ಪರಸಂಗದ ಗೆಂಡೆತಿಮ್ಮ ಚಿತ್ರದಲ್ಲಿ ಲೋಕೇಶ್ ಜೊತೆ ನಟಿಸಿದ್ದ ರೀಟಾ ಅಂಚನ್ ರಾಧಾಕೃಷ್ಣ ನಿಧನ
1978 ರಲ್ಲಿ ತೆರೆ ಕಂಡಿದ್ದ ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ಲೋಕೇಶ್ ಜೊತೆ ನಟಿಸಿದ್ದ ರೀಟಾ ಅಂಚನ್ ರಾಧಾಕೃಷ್ಣ ನವೆಂಬರ್ ಬುಧವಾರ ನಿಧನರಾಗಿದ್ದಾರೆ. ರೀಟಾ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಒಬ್ಬ ಮಗ, ಪುತ್ರಿಯನ್ನು ಅಗಲಿಸಿದ್ದಾರೆ. ರೀಟಾ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ.
ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ 80-90 ದಶಕದ ಬಹಳಷ್ಟು ಕಲಾವಿದರು ಇಂದು ಕಣ್ಮರೆಯಾಗಿದ್ದಾರೆ. ಕೆಲವರು ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಗುರುತೇ ಸಿಗದಷ್ಟು ಬದಲಾಗಿಹೋಗಿದ್ದಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸಿದ್ದಾರೆ. 1978 ರಲ್ಲಿ ತೆರೆ ಕಂಡಿದ್ದ ಪರಸಂಗದ ಗೆಂಡೆತಿಮ್ಮ ಸಿನಿಮಾ ನಟಿ ರೀಟಾ ಅಂಚನ್ 2 ದಿನಗಳ ಹಿಂದಷ್ಟೇ ನಿಧನರಾಗಿದ್ದಾರೆ.
ಬಹುಭಾಷಾ ನಟಿ ರೀಟಾ ಅಂಚನ್
ಬುಧವಾರ ರೀಟಾ ಅಂಚನ್ ನಿಧನರಾಗಿದ್ದಾರೆ, ಅವರಿಗೆ 68 ವರ್ಷ ವಯಸ್ಸಾಗಿತ್ತು. ಕನ್ನಡ ಸಿನಿಮಾಗಳು ಮಾತ್ರವಲ್ಲದೆ ಹಿಂದಿ, ಗುಜರಾತಿ ಹಾಗೂ ಪಂಜಾಬಿ ಭಾಷೆಗಳ ಸಿನಿಮಾಗಳಲ್ಲಿ ರೀಟಾ ಅಂಚನ್ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಲಿವುಡ್‌ನಲ್ಲಿ ರೀಟಾ ಬದ್ನಾಂ, ಗರ್ಲ್ ಜವಾನ್ ಹೋಗಯಾ, ಆತ್ಮಾ, ಫರ್ಜ್ ಔರ್ ಪ್ಯಾರ್ ಸಿನಿಮಾಗಳಲ್ಲಿ ನಟಿಸಿದ್ದರು. ಪರಸಂಗದ ಗೆಂಡೆತಿಮ್ಮ ಸಿನಿಮಾದಲ್ಲಿ ರೀಟಾ ಮರಕಣಿ ಪಾತ್ರದಲ್ಲಿ ನಟಿಸಿದ್ದರು. ಇದಕ್ಕಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಕೂಡಾ ಲಭಿಸಿತ್ತು. ಹಲವು ವರ್ಷಗಳಿಂದ ತೆರೆಮರೆಗೆ ಸರಿದಿದ್ದ ಈ ನಟಿಯ ನಿಧನದ ಸುದ್ದಿ ಈಗ ಕನ್ನಡ ಸಿನಿಪ್ರಿಯರಿಗೆ ಬೇಸರ ಉಂಟು ಮಾಡಿದೆ. ಬಿಲ್ಲವರ ಸಂಘದ ಮಾಜಿ ಅಧ್ಯಕ್ಷ ಮತ್ತು ಟಾಟಾ ಕಂಪನಿಯ ಹಿರಿಯ ಅಧಿಕಾರಿ ಟಿ ಅಂಚನ್ ಅವರ ಪುತ್ರಿ. ರಾಧಾಕೃಷ್ಣ ಮಂಚಿಗಯ್ಯ ಅವರನ್ನು ಮದುವೆ ಆದ ನಂತರ ರೀಟಾ, ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ದಂಪತಿಗೆ ಒಬ್ಬ ಮಗ, ಒಬ್ಬರು ಪುತ್ರಿ ಇದ್ದಾರೆ. ರೀಟಾ ಅಂಚನ್ ಅತ್ತೆ (ರಾಧಾಕೃಷ್ಣ ಮಂಚಿಗಯ್ಯ) ವನಿತಾ ಮೈಸೂರು ಮಹಾರಾಜ ಒಡೆಯರ್ ಕುಟುಂಬದವರು.
ಬೇಸರ ಹಂಚಿಕೊಂಡ ನಿರ್ದೇಶಕ ರಘುರಾಮ್
ಅಂದಿನ ನಟಿಯರನ್ನು ತಮ್ಮ ಕನಸುಗಳ ಕಾರ್ಖಾನೆ ಕಾರ್ಯಕ್ರಮದ ಮೂಲಕ ಸಂದರ್ಶನ ಮಾಡುತ್ತಿದ್ದ ಸ್ಯಾಂಡಲ್‌ವುಡ್ ನಿರ್ದೇಶಕ ರಘುರಾಮ್, ರೀಟಾ ಅಂಚನ್ ಫೋಟೋ ಹಂಚಿಕೊಂಡು ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ನಿಮ್ಮೆಲ್ಲರಿಗೂ ಇವರ ಜೀವನದ ಕಥೆಯನ್ನು ಪರಿಚಯಿಸಬೇಕೆಂಬ ನನ್ನ ಕನಸು ನನಸಾಗಲಿಲ್ಲ. 'ಪರಸಂಗದ ಗೆಂಡೆತಿಮ್ಮ' ಖ್ಯಾತಿಯ ಶ್ರೀಮತಿ ರೀಟಾ ಅಂಚನ್ ರಾಧಾಕೃಷ್ಣ ಅವರು 13/11/2024) ರಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕೊಡಲಿ ಎಂದು ರಘುರಾಮ್ ಬರೆದುಕೊಂಡಿದ್ದಾರೆ.
ರಾಜನ್ ನಾಗೇಂದ್ರ ಸಂಗೀತ ನೀಡಿದ್ದ ಹಾಡುಗಳು ಫೇಮಸ್
ಸುಮಾರು 45 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಪರಸಂಗದ ಗೆಂಡೆತಿಮ್ಮ ಸಿನಿಮಾವನ್ನು ಹೊನ್ನಯ್ಯ ಹಾಗೂ ತಂಡ ನಿರ್ಮಿಸಿ, ಮಾರುತಿ ಶಿವರಾಮ್ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ರೀಟಾ ಅಂಚನ್, ಲೋಕೇಶ್ ಪತ್ನಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಹಾಡುಗಳಿಗೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದಾರೆ. ಲೋಕೇಶ್, ಜಯರಾಮ್, ರಾಮಕೃಷ್ಣ,ಮಾನು, ಪ್ರಮೀಳಾ, ಡಿಂಗ್ರಿ ನಾಗರಾಜ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ನೋಟದಾಗೆ ನಗೆಯ ಮೀಟಿ, ತೇರಾ ಏರಿ ಅಂಬರದಾಗೆ, ನಿನ್ನ ರೂಪು ಎದೆಯ ಕಲಕಿ ಹಾಡುಗಳು ಇಂದಿಗೂ ಬಹಳ ಫೇಮಸ್.