ಮ್ಯಾಟ್ನಿ ಸಿನಿಮಾ ವಿಮರ್ಶೆ: ಭಯವೂ ಇದೆ ಮಜವೂ ಇದೆ; ಸ್ನೇಹ ಪ್ರೀತಿಯ ಸರಳ ಕಥೆಗೆ ಹಾಸ್ಯ- ಹಾರರ್ ಸ್ಪರ್ಶ
Matinee Kannada movie review: ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮುಖ್ಯಪಾತ್ರದಲ್ಲಿ ನಟಿಸಿರುವ ಮ್ಯಾಟ್ನಿ ಸಿನಿಮಾವು ಹಾರರ್ ಜತೆ ಸ್ನೇಹ, ಪ್ರೀತಿ, ಮೋಸ ಇತ್ಯಾದಿ ಹಲವು ವಿಷಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಈ ಮೂಲಕ ಮೊದಲ ನಿರ್ದೇಶನದಲ್ಲಿ ಮನೋಹರ್ ಭರವಸೆ ಹುಟ್ಟಿಸಿದ್ದಾರೆ.
ನೀನಾಸಂ ಸತೀಶ್ ಅಭಿನಯದ ಮ್ಯಾಟ್ನಿ ಹಾರರ್ ಸಿನಿಮಾ. ಹಾಗಂತ, ಚಿತ್ರ ಪೂರ್ತಿ ಭಯಪಟ್ಟುಕೊಂಡೇ ನೋಡಬೇಕಿಲ್ಲ. ಅಲ್ಲಿ ತಮಾಷೆಗಳಿವೆ, ಕೀಟಲೆಗಳಿವೆ. ಸ್ನೇಹವಿದೆ, ಪ್ರೀತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ದ್ರೋಹದ ವಿಷಯವೂ ಇದೆ. ತನ್ನ ಚೊಚ್ಚಲ ಪ್ರಯತ್ನದಲ್ಲಿಯೇ ನಿರ್ದೇಶಕ ಮನೋಹರ್ ಭರವಸೆ ಹುಟ್ಟಿಸಿದ್ದಾರೆ. ಹಾರರ್ ದೃಶ್ಯಗಳು ಬೆಚ್ಚಿಬೀಳಿಸುವಲ್ಲಿ ಯಶಸ್ವಿಯಾಗಿದೆ. ಹಿನ್ನೆಲೆ ಸಂಗೀತವೂ ಭಯವೆಂಬ ಬೆಂಕಿಗೆ ತುಪ್ಪ ಹಾಕುವಲ್ಲಿ ಯಶಸ್ವಿಯಾಗಿದೆ. ಕೊಟ್ಟ ಹಣಕ್ಕೆ ಮೋಸ ಮಾಡದ ಸಿನಿಮಾವಾಗಿ ಮ್ಯಾಟ್ನಿ ಗಮನ ಸೆಳೆಯುತ್ತದೆ.
ಮ್ಯಾಟ್ನಿ ಸಿನಿಮಾದ ಕಥೆಯೇನು?
ಈ ಸಿನಿಮಾದಲ್ಲಿ ಸರಳ ಕಥೆಯಿದೆ. ಒಂದು ಮನೆಯಲ್ಲಿ ನಡೆಯುವ ಘಟನೆಗಳ ಸುತ್ತ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಇಲ್ಲಿ ಅರುಣಾ ಪಾತ್ರದಲ್ಲಿ ಸತೀಶ್ ನೀನಾಸಂ ನಟಿಸಿದ್ದಾರೆ. ಜಯದೇವ್, ನಿಕ್ಸನ್, ಆನಂದ್, ನವೀನ ಎಂಬ ನಾಲ್ವರು ಬಾಲ್ಯ ಸ್ನೇಹಿತರು ತಮ್ಮ ಚಡ್ಡಿದೋಸ್ತ್ ಅರುಣಾನನ್ನು ಮತ್ತೆ ಭೇಟಿಯಾಗಿ ಒಂದಿಷ್ಟು ಸಮಯ ಕಳೆಯಲು ಬಯಸುತ್ತಾರೆ. ಇಲ್ಲಿ ಸತೀಶ್ ನೀನಾಸಂ ಶ್ರೀಮಂತ ಹುಡುಗ. ಆತ ತನ್ನ ಗರ್ಲ್ ಫ್ರೆಂಡ್ ಜತೆ ಹಾಯಾಗಿ, ಜಾಲಿಯಾಗಿ, ವೈಭವದಿಂದ ಜೀವನ ನಡೆಸುತ್ತ ಇರುವವನು. ಸತೀಶ್ ನೀನಾಸಂಗೆ ಗರ್ಲ್ ಫ್ರೆಂಡ್ ಆಗಿ ರಚಿತಾ ರಾಮ್ ನಟಿಸಿದ್ದಾರೆ. ಹಾಗಾದರೆ, ಆದಿತಿ ಪ್ರಭುದೇವ್ ಪಾತ್ರವೇನು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆದಿತಿ ಪ್ರಭುದೇವ್‌ಗೆ ಇಲ್ಲಿ ಕಾಣೆಯಾದ ಯುವತಿ ಚೈತ್ರಾಳ ಪಾತ್ರ. ಈಕೆ ಕಾಣೆಯಾಗಿದ್ದಾಳೆ ಎಂದು ಚೈತ್ರಾಳ ತಾಯಿ ಪೊಲೀಸ್ ದೂರು ನೀಡಿರುತ್ತಾರೆ. ಇವಿಷ್ಟು ಪಾತ್ರಗಳ ಸುತ್ತವೇ ಮ್ಯಾಟ್ನಿ ಸಿನಿಮಾದ ಸಿಂಪಲ್ ಕಥೆ ಸುತ್ತುತ್ತದೆ. ಅಲ್ಲಲ್ಲಿ ಭಯ ಹುಟ್ಟಿಸುತ್ತದೆ.
ಸತೀಶ್ ನೀನಾಸಂ ಸಿನಿಮಾವೊಂದು ಸಾಕಷ್ಟು ಸಮಯದ ಬಳಿಕ ಬಿಡುಗಡೆಯಾಗಿದ್ದು, ಸತೀಶ್ ಮ್ಯಾನರಿಸಂ, ಅಭಿನಯವನ್ನು ಮತ್ತೆ ಕಣ್ತುಂಬಿಕೊಳ್ಳಬಹುದು. ತನ್ನ ಎಂದಿನಂತಹ ಸುಂದರ ಅಭಿನಯದಿಂದ ರಚಿತಾ ರಾಮ್ ಇಷ್ಟವಾಗುತ್ತಾರೆ. ಸತೀಶ್‌ರಂತೆ ಆದಿತಿ ಪ್ರಭುದೇವ್ ಕೂಡ ದೀರ್ಘ ಬಿಡುವಿನ ಬಳಿಕ ಈ ಸಿನಿಮಾದಲ್ಲಿ ವಾಪಸ್ ಬಂದಿದ್ದಾರೆ. ಸ್ನೇಹಿತರಾಗಿ ಅಭಿನಯಿಸಿದ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ದಿಗಂತ್ ದಿವಾಕರ್, ಪೂರ್ಣ ಮುಂತಾದವರು ಸಿನಿಮಾದ ಲವಲವಿಕೆ ಹೆಚ್ಚಿಸಿದ್ದಾರೆ.
ಒಟ್ಟಾರೆ ಮ್ಯಾಟ್ನಿ ಎನ್ನುವುದು ಅರುಣ್ ಎಂಬ ಯುವಕನನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಘಟನೆಗಳ ಸಿನಿಮಾ. ಮ್ಯಾಟ್ನಿ ಶೋನಲ್ಲಿ ನಡೆಯುವ ನಿಗೂಢ ಘಟನೆಯಲ್ಲಿ ಅರುಣ್ ಜೀವನ ಹೇಗೆ ಅನಿರೀಕ್ಷಿತ ತಿರುವು ಪಡೆಯುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ತಿಳಿದುಕೊಳ್ಳಬಹುದು. ತನ್ನ ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕ ಮನೋಹರ್ ಅವರು ನಿಗೂಢತೆ, ನಾಟಕ, ಭಾವನೆಯ ಅಂಶಗಳನ್ನು ಕೌಶಲ್ಯದಿಂದ ಹೆಣೆದಿದ್ದಾರೆ. ಹೀಗಾಗಿ, ಈ ವಾರಾಂತ್ಯಕ್ಕೆ ಮ್ಯಾಟ್ನಿ ಶೋವನ್ನು ಕನ್ನಡ ಸಿನಿಪ್ರಿಯರು ಆಯ್ಕೆಮಾಡಿಕೊಳ್ಳಲು ಅಡ್ಡಿಯಿಲ್ಲ.
ವಿಮರ್ಶೆ: ಚಂದ್ರ ಕುಮಾರ್