ಪವನ್ ಕಲ್ಯಾಣ್ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್ ಸಲಹೆ
. ಹೈದರಾಬಾದ್‌ನ ಹೊರವಲಯದಲ್ಲಿರುವ ತುಮ್ಮಿಡಿಕುಂಟ ಕೆರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಆ ಜಾಗದಲ್ಲಿ ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪ ನಟ ನಾಗಾರ್ಜುನ್ ವಿರುದ್ಧ ಕೇಳಿಬಂದಿತ್ತು. ಅದರಂತೆ ತೆರವು ಕಾರ್ಯಾಚರಣೆಯೂ ನಡೆದಿತ್ತು. ಸದ್ಯ ಸ್ಟೇ ತರಲಾಗಿದ್ದು, ತೆರವು ಸ್ಥಗಿತಗೊಂಡಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
Telugu actor Nagarjuna: ಟಾಲಿವುಡ್‌ನ ಖ್ಯಾತ ನಟ, ನಿರ್ಮಾಪಕ ನಾಗಾರ್ಜುನ್ ಅಕ್ಕಿನೇನಿಗೆ ತೆಲಂಗಾಣ ಸರ್ಕಾರ ಇಂದು (ಆಗಸ್ಟ್ 24) ಬೆಳಗ್ಗೆ ಶಾಕ್ ನೀಡಿದೆ. ಹೈದರಾಬಾದ್‌ನ ಹೊರವಲಯದಲ್ಲಿರುವ ತುಮ್ಮಿಡಿಕುಂಟ ಕೆರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಆ ಜಾಗದಲ್ಲಿ ಎನ್ ಹೆಸರಿನ ಕನ್ವೆನ್ಷನ್ ಹಾಲ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆ ಆರೋಪದ ಅಡಿಯಲ್ಲಿ ನಟ ನಾಗಾರ್ಜುನ್‌ಗೆ ಯಾವುದೇ ಮುನ್ಸೂಚನೆ ನೀಡದೇ, ಡಿಸಾಸ್ಟರ್ ರೆಸ್ಪಾನ್ಸ್ ಆ್ಯಂಡ್ ಅಸೆಟ್ಸ್ ಮಾನಿಟರಿಂಗ್ ಆ್ಯಂಡ್ ಪ್ರೊಟೆಕ್ಷನ್ ಏಜೆನ್ಸಿ ಅಧಿಕಾರಿಗಳು ಜೆಸಿಬಿಗಳು ಸಮೇತ ಆಗಮಿಸಿ, ಕಲ್ಯಾಣ ಮಂಟಪವನ್ನು ನೆಲಸಮಗೊಳಿಸಿವೆ. ಈ ವಿಚಾರದಿಂದ ಬೇಸತ್ತ ನಾಗಾರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ನಾಗಾರ್ಜುನ್ ಪ್ರತಿಕ್ರಿಯೆ
ಹೀಗೆ ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದ್ದಂತೆ, ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ ನಾಗಾರ್ಜುನ್. ಆದರೆ, ಈ ಕಾರ್ಯಾಚರಣೆ ನಡೆಯುತ್ತಿದ್ದಂತೆ ನಾಗಾರ್ಜುನ್ ಪ್ರತಿಕ್ರಿಯಿಸಿದ್ದಾರೆ. "ಕೆರೆಯ ಒಂದು ಇಂಚು ಭೂಮಿಯನ್ನೂ ನಾವು ಒತ್ತುವರಿ ಮಾಡಿಕೊಂಡಿಲ್ಲ. ಈ ಧ್ವಂಸ ಕುರಿತು ನ್ಯಾಯಾಲಯದ ಮೊರೆ ಹೋಗುತ್ತೇನೆ. ಈ ನಿಟ್ಟಿನಲ್ಲಿ ಜನರಿಗೆ ತಪ್ಪು ಸೂಚನೆಗಳನ್ನು ರವಾನಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೆಡವುವ ಮುನ್ನ ಯಾವುದೇ ಸೂಚನೆ ನೀಡಿಲ್ಲ ಎಂದರು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ರೀತಿ ಮಾಡುವುದು ಸರಿಯಲ್ಲ. ಕಾನೂನು ಪಾಲಿಸುವ ಪ್ರಜೆಯಾಗಿ.. ಕೋರ್ಟ್ ಈ ಬಗ್ಗೆ ತೀರ್ಪು ನೀಡಿದರೆ ನಾವೇ ತೆರವು ಮಾಡುತ್ತಿದ್ದೆವು ಎಂದಿದ್ದಾರೆ.
ಅಲ್ಲಿರುವುದು ಪಟ್ಟಾ ಜಮೀನು. ಒಂದು ಇಂಚು ಜಾಗವನ್ನೂ ನಾವು ಆಕ್ರಮಿಸಿಲ್ಲ. ಇದು ಖಾಸಗಿ ನಿವೇಶನದಲ್ಲಿ ನಿರ್ಮಿಸಲಾದ ಕಟ್ಟಡವಾಗಿದೆ. ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂದು ಭಾವಿಸುತ್ತೇನೆ. ನೋಡುವ ಜನರಿಗೆ ನಾವೇ ತಪ್ಪು ಮಾಡಿದ್ದೇವೆ ಎಂದು ತಪ್ಪು ಸಂದೇಶ ರವಾನೆಯಾದಂತೆ ಕಾಣುತ್ತದೆ. ಅದನ್ನು ಹೋಗಲಾಡಿಸುವುದು ನಮ್ಮ ಮುಖ್ಯ ಉದ್ದೇಶ ಎಂದಿದ್ದಾರೆ ಅಕ್ಕಿನೇನಿ ನಾಗಾರ್ಜುನ್.
ನಾಗಾರ್ಜುನ್ ಪೋಸ್ಟ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ಇನ್ನು ತನ್ನ ಎನ್ ಕನ್ವೆನ್ಷನ್ ಹಾಲ್ ಧ್ವಂಸದ ಬಗ್ಗೆ ಪೋಸ್ಟ್ ಮಾಡುತ್ತಿದ್ದಂತೆ, ನಟ ನಾಗಾರ್ಜುನ್ ಅವರಿಗೆ ಕೆಲವರು ಒಂದಷ್ಟು ಸಲಹೆ ನೀಡಿದ್ದಾರೆ. ಸ್ಟೇ ಇದ್ದರೂ ಏಕಾಏಕಿ ಹೀಗೆ ದಾಳಿ ಮಾಡುವುದು ಎಷ್ಟು ಸರಿ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ನೋಟೀಸ್ ನೀಡದೇ ಈ ರೀತಿ ಮಾಡುವುದು ಕಾನೂನು ರೀತಿ ಅಪರಾಧ ಎಂದೂ ಹೇಳಿಕೊಂಡಿದ್ದಾರೆ. ಅದೇ ರೀತಿ, ಇನ್ನೊಬ್ಬ ಬಳಕೆದಾರರು "ನೀವು ಪವನ್ ಕಲ್ಯಾಣ್ ಅವರಂತೆ ಬಿಜೆಪಿ ಪಕ್ಷದ ಮಡಿಲಲ್ಲಿ ಹೋಗಿ ಕುಳಿತುಬಿಡಿ. ಆಗ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತದೆ" ಎಂದೂ ಸಲಹೆ ನೀಡಿದ್ದಾರೆ.