ಯಾರಿವರು ಐಶ್ವರ್ಯಾ ರಾಜೇಶ್‌? ಡಾಲಿ ಧನಂಜಯ್‌ಗೆ ಜತೆಯಾಗಲು ಬಂದವರು, ತಮಿಳಿನ ಜನಪ್ರಿಯ ನಟಿಯ ಪರಿಚಯ
ಕನ್ನಡ ಸುದ್ದಿ  /  ಮನರಂಜನೆ  /  ಯಾರಿವರು ಐಶ್ವರ್ಯಾ ರಾಜೇಶ್‌? ಡಾಲಿ ಧನಂಜಯ್‌ಗೆ ಜತೆಯಾಗಲು ಬಂದವರು, ತಮಿಳಿನ ಜನಪ್ರಿಯ ನಟಿಯ ಪರಿಚಯ

ಯಾರಿವರು ಐಶ್ವರ್ಯಾ ರಾಜೇಶ್‌? ಡಾಲಿ ಧನಂಜಯ್‌ಗೆ ಜತೆಯಾಗಲು ಬಂದವರು, ತಮಿಳಿನ ಜನಪ್ರಿಯ ನಟಿಯ ಪರಿಚಯ

ಉತ್ತರಕಾಂಡ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ಹೀರೋಯಿನ್‌ ಆಗಿ ತಮಿಳು ನಟಿ ಐಶ್ವರ್ಯಾ ರೈ ಆಗಮಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂನ ಈ ಜನಪ್ರಿಯ ನಟಿಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಯಾರಿವರು ಐಶ್ವರ್ಯಾ ರಾಜೇಶ್‌? ಡಾಲಿ ಧನಂಜಯ್‌ಗೆ ಜತೆಯಾಗಲು ಬಂದವರು
ಯಾರಿವರು ಐಶ್ವರ್ಯಾ ರಾಜೇಶ್‌? ಡಾಲಿ ಧನಂಜಯ್‌ಗೆ ಜತೆಯಾಗಲು ಬಂದವರು

ಬೆಂಗಳೂರು: ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಉತ್ತರಕಾಂಡ ಸಿನಿಮಾದ ಶೂಟಿಂಗ್‌ ಕೆಲವು ದಿನಗಳ ಹಿಂದೆ ಆರಂಭಗೊಂಡಿದೆ. ಇದೀಗ ಚಿತ್ರತಂಡ ಉತ್ತರಕಾಂಡ ಸಿನಿಮಾದಲ್ಲಿ ನಟಿಸುವ ಕಲಾವಿದರನ್ನು ಪರಿಚಯಿಸಲು ಆರಂಭಿಸಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ನಾಯಕಿಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿ ಐಶ್ವರ್ಯಾ ರಾಜೇಶ್‌ ಆಯ್ಕೆಯಾಗಿದ್ದಾರೆ. ಯಾರಿವರು ಐಶ್ವರ್ಯಾ ರಾಜೇಶ್‌? ಯಾವೆಲ್ಲ ಸಿನಿಮಾಗಳಲ್ಲಿ ನಟಿಸಿದ್ದಾರೆ? ಇವರ ಸಾಧನೆಗಳೇನು? ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.

ಐಶ್ವರ್ಯಾ ರಾಜೇಶ್‌ ಜೀವನಚರಿತ್ರೆ

1990ರ ಜನವರಿ 10ರಂದು ತೆಲುಗು ಕುಟುಂಬದ ಐಶ್ವರ್ಯಾ ರಾಜೇಶ್‌ ಚೆನ್ನೈನಲ್ಲಿ ಜನಿಸಿದರು. ಈಕೆಯ ತಂದೆ ದಿವಂಗತ ರಾಜೇಶ್‌ ತೆಲುಗು ಚಿತ್ರನಟರಾಗಿದ್ದರು. ತಾಯಿ ನಾಗಮಣಿ ಡ್ಯಾನ್ಸರ್‌. ಈಕೆಯ ಅಜ್ಜ ಅಮರನಾಥ್‌ ಕೂಡ ತೆಲುಗು ಚಿತ್ರನಟರಾಗಿದ್ದರು. ಇವರ ಅತ್ತೆ ತೆಲುಗು ಹಾಸ್ಯನಟಿ (500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ). ಹೀಗೆ ಇವರ ಕುಟುಂಬದ ಬಹುತೇಕರು ಚಿತ್ರರಂಗದ ನಂಟು ಹೊಂದಿರುವವರು. ದಕ್ಷಣ ಭಾರತದ ಪ್ರತಿಭಾನ್ವಿತ ನಟಿಯಾಗಿ ಐಶ್ವರ್ಯಾ ರಾಜೇಶ್‌ ಈಗ ಜನಪ್ರಿಯತೆ ಪಡೆದಿದ್ದಾರೆ.

ವೃತ್ತಿಜೀವನದ ಆರಂಭದಲ್ಲಿ ಟೀವಿ ಶೋ ಅಸತಪೋವತ್ತು ಯಾರುನಲ್ಲಿ ನಿರೂಪಕಿಯಾಗಿದ್ದರು. ಅವರ್‌ಗಳ್‌ ಇವರ್‌ಗಳ್‌(2011) ಮೂಲಕ ಸಿನಿಮಾ ಪ್ರಯಾಣ ಆರಂಭಿಸಿದರು. ಟಾಲಿವುಡ್‌ನಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರೂ ಹೆಚ್ಚು ಜನಪ್ರಿಯತೆ ಪಡೆದದ್ದು ತಮಿಳು ಚಿತ್ರರಂಗದಲ್ಲಿ. ಅಟ್ಟಕತಿ ಎಂಬ ಸಿನಿಮಾ ದೊಡ್ಡಮಟ್ಟದ ಯಶಸ್ಸು ಗಳಿಸಿತು. ರಮ್ಮಿ ಮತ್ತು ಪನ್ನೈಯಾರುಂ ಪದ್ಮಿನಿಯುಮ್ ಎರಡು ಸಿನಿಮಾಗಳಲ್ಲಿ ವಿಜಯ್‌ ಸೇತುಪತಿ ಜತೆ ನಟಿಸಿದರು. ಇವರ ನಟನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಪಾರ್ಥಿಪನ್ ಅವರ ಕಥೈ ತಿರೈಕಥೈ ವಸನಂ ಇಯಕ್ಕಂ ಮತ್ತು ತಿರುದನ್ ಪೋಲಿಸ್ ಮುಂತಾದ ಸಿನಿಮಾಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡರು.

2016ರಲ್ಲಿ ಇವರು ಹೆಚ್ಚಿನ ಯಶಸ್ಸು ಪಡೆದರು. ಆರತು ಸಿನಂ , ಹಲೋ ನಾನ್ ಪೇಯ್ ಪೆಸುರೆನ್ , ಮಾನಿತನ್ ಮತ್ತು ಧರ್ಮ ದುರೈ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿದೆ. 2017 ರಲ್ಲಿ ಮಲಯಾಳಂ ಚಲನಚಿತ್ರಗಳಲ್ಲಿಯೂ ನಟಿಸಿದರು. ಅರ್ಜುನ್ ರಾಂಪಾಲ್ ಅವರ ಡ್ಯಾಡಿ ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಬಾಲಿವುಡ್‌ಗೆ ನೆಗೆದರು.

ಶಿವಕಾರ್ತಿಕೇಯನ್ ನಿರ್ಮಾಣದ ಕನಾದಲ್ಲಿ ಕ್ರಿಕೆಟ್‌ ಆಟಗಾರ್ತಿಯಾಗಿ ಮಿಂಚಿದರು. ಈ ಚಿತ್ರ ತೆಲುಗಿಗೆ ರಿಮೇಕ್‌ ಆಗಿತ್ತು. ತೆಲುಗು ರಿಮೇಕ್ ಕೌಸಲ್ಯ ಕೃಷ್ಣಮೂರ್ತಿಯ ಮೂಲಕ ಟಾಲಿವುಡ್‌ ಸಿನಿಪ್ರೇಕ್ಷಕರ ಅಭಿಮಾನ ಗಳಿಸಿದರು. ಇದಾದ ಬಳಿಕ ತಿಟ್ಟಂ ಇರಂದು (2021), ಭೂಮಿಕಾ (2021) ಮತ್ತು ಡ್ರೈವರ್ ಜಮುನಾ (2022) ನಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆರ್‌ಜೆ ಬಾಲಾಜಿ ಜೊತೆಗಿನ ಆಕ್ಷನ್ ಥ್ರಿಲ್ಲರ್, ರನ್ ಬೇಬಿ ರನ್ (2023) ಕೂಡ ಇವರಿಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟ ಸಿನಿಮಾವಾಗಿದೆ. , ದಿ ಗ್ರೇಟ್ ಇಂಡಿಯನ್ ಕಿಚನ್ (2023) ನ ತಮಿಳು ರಿಮೇಕ್‌ನಲ್ಲೂ ಮಿಂಚಿದ್ದಾರೆ. ಇದೀಗ ಉತ್ತರಕಾಂಡ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ.

Whats_app_banner