ಶಿವಣ್ಣನ ಲುಂಗಿ ಸ್ಟೈಲ್‌ನಲ್ಲಿ ಅಭಿಮಾನಿಗಳ ಸಡಗರ, ಭೈರತಿ ರಣಗಲ್ ಕಪ್ಪು ಪಂಚೆ, ಕಪ್ಪು ಅಂಗಿಗೆ ಫುಲ್ ಡಿಮ್ಯಾಂಡ್, ಸ್ಟಾಕ್ ಖಾಲಿ ಸರ್!
ಭೈರತಿ ರಣಗಲ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಧರಿಸಿರುವಂತಹ ಕಪ್ಪು ಪಂಚೆ, ಕಪ್ಪು ಶರ್ಟ್ ತೊಟ್ಟು ಶಿವಣ್ಣನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ, ಭೈರತಿ ರಣಗಲ್ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಭರತ್ ಸಾಗರ್ ವಸ್ತ್ರ ವಿನ್ಯಾಸ ಮಾಡಿದ್ದಾರೆ.
Bhagirathi Ranagal : ಚಿತ್ರರಂಗಕ್ಕೂ ಪಂಚೆಗೂ ಅವಿನಾಭಾವ ಸಂಬಂಧ. ಹಳೆಯ ಸಿನಿಮಾಗಳಿಂದ, ಇತ್ತೀಚಿನ ಸಿನಿಮಾಗಳಲ್ಲಿ ಸಾಕಷ್ಟು ನಟರು ಪಂಚೆ, ಲುಂಗಿ ತೊಟ್ಟು ಅಭಿನಯಿಸಿದ್ದಾರೆ. ಕಾಂತಾರದ ರಿಷಬ್ ಶೆಟ್ಟಿ ಭಾರತದಾದ್ಯಂತ ಪಂಚೆಯಲ್ಲೇ ಸುತ್ತಿ ಎಲ್ಲರನ್ನು ಅಚ್ಚರಿಗೆ ದೂಡಿದ್ದರು. ಅದಕ್ಕೂ ಮೊದಲು ಗರುಡ ಗಮನ ವೃಷಭ ವಾಹನದಲ್ಲಿ ರಾಜ್ ಬಿ ಶೆಟ್ಟಿ ಪಂಚೆಯಲ್ಲಿ ಗಮನ ಸೆಳೆದಿದ್ದರು. ಉಪ್ಪಿ 2 ಸಿನಿಮಾಲ್ಲಿ ಉಪೇಂದ್ರ ಪಂಚೆ ತೊಟ್ಟು ಗಮನ ಸೆಳೆದಿದ್ದರು. ಡಾಲಿ ಧನಂಜಯ್ ಕೂಡ ಆಗಾಗ ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟು ಕಾಣಿಸಿಕೊಳ್ಳುತ್ತಾರೆ. ಸ್ಯಾಂಡಲ್‌ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್‌ನಲ್ಲಿ ಸಾಕಷ್ಟು ನಟರು ಪಂಚೆಯಲ್ಲಿ ಗಮನ ಸೆಳೆದಿದ್ದಾರೆ. ಹಿಂದಿ ನಟರು ಕೂಡ ಧೋತಿಯಲ್ಲಿ ಗಮನ ಸೆಳೆದಿದ್ದಾರೆ. ಆದರೆ, ಎಲ್ಲರೂ ಬಿಳಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಶಿವ ರಾಜ್‌ಕುಮಾರ್ ಭೈರತಿ ರಣಗಲ್ ಸಿನಿಮಾದಲ್ಲಿ ಮತ್ತು ಈ ಹಿಂದಿನ ಮಫ್ತಿ ಸಿನಿಮಾದಲ್ಲಿ ಉಟ್ಟ ಕಪ್ಪು ಪಂಚೆ ಮತ್ತು ಕಪ್ಪು ಅಂಗಿಯ ಸ್ಟೈಲೇ ಬೇರೆ. ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾದ ಈ ಸಮಯದಲ್ಲಿ ಕರ್ನಾಟಕದಲ್ಲಿ ಕಪ್ಪು ಪಂಚೆ, ಕಪ್ಪು ಅಂಗಿ ಟ್ರೆಂಡಿಂಗ್‌ನಲ್ಲಿ ಇದೆ ಅಂದರೂ ಸುಳ್ಳಲ್ಲ.
ಕಪ್ಪು ಪಂಚೆ, ಕಪ್ಪು ಶರ್ಟ್ ಟ್ರೆಂಡಿಂಗ್
ಭೈರತಿ ರಣಗಲ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ಕಪ್ಪು ಪಂಚೆ, ಕಪ್ಪು ಅಂಗಿ ತೊಟ್ಟೇ ಥಿಯೇಟರ್‌ಗೆ ಆಗಮಿಸಿದ್ದಾರೆ. ನಟ ಡಾಲಿ ಧನಂಜಯ್ ಕೂಡ ಇದೇ ರೀತಿ ಆಗಮಿಸಿದ್ದಾರೆ. ಇದೇ ಸಮಯದಲ್ಲಿ ಕಪ್ಪು ಪಂಚೆ ಮತ್ತು ಕಪ್ಪು ಶರ್ಟ್‌ಗೆ ಬೇಡಿಕೆ ಹೆಚ್ಚಾಗಿದೆ.
ಎಲ್ಲಾ ಸ್ಟಾಕ್ ಖಾಲಿ ಸರ್
ಬೆಂಗಳೂರಿನ ನಾಗರಭಾವಿಯ ಅಮಿತ್ ಎಂಬವರು ಶಿವಣ್ಣನ ಅಭಿಮಾನಿಗಳಿಗೆ ಸಾಕಷ್ಟು ಭೈರತಿ ರಣಗಲ್ ಕಾಸ್ಟ್ಯೂಮ್ ಪೂರೈಸಿದ್ದಾರೆ. "ನಾನು ಶಿವಣ್ಣನ ಅಭಿಮಾನಿ. ಅಭಿಮಾನದಿಂದ ಈ ಕೆಲಸ ಮಾಡಿದ್ದೇವೆ. ಯಾವುದೇ ಲಾಭ, ಮಾರ್ಜಿನ್ ಇಟ್ಟುಕೊಂಡಿಲ್ಲ. ಕಪ್ಪು ಅಂಗಿ ನಾರ್ಮಲ್. ಆದರೆ, ಪಂಚೆಗೆ ಪ್ಯಾಂಟ್ ಬಟ್ಟೆ ಬಳಸಿದ್ದೇವೆ. ಕಪ್ಪು ಪಂಚೆ ಸಾಮಾನ್ಯವಾಗಿ ಸಾಕಷ್ಟು ಬಳಕೆ ಇರುವುದಿಲ್ಲ. ಭೈರತಿ ರಣಗಲ್ ಬಳಿಕ ಇದೇ ಪಂಚೆಯ ಪೀಸ್‌ನಲ್ಲಿ ಪ್ಯಾಂಟ್ ಮಾಡಿಸಿಕೊಳ್ಳಬಹುದು. ಭೈರತಿ ರಣಗಲ್ ಸಿನಿಮಾದ ಕ್ರೇಜ್ ನೋಡಿದಾಗ ನಮಗೆ ಈ ಐಡಿಯಾ ಬಂತು. ನಮ್ಮಲ್ಲಿ ಸ್ಟಾಕ್ ಖಾಲಿಯಾಗಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಡಿಮ್ಯಾಂಡ್ ಬಂತು" ಎಂದು ಅಮಿತ್ ಹೇಳಿದ್ದಾರೆ. ಅಂದಹಾಗೆ, ಇವರು ಫೈನಲ್ ಇಯರ್ ಬಿಬಿಎಂ ವಿದ್ಯಾರ್ಥಿಯೂ ಹೌದು. "ಶಿವಣ್ಣನ ಮೇಲಿನ ಅಭಿಮಾನಕ್ಕೆ ಮಾಡಿದ್ದೇವೆ. ಎಕ್ಸ್‌ಪೋರ್ಟ್ ಚಾರ್ಜ್, ಡ್ರೆಸ್ ಚಾರ್ಜ್ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಏನೂ ಲಾಭದ ಆಸೆ ಇಲ್ಲದೆ ಮಾಡಿದ್ದೇವೆ. ನಮ್ಮ ಬಗ್ಗೆ ಹೆಚ್ಚು ಬರೆಯಬೇಡಿ" ಎಂದು ಹೇಳಲು ಅವರು ಮರೆಯಲಿಲ್ಲ.
ಸಾಕಷ್ಟು ಶಿವಣ್ಣನ ಅಭಿಮಾನಿಗಳು ಸಾಮಾನ್ಯ ಡ್ರೆಸ್ ಅಂಗಡಿಗಳಲ್ಲಿಯೇ ಕಪ್ಪು ಪಂಚೆ ಮತ್ತು ಶರ್ಟ್ ಖರೀದಿಸಿದ್ದಾರೆ. "ನಾವು ಬೆಂಗಳೂರಿನ ಚಿಕ್ಕಪೇಟೆಗೆ ಹೋಗಿ ಖರೀದಿಸಿದೆವು. ಆದರೆ, ಎಲ್ಲರಿಗೂ ಒಂದೇ ರೀತಿಯ ಶರ್ಟ್ ಸ್ಟಾಕ್ ಇರಲಿಲ್ಲ" ಎಂದು ಕತ್ರಿಗುಪ್ಪೆಯ ಕಾಮಾಕ್ಯ ಥಿಯೇಟರ್‌ಗೆ ಆಗಮಿಸಿದ್ದ ಶಿವಣ್ಣನ ಅಭಿಮಾನಿ ಅಭಿ ಎಂಬವರು ಹೇಳಿದ್ದಾರೆ. ಸಾಕಷ್ಟು ಅಭಿಮಾನಿಗಳು ತಮ್ಮಲ್ಲಿ ಇದ್ದ ಕಪ್ಪು ಅಂಗಿಯನ್ನೇ ಬಳಸಿದ್ದಾರೆ. ಕಪ್ಪು ಲುಂಗಿಯನ್ನು ಹೊಸದಾಗಿ ಖರೀದಿಸಿದ್ದೇವೆ ಎಂದಿದ್ದಾರೆ.
ಶಿವಣ್ಣನ ಕಾಸ್ಟ್ಯೂಮ್ ವಿನ್ಯಾಸ ಮಾಡಿದ್ದು ಯಾರು?
ಭೈರತಿ ರಣಗಲ್ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದು ಜನಪ್ರಿಯ ಡಿಸೈನರ್ ಭರತ್ ಸಾಗರ್. ಕಿಚ್ಚ ಸುದೀಪ್ ಸೇರಿದಂತೆ ಹಲವು ನಟರಿಗೆ, ಹಲವು ಸಿನಿಮಾಗಳಿಗೆ ಇವರೇ ವಸ್ತ್ರ ವಿನ್ಯಾಸಕರು. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಇವರು ಭರತ್ ಸಾಗರ್ ಬಳಿಕ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಇದೀಗ ಇವರು ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ಕಾಸ್ಟ್ಯೂಮ್ ಡಿಸೈನರ್ ಎಂದರೂ ತಪ್ಪಾಗದು.
ಸಿನಿಮಾ ನಟರ ಪಂಚೆ ಕ್ರೇಜ್
ಕನ್ನಡದಲ್ಲಿ ರಿಷಬ್ ಶೆಟ್ಟಿ, ಶಿವರಾಜ್ ಕುಮಾರ್, ದರ್ಶನ್, ರಾಜ್ ಬಿ ಶೆಟ್ಟಿ ಸೇರಿದಂತೆ ಸಾಕಷ್ಟು ನಟರು ಪಂಚೆ ತೊಟ್ಟು ಈ ಹಿಂದೆ ಗಮನ ಸೆಳೆದಿದ್ದಾರೆ. ಮಲಯಾಳಂನಲ್ಲಿ ಮಮ್ಮಟ್ಟಿ ಸೇರಿದಂತೆ ಅನೇಕ ನಟರಿಗೆ ಪಂಚೆಯೇ ಸರ್ವಸ್ವ. ತಮಿಳು ಚಿತ್ರರಂಗದಲ್ಲಿಯೂ ಸೂರ್ಯ, ವಿಜಯ್, ಅಜಿತ್, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಬಹುತೇಕ ನಟರು ವಿವಿಧ ಸಿನಿಮಾಗಳಲ್ಲಿ ಪಂಚೆಯಲ್ಲಿ ಕಾಣಿಸಿದ್ದಾರೆ. ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್, ನಾಗ ಚೈತನ್ಯ, ರಾಣ ದಗ್ಗುಬಾಟಿ ಸೇರಿದಂತೆ ಹಲವು ನಟರು ಪಂಚೆಯಲ್ಲಿ ಕಾಣಿಸಿದ್ದಾರೆ.
ವಿಭಾಗ