20.15 ಲಕ್ಷ ರೂನ ಕಾರು ಖರೀದಿಸಿದ ಲಕ್ಷ್ಮೀ ನಿವಾಸ ಸೀರಿಯಲ್ ಬಾಲನಟಿ ನಿಶಿತಾ; ಅಪ್ರಾಪ್ತರು ಕಾರು ಮಾಲೀಕತ್ವ ಪಡೆಯಬಹುದೇ?
Laxmi Nivasa Serial Kushi: ಲಕ್ಷ್ಮಿ ನಿವಾಸ ಸೀರಿಯಲ್‌ನ ಬಾಲನಟಿ ನಿಶಿತಾ (ಖುಷಿ) ಹ್ಯುಂಡೈ ಕ್ರೆಟಾ ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ವಾಹನ ಖರೀದಿಗೆ ಇರುವ ವಯೋಮಿತಿ ಏನು? ನಿಶಿತಾ ಕಾರು ಖರೀದಿ ಹಿಂದಿನ ಮರ್ಮವೇನು? ಇಲ್ಲಿದೆ ವಿವರ.
ಲಕ್ಷ್ಮಿ ನಿವಾಸ ಕನ್ನಡ ಧಾರಾವಾಹಿಯ ಪುಟಾಣಿ ಖುಷಿ ಎಲ್ಲರಿಗೂ ಅಚ್ಚುಮೆಚ್ಚು. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಖುಷಿಯ ನಿಜವಾದ ಹೆಸರು ನಿಶಿತಾ. ಆರು ವರ್ಷ ಪ್ರಾಯದ ಈಕೆಯ ಮನೆಗೆ ಈಗ ದುಬಾರಿ ಕಾರೊಂದು ಆಗಮಿಸಿದೆ. ಹೌದು, ನಿಶಿತಾ ಈಗ ಹ್ಯುಂಡೈ ಕ್ರೆಟಾ ಕಾರಿನ ಹೆಮ್ಮೆಯ ಮಾಲಕಿ. ಖುಷಿ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿರುವ ನಿಶಿತಾ ಅವರು ಕಾರು ಖರೀದಿ ಸಂದರ್ಭದಲ್ಲಿ ದಾಖಲೆ ಪತ್ರಗಳಿಗೆ ಸಹಿಹಾಕುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಪ್ರಾಪ್ತರು ಕಾರು ಖರೀದಿಸಬಹುದೇ?
ಭಾರತದಲ್ಲಿ ವಾಹನ ಚಲಾಯಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯವಾಗಿ ಅಪ್ರಾಪ್ತರ ಹೆಸರಲ್ಲಿ ಕಾರು ಖರೀದಿಸುವಂತೆ ಇಲ್ಲ, ಅದಕ್ಕೆ ವಿಮೆ ಮಾಡುವಂತೆ ಇಲ್ಲ. ಹದಿನೆಂಟು ವರ್ಷ ವಯಸ್ಸಿನೊಳಗಿನವರು ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುವಂತೆ ಇಲ್ಲ. ಎಲ್ಲಾದರೂ ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಹೆತ್ತವರಿಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ.
- ಹೆತ್ತವರು ಅಥವಾ ಪೋಷಕರ ಹೆಸರಿನಲ್ಲಿ ಅಪ್ರಾಪ್ತರು ವಾಹನ ಖರೀದಿಸಬಹದುಉ.
- ಹೆತ್ತವರು, ಪೋಷಕರ ಹೆಸರಲ್ಲಿ ವಾಹನ ಓಂದಣಿ ಮಾಡಬಹುದು.
- ಕನಿಷ್ಠ 18 ವರ್ಷ ವಯಸ್ಸಾದ ಬಳಿಕ ವಾಹನ ಚಾಲನೆ ಪರವಾನಿಗೆ ದೊರಕುತ್ತದೆ.
ಹಾಗಾದರೆ, ನಿಶಿತಾ ಕಾರು ಖರೀದಿಸಿದ್ದೇಗೆ?
ಸೋಷಿಯಲ್ ಮೀಡಿಯಾದಲ್ಲಿ ನಿಶಿತಾ ಕಾರು ದಾಖಲೆಗಳಿಗೆ ಸಹಿ ಹಾಕುವ ಚಿತ್ರವಿದೆ. ಆದರೆ, ಈಕೆ ನಿಜಕ್ಕೂ ತನ್ನ ಹೆಸರಿನಲ್ಲಿ ಕಾರು ಖರೀದಿಸಿಲ್ಲ. ತನ್ನ ತಾಯಿಯ ಹೆಸರಿನಲ್ಲಿ ಖರೀದಿಸಿದ್ದಾರೆ. ಸುಮಾರು 20.15 ಲಕ್ಷ ರೂಪಾಯಿಯ ಕಾರನ್ನು ಖರೀದಿಸಿದ್ದಾರೆ. ಪುಟಾಣಿ ಖುಷಿಗೆ ಖುಷಿಯಾಗಲೆಂದು ಸುಮ್ಮನೆ ಕಾಗದಗಳಿಗೆ ಸಹಿ ಹಾಕಿಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು "ಕಾರು ದಾಖಲೆಗಳಿಗೆ ಅಪ್ರಾಪ್ತರು ಸಹಿಹಾಕಬಹುದೇ" ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರಿಯಾ ಅವರು "ಇಲ್ಲ, ಆಕೆ ಕೂಡ ಸಹಿ ಹಾಕಲು ಬಯಸಿದಳು. ಅದು ನಿಜವಾದ ಮೂಲ ದಾಖಲೆಯಲ್ಲ. ಸುಮ್ಮನೆ ಸಹಿ ಹಾಕಿದ್ದಾಳೆ ಅಷ್ಟೇ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಲಕ್ಷ್ಮಿ ನಿವಾಸ ಸೀರಿಯಲ್‌ನ ಖುಷಿ (ನಿಶಿತಾ) ಕಾರಿನ ಮಾಲಕಿ ಆಗಿರುವುದು ಹೌದು. ಆದರೆ, ನಿಜವಾಗಿಯೂ ಲೀಗಲ್ ಆಗಿ ಕಾರಿನ ಮಾಲಕಿಯಾಗಿರುವುದು ಅವರ ತಾಯಿ. ಸೀರಿಯಲ್‌ನಲ್ಲಿ ಎಲ್ಲರ ಮನ ಸೆಳೆದಿರುವ ನಿಶಿತಾ ಖರೀದಿಸಿದ ಕಾರು ಹ್ಯುಂಡೈ ಕ್ರೆಟಾ. ಇದಕ್ಕೆ ಇವರು 20.15 ಲಕ್ಷ ರೂಪಾಯಿ ನೀಡಿದ್ದಾರೆ.
ಹ್ಯುಂಡೈ ಕ್ರೆಟಾ ದರ
ಹ್ಯುಂಡೈ ಕಂಪನಿಯ ಕ್ರೆಟಾ ಆರಂಭಿಕ ದರ 13.79 ಲಕ್ಷ ರೂಪಾಯಿ ಇದೆ. ಕ್ರೆಟಾ ಎಸ್‌ಎಕ್ಸ್ 1.5 ಟರ್ಬೊ ಟಾಪ್ ಎಂಡ್ ದರ 25.32 ಲಕ್ಷ ರೂ.ವರೆಗೆ ಇದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ.
ನಿಶಿತಾ ಕಾರು ಖರೀದಿಸಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವರು "ನನಗೆ ಇನ್ನು ಸ್ಕೂಟರ್ ಖರೀದಿಸಲು ಆಗಲಿಲ್ಲ, ಈ ಮಗು ಕಾರು ಖರೀದಿಸಿದ್ದಾರೆ" "ನಾನು ಈ ವಯಸ್ಸಲ್ಲಿ ಜಾತ್ರೆಯಲ್ಲಿ ಕಾರು ಖರೀದಿಸಿದ್ದೆ" ಎಂದೆಲ್ಲ ಹೇಳಿದ್ದಾರೆ.