Dr Rajkumar: ‘ಬಂಗಾರದ ಮನುಷ್ಯ’ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ರಾಜ್‌ಕುಮಾರ್ ಹೀರೋಯಿಸಂ! ಅಷ್ಟಕ್ಕೂ ಆವತ್ತು ಘಟಿಸಿದ್ದೇನು?
ಇಂದು (ಏ. 24) ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜಯಂತಿ. ಈ ನಿಮಿತ್ತ ಬಂಗಾರದ ಮನುಷ್ಯ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯದಲ್ಲಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.
Dr Rajkumar: ಕನ್ನಡ ಚಿತ್ರೋದ್ಯಮದಲ್ಲಿ ಆವತ್ತಿನ ದಿನಮಾನಗಳಲ್ಲಿ (1972) ಬಂಗಾರದ ಮನುಷ್ಯ ಸಿನಿಮಾ ಮಾಡಿದ ದಾಖಲೆ ಸಣ್ಣದೇನಲ್ಲ. ವರ್ಷಾನುಗಟ್ಟಲೇ ಚಿತ್ರಮಂದಿರದಲ್ಲಿ ಓಡಿ, ಕಲೆಕ್ಷನ್ ವಿಚಾರದಲ್ಲೂ ಬಂಗಾರದ ಫಸಲನ್ನೇ ತೆಗೆದಿತ್ತು ಈ ಸಿನಿಮಾ. ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಆ ಕಾಲದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಕನ್ನಡದ ಮೊದಲ ಸಿನಿಮಾ ಆಗಿಯೂ ಹೊರಹೊಮ್ಮಿತು. ಡಾ. ರಾಜ್‌ಕುಮಾರ್ ಸಿನಿಮಾ ಬತ್ತಳಿಕೆಯಲ್ಲಿ ಅಚ್ಚಳಿಯದೇ, ಅಗ್ರಸ್ಥಾನಕ್ಕೂ ಈ ಸಿನಿಮಾ ಲಗ್ಗೆ ಇಟ್ಟಿತ್ತು. ಈಗ ಇದೇ ಚಿತ್ರದ ಇಂಟ್ರಸ್ಟಿಂಗ್ ವಿಚಾರವೊಂದು ಇಲ್ಲಿದೆ. ಅದೇ ಬಂಗಾರದ ಮನುಷ್ಯ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ರಾಜಕುಮಾರ್ ಹೀರೋಯಿಸಂ ಕುರಿತು.
ಡಾ. ರಾಜ್‌ಕುಮಾರ್ ಕುಟುಂಬದ ಜತೆಗೆ ದಶಕಗಳ ಕಾಲ ನಂಟುಹೊಂದಿರುವ, ಅವರ ಕುಟುಂಬದಲ್ಲೊಬ್ಬ ಸದಸ್ಯರಾಗಿಯೂ ಗುರುತಿಸಿಕೊಂಡವರು ಪ್ರಕಾಶ್ ರಾಜ್ ಮೇಹು. ಇದೇ ಪ್ರಕಾಶ್ ಅವರು, ‘ಅಂತರಂಗದ ಅಣ್ಣ’ ಪುಸ್ತಕ ಬರೆದಿದ್ದಾರೆ. ರಾಜ್‌ಕುಮಾರ್ ಸಿನಿಮಾ ಜೀವನದ ಹತ್ತಾರು ಆಸಕ್ತಿದಾಯಕ ಘಟನಾವಳಿಗಳನ್ನು ಅಲ್ಲಿ ವಿವರಿಸಿದ್ದಾರೆ. ಆ ಪೈಕಿ ಅದೇ ಪುಸ್ತಕದ ವಿಶೇಷ ಸನ್ನಿವೇಶ ಇಲ್ಲಿ ಬಳಸಿಕೊಳ್ಳಲಾಗಿದೆ. ರಾಜ್‌ಕುಮಾರ್ ಅವರು ಬರೀ ನಟರಲ್ಲ, ಅವರೊಳಗೊಬ್ಬ ಕಥೆಗಾರನೂ, ಸಾಮಾನ್ಯ ಸಿನಿಮಾ ಪ್ರೇಕ್ಷಕನೂ ಇದ್ದ ಎಂಬುದಕ್ಕೆ ಇಲ್ಲಿ ಸಾಕ್ಷ್ಯ ಇದೆ.
ರಾಜೀವಪ್ಪ ಬಂಗಾರದ ಮನುಷ್ಯನಾಗಿದ್ದು ಹೇಗೆ?
‘ಬಂಗಾರದ ಮನುಷ್ಯ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕ ರಾಜೀವಪ್ಪ (ರಾಜ್‌ಕುಮಾರ್) ಊಟ ಮಾಡುತ್ತಿರುವಾಗ ಕೇಶವ (ವಜ್ರಮುನಿ) ರಾಜೀವಪ್ಪನನ್ನು ಹೀಯಾಳಿಸಿ ಮಾತನಾಡುತ್ತನೆ. ಆಗ ರಾಜೀವಪ್ಪ ಊಟದ ತಟ್ಟೆಯಲ್ಲಿ ಕೈ ತೊಳೆದುಕೊಂಡು ಏನೂ ಮಾತನಾಡದೇ ಹೊರಟು ಹೋಗುತ್ತಾನೆ. ಇದು ಚಿತ್ರದಲ್ಲಿರುವ ಸನ್ನಿವೇಶ. ಆದರೆ, ನಾಯಕ ರಾಜೀವಪ್ಪ ಆರೇಳು ಪುಟಗಳ ಡೈಲಾಗ್ ಹೊಡೆದು ಆ ನಂತರ ಹೋಗುತ್ತಾನೆ ಅಂತ ಓರಿಜಿನಲ್ ಸ್ಕ್ರಿಪ್ಟ್‌ನಲಿ ಇತ್ತಂತೆ. ಅದು ಯಾಕೋ ಅಣ್ಣಾವ್ರಿಗೆ ಸರಿ ಅನಿಸದೇ, ಆ ದೃಶ್ಯವನ್ನು ಚಿತ್ರೀಕರಿಸದೇ ಪ್ಯಾಕ್ ಅಪ್ ಮಾಡಿಸಿಕೊಂಡು ಬಂದು ಮತ್ತೆ ಚರ್ಚಿಸಿ ಅಲ್ಲಿ ರಾಜೀವಪ್ಪ ಏನೂ ಮಾತನಾಡುವುದು ಬೇಡ ಅಂಥ ತೀರ್ಮಾಬನಿಸಿ ನಂತರ ಚಿತ್ರೀಕರಿಸಿದರಂತೆ.
ಅಣ್ಣಾವ್ರು ಆ ಗುಂಪಿಗೆ ಸೇರಿದವರಲ್ಲ
ತಾನು ಮಾಡಿದ ತ್ಯಾಗವನ್ನು ಎಲ್ಲರ ಮುಂದೆಯೂ ಹೇಳಿಕೊಂಡು ಉದ್ದುದ್ದ ಡೈಲಾಗ್ ಹೊಡೆಯುವುದು ಸಿನಿಮಾ ಭಾಷೆಯಲ್ಲಿ ಹೀರೋಯಿಸಂ ಎಂದು ಕರೆಯುತ್ತಾರೆ. ಬಹಳಷ್ಟು ನಟರು ಅವಶ್ಯಕತೆ ಇಲ್ಲದಾಗ್ಯೂ ಇಂತಹ ಸನ್ನಿವೇಶಗಳನ್ನು ನಿರ್ದೇಶಕರಿಗೆ ಹೇಳಿ ಮಾಡಿಸಿಕೊಳ್ಳುತ್ತಾರೆ. ಆದರೆ, ಅಣ್ಣಾವ್ರು ಆ ಗುಂಪಿಗೆ ಸೇರಿದವರಲ್ಲ. ಪಾತ್ರ ಮತ್ತು ಸನ್ನಿವೇಶಗಳ ಔಚಿತ್ಯವನ್ನು ಅರಿತು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು ಅನ್ನುತ್ತವುದಕ್ಕೆ ಇದೊಂದು ಉದಾಹರಣೆ.
ಪ್ರೇಕ್ಷಕರಿಂದ ಚಪ್ಪಾಳೆ ಸಿಗ್ತಿತ್ತು, ಆದ್ರೆ...
ಹಾಗೊಂದು ವೇಳೆ ಆ ಸನ್ನಿವೇಶದಲ್ಲಿ ನಾಯಕ ಅಷ್ಟೊಂದು ಮಾತನಾಡಿದ್ದರೆ ಅದೂ ಅಣ್ಣಾವ್ರು ತಮ್ಮ ವಿಶಿಷ್ಟ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದರೆ, ಪ್ರೇಕ್ಷಕರಿಂದಲೂ ಖಂಡಿತ ಚಪ್ಪಾಳೆಗಳ ಸುರಿಮಳೆಯೇ ಬೀಳುತ್ತಿತ್ತು. ಆದರೆ, ಆಗ ರಾಜೀವಪ್ಪ ಒಬ್ಬ ಮಾಮೂಲಿ ಸಿನಿಮಾ ಹೀರೋ ಆಗಿ ಬಿಡುತ್ತಿದ್ದನೆ ಹೊರತು ಖಂಡಿತ ಬಂಗಾರದ ಮನುಷ್ಯನಾಗುತ್ತಿರಲಿಲ್ಲ. ಆ ಪಾತ್ರದ ಗಾಂಭೀರ್ಯ ಕಡಿಮೆಯಾಗಿ ಬಿಡುತ್ತಿತ್ತು. ಅದನ್ನರಿತೇ ಅಣ್ಣಾವ್ರು ಅದನ್ನು ಬದಲಿಸಲು ಹೇಳಿದ್ದರು. ಆ ಚಿತ್ರಕ್ಕೆ ನಾನೊಬ್ಬ ನಾಯಕ ನಟ ಮಾತ್ರ ಅಂದುಕೊಂಡಿದ್ದರೆ ಖಂಡಿತ ಅವರಿಗೆ ಈ ವಿಷಯ ಹೊಳೆಯುತ್ತಿರಲಿಲ್ಲ.
ಬದಲಾಗಿ ಇಡೀ ಚಿತ್ರದ ಬಗ್ಗೆ ಅದರ ಕಥೆ- ಚಿತ್ರಕಥೆಯ ಒಟ್ಟಂದದಲ್ಲಿ ಒಬ್ಬ ನಿರ್ದೇಶಕ ಯೋಚಿಸಬೇಕಾದಂತೆ ಯೋಚಿಸಿದ್ದರಿಂದ ಖಂಡಿತ ಅವರಿಗೆ ಇದು ಸಾಧ್ಯವಾಯ್ತು. ಇಡೀ ಜಗತ್ತಿನಲ್ಲಿಯೇ ಒಬ್ಬ ನಟನ ಸಿನಿಮಾಗಳ ಯಶಸ್ಸಿನ ಸರಾಸರಿಯಲ್ಲಿ ರಾಜಕುಮಾರರೇ ಮೊದಲಿಗರು ಅನ್ನುವುದು ವಾಸ್ತವ ಸತ್ಯ. ಈ ಯಶಸ್ಸಿನ ಗುಟ್ಟೇನು? ಎಂದು ಯಾರಾದರೂ ಕೇಳಿದರೆ ಅಣ್ಣಾವ್ರಿಗಿದ್ದ ಈ ರೀತಿಯ ಸಿನಿಮಾ ಪ್ರಜ್ಞೆಯೇ ಕಾರಣ ಎಂದು ಧಾರಾವಾಳವಾಗಿ ಹೇಳಬಹುದು.