ಕನ್ನಡ ಸುದ್ದಿ  /  Entertainment  /  Sandalwood News Actor Shivarajkumar Requests Not To Use Foul Language While Talking About Karataka Damanaka Film Mnk

‘ಬಳಸೋ ಭಾಷೆ ಸರಿಯಾಗಿರಲಿ, ನಿಮಗೂ ತಾಯಿ, ತಂಗಿ, ಹೆಂಡ್ತಿ ಮಕ್ಕಳಿದ್ದಾರೆಂಬ ನೆನಪಿರಲಿ’; ಶಿವಣ್ಣನ ಈ ಮಾತಿನ ಹಿಂದಿದೆ ಬಲವಾದ ಕಾರಣ

ಕರಟಕ ದಮನಕ ಸಿನಿಮಾ ರಾಜ್ಯಾದ್ಯಂತ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಈ ನಡುವೆ ಚಿತ್ರದ ನಾಯಕ ಶಿವರಾಜ್‌ಕುಮಾರ್‌ ಸಿನಿಮಾಕ್ಕೆ ಸಿಗುತ್ತಿರುವ ರೆಸ್ಪಾನ್ಸ್‌ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ಕೊಂಚ ಬೇಸರವನ್ನೂ ಹೊರಹಾಕಿದ್ದಾರೆ.

‘ಬಳಸೋ ಭಾಷೆ ಸರಿಯಾಗಿರಲಿ, ನಿಮಗೂ ತಾಯಿ, ತಂಗಿ, ಹೆಂಡ್ತಿ ಮಕ್ಕಳಿದ್ದಾರೆಂಬ ನೆನಪಿರಲಿ’; ಶಿವಣ್ಣನ ಈ ಮಾತಿನ ಹಿಂದಿದೆ ಬಲವಾದ ಕಾರಣ
‘ಬಳಸೋ ಭಾಷೆ ಸರಿಯಾಗಿರಲಿ, ನಿಮಗೂ ತಾಯಿ, ತಂಗಿ, ಹೆಂಡ್ತಿ ಮಕ್ಕಳಿದ್ದಾರೆಂಬ ನೆನಪಿರಲಿ’; ಶಿವಣ್ಣನ ಈ ಮಾತಿನ ಹಿಂದಿದೆ ಬಲವಾದ ಕಾರಣ

Karataka Damanaka: ಶಿವರಾಜ್‌ಕುಮಾರ್‌ ಮತ್ತು ಪ್ರಭುದೇವ ನಟನೆಯ ಕರಟಕ ದಮನಕ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ (ಮಾ. 08) ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಂಡಿದೆ. ಯೋಗರಾಜ್‌ ಭಟ್ಟರ ನೀರು ತೇರು ಊರಿನ ಕಥೆಗೆ ಪ್ರೇಕ್ಷಕ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಉತ್ತರ ಕರ್ನಾಟಕ ಭಾಗದಲ್ಲಿ ನೀರಿನ ಸಮಸ್ಯೆಗಳನ್ನು ತೆರೆದಿಡುವ ಈ ಕಥಾಹಂದರಕ್ಕೆ ನೋಡುಗ ಜೈ ಎಂದಿದ್ದಾನೆ. ಬಹುತಾರಾಗಣದ ಚಿತ್ರಕ್ಕೆ ಪೂರ್ಣಾಂಕವನ್ನೂ ನೀಡಿದ್ದಾನೆ. ಇನ್ನೇನು ರಾಜ್ಯಾದ್ಯಂತ ವಿಜಯ ಯಾತ್ರೆ ಹೊರಡುವುದಕ್ಕೂ ಇಡೀ ತಂಡ ಪ್ಲಾನ್‌ ಮಾಡಿದೆ.

ಇದೀಗ ಇದೇ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಮುಂದುವರಿಸಿದ ಹಿನ್ನೆಲೆಯಲ್ಲಿ, ಸಿನಿಮಾ ಅಪ್ಪಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ತಿಳಿಸುವ ಉದ್ದೇಶದಿಂದ ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಒಬ್ಬರಾದ ಮೇಲೊಬ್ಬರು ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್‌ ಬಗ್ಗೆ ಮಾತನಾಡಿದರು. ಈ ನಡುವೆ ಚಿತ್ರದ ನಾಯಕ ಶಿವರಾಜ್‌ಕುಮಾರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾ ಗಮನದಲ್ಲಿಟ್ಟುಕೊಂಡು ಅವರು ಮಾತನಾಡಿದ್ದಾರೆ.

ನಾವು ದೇವರಲ್ಲ, ಮನುಷ್ಯರೇ..

"ಸೋಷಿಯಲ್‌ ಮೀಡಿಯಾದಲ್ಲಿ ನಾನು ಗಮನಿಸಿದಂತೆ, ಕರಟಕ ದಮನಕ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಂತ ಎಲ್ಲರನ್ನೂ ತೃಪ್ತಿ ಪಡಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯವಾಗಿದ್ದರೆ ನಾವು ದೇವರಾಗಿ ಬಿಡ್ತಿದ್ವಿ. ನಾವು ದೇವರಾಗೋಕೆ ಹೋಗ್ಬಾರ್ದು, ಮನುಷ್ಯನಾಗಿಯೇ ಇರಬೇಕು. ದೇವರು ಮೇಲಿದ್ದಾನೆ. ಎಲ್ಲವನ್ನೂ ಅವನು ನೋಡಿಕೊಳ್ಳುತ್ತಾನೆ" ಎಂದಿದ್ದಾರೆ.

ಏನು ಮಾತನಾಡ್ತಿದ್ದೀವಿ ಅನ್ನೋದು ಗಮನದಲ್ಲಿರಲಿ..

ಮುಂದುವರಿದು ಮಾತನಾಡಿದ ಶಿವಣ್ಣ, "ಸಿನಿಮಾ ಸರಿಯಿಲ್ಲ, ಚೆನ್ನಾಗಿಲ್ಲ ಎಂಬುದರಲ್ಲಿ ತಪ್ಪಿಲ್ಲ. ಆ ಬಗ್ಗೆ ನೀವು ಪ್ರತಿಕ್ರಿಯೆ ನೀಡಬಹುದು. ಆದರೆ, ಬಳಸುವ ಭಾಷೆಯ ಬಗ್ಗೆ ಗಮನವಿರಲಿ. ಸೋಷಿಯಲ್‌ ಮೀಡಿಯಾದಲ್ಲಿ ಕೆಲವರು ಕೆಟ್ಟದಾಗಿ ಮಾತನಾಡಿದ್ದಾರೆ. ಆ ಭಾಷೆ ನೋಡಿದಾಗ ತುಂಬ ಬೇಸರವಾಯ್ತು. ಮಾತನಾಡುವಾಗ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಗೊತ್ತಿರಬೇಕು. ನಿಮಗೂ ತಾಯಿ ಇದ್ದಾರೆ, ತಂಗಿ ಇದ್ದಾರೆ. ಹಾಗಿರುವಾಗ, ಬಾಯಿಗೆ ಬಂದಂತೆ ಮಾತನಾಡಬಾರದು. ಇದನ್ನು ನೋಡಿ ನನಗೆ ನಿಜಕ್ಕೂ ದುಃಖವಾಯ್ತು" ಎಂದಿದ್ದಾರೆ.

ನಿಮಗೂ ಅಕ್ಕ, ತಂಗಿ, ಹೆಂಡ್ತಿ ಮಕ್ಕಳಿದ್ದಾರೆ..

"ಸಿನಿಮಾ ಚೆನ್ನಾಗಿಲ್ಲ ಅಂದರೆ ಚೆನ್ನಾಗಿಲ್ಲ ಅಷ್ಟೇ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಭಾಷೆ ಬಳಸುವಾಗಿ ಒಂದು ಬಾರಿ ಯೋಚಿಸಿ ಮಾತನಾಡಿ. ನೀವು ಮಾತನಾಡುವುದು ಟಿವಿಯಲ್ಲಿ ಪ್ರಸಾರವಾಗುತ್ತಿರುತ್ತದೆ. ಜನ ಟಿವಿ ನೋಡುತ್ತಿರುತ್ತಾರೆ. ಸೋಷಿಯಲ್‍ ಮೀಡಿಯಾ ಅಂದರೆ ಏನೇನೋ ಮಾತನಾಡಬಾರದು. ಭಾಷೆ ಬಹಳ ಮುಖ್ಯ. ನಿಮಗೂ ತಂದೆ, ತಾಯಿ, ಹೆಂಡ್ತಿ, ಮಕ್ಕಳು ಇರುತ್ತಾರೆ. ನಾಳೆ ಅವರು ಸಹ ಏನು ನನ್ನ ಮಗ, ನಮ್ಮಣ್ಣ ಹೀಗೆಲ್ಲಾ ಮಾತನಾಡಿದ ಎಂದು ಬೇಸರ ಮಾಡಿಕೊಳ್ಳಬಾರದು. ಇವೆಲ್ಲವನ್ನು ಬದಿಗಿಟ್ಟರೆ, ಸಿನಿಮಾ ಬಗ್ಗೆ ಬಹುತೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಖುಷಿಯ ಸಂಗತಿ ಎಂದಿದ್ದಾರೆ ಶಿವಣ್ಣ.

‘ಕರಟಕ ದಮನಕ’ ಸಿನಿಮಾದಲ್ಲಿ ಶಿವರಾಜಕುಮಾರ್, ಪ್ರಭುದೇವ ಮೊದಲ ಸಲ ಒಂದಾದರೆ, ಈ ಇಬ್ಬರ ಜತೆಗೆ ಯೋಗರಾಜ್‌ ಭಟ್‌ ಮೊದಲ ಬಾರಿ ನಿರ್ದೇಶನದ ಕೆಲಸ ಮಾಡಿದ್ದಾರೆ. ಪಾತ್ರವರ್ಗದಲ್ಲಿ ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು ನಟಿಸಿದರೆ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ರವಿ ಕಥೆ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ, ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ. ಪ್ರಕಾಶ್​ ಅವರ ಸಂಕಲನವಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಕರಟಕ ದಮನಕ ಸಿನಿಮಾ ಮೂಡಿಬಂದಿದೆ.

IPL_Entry_Point