Kantara Chapter 1: ಕಾಂತಾರ ಚಿತ್ರದಿಂದ ಕಹಿ ಸುದ್ದಿ; ಕಲಾವಿದರಿದ್ದ ವಾಹನ ದಾರಿ ಮಧ್ಯೆ ಪಲ್ಟಿ, ಹಲವರಿಗೆ ಗಾಯ
Kantara chapter 1: ಕಾಂತಾರ ಚಾಪ್ಟರ್ 1 ಚಿತ್ರದ ಜೂನಿಯರ್ ಕಲಾವಿದರನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಮಿನಿ ಬಸ್ ಪಲ್ಟಿ ಹೊಡೆದ ಪರಿಣಾಮ, ಬಸ್‌ನಲ್ಲಿದ್ದ 20 ಜನರಲ್ಲಿ 6 ಜೂನಿಯರ್ ಆರ್ಟಿಸ್ಟ್‌ಗಳಿಗೆ ಗಾಯಗಳಾಗಿವೆ.
Kantara Chapter 1: ಕಾಂತಾರ ಚಿತ್ರತಂಡಕ್ಕೆ ಶೂಟಿಂಗ್ ಹಂತದಲ್ಲಿಯೇ ಒಂದಾದ ಮೇಲೊಂದು ಅನಾಹುತಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ಶೂಟಿಂಗ್ ಸೆಟ್‌ನಲ್ಲಿ ಜೂನಿಯರ್ ಕಲಾವಿದರಿಗೆ ಹೊಂಬಾಳೆ ಫಿಲಂಸ್, ಸಂಭಾವನೆ ನೀಡದೆ, ಅವ್ಯವಸ್ಥೆಯ ವಸತಿ ಸೌಕರ್ಯದ ಜತೆಗೆ ಊಟ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈಗ ಇದೇ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶೂಟಿಂಗ್ ಸಮಯದಲ್ಲಿ ಕಲಾವಿದರು ತೆರಳುತ್ತಿದ್ದ ಬಸ್ ಪಲ್ಟಿಯಾಗಿ, ಹಲವರು ಗಂಭೀರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಭಾನುವಾರ ಮುದೂರಿನಲ್ಲಿ ಶೂಟಿಂಗ್ ಮುಗಿದ ಬಳಿಕ ಜೂನಿಯರ್ ಕಲಾವಿದರನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್, ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿ ಹೊಡೆದಿದೆ. ಪಲ್ಟಿಯಾದ ಹಿನ್ನೆಲೆಯಲ್ಲಿ ಬಸ್‌ನಲ್ಲಿದ್ದ 20 ಜನರ ಪೈಕಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಕನ್ನಡದ ಸುತ್ತಮುತ್ತ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಜತೆಗೆ ಈ ಸಿನಿಮಾದ ಸಲುವಾಗಿ ನೂರಾರು ಜೂನಿಯರ್ ಕಲಾವಿದರನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.
2025ರ ಅಕ್ಟೋಬರ್ 2ರಂದು ರಿಲೀಸ್
ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ನಾಯಕ ನಟನಾಗಿಯೂ ಕಾಂತಾರ ಚಾಪ್ಟರ್ 1ರಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಕಾಂತಾರ ಚಾಪ್ಟರ್ 1 2025ರ ಅಕ್ಟೋಬರ್ 2ರಂದು ಬಿಡುಗಡೆ ಆಗಲಿದೆ ಎಂಬ ಸುದ್ದಿ ಕೊಟ್ಟಿತ್ತು ಹೊಂಬಾಳೆ ಫಿಲಂಸ್. ಚಾಪ್ಟರ್ 1 ಚಿತ್ರಕ್ಕೆ ನೂರಾರು ಕೋಟಿಯ ಹೂಡಿಕೆ ಮಾಡುತ್ತಿರುವ ಹೊಂಬಾಳೆ ಫಿಲಂಸ್ , ಕುಂದಾಪುರದ ಕೆರಾಡಿಯಲ್ಲಿ ಕದಂಬ ಸಾಮ್ರಾಜ್ಯವನ್ನು ಹೋಲುವ ದೊಡ್ಡ ಸೆಟ್ ಹಾಕಿ ಸಿನಿಮಾ ಶೂಟಿಂಗ್ ಆರಂಭಿಸಿದೆ. ಇತ್ತ ಇದೇ ಚಿತ್ರಕ್ಕಾಗಿ ಕೇರಳದ ಕಲರಿಪಯಟ್ಟು ಕಲೆಯನ್ನೂ ಕರಗತ ಮಾಡಿಕೊಳ್ಳುತ್ತಿದ್ದಾರೆ ರಿಷಬ್.
ವಿಭಾಗ