ಕನ್ನಡ ಸುದ್ದಿ  /  ಮನರಂಜನೆ  /  Dwarakish: ಆರ್ಥಿಕ ಸಂಕಷ್ಟದಿಂದ ಕಾಂತಾರ ನಟ ರಿಷಬ್‌ ಶೆಟ್ಟಿಗೆ ಸ್ವಂತ ಮನೆ ಮಾರಾಟ ಮಾಡಿದ್ರು ದ್ವಾರಕೀಶ್‌

Dwarakish: ಆರ್ಥಿಕ ಸಂಕಷ್ಟದಿಂದ ಕಾಂತಾರ ನಟ ರಿಷಬ್‌ ಶೆಟ್ಟಿಗೆ ಸ್ವಂತ ಮನೆ ಮಾರಾಟ ಮಾಡಿದ್ರು ದ್ವಾರಕೀಶ್‌

Kannada actor Dwarakish: ಸ್ಯಾಂಡಲ್‌ವುಡ್‌ನ ಪ್ರಚಂಡ ಕುಳ್ಳ ದ್ವಾರಕೀಶ್‌ ನಿಧನರಾಗಿದ್ದು, ಈ ಸಮಯದಲ್ಲಿ ಅವರ ಸಾಧನೆಯೊಂದಿಗೆ ಆರ್ಥಿಕ ಸಂಕಷ್ಟದ ವಿಚಾರಗಳೂ ಚರ್ಚೆಗೆ ಬರುತ್ತಿವೆ. ತಮ್ಮ ಕನಸಿನ ಮನೆಯನ್ನು ನಟ ರಿಷಬ್‌ ಶೆಟ್ಟಿಗೆ ಮಾರಾಟ ಮಾಡಿರುವ ಕುರಿತು ಈ ಹಿಂದೆ ಸುದ್ದಿಯಾಗಿತ್ತು.

ಕನ್ನಡ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ದ್ವಾರಕೀಶ್‌
ಕನ್ನಡ ನಟ, ನಿರ್ದೇಶಕ, ನಿರ್ಮಾಪಕ ದಿವಂಗತ ದ್ವಾರಕೀಶ್‌

ಬೆಂಗಳೂರು: ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ನಿಧನದಿಂದ ಸ್ಯಾಂಡಲ್‌ವುಡ್‌ನ ಹಿರಿಯ ಕೊಂಡಿ ಕಳಚಿಕೊಂಡಿದೆ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದ ದಿವಂಗತ ದ್ವಾರಕೀಶ್‌ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟವನ್ನು ಹೊಂದಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ. ಸಾಲದ ಸುಳಿಗೆ ಸಿಲುಕಿದ ಕಾರಣ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿದ್ದ ಮನೆಯನ್ನು ಮಾರಾಟ ಮಾಡಿದ್ದರು ಎಂದು ವರದಿಯಾಗಿತ್ತು.

ಟ್ರೆಂಡಿಂಗ್​ ಸುದ್ದಿ

ದಿವಂಗತ ದ್ವಾರಕೀಶ್‌ ಇತ್ತೀಚಿನ ವರ್ಷಗಳಲ್ಲಿ ಸಾಲದ ಸುಳಿಗೆ ಸಿಲುಕಿದ್ದರು. ಹಲವು ಕೋಟಿ ರೂಪಾಯಿ ಸಾಲಗಳನ್ನು ತೀರಿಸಲಾಗದೆ ದ್ವಾರಕೀಶ್‌ ಮತ್ತು ಪುತ್ರ ಯೋಗಿ ಕಷ್ಟಪಡುತ್ತಿದ್ದರು. ಅನಿವಾರ್ಯವಾಗಿ ತಮ್ಮ ಬೆಂಗಳೂರಿನ ಮನೆಯೊಂದನ್ನು ಮಾರಾಟ ಮಾಡಿದ್ದರು. ಈ ಮನೆಯನ್ನು ಸುಮಾರು 10.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಎಚ್‌ಎಸ್‌ಆರ್‌ ಬಡಾವಣೆಯಲ್ಲಿದ್ದ ಆ ಮನೆಯನ್ನು ಕಾಂತಾರ ನಟ ರಿಷಬ್‌ ಶೆಟ್ಟಿ ಖರೀದಿಸಿದ್ದರು ಎಂದು ಸುದ್ದಿಯಾಗಿತ್ತು. ಈ ಕುರಿತು ರಿಷಬ್‌ ಶೆಟ್ಟಿಯಾಗಲಿ, ದ್ವಾರಕೀಶ್‌ ಆಗಲಿ, ಯೋಗಿಯಾಗಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.

ದ್ವಾರಕೀಶ್‌ ಅವರು ಕೊನೆಯದಾಗಿ ಶಿವಣ್ಣ ನಟಿಸಿದ್ದ ಆಯುಷ್ಮಾನ್‌ ಭವ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡಿರಲಿಲ್ಲ. ಇದು ದ್ವಾರಕೀಶ್‌ ಪುತ್ರ ಯೋಗಿಗೆ ಹೆಚ್ಚಿನ ಹೊಡೆತ ನೀಡಿತ್ತು. ಸಾಲದ ಹೊರೆಯನ್ನು ಹೆಚ್ಚಿಸಿತ್ತು. ದ್ವಾರಕೀಶ್‌ ಆರಂಭದ ದಿನಗಳಲ್ಲಿ ಅತ್ಯುತ್ತಮ ಆದಾಯ, ಸಂಪತ್ತು ಹೊಂದಿದ್ದರು. ಸೋಲು ಬಂದಾಗ ಆಪ್ತಮಿತ್ರ ವಿಷ್ಣುವರ್ಧನ್‌ ನೆರವು ನೀಡುತ್ತಿದ್ದರು. ಇದೀಗ ಸ್ಯಾಂಡಲ್‌ವುಡ್‌ನ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ, ನಿರ್ದೇಶಕ, ನಟ ದ್ವಾರಕೀಶ್‌ ಇಹಲೋಕ ತ್ಯಜಿಸಿದ್ದಾರೆ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿದ್ದ ದ್ವಾರಕೀಶ್‌ ಆರಂಭದಲ್ಲಿ ವಾಹನಗಳ ಬಿಡಿಭಾಗ ಮಾರಾಟ ಮಾಡುವ ತಮ್ಮ ಕುಟುಂಬದ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಸಿನಿಮಾ ನಿರ್ಮಾಣಕ್ಕೆ ಇಳಿದರು. . 1966ರಲ್ಲಿ ಇವರು ಮಮತೆಯ ಬಂಧನ ಸಿನಿಮಾಕ್ಕೆ ಸಹ ನಿರ್ಮಾಪಕರಾದ ಹೆಗ್ಗಳಿಕೆ ಇವರದ್ದು. ಅಂದರೆ, ತನ್ನ 24ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಇದಾದ ಬಳಿಕ ಸುಮಾರು ಎರಡು ದಶಕಗಳ ಕಾಲ ದ್ವಾರಕೀಶ್‌ ಸ್ಯಾಂಡಲ್‌ವುಡ್‌ನಲ್ಲಿ ಪ್ರಚಂಡ ಕುಳ್ಳನಾಗಿ ಮೆರೆದರು. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದರು. ಹಲವು ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದರು. ವಿಷ್ಣುವರ್ಧನ್‌ ಜತೆ ಸೂಪರ್‌ಹಿಟ್‌ ಸಹಕಲಾವಿದನಾಗಿ ನಟಿಸಿದರು. ತಾನೂ ನಾಯಕ ನಟನಾಗಿ ಮಿಂಚಿದ್ದರು.

IPL_Entry_Point