಲಿಯೂ ನಮಗೆ ಮೀಸಲಾತಿ ಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೂ ಮೀಸಲಾತಿ ನೀಡಿದರೆ ತಂಡ ಇನ್ನೂ ಉತ್ತಮವಾಗುತ್ತದೆ" ಎಂದು ಕಮೆಂಟ್‌ ಮಾಡಿದ್ದರು.

ಒಟ್ಟಿನಲ್ಲಿ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಚೇತನ್‌ ಸುದ್ದಿಯಲ್ಲಿರುತ್ತಾರೆ.

IPL_Entry_Point