ಸಿಡಿದ ಪಾಕೆಟ್ ಡೈನಮೊ ಇಶಾನ್ ಕಿಶನ್; 23 ಎಸೆತಗಳಲ್ಲಿ 77 ರನ್; 4.3 ಓವರ್‌ನಲ್ಲಿ ಚೇಸಿಂಗ್ ಪೂರ್ಣ
ಅರುಣಾಚಲ ಪ್ರದೇಶ ನೀಡಿದ 94 ರನ್‌ಗಳ ಸರಳ ಗುರಿಯನ್ನು ಜಾರ್ಖಂಡ್ ಕೇವಲ 4.3 ಓವರ್‌ಗಳಲ್ಲಿ ಬೆನ್ನಟ್ಟಿದೆ. ಟೀಮ್ ಇಂಡಿಯಾ ಪಾಕೆಟ್ ಡೈನಮೊ ಇಶಾನ್ ಕಿಶನ್ 23 ಎಸೆತಗಳಲ್ಲಿ 77 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy 2024) ದಾಖಲೆಗಳ ಸರಮಾಲೆ ಮುಂದುವರೆದಿದೆ. ನವೆಂಬರ್ 29ರಂದು ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶ (Arunachal Pradesh vs Jharkhand) ನಡುವಿನ ಪಂದ್ಯದಲ್ಲಿ ಜಾರ್ಖಂಡ್ ದಾಖಲೆಯ ಚೇಸಿಂಗ್ ಮಾಡಿ ಪಂದ್ಯ ಗೆದ್ದಿದೆ. ಇದೇ ವೇಳೆ, ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 11.25 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೇಲ್ ಆದ ಇಶಾನ್ ಕಿಶನ್, ಸ್ಫೋಟಕ ಬ್ಯಾಟಿಂಗ್ ಆಡಿದ್ದಾರೆ. ಬರೋಬ್ಬರಿ 334.78ರ ಸ್ಟ್ರೈಕ್ ರೇಟ್‌ನೊಂದಿಗೆ ಅಬ್ಬರಿಸಿ ಇತಿಹಾಸ ನಿರ್ಮಿಸಿದ್ದಾರೆ. ಇಶಾನ್ ಇನ್ನಿಂಗ್ಸ್ ನೆರವಿಂದ ಜಾರ್ಖಂಡ್ ತಂಡವು ವಿಶ್ವದಾಖಲೆ ನಿರ್ಮಿಸಿ ಗೆದ್ದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ, ಕೇವಲ 93 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಯಾಗಿ ಜಾರ್ಖಂಡ್ ಕೇವಲ 27 ಎಸೆತಗಳಲ್ಲಿ (4.3 ಓವರ್) ಗುರಿ ಬೆನ್ನಟ್ಟಿತು. ಇಶಾನ್ ಕಿಶನ್ ಕೇವಲ 23 ಎಸೆತಗಳಲ್ಲಿ 77 ರನ್ ಬಾರಿಸಿದರು. 5 ಬೌಂಡರಿ ಮತ್ತು 9 ಗಗನಚುಂಬಿ ಸಿಕ್ಸರ್‌ಗಳನ್ನು ಬಾರಿಸಿದರು. ತಂಡವನ್ನು ಶರವೇಗದಲ್ಲಿ ಗುರಿ ತಲುಪಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಅರುಣಾಚಲ ಪ್ರದೇಶ ಕೇವಲ 93 ರನ್‌ಗಳಿಗೆ ಆಲೌಟ್ ಆಯ್ತು. ತಂಡದ ಪರ ಯಾವುದೇ ಬ್ಯಾಟರ್ 14ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಪಾಕೆಟ್ ಡೈನಮೊ ಇಶಾನ್ ಕಿಶನ್ ಕೇವಲ 23 ಎಸೆತಗಳಲ್ಲಿ 334.78 ಸ್ಟ್ರೈಕ್ ರೇಟ್‌ನೊಂದಿಗೆ 77 ರನ್ ಗಳಿಸಿದರು. ಪಂದ್ಯಾವಳಿಯ ಇತಿಹಾಸದಲ್ಲಿ ಸ್ಟ್ರೈಕ್ ರೇಟ್ ದೃಷ್ಟಿಯಿಂದ ಕಿಶನ್ ಅವರ ಇನ್ನಿಂಗ್ಸ್ (20ಕ್ಕಿಂತ ಹೆಚ್ಚು ಎಸೆತ ಎದುರಿಸಿದವರ ಪೈಕಿ) ಅತ್ಯಂತ ವೇಗದ ಇನ್ನಿಂಗ್ಸ್ ಆಗಿದೆ. ಅವರು ಅನ್ಮೋಲ್ಪ್ರೀತ್ ಸಿಂಗ್ (334.61) ಅವರ ವೇಗದ ಇನ್ನಿಂಗ್ಸ್ ದಾಖಲೆಯನ್ನು ಅಲ್ಪ ಅಂತರದಿಂದ ಹಿಂದಿಕ್ಕಿದ್ದಾರೆ.
ಸುರೇಶ್ ರೈನಾ ನಂತರ ಎರಡನೇ ಸ್ಥಾನ
ಇದು ಸುರೇಶ್ ರೈನಾ (348) ನಂತರ ಯಾವುದೇ ಭಾರತೀಯನ ಎರಡನೇ ವೇಗದ ಇನ್ನಿಂಗ್ಸ್ ಆಗಿದೆ. 2014ರ ಐಪಿಎಲ್ ಕ್ವಾಲಿಫೈಯರ್ 2ರ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸುರೇಶ್ ರೈನಾ 25 ಎಸೆತಗಳಲ್ಲಿ 87 ರನ್ ಸಿಡಿಸಿದ್ದು ಈವರೆಗಿನ ದಾಖಲೆಯಾಗಿದೆ.
ಇಶಾನ್ ಕಿಶನ್ ಇನ್ನಿಂಗ್ಸ್‌ನೊಂದಿಗೆ ಜಾರ್ಖಂಡ್ ಕೂಡ ವಿಶ್ವ ದಾಖಲೆ ನಿರ್ಮಿಸಿತು. ರನ್ ಚೇಸ್ ಸಮಯದಲ್ಲಿ ತಂಡದ ರನ್ ರೇಟ್ ಬರೋಬ್ಬರಿ 20.88. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಠ 1 ಓವರ್ ಆಡಿದ ತಂಡಗಳಲ್ಲಿ ಅತ್ಯಧಿಕ ರನ್ ರೇಟ್ ಆಗಿದೆ. ಇದರೊಂದಿಗೆ 2021ರಲ್ಲಿ ಸರ್ಬಿಯಾ ವಿರುದ್ಧ ರೊಮೇನಿಯಾ ನಿರ್ಮಿಸಿದ್ದ 20.47 ರನ್ ರೇಟ್ ದಾಖಲೆಯನ್ನು ಮುರಿದಿದೆ.