ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ
ಕನ್ನಡ ಸುದ್ದಿ  /  ಕರ್ನಾಟಕ  /  ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದ ವರದಿ, ಹೃದಯ ವಿದ್ರಾವಕ ಘಟನೆ ಬಗ್ಗೆ ನೀವು ತಿಳಿಯಬೇಕಾದ 10 ಅಂಶ

Bellary Hospital: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಇದಲ್ಲದೇ ದಾವಣಗೆರೆ ಮತ್ತು ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವಿನ ವಿಚಾರವೂ ಈಗ ಸಂದೇಹಕ್ಕೆ ಕಾರಣವಾಗಿದೆ. ಬಳ್ಳಾರಿ ಘಟನೆಗೆ ಕಳಪೆ ಐವಿ ಕಾರಣ ಎನ್ನಲಾಗುತ್ತಿದ್ದು, ನೀವು ತಿಳಿಯಬೇಕಾದ 10 ಅಂಶಗಳಿವು

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)
ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು: ಕಳಪೆ ಐವಿ ಕಾರಣ ಎಂದು ವರದಿಯಲ್ಲಿ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಕಡತ ಚಿತ್ರ)

Bellary Hospital: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 15 ದಿನಗಳ ಅವಧಿಯಲ್ಲಿ ಐವರು ಬಾಣಂತಿಯರ ಸಾವು ಸಂಭವಿಸಿದೆ. ಅವರಿಗೆ ಸಿಸೇರಿಯನ್ ನಡೆಸಿದ ವೇಳೆ ಕಳಪೆ ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್‌ಲ್ಯಾಕ್ಟೇಟ್‌ ಸಲ್ಯೂಷನ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ರೀತಿ ದಾವಣಗೆರೆಯಲ್ಲಿ ಕೂಡ 8 ತಿಂಗಳ ಅವಧಿಯಲ್ಲಿ 28 ಬಾಣಂತಿಯರು ಮೃತಪಟ್ಟ ವರದಿಯೂ ಗಮನಸೆಳೆದಿದೆ. ಈ ನಡುವೆ, ತಜ್ಞರ ವರದಿ ಆಧರಿಸಿ, ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್‌ಲ್ಯಾಕ್ಟೇಟ್‌ ಸಲ್ಯೂಷನ್‌ ಬಳಸದಂತೆ ಕರ್ನಾಟಕ ಸರ್ಕಾರ ನವೆಂಬರ್ 16 ರಂದು ಸುತ್ತೋಲೆ ಕಳುಹಿಸಿರುವುದನ್ನು ಗಮನಿಸಿರುವ ವಿಪಕ್ಷಗಳು, ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿವೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಿನ್ನೆ (ನವೆಂಬರ್ 29) ಬಾಣಂತಿಯರ ಸಾವಿಗೆ ಸಂಬಂಧಿಸಿ ಮಹತ್ವದ ಸಭೆ ನಡೆದಿದ್ದು, ಅದರ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಬಳ್ಳಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು; ಗಮನಸೆಳೆದ 10 ಅಂಶಗಳು

1) ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ ತಿಂಗಳಲ್ಲಿ ಆರಂಭದಲ್ಲಿ ಸಿಸೇರಿಯನ್‌ ಮಾಡಿಸಿಕೊಂಡವರ ಪೈಕಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ. ಮೃತರ ಕುಟುಂಬಸ್ಥರು ಇದು ವೈದ್ಯರ ನಿರ್ಲಕ್ಷ್ಯದಿಂದಾಗಿ ಆಗಿರುವ ಸಾವು ಎಂದು ಆರೋಪಿಸಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಾಣಂತಿಯರು ಮೃತಪಡುತ್ತಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿತ್ತು.

2) ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ನಡೆದಿರುವ 34 ಸೀಸೇರಿಯನ್ ಆಪರೇಷನ್ ಗಳ ಪೈಕಿ 7 ಆಪರೇಷನ್‌ಗಳಲ್ಲಿ ಸಮಸ್ಯೆ ಉದ್ಭವವಾಗಿದ್ದವು. ಇದರಲ್ಲಿ ಬಾಣಂತಿಯರಿಗೆ ಕಿಡ್ನಿ ಸಮಸ್ಯೆ, ಬಹು ಅಂಗಾಂಗ ವೈಫೈಲಗಳು ಸೇರಿವೆ. 7 ಬಾಣಂತಿಯರಿಗೆ ಸಮಸ್ಯೆಯಾಗಿದೆ. ಈ ಪೈಕಿ ನಾಲ್ವರು ಮೃತಪಟ್ಟಿ ದ್ದಾರೆ. ಉಳಿದ ಮೂವರ ಪೈಕಿ ಒಬ್ಬರು ಬಳ್ಳಾರಿ ವಿಮ್ಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದು, ಉಳಿದಿಬ್ಬರು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ನಿನ್ನೆ (ನವೆಂಬರ್ 29) ತಿಳಿಸಿತ್ತು.

3) ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ನವೆಂಬರ್ 9ರಿಂದ 11ರ ವರೆಗೆ 34 ಸಿಸೇರಿಯನ್‌ಗಳು ನಡೆದಿದ್ದವು. ಈ ಪೈಕಿ 7 ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿತ್ತು. ನ.11ರ ರಾತ್ರಿ ಒಬ್ಬರು ಮತ್ತು ನ.12ರ ಮುಂಜಾನೆ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದರು. ಇನ್ನುಳಿದ ಐವರು ಬಾಣಂತಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ 'ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸ್)' ದಾಖಲು ಮಾಡಲಾಗಿತ್ತು. ಎಲ್ಲ ಬಾಣಂತಿಯರಲ್ಲೂ ಅಂಗಾಂಗ ವೈಫಲ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ನವೆಂಬರ್ 14 ರಂದು, ನವೆಂಬರ್ 25 ರಂದು ಮತ್ತು ನವೆಂಬರ್ 26 ರಂದು ಮತ್ತೆ ಮೂವರು ಬಾಣಂತಿಯರು ಮೃತಪಟ್ಟಿದ್ದರು.

4) ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಅವರು ನಿನ್ನೆ ಇದೇ ವಿಚಾರಕ್ಕೆ ಸಂಬಂಧಿಸಿ ದೀರ್ಘ ಟ್ವೀಟ್ ಮಾಡಿದ್ದು, ಬಾಣಂತಿಯರ ಸಾವಿನ ವಿಚಾರದಲ್ಲಿ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ. ಬಳ್ಳಾರಿಯ ಜಿಲ್ಲಾಸ್ಪತ್ರೆ ಹಾಗು ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಲ್ಲಿ 5 ಬಾಣಂತಿ ಮಹಿಳೆಯರ ಸಾವಾಗಿದ್ದು, ಈ ಬಗ್ಗೆ ತಜ್ಞರ ತಂಡ ತನಿಖೆ ಮಾಡಿ ನೀಡಿರುವ ವರದಿಯನ್ನ ಕಾಂಗ್ರೆಸ್‌ ಸರ್ಕಾರ ಗೌಪ್ಯವಾಗಿ ಮುಚ್ಚಿಟ್ಟಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಟೀಕಿಸಿದ್ದರು.

5) ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಸುತ್ತೋಲೆ ನವೆಂಬರ್ 16ಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ರವಾನೆಯಾಗಿದ್ದು, ಅದರಲ್ಲಿ, ಖಾಸಗಿ ಕಂಪನಿಯೊಂದು ಸರಬರಾಜು ಮಾಡಿರುವ ರಿಂಗರ್ ಲ್ಯಾಕ್ಟೇಟ್ ಇನ್‌ಫ್ಯೂಶನ್‌ (Ringer Lactate Infusion) ಔಷಧವನ್ನು ಬಳಕೆ ಮಾಡದಂತೆ ಸೂಚಿಸಿದೆ.

6) ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಸುದ್ದಿ ವ್ಯಾಪಕ ಟೀಕೆಗೊಳಗಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಈ ವಿಚಾರಕ್ಕೆ ಸಂಬಂಧಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಸೂಚಿಸಿದ್ದಾರೆ.

7) ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿಗೆ ಇಂಟ್ರಾವೀನಸ್ ಫ್ಲೂಯಿಡ್ (ಐವಿ) ರಿಂಗರ್‌ಲ್ಯಾಕ್ಟೇಟ್‌ ಸಲ್ಯೂಷನ್‌ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿರುವ ಕಾರಣ ಅದನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಾಣಂತಿಯರ ಸಾವಿಗೆ ಆ ಔಷಧ ಕಾರಣ ಎಂದು ದೃಢಪಟ್ಟರೆ ಅದನ್ನು ಪೂರೈಸಿದ ಕಂಪನಿ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

8) ಬಳ್ಳಾರಿ ಜಿಲ್ಲಾ ಆಸ್ಪತ್ರೆ ವೈದ್ಯರ ತಂಡದಿಂದ ಲೋಪ ನಡೆದಿಲ್ಲ. ಆದರೆ ಅವರು ಚಿಕಿತ್ಸೆಗೆ ಬಳಸಿದ ರಿಂಗರ್‌ ಲ್ಯಾಕ್ಟೇಟ್ ಸಲ್ಯೂಷನ್ ಬಗ್ಗೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಜ್ಞರ (ಡಾ. ಸವಿತಾ, ಡಾ. ಭಾಸ್ಕರ್ ಮತ್ತು ಡಾ. ಹರ್ಷ) ತಂಡ ಸಂದೇಹ ವ್ಯಕ್ತಪಡಿಸಿದೆ. ಪ್ರಕರಣ ಮುಚ್ಚಿ ಹಾಕುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

9) ಏನಿದು ರಿಂಗರ್ ಔಷಧಿ: ಆಪರೇಷನ್‌ ವೇಳೆ ರೋಗಿಗಳ ದೇಹದಲ್ಲಿ ದ್ರಾವಣದ ಕೊರತೆ ಉಂಟಾದಾಗ ಸರಿಯಾದ ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ನಿರ್ವಹಣೆಗಾಗಿ ರಿಂಗರ್‌ ಲ್ಯಾಕ್ಟೇಟ್ ಸಲ್ಯೂಷನ್ ಅರ್ಥಾತ್ ಗ್ಲುಕೋಸ್ ನೀಡಲಾಗುತ್ತದೆ.

10) ಬಳ್ಳಾರಿ ಜಿಲ್ಲಾಸ್ಪತ್ರೆ ಬಿಮ್ಸ್‌ನಲ್ಲಿ ಐವರ ಬಾಣಂತಿಯರ ಸಾವು, ದಾವಣಗೆರೆಯಲ್ಲಿ ಹಸುಗೂಸುಗಳ ಸರಣಿ ಸಾವು, ಬೆಳಗಾವಿ, ಬೆಂಗಳೂರಿನ ಆಸ್ಪತ್ರೆಯಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಕಟುಕ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಕರ್ನಾಟಕ ಬಿಜೆಪಿ, ಆರೋಗ್ಯ ಇಲಾಖೆಗೆ ಚಿಕಿತ್ಸೆ ಬೇಕು ಟ್ವೀಟ್ ಮಾಡಿ ಟೀಕಿಸಿದೆ.

ಇನ್ನೊಂದೆಡೆ, ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲೂ 8 ತಿಂಗಳ ಅವಧಿಯಲ್ಲಿ 23 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 5 ಬಾಣಂತಿಯರು ಮೃತಪಟ್ಟಿದ್ದಾರೆ. ಜನವರಿಯಿಂದೀಚೆಗೆ ನವೆಂಬರ್ ತನಕ 83 ನವಜಾತ ಶಿಶುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾಗಿ ಸಂಯುಕ್ತ ಕರ್ನಾಟಕ ವರದಿ ಮಾಡಿದೆ.

Whats_app_banner