ಕೆಲಸ ಗೊತ್ತಿದೆ, ಕೊಡುವವರು ಸಿಗುತ್ತಿಲ್ಲ; ಟಗರು ಪಲ್ಯ, ಮರ್ಫಿ ಸಿನಿಮಾಗಳ ಮೂಲಕ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದು ಮರೆಯಾದ ನಿರ್ದೇಶಕರು
ಇತ್ತೀಚೆಗೆ ರಿಲೀಸ್ ಆದ ಮರ್ಯಾದೆ ಪ್ರಶ್ನೆ ಸಿನಿಮಾ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರು ಆಗಮಿಸಿದ್ದರು. ಅವರಲ್ಲಿ ಮರ್ಫಿ, ಡೇರ್ ಡೆವಿಲ್ ಮುಸ್ತಾಫಾ, 777 ಚಾರ್ಲಿ ಸೇರಿದಂತೆ ಮೊದಲ ಸಿನಿಮಾಗಳಲ್ಲಿ ಪ್ರಯತ್ನ ಸೆಳೆದು ಮರೆಯಾದ ನಿರ್ದೇಶಕರು ಮರ್ಯಾದೆ ಪ್ರಶ್ನೆ ಟ್ರೈಲರ್ ರಿಲೀಸ್ ಮಾಡಿದ್ದಾರೆ.
ನಿರ್ದೇಶನ, ನಟನೆ, ನಿರ್ಮಾಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೆಸರು ಮಾಡುವ ಆಸೆಯಿಂದ ಕನ್ನಡ ಚಿತ್ರರಂಗಕ್ಕೆ ಪ್ರತಿ ದಿನ ಹೊಸಬರು ಬರುತ್ತಾರೆ. ಅದರಲ್ಲಿ ಒಬ್ಬರೋ ಇಬ್ಬರೋ ಗುರುತಿಸಿಕೊಂಡು ಇಲ್ಲಿ ಉಳಿದರೆ, ಉಳಿದವರು ಮೊದಲ ಪ್ರಯತ್ನ ಮುಗಿಸಿ ಕಣ್ಮರೆಯಾಗುತ್ತಾರೆ. ಈ ವಿಚಾರವಾಗಿ ಪತ್ರಕರ್ತ ಚೇತನ್ ನಾಡಿಗೇರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಾಗರಾಜ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಸಿನಿಮಾ ನವೆಂಬರ್ 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಕಲಾವಿದರ ಸಂಘದಲ್ಲಿ ನಡೆಯಿತು. ಟ್ರೈಲರ್ ಬಿಡುಗಡೆ ಆಯಿತು. ಮೆಚ್ಚುಗೆ ವ್ಯಕ್ತವಾಯಿತು. ಅದಕ್ಕಿಂತ ಗಮನಸೆಳೆದಿದ್ದು, ಅಲ್ಲಿ ಅತಿಥಿಗಳಾಗಿದ್ದ ನಿರ್ದೇಶಕರು.
ಮರ್ಯಾದೆ ಪ್ರಶ್ನೆ ಟ್ರೈಲರ್ ರಿಲೀಸ್ ಮಾಡಿದ ನಿರ್ದೇಶಕರು
ಇತ್ತೀಚಿನ ವರ್ಷಗಳಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದ ಒಂದಿಷ್ಟು ನಿರ್ದೇಶಕರು ಅಲ್ಲಿಗೆ ಅತಿಥಿಗಳಾಗಿ ಬಂದಿದ್ದರು. ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫ), ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಆ್ಯಂಡ್ ಕೋ), ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ಉಮೇಶ್ ಕೃಪಾ (ಟಗರು ಪಲ್ಯ), ರಾಮೇನಹಳ್ಳಿ ಜಗನ್ನಾಥ (ಹೊಂದಿಸಿ ಬರೆಯಿರಿ), ಶ್ರೀನಿಧಿ ಬೆಂಗಳೂರು (ಬ್ಲಿಂಕ್), ಸಂದೀಪ್ ಸುಂಕದ್ (ಶಾಖಾಹಾರಿ), ಚಂದ್ರಜಿತ್ ಬೆಳ್ಳಿಯಪ್ಪ (ಇಬ್ಬನಿ ತಬ್ಬಿದ ಇಳೆಯಲಿ), ರಾಜ್ ಗುರು ಭೀಮಪ್ಪ (ಕೆರೆಬೇಟೆ), ಎಂ. ಭರತ್ ರಾಜ್ (ಹೀರೋ ಮತ್ತು ಲಾಫಿಂಗ್ ಬುದ್ಧ), ಬಿ.ಎಸ್.ಪಿ ವರ್ಮಾ (ಮರ್ಫಿ), ಉತ್ಸವ್ ಗೊನ್ವರ್ (ಫೋಟೋ), ಜೈಶಂಕರ್ ಆರ್ಯರ್ (ಶಿವಮ್ಮ), ಸುನಿಲ್ ಮೈಸೂರು (ಆರ್ಕೆಸ್ಟ್ರಾ ಮೈಸೂರು), ಸಾಗರ್ ಪುರಾಣಿಕ್ (ಡೊಳ್ಳು ಮತ್ತು ವೆಂಕ್ಯಾ), ಆಕರ್ಶ್ ಹೆಚ್.ಪಿ (ಫ್ಯಾಮಿಲಿ ಡ್ರಾಮ), ಪ್ರತೀಕ್ ಪ್ರಜೋಶ್ (ಚಿಲ್ಲಿ ಚಿಕನ್) ಸೇರಿದಂತೆ ಹಲವರು ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ಇವರಲ್ಲಿ ಕೆಲವರು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ಸು ಮತ್ತು ಜನಪ್ರಿಯತೆ ಕಂಡರೆ, ಮಿಕ್ಕಂತೆ ಬಹಳಷ್ಟು ಜನ ತಮ್ಮ ಹೊಸ ಪ್ರಯತ್ನ ಮತ್ತು ಪ್ರಯೋಗಗಳಿಂದ ಗಮನ ಸೆಳೆದವರು. ಇವರಿಗೆ ಮೊದಲ ಚಿತ್ರದಲ್ಲಿ ದೊಡ್ಡ ಯಶಸ್ಸು ಸಿಗದಿರಬಹುದು. ಆದರೆ, ಅದೇ ಹಳೆಯ ಫಾರ್ಮುಲಾಗಳನ್ನು ಬಿಟ್ಟು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡಿದ್ದರು. ಇವರ ಚಿತ್ರಗಳು ಗೆಲ್ಲದಿರಬಹುದು. ಆದರೆ, ಪ್ರಯತ್ನವಾಗಿ ಗಮನಾರ್ಹ. ಸರಿ, ಮುಂದೇನು ಮಾಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಬಹಳಷ್ಟು ಮಂದಿಯ ಮುಂದಿಟ್ಟರೆ ಉತ್ತರವಿಲ್ಲ. ಇದರಲ್ಲಿ ಶಶಾಂಕ್ ಸೋಗಲ್, ಧನಂಜಯ್ ಅಭಿನಯದ ಚಿತ್ರ ಮಾಡುತ್ತಿದ್ದಾರೆ. ಸಾಗರ್ ಪುರಾಣಿಕ್ ‘ಡೊಳ್ಳು’ ನಂತರ ‘ವೆಂಕ್ಯಾ’ ಮಾಡಿದ್ದಾರೆ. ರಾಮೇನಹಳ್ಳಿ ಜಗನ್ನಾಥ, ‘ತೀರ್ಥರೂಪ ತಂದೆಯವರಿಗೆ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಮಿಕ್ಕವರಲ್ಲಿ ಕೆಲವರು ಸದ್ದಿಲ್ಲದೆ ಚಿತ್ರಗಳನ್ನು ಮಾಡುತ್ತಿರಬಹುದು. ಆದರೆ, ಹಲವರು ಕಥೆ ಮಾಡಿಟ್ಟುಕೊಂಡು, ಚಿತ್ರ ಮಾಡುವ ಪ್ರಯತ್ನ ಮಾಡುತ್ತಿದ್ದರೂ, ಅವರಿಗೆ ನಿರ್ಮಾಪಕರು ಸಿಗದೆ ಮುಂದೇನು ಎಂದು ಗೊತ್ತಾಗದ ಸ್ಥಿತಿಯಲ್ಲಿದ್ದಾರೆ. ಬರೀ ಇಷ್ಟೇ ಜನರಲ್ಲ, ‘777 ಚಾರ್ಲಿ’ ಎಂಬ ಮನ ಮಿಡಿಯುವ ಚಿತ್ರ ಕೊಟ್ಟ ಕಿರಣ್ ರಾಜ್ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ? ಈ ತರಹ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದು ಕೆಲಸ ಇಲ್ಲದೆ ಸುಮ್ಮನಿರುವ ಅದೆಷ್ಟು ನಿರ್ದೇಶಕರು ಇದ್ದಾರೋ, ಲೆಕ್ಕ ಇಟ್ಟವರಿಲ್ಲ.
ಕೆಲಸ ಗೊತ್ತಿದ್ದರೂ ಕೊಡುವವರಿಲ್ಲ ಎಂಬ ಬೇಸರ
ಇನ್ನು, ಈ ಪೈಕಿ ಚಿತ್ರ ಮಾಡುತ್ತಿರುವ ನಿರ್ದೇಶಕರು ಸಹ ತಮ್ತಮ್ಮ ಸರ್ಕಲ್‍ನಲ್ಲೇ, ಗೊತ್ತಿರುವವರಿಗೆ ಚಿತ್ರ ಮಾಡುತ್ತಿದ್ದಾರೆಯೇ ಹೊರತು, ಮಿಕ್ಕಂತೆ ಯಾರೋ ಒಬ್ಬರು ಹೊರಗಿನಿಂದ ಬಂದು ಇವರ ಕೆಲಸ ಮತ್ತು ಪ್ರತಿಭೆಯನ್ನು ಗುರುತಿಸಿ ಚಿತ್ರ ಮಾಡಿಕೊಡಿ ಎಂದು ಕೇಳಿದ ಉದಾಹರಣೆಗಳು ಕಡಿಮೆಯೇ. ಇವರ ಚಿತ್ರಗಳನ್ನು ಪ್ರೀಮಿಯರ್ ಪ್ರದರ್ಶನಗಳಲ್ಲೋ ಅಥವಾ ನಂತರ ನೋಡಿ ಮೆಚ್ಚಿಕೊಂಡ ಜನಪ್ರಿಯ ನಟರು ಸಹ ಇವರೊಂದಿಗೆ ಕೆಲಸ ಮಾಡುತ್ತಿರುವ ಉದಾಹರಣೆಗಳಿಲ್ಲ. ಹಾಗಿರುವಾಗ ಇವರ ಮುಂದಿನ ಭವಿಷ್ಯವೇನು?
ಈಗಾಗಲೇ ಕನ್ನಡದಲ್ಲಿ ಗುರುತಿಸಿಕೊಂಡು, ಹೆಸರು ಮಾಡಿದ ಒಂದಿಷ್ಟು ನಿರ್ದೇಶಕರು ಕೆಲಸವಿಲ್ಲದೆ ಕುಳಿತಿದ್ದಾರೆ ಅಥವಾ ಬೇರೆ ಭಾಷೆಗಳತ್ತ ವಲಸೆ ಹೋಗಿದ್ದಾರೆ. ಈಗ ಒಂದಿಷ್ಟು ಗಮನ ಸೆಳೆದವರೂ ಮುಂದೇನು ಎಂದು ಯೋಚಿಸುವಂತಾಗಿದೆ. ಇದರ ಜೊತೆಗೆ ಈ ವರ್ಷ 190ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಆ ಪೈಕಿ 150ಕ್ಕೂ ಹೆಚ್ಚು ನಿರ್ದೇಶಕರು ಮೊದಲ ಹೆಜ್ಜೆ ಇಟ್ಟಿದ್ದಾರೆ. ಇವರೆಲ್ಲರ ಮುಂದಿನ ಕಥೆ ಏನು? ಚಿತ್ರರಂಗದಲ್ಲಿ ಏನೋ ಸಾಧಿಸಬೇಕು ಎಂದು ಕನಸು ಕಂಡಿದ್ದಾರೆ. ಒಂದಿಷ್ಟು ಕಥೆಗಳನ್ನು ಮಾಡಿಟ್ಟುಕೊಂಡು ನಿರ್ಮಾಪಕರಿಗೆ ಹುಡುಕಾಟ ನಡೆಸಿದ್ದಾರೆ.
ಚಿತ್ರರಂಗಕ್ಕೆ ಬರುತ್ತಿರುವ ಹೊಸ ನಿರ್ಮಾಪಕರಿಗೇನೂ ಕಡಿಮೆ ಇಲ್ಲ. ಆದರೆ, ಅವರ ಕಣ್ಣಿಗೆ ಒಂದಿಷ್ಟು ಗಮನ ಸೆಳೆದವರು ಬೀಳುತ್ತಿಲ್ಲ. ವಿಚಿತ್ರವೆಂದರೆ, ಅವರು ಇನ್ನಷ್ಟು ಹೊಸಬರೊಂದಿಗೆ ಅಥವಾ ಕೆಲಸ ಗೊತ್ತಿಲ್ಲದ ನಿರ್ದೇಶಕರೊಂದಿಗೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅರ್ಹ ನಿರ್ದೆಶಕರಿಗೆ ನಿರ್ಮಾಪಕರು ಸಿಗುತ್ತಿಲ್ಲ. ನಿರ್ಮಾಪಕರು ಸಿಕ್ಕ ನಿರ್ದೇಶಕರು ಅವರನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ಒಂದು ಕಡೆ ಇವರು ಸೂಕ್ತ ನಿರ್ಮಾಪಕರು ಸಿಗದೆ ಕೆಲಸ ಇಲ್ಲದೆ ಸುಮ್ಮನಿದ್ದರೆ, ಆ ಕಡೆ ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಭ್ರಮನಿರಸನೊಂಡು ಚಿತ್ರರಂಗದಿಂದಲೇ ದೂರಾಗುತ್ತಿದ್ದಾರೆ. ಕೆಲಸ ಗೊತ್ತಿರುವವರು, ಕೆಲಸ ಮಾಡುವ ಹುಮ್ಮಸಿರುವವರೇನೋ ಬೇಕಾದಷ್ಟು ಇದ್ದಾರೆ. ಆದರೆ, ಅವರಿಗೆ ಕೆಲಸ ಕೊಡುವವರು ಇಲ್ಲ. ಇದಕ್ಕೆ ಪರಿಹಾರವೆಲ್ಲಿ?