ಯುವ ಸಿನಿಮಾ ವಿಮರ್ಶೆ: ಸರಳ ಕಥೆಗೆ ಆಕ್ಷನ್, ಡೈಲಾಗ್‌ಗಳ ಶಕ್ತಿಮದ್ದು; ಮೊದಲ ಸಿನಿಮಾದಲ್ಲೇ ಭರವಸೆ ಡೆಲಿವರಿ ಮಾಡಿದ ಯುವ
Yuva Kannada Movie Review: ಯುವ ಸಿನಿಮಾದ ಮೂಲಕ ಯುವ ರಾಜ್‌ಕುಮಾರ್ ಭರವಸೆ ಡೆಲಿವರಿ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ ನಿರ್ಮಾಣದ, ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಸಿನಿಮಾದ ಕಥೆ ಸರಳವಾಗಿದ್ದರೂ, ತಾಂತ್ರಿಕವಾಗಿ ಗೆದ್ದಿದೆ. ಜತೆಗೆ, ತನ್ನ ಪವರ್‌ಪ್ಯಾಕ್ಡ್ ಆಕ್ಷನ್, ಡೈಲಾಗ್‌ಗಳ ಮೂಲಕ ಯುವ ರಾಜ್‌ಕುಮಾರ್ ಮಿಂಚಿದ್ದಾರೆ.
Yuva Rajkumar Yuva Movie Review: ಕನ್ನಡ ಸಿನಿಮಾದ ಇತಿಹಾಸ ಗಮನಿಸಿದರೆ ಅಲ್ಲಿ ಆಟೋ ಚಾಲಕರ ಬದುಕನ್ನು ಕಟ್ಟಿಕೊಡುವ ಸಿನಿಮಾಗಳು ಸಾಕಷ್ಟು ಬಂದಿವೆ. ಇಂತಹ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿವೆ. ಇಂತಹ ಸಿನಿಮಾಗಳ ಮೂಲಕ ಮಧ್ಯಮ ವರ್ಗದ ಬದುಕಿಗೆ ಕನೆಕ್ಟ್ ಆದ ನಟರು ಗೆದ್ದಿದ್ದಾರೆ. ಇದೇ ಫಾರ್ಮುಲಾವನ್ನು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಯುವ ಸಿನಿಮಾದಲ್ಲಿ ಇನ್ನೊಂದು ರೀತಿಯಲ್ಲಿ ಪ್ರಯೋಗ ಮಾಡಿದ್ದಾರೆ. ಇಲ್ಲಿ ಆಟೋ ಚಾಲಕರ ಬದಲು ಈ ಕಾಲದ ಇನ್ನೊಂದು ವಾಸ್ತವವಾದ ಡೆಲಿವರಿ ಹುಡುಗರ(ಹುಡುಗಿಯರೂ ಕೂಡ) ಬದುಕಿನ ಮೂಲಕ ಯುವನನ್ನು ಸಿನಿಪ್ರೇಮಿಗಳಿಗೆ ಕನೆಕ್ಟ್ ಮಾಡಿದ್ದಾರೆ. ಇಲ್ಲಿ ಫುಡ್ ಡೆಲಿವರಿ ಹುಡುಗರು ನಿರುದ್ಯೋಗ ಕಾಲದಲ್ಲಿ ಶ್ರಮವಹಿಸಿ ದುಡಿಯುವ ಒಂದು ವರ್ಗ. ಎಸ್‌ಎಸ್‌ಎಲ್‌ಸಿ, ಪಿಯುಸಿ ಓದಿರುವವರು ಮಾತ್ರವಲ್ಲದೆ ಎಂಜಿನಿಯರಿಂಗ್ ಓದಿರುವವರೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವುದು ಈಗಿನ ವಾಸ್ತವ.
ಹಾಗಂತ, ಯುವ ಕೇವಲ ಡೆಲಿವರಿ ಬಾಯ್ ಅಲ್ಲ. ಆತನನ್ನು ಮಾಸ್ ನಾಯಕ ಎಂಬಂತೆ ಬಿಂಬಿಸುವ ಸವಾಲು ನಿರ್ದೇಶಕರಿಗೆ ಇತ್ತು. ಇದಕ್ಕಾಗಿ ಯುವನನ್ನು ಆಕ್ಷನ್ ಕಿಂಗ್ ಆಗಿಯೂ ತೋರಿಸಿದ್ದಾರೆ. ಯುವ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳು ಹೇರಳವಾಗಿವೆ. ಅವೆಲ್ಲ ಪವರ್ ಪ್ಯಾಕ್ಡ್ ಆಕ್ಷನ್ ದೃಶ್ಯಗಳಾಗಿರುವುದರಿಂದ ಮಾಸ್ ಸಿನಿಮಾ ಪ್ರಿಯರಿಗೆ ಎಲ್ಲೂ ಬೋರ್ ಹೊಡೆಸದು. ಜತೆಗೆ ಶಿಳ್ಳೆ ಗಿಟ್ಟಿಸುವಂತಹ ಡೈಲಾಗ್ ಡೆಲಿವರಿಯೂ ಇದೆ. ರಾಜಕುಮಾರದಂತಹ ಒಳ್ಳೆಯ ಸಿನಿಮಾ ನೀಡಿರುವ ನಿರ್ದೇಶಕರು ಯುವ ಸಿನಿಮಾವನ್ನು "ಅಪ್ಪ-ಮಗನ ಸಂಬಂಧ"ದ ಮೂಲಕ ಭಾವನಾತ್ಮಕವಾಗಿಯೂ ಪ್ರೇಕ್ಷಕರಿಗೆ ತಟ್ಟುವಂತೆ ಮಾಡಿದ್ದಾರೆ. ಎಂಜಿನಿಯರಿಂಗ್ ಓದಿರುವವರು ಒಳ್ಳೆಯ ಕೆಲಸ ಸಿಕ್ಕಿಲ್ಲ ಎಂದು ನಿರುದ್ಯೋಗಿಯಾಗುವ ಬದಲು ಸ್ವಾಭಿಮಾನದಿಂದ ಡೆಲಿವರಿ ಬಾಯ್ ಆಗಿಯೂ ಬದುಕು ಕಟ್ಟಿಕೊಳ್ಳಬಹುದು ಎಂಬ ಸಂದೇಶವನ್ನೂ ಯಶಸ್ವಿಯಾಗಿ ಡೆಲಿವರಿ ಮಾಡಿದ್ದಾರೆ.
ಯುವ ಸಿನಿಮಾದ ಕಥೆಯೇನು?
ಯುವ ಸಿನಿಮಾದ ಕಥೆ ಹೇಳಲು ಹೊರಟರೆ ಮೂರು ನಾಲ್ಕು ವಾಕ್ಯಗಳಲ್ಲಿ ಕಥೆ ಹೇಳಿ ಮುಗಿಸಬಹುದು. ಮಂಗಳೂರು ಕಾಲೇಜಿನಲ್ಲಿ ಲೋಕಲ್ ಮತ್ತು ಹಾಸ್ಟೆಲ್ ಹುಡುಗರ ನಡುವಿನ ಜಗಳ, ಈತನ ಪವರ್ ಹಿಂದಿರುವ ರಹಸ್ಯ, ಅಲ್ಲಿಯ ಲೋಕಲ್ ಡಾನ್‌ಗಳ ಜತೆ ನಾಯಕನ ಹೊಡೆದಾಟ ಇರುತ್ತದೆ. ಸಿನಿಮಾ ಮಧ್ಯಂತರದ ಬಳಿಕ ಮಧ್ಯಮ ವರ್ಗದ ಕಥೆ ಆರಂಭವಾಗುತ್ತದೆ. ಓದು ಮುಗಿಸಿ ಬೆಂಗಳೂರಿಗೆ ಬಂದಾಗ ನಾಯಕನಿಗೆ ಎದುರಾಗುವ ಸಂಸಾರದ ಬೃಹತ್ ಸವಾಲು, ನಿರುದ್ಯೋಗ... ಹೀಗೆ ಕಥೆಯನ್ನು ಪಟ್ ಎಂದು ಹೇಳಿ ಮುಗಿಸಬಹುದು. ಈ ಸರಳ ಕಥೆಯ ನಡುವೆ ಹಲವು ಅಂಶಗಳನ್ನು ಸೇರಿಸಿ ಒಳ್ಳೆಯ ಸಿನಿಮಾ ಮಾಡಲಾಗಿದೆ. ಒಳ್ಳೆಯ ಸಿನಿಮಾ ಏಕೆಂದರೆ ಈ ಸಿನಿಮಾದಲ್ಲಿ ಹಿತವಾದ ಪ್ರೀತಿಯಿದೆ, ಭಾವನಾತ್ಮಕತೆಯಿದೆ, ಶಿಳ್ಳೆಗಿಟ್ಟಿಸುವಂತಹ ಫೈಟಿಂಗ್, ಡೈಲಾಗ್ ಡೆಲಿವರಿ ಇದೆ. "ಬದುಕು ಒಂದು ಹೋರಾಟ, ಆ ಹೋರಾಟ ನಿರಂತರ" "ಶೋಕಿಯನ್ನ ಸ್ವಂತ ದುಡ್ಡಿನಲ್ಲಿ ಮಾಡಬೇಕು, ಅಪ್ಪನ ದುಡ್ಡಲ್ಲಿ ಮಾಡಬಾರದು" ಇತ್ಯಾದಿ ಹಲವು ಸಂದೇಶಗಳು, ಡೈಲಾಗ್‌ಗಳು ನೋಡುಗರನ್ನು ಯೋಚನೆಗೆ ಹಚ್ಚುತ್ತವೆ.
ತಾಂತ್ರಿಕವಾಗಿ ಗಮನ ಸೆಳೆಯುವ ಯುವ
ಈ ಸಿನಿಮಾ ಪ್ರೇಕ್ಷಕರಿಗೆ ಆಪ್ತವಾದರೆ ಅದಕ್ಕೆ ಕಾರಣ ಯುವ ಒಬ್ಬನೇ ಅಲ್ಲ. ಯುವನೆಂಬ ಹೊಸ ಯುವಕನನ್ನು ಪರದೆ ಮೇಲೆ ಅದ್ಭುತವಾಗಿ ತೋರಿಸಲು ಸಿನಿಮಾಟೋಗ್ರಫಿ, ಸಂಗೀತ, ಸಂಕಲನದ ಕೊಡುಗೆ ಮಹತ್ವದ್ದು. ಆಕ್ಷನ್ ಸೀನ್ ಇರಲಿ, ಭಾವನಾತ್ಮಕ ಸಂಗತಿಯಾಗಿರಲಿ.. ಯುವ ಸಿನಿಮಾವನ್ನು ಬಿ ಅಜನೀಶ್ ಲೋಕನಾಥ್ ಸಂಗೀತ ಹಿತವಾಗಿಸಿದೆ. ಇದೇ ರೀತಿ ಶ್ರೀಶಾ ಕುದುವಲ್ಲಿಯವರ ಕ್ಯಾಮೆರಾ ಕಣ್ಣಿನ ಕೊಡುಗೆಯೂ ಅಗಾಧವಾದದ್ದು. ಆಶಿಕ್ ಎಡಿಟಿಂಗ್‌ಗೂ ಪೂರ್ಣ ಅಂಕ ನೀಡಬಹುದು.
ನಟನೆ ಹೇಗಿದೆ?
ಈ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಟನೆಯ ಶ್ರಮ ಎದ್ದುಕಾಣುತ್ತದೆ. ಕುಸ್ತಿಯಾಡಲು ಕಟುಮಸ್ತಾದ ದೇಹ ಬೇಕು. ತನ್ನ ದೇಹವನ್ನು ಸಾಕಷ್ಟು ಹುರಿಗೊಳಿಸಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿ ಮಿಂಚುವ ಅವಕಾಶವನ್ನು ಇವರು ಎಲ್ಲೂ ಕೈಬಿಟ್ಟಿಲ್ಲ. ಆದರೆ, ಭಾವನಾತ್ಮಕ ದೃಶ್ಯಗಳಲ್ಲಿ ಇನ್ನಷ್ಟು ಪಳಗಬೇಕು. ಮುಖದಲ್ಲಿ ಸದಾ ಒಂದೇ ಭಾವನೆ. ಸಿನಿಮಾ ತಾಂತ್ರಿಕವಾಗಿ ಮೇಲ್ಮಟ್ಟದಲ್ಲಿರುವುದರಿಂದ ಯುವನ ಸಾಕಷ್ಟು ಮೈನಸ್ ಪಾಯಿಂಟ್‌ಗಳು ಮೊದಲ ನೋಟಕ್ಕೆ ಸುಲಭವಾಗಿ ಗೋಚರಿಸದು. ಈ ಚಿತ್ರದಲ್ಲಿ ವಿಲನ್ ಪಾತ್ರಗಳು ಚಿತ್ರದ ತೂಕ ಹೆಚ್ಚಿಸಿವೆ. ಪ್ರಿನ್ಸಿಪಾಲ್ ಪಾತ್ರವೂ ಗಮನ ಸೆಳೆಯುತ್ತದೆ. ಈ ಸಿನಿಮಾದಲ್ಲಿ ಲವ್ ಇದೆ. ಆದರೆ, ಆಕ್ಷನ್ ಮುಂದೆ ಲವ್ ಮಂಕಾಗಿದೆ. ನಟಿ ಸಪ್ತಮಿ ಗೌಡರ ನಟನೆಯೂ ಮಂಕಾಗಿದೆ. ಯುವತಿಯರ ಹುಲಿ ಕುಣಿತದ ದೃಶ್ಯ ಖುಷಿಕೊಡುತ್ತದೆ. ಕಿಶೋರ್‌ಗೆ ಕಲ್ಕತ್ತಾದಲ್ಲೊಂದು ಆಕ್ಷನ್ ಸೀನ್ ಇದೆ. ಕೆಲವೇ ಸೆಕೆಂಡ್‌ಗಳ ಈ ದೃಶ್ಯದಲ್ಲಿ ಇವರ ನಟನೆ ಅದ್ಭುತ. ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟನೆಯ ಕುರಿತು ಎರಡು ಮಾತಿಲ್ಲ. ಸುಧಾರಾಣಿಗೆ ನಟನೆಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಯುವ ಸಿನಿಮಾದಲ್ಲಿ ಇಷ್ಟವಾಗುವುದೇನು?
ಯುವ ಸಿನಿಮಾದಲ್ಲಿ ಇಷ್ಟವಾಗುವ, ಗೋಸ್‌ಬಂಪ್ಸ್ ಮಾಡುವ ಕೆಲವು ದೃಶ್ಯಗಳು ಇವೆ. ಡೆಲಿವರಿ ಹುಡುಗರೆಲ್ಲ ಒಗ್ಗಟ್ಟಿನಿಂದ ಬೈಕ್, ಸ್ಕೂಟರ್‌ಗಳಲ್ಲಿ ರೌಡಿಗಳ ಕಾರುಗಳನ್ನು ಬೆನ್ನಟ್ಟುವ ದೃಶ್ಯ ರೋಮಾಂಚನ ಉಂಟುಮಾಡುತ್ತದೆ. ಇದೇ ರೀತಿ ಹಾಸ್ಟೆಲ್ ವಾರ್ಡನ್‌ನ ಕೆಟ್ಟ ಮಾತುಗಳಿಗೆ ಉತ್ತರ ನೀಡುವ ಕಾಲೇಜು ಯುವತಿಯರ ಹುಲಿ ಕುಣಿತವೂ ಖುಷಿನೀಡುತ್ತದೆ. "ಪುನೀತ್ ರಾಜ್‌ಕುಮಾರ್ ರಸ್ತೆ" ಇತ್ಯಾದಿ ಅಂಶಗಳ ಮೂಲಕ ಅಪ್ಪುವಿಗೆ ಈ ಸಿನಿಮಾ ಕನೆಕ್ಟ್ ಮಾಡುವುದೂ ಇಷ್ಟವಾಗುತ್ತದೆ. ಇಂತಹ ಹಲವು ಅಂಶಗಳು ಯುವ ಸಿನಿಮಾವನ್ನು ಫೀಲ್ ಗುಡ್ ಸಿನಿಮಾವಾಗಿಸಿದೆ. ಹೆಚ್ಚು ಆಕ್ಷನ್, ಡೈಲಾಗ್‌ಗಳು ಈ ಸಿನಿಮಾಕ್ಕೆ ತುಸು ಭಾರವಾಗಿದ್ದರೂ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಸ್ಕ್ರೀನ್‌ಪ್ಲೇ, ಅತ್ಯುತ್ತಮ ಸಿನಿಮಾಟೋಗ್ರಫಿ ಇತ್ಯಾದಿಗಳಿಂದ ಈ ಸಿನಿಮಾ ನೋಡುಗರಿಗೆ ಮೋಡಿ ಮಾಡುತ್ತದೆ.
ಚಿತ್ರ ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು
ಕನ್ನಡ ಸಿನಿಮಾ: ಯುವ
ಕಲಾವಿದರು: ಯುವ ರಾಜ್‌ಕುಮಾರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಕುಮಾರ್ ಜಿ ಮುಂತಾದವರು
ನಿರ್ದೇಶನ: ಸಂತೋಷ್ ಆನಂದ್‌ರಾಮ್
ನಿರ್ಮಾಣ: ವಿಜಯ್ ಕಿರಗಂದೂರ್, ಹೊಂಬಾಳೆ ಫಿಲ್ಮ್ಸ್
ಸಂಗೀತ: ಬಿ ಅಜನೀಶ್ ಲೋಕನಾಥ್
ಸಿನಿಮಾಟೊಗ್ರಫಿ: ಶ್ರೀಶಾ ಕುದುವಲ್ಲಿ
ಸಂಕಲನ: ಆಶೀಕ್ ಕುಶುಗೊಲ್ಲಿ
ಹಿಂದೂಸ್ತಾನ್ ಟೈಮ್ಸ್ ಕನ್ನಡ ರೇಟಿಂಗ್: 3.5/5