Upendra: ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ಗೃಹ ಸಚಿವ ಜಿ ಪರಮೇಶ್ವರ್ ಮನೆಗೆ ಮುತ್ತಿಗೆ ಯತ್ನ; ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ದೂರು ಕೊಟ್ಟು ಇಷ್ಟು ದಿನಗಳಾದರೂ ಪೊಲೀಸರು ಉಪೇಂದ್ರನನ್ನು ಬಂಧಿಸಿಲ್ಲ, ಬದಲಿಗೆ ನಮ್ಮ ಮೇಲೆ ದೌರ್ಜನ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಾತಿನಿಂದನೆ ಆರೋಪ ಎದುರಿಸುತ್ತಿರುವ ನಟ, ಯುಪಿಪಿ ಸಂಸ್ಥಾಪಕ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ ಒತ್ತಡ ಹೆಚ್ಚಾಗಿದೆ. ಸೆಲೆಬ್ರಿಟಿಯಾಗಿ ಸಾಮಾಜಿಕ ಜಾಲತಾಣದ ಲೈವ್‌ನಲ್ಲಿ ಒಂದು ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಅವರ ಭಾವನೆಗೆ ಧಕ್ಕೆ ತಂದಿರುವ ಉಪೇಂದ್ರ ಅವರನ್ನು ಬಂಧಿಸಲೇಬೇಕೆಂದು ಅನೇಕರು ಪಟ್ಟು ಹಿಡಿದಿದ್ದಾರೆ.
ನಟ ಉಪೇಂದ್ರನನ್ನು ಬಂಧಿಸಬೇಕೆಂದು ಆಗ್ರಹಿಸಿ ಬುಧವಾರ ರಾತ್ರಿ ಪ್ರತಿಭಟನಾಕಾರರು ಬಿಆರ್ ಭಾಸ್ಕರ್ ಪ್ರಸಾದ್, ಹರಿರಾಮ್ ಅವರ ನೇತೃತ್ವದಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ವಿಧಾನಸೌಧದ ಬಳಿಯೇ ಪ್ರತಿಭಟನಾಕಾರನ್ನು ತಡೆದು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದೂರು ಕೊಟ್ಟು ಇಷ್ಟು ದಿನಗಳಾದರೂ ಪೊಲೀಸರು ಉಪೇಂದ್ರನನ್ನು ಬಂಧಿಸಿಲ್ಲ, ಬದಲಿಗೆ ನಮ್ಮ ಮೇಲೆ ದೌರ್ಜನ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಉಪೇಂದ್ರ ತಳ ಸಮುದಾಯದ ಬಗ್ಗೆ ಬಹಳ ನಿಕೃಷ್ಟವಾಗಿ ಮಾತನಾಡಿದ್ಧಾರೆ. ಅವರ ವಿರುದ್ಧ ದೂರು ದಾಖಲಾದರೂ ಪೊಲೀಸರು ಯಾವ ಕ್ರಮ ಕೈಗೊಂಡಿಲ್ಲ, ಈಗಲಾದರೂ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಲಾಯ್ತು.
ಏನಿದು ಪ್ರಕರಣ?
ತಮ್ಮ ಪ್ರಜಾಕೀಯ ಪಕ್ಷ ಸ್ಥಾಪನೆ ಆಗಿ 6 ವರ್ಷ ತುಂಬಿದ ಹಿನ್ನೆಲೆ ಉಪೇಂದ್ರ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಲೈವ್ ಬಂದಿದ್ದರು. ಈ ವೇಳೆ ಮಾತನಾಡುವಾಗ 'ಊರು ಎಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ' ಎಂಬ ಗಾದೆ ಮಾತು ಬಳಸಿದ್ದರು. ಇದು ದಲಿತ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ನಟ ಉಪೇಂದ್ರ ನಮ್ಮ ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ನಮಗೆ ನೋವುಂಟು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದರ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳಿಂದ ಉಪೇಂದ್ರ ವಿರುದ್ಧ ದೂರುಗಳು ದಾಖಲಾಗಿದ್ದವು. ಉಪ್ಪಿ ವಿರುದ್ದ ಎಫ್‌ಐಆರ್ ಕೂಡಾ ದಾಖಲಾಗಿತ್ತು.
ಎಫ್‌ಐಆರ್ ರದ್ದು ಕೋರಿ ಉಪೇಂದ್ರ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹೈಕೋರ್ಟ್ ಮೊರೆ ಹೋಗಿದ್ದರು. ''ನಾನು ಗಾದೆ ಮಾತನ್ನು ಮಾತ್ರ ಉಲ್ಲೇಖ ಮಾಡಿದ್ದೇನೆ. ಬೆಳೆಯುವವರನ್ನ ತುಳಿಯುವವರು ಇದ್ಧೇ ಇರುತ್ಥಾರೆ ಎಂಬ ಅರ್ಥದಲ್ಲಿ ಆ ಗಾದೆ ಮಾತು ಬಳಸಿದ್ದೆ, ನಾನು ಯಾರಿಗೂ, ಯಾವ ಸಮುದಾಯಕ್ಕೂ ನೋವುಂಟು ಮಾಡುವ ಉದ್ಧೇಶದಿಂದ ಆ ಮಾತು ಹೇಳಿಲ್ಲ'' ಎಂದು ಉಪೇಂದ್ರ ಅರ್ಜಿಯಲ್ಲಿ ನಮೂದಿಸಿದ್ದರು. ನ್ಯಾಯಾಲಯವು ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡುವ ಮೂಲಕ ಉಪೇಂದ್ರನಿಗೆ ರಿಲೀಫ್ ನೀಡಿತ್ತು.
ವಿಡಿಯೋ ಡಿಲೀಸ್ ಮಾಡಿದ್ದ ಉಪೇಂದ್ರ
ಗಾದೆ ಮಾತು ಬಳಸಿದ ನಂತರ ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಉಪೇಂದ್ರ ತಾವು ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ''ನಾನು ಉದ್ದೇಶಪೂರ್ವಕವಾಗಿ ಆ ಮಾತು ಆಡಿಲ್ಲ, ಅದರಿಂದ ನಿಮ್ಮೆಲ್ಲರಿಗೂ ಬೇಸರ ಆಗಿದೆ ಎಂದರೆ ನಾನು ಖಂಡಿತ ಕ್ಷಮೆ ಯಾಚಿಸುತ್ತೇನೆ. ಏಕಿಷ್ಟು ದ್ವೇಷ?'' ಎಂದು ಬರೆದುಕೊಂಡಿದ್ದರು. ಆದರೆ ಉಪೇಂದ್ರ ಕ್ಷಮೆ ಕೇಳಿದರೂ ಸಂಘಟನೆಗಳು ಹೋರಾಟ ನಿಲ್ಲಿಸಿಲ್ಲ. ಉಪೇಂದ್ರ ಮಾಡಿರುವುದು ಅಕ್ಷಮ್ಯ ಅಪರಾಧ, ಅವರನ್ನು ಬಂಧಿಸಲೇಬೇಕು ಎಂದು ಪಟ್ಟು ಹಿಡಿದು ನಿಂತಿವೆ. ಉಪೇಂದ್ರ ವಿರುದ್ಧ ದೂರು ಕೊಟ್ಟವರಿಗೆ ಅವರ ಅಭಿಮಾನಿಗಳ ಕಡೆಯಿಂದ ಬೆದರಿಕೆ ಕರೆ ಬರುತ್ತಿದೆ ಎಂಬ ಹೊಸ ಆರೋಪವನ್ನು ಉಪೇಂದ್ರ ಎದುರಿಸುತ್ತಿದ್ದಾರೆ. ಮುಂದೆ ಇದು ಎಲ್ಲಿಗೆ ಬಂದು ಮುಟ್ಟಲಿದೆಯೋ ಕಾದು ನೋಡಬೇಕು.