Bangalore water: ಕಾವೇರಿ ಕಣಿವೆ ನಾಲ್ಕು ಜಲಾಶಯಗಳು ಅರ್ಧದಷ್ಟು ಕುಸಿತ: ಬೆಂಗಳೂರಿಗೂ ಮುಂದೆ ನೀರಿಗೆ ತತ್ವಾರ
Cauvery area dams ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಮಳೆಗಾಲ ಮುಗಿಯುವ ಮುನ್ನ ಅರ್ಧದಷ್ಟು ನೀರು ಸಂಗ್ರಹವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಮಗೆ ಕುಡಿಯುವ ನೀರು, ಕೃಷಿಗೆ ನೀರು ಒದಗಿಸುವ ಜತೆಗೆ ತಮಿಳುನಾಡಿಗೂ ನೀರು ಹರಿಸುವುದು ಇಕ್ಕಟ್ಟಿನ ಸ್ಥಿತಿಯನ್ನು ತಂದಿದೆ.
ಮೈಸೂರು: ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ನೀರಿನ ಮಟ್ಟ ಮಳೆಗಾಲದಲ್ಲಿಯೇ ಕುಸಿದಿದೆ. ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನಾಲ್ಕೂ ಜಲಾಶಯಗಳಲ್ಲಿ ಅರ್ಧದಷ್ಟು ಮಾತ್ರ ಸದ್ಯ ಸಂಗ್ರಹವಾಗಿದೆ.
ಕಾವೇರಿ ಕೊಳ್ಳದಲ್ಲಿ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಪ್ರಮುಖ ಜಲಾಶಯಗಳು. ಇದರಲ್ಲಿ ಕೃಷ್ಣರಾಜ ಸಾಗರ ಜಲಾಶಯಕ್ಕೆ ನೀರು ಹರಿಸುವ ಸಂಪರ್ಕವಿದ್ದರೆ, ಕಬಿನಿ ಪ್ರತ್ಯೇಕವಿದೆ. ಕೃಷ್ಣರಾಜಸಾಗರ ಹಾಗೂ ಕಬಿನಿಯಿಂದ ಹರಿಯುವ ನೀರು ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಕಾವೇರಿ ಸಂಗಮವಾಗಿ ಮುಂದೆ ತಮಿಳುನಾಡು ಕಡೆ ಹೋಗುತ್ತದೆ.
ನೀರು ನಿರ್ವಹಣೆ ಹೀಗೆ
ಬೆಂಗಳೂರು ಮಹಾನಗರ, ಮೈಸೂರು, ಮಂಡ್ಯ ಸೇರಿದಂತೆ ಈ ಭಾಗದ ಜನರಿಗೆ ಕುಡಿಯುವ ನೀರು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯ ಭಾಗದವರ ಕೃಷಿಗೆ ಇದೇ ಜಲಾಶಯಗಳಿಂದ ನೀರು ಹರಿಯಬೇಕು. ತಮಿಳುನಾಡಿಗೂ ನೀರು ಕೊಡಬೇಕು. ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿ ಹರಿಯುತ್ತಿದ್ದರೆ ಈ ಸಮಸ್ಯೆ ಬರುವುದಿಲ್ಲ. ಮಳೆಯ ಕೊರತೆಯಾಗಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿರುವಾಗ ಈಗಾಗಲೇ ಕೃಷಿ ಚಟುವಟಿಕೆಗೂ ಮಿತಿ ಹೇರಲಾಗಿದೆ. ಕಟ್ಟು ಪದ್ದತಿಯಲ್ಲಿ ಹದಿನೈದು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಎರಡು ತಿಂಗಳು ಕೃಷಿಗೆ ನೀರು ಹರಿಸಿ ಆನಂತರ ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಲು ಜಲಸಂಪನ್ಮೂಲ ಇಲಾಖೆ ಯೋಜಿಸಿಕೊಂಡಿದೆ.
ಎಷ್ಟು ನೀರು ಸಂಗ್ರಹವಾಗಿದೆ.
ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಶುಕ್ರವಾರ ಬೆಳಿಗ್ಗೆ ಹೊತ್ತಿಗೆ 64, 61 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಬಳಸಲು ಲಭ್ಯ ಇರುವಂತಹದ್ದು ಬರೀ
37.30 ಮಾತ್ರ. ಉಳಿಕೆ 27 ಟಿಎಂಸಿ ನೀರು ತುರ್ತು ಪರಿಸ್ಥಿತಿಗೆ ಬಳಸಲು ಇರುವಂತದ್ದು.
ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ 20.56 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಬಳಕಗೆ 12.18 ಟಿಎಂಸಿ ಮಾತ್ರ ಲಭ್ಯ. ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 48.81 ಟಿಎಂಸಿ ನೀರು ಸಂಗ್ರಹವಾಗಿತ್ತು.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ 14.47 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ ಬಳಸಲು ಅವಕಾಶ ಇರುವುದು 4.66 ಟಿಎಂಸಿ ಮಾತ್ರ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹ ಮಾಡುವ ಸಾಧ್ಯತೆಯಿದೆ. ಕಳೆದ ಇದೇ ಸಮಯದಲ್ಲಿ ಕಬಿನಿ ಜಲಾಶಯದಲ್ಲಿ 18.89 ಟಿಎಂಸಿ ನೀರು ಸಂಗ್ರಹವಾಗಿತ್ತು.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಸದ್ಯ 17.824ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 13.45ಟಿಎಂಸಿ ನೀರು ಮಾತ್ರ ಬಳಕೆಗೆ ಅವಕಾಶ ಇರುವಂತಹದ್ದು. ಹೇಮಾವತಿ ಜಲಾಶಯವು 37.103 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಹಿಂದಿನ ವರ್ಷದ ಇದೇ ದಿನ 37.07 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು.
ಕೊಡಗಿನ ಹಾರಂಗಿ ಜಲಾಶಯದಲ್ಲಿ 7.76 ಟಿಎಂಸಿ ನೀರು ಸದ್ಯ ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಅವಕಾಶ ಇರುವಂತಹದ್ದು 7.01 ಟಿಎಂಸಿ ಮಾತ್ರ. ಇಲ್ಲಿ 8.10 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಕಳೆದ ವರ್ಷ ಇದೇ ದಿನ ಹಾರಂಗಿಯಲ್ಲಿ 7.35 ಟಿಎಂಸಿ ನೀರು ಸಂಗ್ರಹವಾಗಿತ್ತು,
ಬೆಂಗಳೂರಿಗೆ ಹತ್ತು ಟಿಎಂಸಿ ಬೇಕು
ಕಾವೇರಿ ಕೊಳ್ಳದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ ಮುಂದಿನ ಬೇಸಿಗೆವರೆಗೆ ಬೆಂಗಳೂರು ನಗರದ ಕುಡಿಯುವ ನೀರಿಗೆಂದೇ ಹತ್ತು ಟಿಎಂಸಿಯಾದರೂ ಬೇಕೇ ಬೇಕು. ಬೆಂಗಳೂರಿನ ಜನಸಂಖ್ಯೆ ಒಂದು ಕೋಟಿ ಗೂ. ಹೆಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ನೀರಿನ ಬಳಕೆ ಪ್ರಮಾಣವೂ ಅಧಿಕವಾಗಿದೆ. ಬೇಸಿಗೆಯಲ್ಲಿ ಬೋರ್‌ವೆಲ್‌ಗಳೂ ನೀರು ಸಿಗದೇ ಇದ್ದಾಗ ಹೆಚ್ಚಿನ ನೀರನ್ನು ಜಲಾಶಯದಿಂದಲೇ ಬಳಸಲಾಗುತ್ತದೆ. ಕೆಆರ್‌ಎಸ್ ಹಾಗೂ ಕಬಿನಿಯಿಂದ ಹರಿಸುವ ನೀರನ್ನು ಕಾವೇರಿ ನದಿ ಮೂಲಕ ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಿಂದ ಪಂಪ್ ಮಾಡಿ ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತದೆ.
ಸದ್ಯದ ಮಟ್ಟಿಗೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆಯೇನೂ ಇಲ್ಲ. ತಮಿಳುನಾಡಿಗೆ ಹರಿಸುವ ನೀರು, ನಮ್ಮ ಭಾಗದ ಕೃಷಿಗೆ ಬಿಡಬೇಕಾದ ನೀರಿನ ಬಳಕೆ ನಂತರ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹೇಳಬಹುದು. ಡಿಸೆಂಬರ್‌ವರೆಗೂ ಭಾರೀ ಸಮಸ್ಯೆಯಂತೂ ಕಾಡದು. ಬೇಸಿಗೆ ವೇಳೆಗೆ ಖಂಡಿತ ಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದು ಅಧಿಕಾರಿಯೊಬ್ಬರ ವಿವರಣೆ.
ಇತರೆ ಭಾಗಕ್ಕೂ ನೀರು
ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ಈ ಭಾಗದ ಪ್ರಮುಖ ನಗರ, ಪಟ್ಟಣಗಳಿಗೆ ಕೆಆರ್‌ಎಸ್ ಹಾಗೂ ಕಬಿನಿಯಿಂದ ಕುಡಿಯಲು ನೀರು ಒದಗಿಸಲಾಗುತ್ತದೆ. ಇಪ್ಪತ್ತಕ್ಕೂ ಹೆಚ್ಚು ತಾಲ್ಲೂಕು ಕೇಂದ್ರಗಳು ಕುಡಿಯುವ ನೀರಿಗೆ ಅವಲಂಬಿಸಿರುವುದು ಕಾವೇರಿ ನದಿಯನ್ನೇ. ಕುಡಿಯುವ ನೀರಿಗೆಂದು ಪ್ರತಿ ತಿಂಗಳು ಕನಿಷ್ಟ ಎರಡು ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಶೇ. 60 ರಷ್ಟು ನೀರು ಬೆಂಗಳೂರು ನಗರಕ್ಕೆ ಹೊಗುತ್ತದೆ. ಉಳಿಕೆ ನೀರನ್ನು ಈ ಭಾಗಕ್ಕೆ ಬಳಸಲಾಗುತ್ತದೆ. ಇದರಲ್ಲಿ ಈ ಭಾಗದ ಹಳ್ಳಿಗಳಲ್ಲಿ ಬಳಸುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳೂ ಸೇರಿವೆ. ಇವಕ್ಕೆಲ್ಲಾ ಇಲ್ಲಿಂದಲೇ ನೀರು ಒದಗಿಸಬೇಕು.
ಇದರಿಂದ ಈ ಬಾರಿ ನೀರು ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡುವುದು ಅನಿವಾರ್ಯ ವೂ ಆಗಿದೆ
ವಿಭಾಗ