Kaalapatthar Review: ಈ ಕಲ್ಲಿನ ಕಥೆಗಿದೆ ಡಾ. ರಾಜ್‌ಕುಮಾರ್‌ ನಂಟು! ಕಾಲಾಪತ್ಥರ್‌ ಚಿತ್ರವಿಮರ್ಶೆ-sandalwood news vikky varun dhanya ramkumar starrer kaalapatthar movie review and ratings kannada movie reviews mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kaalapatthar Review: ಈ ಕಲ್ಲಿನ ಕಥೆಗಿದೆ ಡಾ. ರಾಜ್‌ಕುಮಾರ್‌ ನಂಟು! ಕಾಲಾಪತ್ಥರ್‌ ಚಿತ್ರವಿಮರ್ಶೆ

Kaalapatthar Review: ಈ ಕಲ್ಲಿನ ಕಥೆಗಿದೆ ಡಾ. ರಾಜ್‌ಕುಮಾರ್‌ ನಂಟು! ಕಾಲಾಪತ್ಥರ್‌ ಚಿತ್ರವಿಮರ್ಶೆ

Kaalapatthar Movie Review: ವಿಕ್ಕಿ ವರುಣ್‌, ಧನ್ಯಾ ರಾಮ್‌ಕುಮಾರ್‌ ನಟನೆಯ ಕಾಲಾಪತ್ಥರ್‌ ಸಿನಿಮಾ ಇಂದು (ಸೆ. 13) ಬಿಡುಗಡೆ ಆಗಿದೆ. ಒಂದು ಕಲ್ಲಿನ ಹಿಂದೆ ಸಾಗುವ ಈ ಸಿನಿಮಾದ ವಿಮರ್ಶೆ ಇಲ್ಲಿದೆ.

ವಿಕ್ಕಿ ವರುಣ್‌ ನಟಿಸಿ, ನಿರ್ದೇಶಿಸಿದ ಕಾಲಾಪತ್ಥರ್‌ ಸಿನಿಮಾ ವಿಮರ್ಶೆ ಇಲ್ಲಿದೆ.
ವಿಕ್ಕಿ ವರುಣ್‌ ನಟಿಸಿ, ನಿರ್ದೇಶಿಸಿದ ಕಾಲಾಪತ್ಥರ್‌ ಸಿನಿಮಾ ವಿಮರ್ಶೆ ಇಲ್ಲಿದೆ.

Kaalapatthar Movie Review: ದುನಿಯಾ ಸೂರಿ ನಿರ್ದೇಶನ ಬಳಗದಲ್ಲಿ ಗುರುತಿಸಿಕೊಂಡು, ಅವರ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟವರು ನಟ ವಿಕ್ಕಿ ವರುಣ್. ಸಂಪೂರ್ಣ ಹೊಸಬರಾದರೂ, ಕಂಟೆಂಟ್‌ ವಿಚಾರದಲ್ಲಿ ಆ ಸಿನಿಮಾ ಯಶಸ್ಸು ಕಂಡಿತ್ತು. ಅಲ್ಲಿಂದ ಕಾಲೇಜ್‌ಕುಮಾರ ಸಿನಿಮಾದಲ್ಲಿಯೂ ನಾಯಕನಾಗಿ ನಟಿಸಿ ಗಮನ ಸೆಳೆದಿದ್ದರು ವಿಕ್ಕಿ. ಇದೀಗ ಸುದೀರ್ಘ ವರ್ಷಗಳ ಬಳಿಕ ಕಾಲಾಪತ್ಥರ್‌ ಸಿನಿಮಾ ಮೂಲಕ ಅವರ ಆಗಮನವಾಗಿದೆ. ನಾಯಕನಾಗಿ ನಟಿಸುವುದಷ್ಟೇ ಅಲ್ಲದೆ, ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಸಿನಿಮಾ ಇಂದು (ಸೆ. 13) ರಾಜ್ಯಾದ್ಯಂತ ತೆರೆಗೆ ಬಂದಿದೆ. ಹೀಗಿದೆ ಈ ಚಿತ್ರದ ವಿಮರ್ಶೆ.

ಏನಿದು ಕಾಲಾಪತ್ಥರ್‌ ಕಥೆ?

ಮೂಡಲಪುರದ ಶಂಕ್ರ ಬಾರ್ಡರ್‌ ಸೆಕ್ಯೂಟಿರಿ ಫೋರ್ಸ್‌ನಲ್ಲಿ ಓರ್ವ ಸೈನಿಕ. ಸೈನಿಕ ಎಂದಾಕ್ಷಣ ಅವನು ಗನ್‌ ಹಿಡಿದು ವೈರಿಗಳ ಎದೆಗೆ ಗುಂಡು ಇಳಿಸುವವನೇ ಆಗಬೇಕೆಂದೆನೂ ಇಲ್ಲ. ಕಥಾನಾಯಕನದ್ದು ಇಲ್ಲಿ ಅಂಥದ್ದೇ ಸ್ಥಿತಿ. ಸೇನೆಯಲ್ಲಿ ಶಂಕರ ಬಾಣಸಿಗ. ಹೀಗೆ ಶುರುವಾಗುವ ಕಥೆ, ಒಂದು ಕ್ಷಣ ಆತನನ್ನೂ ಹೀರೋ ಮಾಡಿಬಿಡುತ್ತದೆ. ಸೇನಾ ಬೆಟಾಲಿಯನ್‌ ಮೇಲೆ ಭಯೋತ್ಪಾದಕರ ದಾಳಿಯಾದಾಗ, ಅವರೆಲ್ಲರನ್ನು ಒಂಟಿಯಾಗಿ ಎದುರಿಸಿದ ಎಂಬ ಒಂದೇ ಒಂದು ಕಾರಣಕ್ಕೆ ದೊಡ್ಡ ಗೌರವ, ಮನ್ನಣೆ ಆತನಿಗೆ ದೇಶವ್ಯಾಪಿ ಪ್ರಾಪ್ತವಾಗುತ್ತದೆ.

ಹೀಗೆ ಆ ಮನ್ನಣೆ ರಾಷ್ಟ್ರವ್ಯಾಪಿ ಸದ್ದು ಮಾಡುತ್ತದೆ. ಸುದ್ದಿವಾಹಿನಿಗಳಲ್ಲೂ ಶಂಕ್ರನದ್ದೇ ವಿಚಾರ. ನಮ್ಮೂರ ಹುಡ್ಗ ಇಂಥದ್ದೊಂದು ಸಾಧನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಮೂಡಲಪುರದಲ್ಲಿ ಶಂಕ್ರನ ಕಲ್ಲಿನ ಪ್ರತಿಮೆಯೂ ತಲೆ ಎತ್ತುತ್ತದೆ. ಸೇನೆಯಿಂದ ರಜೆ ಮೇಲೆ ಹಳ್ಳಿಗೆ ಬರುವ ಶಂಕ್ರನಿಗೆ ತನ್ನ ಪ್ರತಿಮೆ ನೋಡಿ ಆಶ್ಚರ್ಯದ ಜತೆಗೆ ಬೇರೆ ಒಂದು ಭಾವ ಮೂಡುತ್ತದೆ. ಆ ಒಂದು ಕಲ್ಲಿನ ಪ್ರತಿಮೆಯಿಂದ ಶಂಕ್ರನ ಜೀವನದಲ್ಲಿ ಸಾಕಷ್ಟು ಏರಿಳಿತ ಘಟಿಸುತ್ತವೆ. ಅವಾಂತರಗಳು ಸಂಭವಿಸುತ್ತವೆ. ಅದೇನು ಎಂಬ ಕೌತುಕವನ್ನು ಸಿನಿಮಾದಲ್ಲಿಯೇ ನೋಡಿ ತಿಳಿಯಬೇಕು.

ನಡು ರಾತ್ರಿ ಜನಪ್ರಿಯತೆ ಸಿಕ್ಕರೆ ವ್ಯಕ್ತಿಯ ಮನಸ್ಥಿತಿ ಹೇಗೆ ಬದಲಾಗುತ್ತದೆ ಎಂಬ ಸಣ್ಣ ಸಂದೇಶವನ್ನು ಈ ಸಿನಿಮಾ ಮೂಲಕ ಪ್ರೇಕ್ಷಕ ವಲಯಕ್ಕೆ ದಾಟಿಸಿದ್ದಾರೆ ನಿರ್ದೇಶಕರು. ಈ ವಿಚಾರವನ್ನು ಅಣ್ಣಾವ್ರ ಮೂಲಕವೇ ಸಿನಿಮಾದಲ್ಲಿ ಹೇಳಿಸಿದ್ದು ಮತ್ತೊಂದು ವಿಶೇಷ. ಚಿತ್ರದ ಕಥೆಯಲ್ಲಿ ಡಾ. ರಾಜ್‌ಕುಮಾರ್‌ ಅವರೂ ಒಂದು ಪಾತ್ರದಂತೆ ಮಿಳಿತಗೊಂಡಿದ್ದಾರೆ. ಕೋಟ್ಯಂತರ ಅಭಿಮಾನಿಗಳಿದ್ದರೂ ಎಂದಿಗೂ ಅಹಂ ಅನ್ನೋ ಗೆರೆ ದಾಟದ ಅಣ್ಣಾವ್ರ ದೊಡ್ಡಗುಣವೂ ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು.

ರಾಮಾ ರಾಮಾ ರೇ ನಿರ್ದೇಶಕರ ಕಥೆ

ಕಾಲಾಪತ್ಥರ್‌ ಚಿತ್ರಕ್ಕೆ ಕಥೆ ಬರೆದಿದ್ದು ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ನಿರ್ದೇಶಕ ಸತ್ಯಪ್ರಕಾಶ್. ಸತ್ಯಪ್ರಕಾಶ್‌ ಬರೆದ ಸೂಕ್ಷ್ಮ ವಿಚಾರವೊಂದನ್ನು ಆಯ್ದುಕೊಂಡು, ಅದಕ್ಕೊಂದು ರೂಪ ಕಟ್ಟಿಕೊಟ್ಟಿದ್ದಾರೆ ಚಿತ್ರದ ನಾಯಕ ಮತ್ತು ನಿರ್ದೇಶಕ ವಿಕ್ಕಿ ವರುಣ್.‌ ಚೊಚ್ಚಲ ನಿರ್ದೇಶನದಲ್ಲಿಯೇ ಪಳಗಿದವರಂತೆ ಕಂಡಿದ್ದಾರವರು. ಫೈಟ್ಸ್‌ ದೃಶ್ಯಗಳಲ್ಲಿಯೂ ವಿಕ್ಕಿ ಅವರನ್ನು ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ ಸಾಹಸ ನಿರ್ದೇಶಕರು.

ಸಲೀಸಾಗಿ ನೋಡಿಸಿಕೊಂಡು ಹೋಗುವ ಸರಳ ಕಥೆ

ಕೇವಲ 113 ನಿಮಿಷದ ಕಾಲಾಪತ್ಥರ್‌ ಸಿನಿಮಾ, ವೀಕ್ಷಕನಿಗೆ ಸುದೀರ್ಘ ಏನಿಸುವುದಿಲ್ಲ. ಸರಳ ಕಥೆ ಅಷ್ಟೇ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಕೆಲ ವರ್ಷ ನಟನೆಯಿಂದ ದೂರ ಉಳಿದರೂ ವಿಕ್ಕಿ ವರುಣ್ ಅವರಿಂದ ಮಾಗಿದ ನಟನೆ ಸಂದಾಯವಾಗಿದೆ. ಆದರೆ, ಸೈನಿಕನಿಗೆ ಇರಬೇಕಿದ್ದ ಗತ್ತು ಎಲ್ಲೋ ಮಿಸ್‌ ಆದಂತೆ ಕಾಣಿಸುತ್ತದೆ. ಅನೂಪ್‌ ಸೀಳಿನ್‌ ಸಂಗೀತ ನೀಡಿದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರೆ, ಸಂದೀಪ್‌ ಕುಮಾರ್‌ ಅವರ ಛಾಯಾಗ್ರಹಣ ಮೆರುಗು ನೀಡಿದೆ. ಶಿಕ್ಷಕಿಯಾಗಿ ಧನ್ಯಾರಾಮ್‌ಕುಮಾರ್‌ ಗಮನ ಸೆಳೆದರೆ, ಊರ ಗೌಡನಾಗಿ ಟಿ.ಎಸ್‌. ನಾಗಾಭರಣ, ರಾಜೇಶ್​ ನಟರಂಗ, ಸಂಪತ್​ ಮೈತ್ರೇಯ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

ಚಿತ್ರ: ಕಾಲಾಪತ್ಥರ್​

ನಿರ್ದೇಶನ: ವಿಕ್ಕಿ ವರುಣ್​

ನಿರ್ಮಾಣ: ಸುರೇಶ್​, ನಾಗರಾಜು

ಪಾತ್ರವರ್ಗ: ವಿಕ್ಕಿ ವರುಣ್​, ಧನ್ಯಾ ರಾಮ್​ ಕುಮಾರ್​, ಟಿ.ಎಸ್​. ನಾಗಾಭರಣ, ರಾಜೇಶ್​ ನಟರಂಗ, ಸಂಪತ್​ ಮೈತ್ರೇಯಾ ಮುಂತಾದವರು.

ರೇಟಿಂಗ್‌​: 3/5

mysore-dasara_Entry_Point