Martin Review: ಮೇಳೈಸಿದ ಸಾಹಸ, ಅಬ್ಬರಿಸಿದ ಮಾರ್ಟಿನ್‌! ಆಕ್ಷನ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಿದ ಧ್ರುವ ಸರ್ಜಾ
ಕನ್ನಡ ಸುದ್ದಿ  /  ಮನರಂಜನೆ  /  Martin Review: ಮೇಳೈಸಿದ ಸಾಹಸ, ಅಬ್ಬರಿಸಿದ ಮಾರ್ಟಿನ್‌! ಆಕ್ಷನ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಿದ ಧ್ರುವ ಸರ್ಜಾ

Martin Review: ಮೇಳೈಸಿದ ಸಾಹಸ, ಅಬ್ಬರಿಸಿದ ಮಾರ್ಟಿನ್‌! ಆಕ್ಷನ್‌ ಪ್ರಿಯರಿಗೆ ಹಬ್ಬದೂಟ ಹಾಕಿಸಿದ ಧ್ರುವ ಸರ್ಜಾ

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಸಿನಿಮಾ ಇಂದು (ಅಕ್ಟೋಬರ್‌ 11) ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡದ ಜತೆಗೆ ಹಲವು ಭಾಷೆಗಳಿಗೆ ಡಬ್‌ ಆಗಿ ರಿಲೀಸ್‌ ಆಗಿದೆ. ಹಾಗಾದರೆ ಈ ಬಹುಕೋಟಿ ವೆಚ್ಚದ ಸಿನಿಮಾ ಹೇಗಿದೆ? ಇಲ್ಲಿದೆ ವಿಮರ್ಶೆ ಓದಿ.

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಸಿನಿಮಾ ಇಂದು (ಅಕ್ಟೋಬರ್‌ 11) ವಿಶ್ವದಾದ್ಯಂತ ತೆರೆಕಂಡಿದೆ.
ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಸಿನಿಮಾ ಇಂದು (ಅಕ್ಟೋಬರ್‌ 11) ವಿಶ್ವದಾದ್ಯಂತ ತೆರೆಕಂಡಿದೆ.

Martin Movie Review: ಧ್ರುವ ಸರ್ಜಾ ಸಿನಿಮಾಗಳೆಂದರೆ ಅಲ್ಲಿ ಕಲರ್‌ಫುಲ್‌ ಹಾಡುಗಳಿಗೆ ಕೊರತೆ ಇರಲ್ಲ. ಮಾಸ್‌ ಪ್ರಿಯರು ಬಯಸುವ ಸಾಹಸ ದೃಶ್ಯಗಳ ವೈಭೋಗವೂ ಅದ್ಧೂರಿಯಾಗಿಯೇ ಇರುತ್ತದೆ. ಪ್ರೀತಿ ಪ್ರೇಮದ ಬಗ್ಗೆಯೂ ಒಂದಷ್ಟು ಸೀನ್‌ಗಳು ಮೀಸಲಿರುತ್ತವೆ. ಭಾವನಾತ್ಮಕ ಎಳೆಯ ನಡುವೆಯೇ ಹಾಸ್ಯಕ್ಕೂ ಅವರ ಸಿನಿಮಾಗಳಲ್ಲಿ ಜಾಗವುಂಟು. ಈಗ ಅದರ ಮುಂದುವರಿದ ಭಾಗ ಎಂಬಂತೆ ಎಲ್ಲೆಡೆ ಸಲ್ಲುವ ಕಥೆಯನ್ನು ಹಿಡಿದುಕೊಂಡು, ಪ್ಯಾನ್‌ ಇಂಡಿಯಾ ಮಾತ್ರವಲ್ಲದೆ, ವಿಶ್ವ ಮಟ್ಟದ ಪ್ರೇಕ್ಷಕರನ್ನೂ ಮಾರ್ಟಿನ್‌ ಸಿನಿಮಾ ಮೂಲಕ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಧ್ರುವ.

ಮಾರ್ಟಿನ್‌, ಬರೋಬ್ಬರಿ 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ. ಧ್ರುವ ಸರ್ಜಾ ಸಿನಿಮಾ ವೃತ್ತಿ ಬದುಕಿನಲ್ಲಿಯೂ ಇದು ದುಬಾರಿ ವೆಚ್ಚದ ಚಿತ್ರ. ಮೇಕಿಂಗ್‌ನಿಂದಲೇ ಈ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಇತ್ತು. ಮೂರೂವರೆ ವರ್ಷಗಳ ಹಿಂದೆ ಶುರುವಾಗಿದ್ದ ಈ ಸಿನಿಮಾ ಇದೀಗ, ಪ್ರೇಕ್ಷಕರ ಮುಂದೆ ಬಂದಿದೆ. 3000 ಸ್ಕ್ರೀನ್‌ಗಳ ಮೇಲೆ ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಅಬ್ಬರಿಸುತ್ತಿದೆ. ಎ. ಪಿ ಅರ್ಜುನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಮಾರ್ಟಿನ್‌ ಚಿತ್ರದಲ್ಲಿ ಆಕ್ಷನ್‌ ಸೀನ್‌ಗಳೇ ಮೇಳೈಸಿವೆ. ಹಾಗಾಗಿ ಇದು ಆಕ್ಷನ್‌ ಪ್ರಿಯರಿಗೂ ಇಷ್ಟವಾಗಬಹುದು.

ಹಾಗಾದರೆ ಏನಿದು ಮಾರ್ಟಿನ್‌ ಕಥೆ?

ಮಾರ್ಟಿನ್‌ ಕಥೆಯ ಡೋರ್‌ ತೆರೆಯುವುದೇ ಪಾಕಿಸ್ತಾನದಲ್ಲಿ. ನೇವಿಯಲ್ಲಿ ಕಸ್ಟಮ್ಸ್‌ ಆಫೀಸರ್‌ ಆಗಿರುವ ಅರ್ಜುನ್‌ (ಧ್ರುವ ಸರ್ಜಾ), ಪಾಕಿಸ್ತಾನಿಯರಿಗೆ ಸೆರೆಸಿಕ್ಕ ಭಾರತೀಯನಾಗಿರುತ್ತಾನೆ. ತನ್ನ ನೆನಪಿನಶಕ್ತಿಯನ್ನೂ ಕಳೆದುಕೊಂಡು, ನಿಜವಾದ ಐಡೆಂಟಿಟಿ ಕಂಡುಕೊಳ್ಳುವ ಸಲುವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿಳಿಯುತ್ತಾನೆ. ಮುಂಬೈಯಿಂದ ಬೆಂಗಳೂರಿಗೂ ಅವನ ಆಗಮನವಾಗುತ್ತದೆ. ಹಾಗೆಯೇ ಅರ್ಜುನ್‌ಗೆ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗೆ ಕಾರಣ ಮಾರ್ಟಿನ್‌ ಎಂಬ ಸತ್ಯವೂ ಗೊತ್ತಾಗುತ್ತದೆ. ಹಾಗಾದರೆ, ಆ ಮಾರ್ಟಿನ್‌ ಯಾರು? ಅವನ ಹಿನ್ನೆಲೆ ಏನು?  ಕಸ್ಟಮ್ಸ್‌ ಆಫೀಸರ್‌ ಅರ್ಜುನ್ ಸಕ್ಸೇನಾಗೂ ಮಾರ್ಟಿನ್‌ಗೂ ಏನು ಸಂಬಂಧ? ಇದೆಲ್ಲವನ್ನು ಸಿನಿಮಾದಲ್ಲಿಯೇ ನೋಡಬೇಕು.

ನಿರ್ದೇಶಕರ ಕಲ್ಪನೆಯ ಕೂಸು ಈ ಮಾರ್ಟಿನ್.‌ ಧ್ರುವ ಸರ್ಜಾ ಇಲ್ಲಿ ಓರ್ವ ಕಲಾವಿದ ಮಾತ್ರ. ಅದರಾಚೆಗೆ ನಿರ್ದೇಶಕನ ಕೆಲಸವೇ ಈ ಸಿನಿಮಾದ ಹೈಲೈಟ್.‌ ಕಲ್ಪನೆಗೂ ಮೀರಿದ ದೃಶ್ಯಗಳನ್ನು ತೆರೆಮೇಲೆ ತರುವ ಅವರ ಕೆಲಸ ಇಲ್ಲಿ ಎದ್ದು ಕಾಣುತ್ತದೆ. ದೇಶಪ್ರೇಮದ ಕಥೆಯೊಂದಿಗೆ ಭಾರತ ಪಾಕಿಸ್ತಾನದ ನಡುವಿನ ತಿಕ್ಕಾಟವನ್ನೇ ಆಧರಿಸಿ ಸಾಹಸಮಯ ಕಥೆಯನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ ಎ.ಪಿ. ಅರ್ಜುನ್.‌ ಹಾಗಾಗಿ ಈ ಮಾರ್ಟಿನ್‌ ಟಿಪಿಕಲಿ ರೊಮ್ಯಾನ್ಸ್‌ ಮತ್ತು ಕೌಟುಂಬಿಕ ಸಿನಿಮಾ ಪ್ರೇಕ್ಷಕರಿಗಿಂತ, ಮಾಸ್‌ ಕಂಟೆಂಟ್‌ ಬೇಡುವ ಆಡಿಯೆನ್ಸ್‌ಗೆ ಹೇಳಿ ಮಾಡಿಸಿದ ಚಿತ್ರವಾಗಿದೆ.

ಮೊದಲಾರ್ಧವು ತನ್ನ ವೇಗದ ಗತಿ ಮತ್ತು ಸಸ್ಪೆನ್ಸ್‌ನೊಂದಿಗೆ ಪ್ರೇಕ್ಷಕರನ್ನು ಹಿಡಿದುಟ್ಟುಕೊಳ್ಳುತ್ತಾನೆ ಮಾರ್ಟಿನ್. ದ್ವಿತೀಯಾರ್ಧದಲ್ಲಿ ಕಥೆಯ ಓಟ ಕೊಂಚ ನಿಧಾನವಾಗುತ್ತದೆ. ಕ್ಲೈಮ್ಯಾಕ್ಸ್‌ ಸಮೀಪಿಸುತ್ತಿದೆ ಎಂದಾಗ ಹಾಲಿವುಡ್‌ ಮೇಕಿಂಗ್‌ ಕಣ್ಣಮುಂದೆ ಬಂದು ನಿಲ್ಲುತ್ತದೆ. ಆ ಮಟ್ಟದ ಸ್ಟ್ಯಾಂಡರ್ಡ್‌ ಗುಣಮಟ್ಟದ ಆಕ್ಷನ್‌ ಸಿನಿಮಾದಲ್ಲಿದೆ. ಅದಕ್ಕೆ ತಕ್ಕಂತೆ ಮೈ ಹುರಿಗೊಳಿಸಿಕೊಂಡಿರುವ ಧ್ರುವ ಸರ್ಜಾ, ದೈತ್ಯ ದೇಹಿಗಳ ಜತೆ ಸೆಣಸಿದ್ದಾರೆ. ಒಟ್ಟಾರೆ ಮಾಸ್‌ ಪ್ರೇಕ್ಷಕರಿಗೆ ಮಾರ್ಟಿನ್‌ ಸಿನಿಮಾ ಹಬ್ಬದೂಟವನ್ನೇ ಹಾಕಿಸಿದ್ದಾನೆ.

ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ ಚಿತ್ರದ ಪ್ರತಿ ಕೋನವೂ ಶ್ರೀಮಂತವಾಗಿವೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ. ವಿಎಫ್‌ಎಕ್ಸ್‌ ಬಳಕೆ ಸಿನಿಮಾದ ನೈಜತೆಯನ್ನು ಹೆಚ್ಚಿಸಿದೆ. ಇಡೀ ಸಿನಿಮಾದಲ್ಲಿ ಧ್ರುವ ಸರ್ಜಾ ಎರಡು ಶೇಡ್‌ಗಳಲ್ಲಿ ಆವರಿಸಿದ್ದಾರೆ. ನಾಯಕಿ ವೈಭವಿ ಶಾಂಡಿಲ್ಯಗೆ ಚಿತ್ರದಲ್ಲಿ ಹೇಳಿಕೊಳ್ಳುವ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲ. ಇನ್ನುಳಿದಂತೆ ಚಿಕ್ಕಣ್ಣ, ಅನ್ವೇಶಿ ಜೈನ್‌, ನಿಕಿತಿನ್ ಧೀರ್​, ಕಾವ್ಯಾ ಶಾಸ್ತ್ರಿ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸಿನಿಮಾ: ಮಾರ್ಟಿನ್​

ನಿರ್ದೇಶನ: ಎ.ಪಿ. ಅರ್ಜುನ್

ನಿರ್ಮಾಣ: ಉದಯ್​ ಕೆ. ಮೆಹ್ತಾ

ಪಾತ್ರವರ್ಗ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಸಾಧು ಕೋಕಿಲ, ಮಾಳವಿಕಾ ಅವಿನಾಶ್‌, ಚಿಕ್ಕಣ್ಣ, ಅನ್ವೇಷಿ ಜೈನ್​, ನಿಕಿತಿನ್ ಧೀರ್​, ಕಾವ್ಯಾ ಶಾಸ್ತ್ರಿ ಸೇರಿ ಹಲವರು ನಟಿಸಿದ್ದಾರೆ.

ರೇಟಿಂಗ್‌​: 3/5

ವಿಮರ್ಶೆ: ಮಂಜು ಕೊಟಗುಣಸಿ

Whats_app_banner