ಅಗಲಿದ ಕನ್ನಡ ಕಲಾವಿದರಿಗೆ ಮಹಾಲಯ ಅಮವಾಸ್ಯೆ ಪೂಜೆ ಮಾಡಿದ ಸೃಜನ್ ಲೋಕೇಶ್; ವಿಷ್ಣುವರ್ಧನ್, ಅಂಬರೀಶ್ ಫೋಟೋ ಎಲ್ಲಿ ಎಂದ ಅಭಿಮಾನಿಗಳು
Srujan Lokesh: ಮಹಾಲಯ ಅಮವಾಸ್ಯೆಯಂದು ನಟ, ನಿರೂಪಕ ಸೃಜನ್ ಲೋಕೇಶ್ ನಿಧನರಾದ ಕನ್ನಡ ನಟರಿಗೆ ಪೂಜೆ ಮಾಡಿದ್ದಾರೆ. ಆದರೆ ಅಲ್ಲಿ ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಪ್ರಭಾಕರ್ ಫೋಟೋ ಇಲ್ಲದನ್ನು ನೋಡಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Srujan Lokesh: ಮಹಾಲಯ ಅಮವಾಸ್ಯೆಯಂದು ಎಲ್ಲರೂ ತಮ್ಮ ಕುಟುಂಬದಲ್ಲಿ ನಿಧನರಾದ ಹಿರಿಯರಿಗೆ ಪೂಜೆ ಮಾಡಿ ಶ್ರಾದ್ಧ, ತರ್ಪಣ, ಪಿಂಡದಾನ ಮಾಡುತ್ತಾರೆ. ಹಿರಿಯರು ತಮ್ಮನ್ನು ಆಶೀರ್ವದಿಸಲು ಎಂದು ಬಯಸುತ್ತಾರೆ. ಈ ಬಾರಿ ಅಕ್ಟೋಬರ್ 14ಕ್ಕೆ ಮಹಾಲಯ ಅಮವಾಸ್ಯೆ ಆಚರಿಸಲಾಗಿದೆ. ಸ್ಯಾಂಡಲ್‌ವುಡ್ ನಟ, ನಿರೂಪಕ ಸೃಜನ್ ಲೋಕೇಶ್ ಕೂಡಾ ತಮ್ಮ ಮನೆಯಲ್ಲಿ ಪಿತೃಪಕ್ಷ ಆಚರಿಸಿದ್ದಾರೆ.
ಅಗಲಿದ ಸಿನಿ ಕಲಾವಿದರಿಗೆ ಸೃಜನ್ ಲೋಕೇಶ್ ಪೂಜೆ
ಸೃಜನ್ ಲೋಕೇಶ್ ತಮ್ಮ ತಂದೆ, ಹಿರಿಯ ನಟ ಲೋಕೇಶ್ ಅವರಿಗೆ ಮಹಾಲಯ ಅಮವಾಸ್ಯೆಯಂದು ಪೂಜೆ ಮಾಡಿದ್ದಾರೆ. ಆದರೆ ಅದು ವಿಷಯವಲ್ಲ. ಅಗಲಿದ ಕನ್ನಡ ಚಿತ್ರರಂಗದ ನಟ ನಟಿಯರ ಫೋಟೋಗಳನ್ನು ಇಟ್ಟು ಸೃಜನ್ ಲೋಕೇಶ್ ಪೂಜೆ ಮಾಡಿದ್ದಾರೆ. ಈ ವಿಡಿಯೋವನ್ನು ಸ್ವತ: ಸೃಜನ್ ಲೋಕೇಶ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್, ಹಿರಿಯ ನಟ ತೂಗುದೀಪ್, ಡಾ. ರಾಜ್‌ಕುಮಾರ್, ಸಿಆರ್ ಸಿಂಹ, ಸಂಚಾರಿ ವಿಜಯ್, ಜಯಂತಿ, ವೈಶಾಲಿ ಕಾಸರವಳ್ಳಿ ಹಾಗೂ ಇತರರ ಫೋಟೋಗಳನ್ನು ಸೃಜನ್ ಲೋಕೇಶ್ ತಮ್ಮ ಮನೆಯ ದೇವರಕೋಣೆಯಲ್ಲಿ ಇಟ್ಟು ಹೂವು ಹಾಕಿ ಪೂಜೆ ಮಾಡಿದ್ದಾರೆ.
ವಿಷ್ಣುವರ್ಧನ್, ಅಂಬರೀಶ್ ಎಲ್ಲಿ ಎಂದ ಫ್ಯಾನ್ಸ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡ ಚಿತ್ರರಂಗ ಹಾಗೂ ಕಲಾವಿದರ ಬಗ್ಗೆ ಸೃಜನ್ ಲೋಕೇಶ್‌ಗೆ ಇರುವ ಪ್ರೀತಿ ಗೌರವ ಕಂಡು ನೆಟಿಜನ್ಸ್ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವರು ಬೇಸರ ಕೂಡಾ ತೋಡಿಕೊಂಡಿದ್ದಾರೆ. ನಿಮ್ಮ ದೇವರ ಕೋಣೆಯಲ್ಲಿ, ಡಾ. ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಪ್ರಭಾಕರ್ ಫೋಟೋ ಏಕಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಸೃಜನ್ ಲೋಕೇಶ್ ಅವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ ಇಲ್ಲದಿದ್ದರೂ, ಅವರು ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಾರೆ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಟಾಕಿಂಗ್ ಸ್ಟಾರ್
ಸೃಜನ್ ಲೋಕೇಶ್, ಖ್ಯಾತ ನಟ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ದಂಪತಿ ಪುತ್ರ. ನಟನಾಗಿ, ನಿರೂಪಕನಾಗಿ ಸೃಜನ್ ಹೆಸರು ಮಾಡಿದ್ದಾರೆ. ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇವರ ತಾತ, ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರರಂಗದಲ್ಲಿ ನಟನಾಗಿ, ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಸೃಜನ್ ಲೋಕೇಶ್ 1991 ರಲ್ಲಿ 'ವೀರಪ್ಪನ್' ಚಿತ್ರದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು. ತಮ್ಮ ತಂದೆಯೊಂದಿಗೆ 'ಭುಜಂಗಯ್ಯನ ದಶಾವತಾರ' ಚಿತ್ರದಲ್ಲೂ ಸೃಜನ್ ಲೋಕೇಶ್ ನಟಿಸಿದ್ದರು.
ನಿರೂಪಕ, ನಿರ್ಮಾಪಕನಾಗಿಯೂ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್
2002ರಲ್ಲಿ ತೆರೆ ಕಂಡ 'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ಸೃಜನ್, ನಾಯಕನಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ನಾಯಕನಾಗಿ ಸೃಜನ್‌ಗೆ ಯಶಸ್ಸು ದೊರೆಯಲಿಲ್ಲ. ತಮ್ಮ ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್ ವತಿಯಿಂದ ಸೃಜನ್ ಕೆಲವೊಂದು ಕಾರ್ಯಕ್ರಮಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಸೃಜನ್ ಹಾಗೂ ಮೇಘನಾ ರಾಜ್ ನಾಯಕನಾಗಿ ನಟಿಸಿರುವ 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಸಿನಿಮಾ ತೆರೆ ಕಂಡಿತ್ತು.
ವಿಭಾಗ