ಕೋರ್ಟ್‌ನಿಂದ ವರ್ತೂರು ಸಂತೋಷ್‌ಗೆ ಷರತ್ತು ಬದ್ಧ ಜಾಮೀನು; ನಿಟ್ಟುಸಿರು ಬಿಟ್ಟ ಹಳ್ಳಿಕಾರ್ ಒಡೆಯ, ಬಿಗ್‌ಬಾಸ್‌ಗಿಲ್ಲ ಪ್ರವೇಶ?
Varthur Santhosh: ಹುಲಿ ಉಗುರು ಧರಿಸಿ ಬಂಧನಕ್ಕೆ ಒಳಗಾಗಿದ್ದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಎರಡನೇ ಎಸಿಜೆಎಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
Tiger Claw Case: ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ, ಹಳ್ಳಿಕಾರ್ ತಳಿಯ ಒಡೆಯ ವರ್ತೂರು ಸಂತೋಷ್, ಕೊರಳಲ್ಲಿ ಹುಲಿ ಉಗುರು ಧರಿಸಿದ್ದಾರೆಂಬ ಕಾರಣಕ್ಕೆ ಅ. 22ರಂದು ರಾತ್ರೋ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕಗ್ಗಲಿಪುರದ ಅರಣ್ಯಾಧಿಕಾರಿಗಳು ನೇರವಾಗಿ ಬಿಗ್‌ಬಾಸ್ ಮನೆಗೆ ತೆರಳಿ, ಅವರನ್ನು ಬಂಧಿಸಿ ಕರೆದೊಯ್ದಿತ್ತು.
ಬಂಧನದ ಬಳಿಕ ವರ್ತೂರು ಸಂತೋಷ್ ಪರ ವಕೀಲರು ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು. ಅದರಂತೆ ಇಂದು (ಅ. 27) ಅವರಿಗೆ ಜಾಮೀನು ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡನೇ ಎಸಿಜೆಎಂ ಕೋರ್ಟ್, ಷರತ್ತುಬದ್ಧ ಜಾಮೀನು ನೀಡಿದೆ. 4 ಸಾವಿರ ನಗದು, ಒಬ್ಬರ ಶ್ಯೂರಿಟಿ ನೀಡುವಂತೆ ಕೋರಿ, ಕರೆದಾಗ ತನಿಖೆಗೂ ಹಾಜರಾಗುವಂತೆ ಸೇರಿ ಹಲವು ಷರತ್ತುಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ.
ವೀರಪ್ಪನ್ ರೀತಿಯಲ್ಲಿ ನೋಡಲಾಗಿದೆ
ಅ. 22ರಿಂದ ಇಲ್ಲಿಯವರೆಗೂ ಪರಪ್ಪನ ಅಗ್ರಹಾರದಲ್ಲಿ ದಿನಕಳೆದ ಸಂತೋಷ್, ಇನ್ನೇನು ಶುಕ್ರವಾರ ಸಂಜೆ ವೇಳೆಗೆ ಜೈಲಿನಿಂದ ಶೀಘ್ರದಲ್ಲಿ ಹೊರಬರಲಿದ್ದಾರೆ. "ನಮ್ಮ ಕಕ್ಷಿದಾರರು ಓರ್ವ ರೈತಾಪಿ ಕುಟುಂಬದಿಂದ ಬಂದವರು. ಅವರ ಹೆಸರಲ್ಲಿ ಯಾವುದೇ ಅಪರಾಧ ಪ್ರಕರಣಗಳಿಲ್ಲ. ಹುಲಿ ಉಗುರು ಧರಿಸಿದ ಮಾತ್ರಕ್ಕೆ, ಯಾವುದೇ ರೀತಿಯ ನೋಟೀಸ್ ನೀಡದೆ ಬಂಧಿಸಬಾರದಿತ್ತು. ಅವರನ್ನು ಒಂದು ರೀತಿ ವೀರಪ್ಪನ್ ರೀತಿಯಲ್ಲಿ ಅರಣ್ಯಾಧಿಕಾರಿಗಳು ನಡೆಸಿಕೊಂಡಿದ್ದಾರೆ ಎಂದು ಸಂತೋಷ್ ಪರ ವಕೀಲರು ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಮರಳುವುದು ಅನುಮಾನ
ಹಾಗಾದರೆ, ಮತ್ತೆ ಬಿಗ್‌ಬಾಸ್ ಮನೆಗೆ ಅವರು ಮರಳಲಿದ್ದಾರಾ? ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮತ್ತೊಂದು ಕಡೆ, ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಮರಳುವುದು ಅಸಾಧ್ಯ ಎಂದೂ ಹೇಳಲಾಗುತ್ತಿದೆ. ಷರತ್ತು ಬದ್ಧ ಜಾಮೀನು ನೀಡಿರುವ ಕೋರ್ಟ್, ಕರೆದಾಗ ತನಿಖೆಗೂ ಬರುವಂತೆ ತಿಳಿಸಿದೆ. ಹಾಗಾಗಿ ಮತ್ತೆ ಮತ್ತೆ ವಿಚಾರಣೆಗೆ ಅವರು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಸದ್ಯದ ಮಟ್ಟಿಗೆ ಅವರ ಪಾಲಿಗೆ ಬಿಗ್ ಬಾಸ್ ಬಾಗಿಲು ಮುಚ್ಚಿದಂತೆ. ರಾಜ್ಯದಲ್ಲಿ ಹುಲಿ ಉಗುರಿನ ಪ್ರಕರಣ ಹೆಚ್ಚು ಚರ್ಚೆಯಲ್ಲಿದೆ. ಸಿನಿಮಾ ಮಾತ್ರವಲ್ಲದೆ ರಾಜಕೀಯ ಪ್ರಭಾವಿಗಳಿಗೂ ಈ ಬಗ್ಗೆ ನೋಟಿಸ್ ರವಾನೆಯಾಗಿದೆ. ಎಲ್ಲರ ಮನೆಯಲ್ಲಿ ಶೋಧ ಕಾರ್ಯವೂ ನಡೆದಿದ್ದು, ತಮ್ಮ ಬಳಿ ಇದ್ದ ಹುಲಿ ಉಗುರಿನ ಪೆಂಡೆಂಟ್‌ಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ.