ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆ; ಆಕ್ಷನ್ ಜೊತೆಗೆ ಮಾಸ್ ಮನರಂಜನೆ ಪಕ್ಕಾ
ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆ; ಆಕ್ಷನ್ ಜೊತೆಗೆ ಮಾಸ್ ಮನರಂಜನೆ ಪಕ್ಕಾ

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆ; ಆಕ್ಷನ್ ಜೊತೆಗೆ ಮಾಸ್ ಮನರಂಜನೆ ಪಕ್ಕಾ

ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ರಂದು‌ ಬಿಡುಗಡೆ ಆಗಲಿದೆ. ಚಿತ್ರದುರ್ಗದಲ್ಲಿ ನಡೆದ ಅದ್ಧೂರಿ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಅಭಿನಯದ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮತ್ತೊಂದು ಮಾಸ್‌ ಆಕ್ಷನ್‌ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ.

ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ.
ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ.

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ ಟ್ರೇಲರ್‌ ಬಿಡುಗಡೆಯಾಗಿದೆ. ಆಕ್ಷನ್‌ ಪ್ಯಾಕ್ಡ್ ಚಿತ್ರದಲ್ಲಿ ಅಭಿಮಾನಿಗಳಿ‌ಗೆ ಮಾಸ್‌ ಮನರಂಜನೆಯನ್ನು ಉಣಬಡಿಸಲು ಕಿಚ್ಚ ಬಂದಿದ್ದಾರೆ. ಪೊಲೀಸ್‌ ಇಲಾಖೆ ಮತ್ತು ರಾಜಕೀಯ ನಾಯಕರ ನಡುವಿನ ಸ್ಟೋರಿ ಲೈನ್‌ ಚಿತ್ರದಲ್ಲಿರುವುದು ಟ್ರೇಲರ್‌ನಿಂದ ಸ್ಪಷ್ಟವಾಗುತ್ತಿದೆ. ಟ್ರೇಲರ್‌ನಲ್ಲಿ ಸುದೀಪ್ ಜೊತೆಗೆ ಬಿಗ್‌ಬಾಸ್‌ ಕನ್ನಡದ ಸ್ಪರ್ಧಿ ಉಗ್ರಂ ಮಂಜು ಕೂಡಾ ಪ್ರಮುಖ ಆಕರ್ಷಣೆಯಾಗಿದ್ದಾರೆ. ‘ಮ್ಯಾಕ್ಸ್‌ ಹತ್ರ ಮಾತಾಡುವಾಗ ಮ್ಯಾಕ್ಸಿಮಮ್‌ ಸೈಲೆನ್ಸ್‌ ಇರ್ಲಿ’ ಎನ್ನುವ ಕಿಚ್ಚನ ಮಾಸ್‌ ಅಪಿಯರೆನ್ಸ್‌ ಅಭಿಮಾನಿಗಳಿಗೆ ಇಷ್ಟವಾಗಿದೆ.

ಚಿತ್ರದುರ್ಗದಲ್ಲಿ ಅದ್ಧೂರಿ​ ಟ್ರೇಲರ್​ ಬಿಡುಗಡೆ ಹಾಗೂ ಪ್ರೀ-ರಿಲೀಸ್​ ಇವೆಂಟ್​ ನಡೆದಿದ್ದು, ಅಭಿಮಾನಿಗಳಿಂದ ಟ್ರೇಲರ್‌ ರಿಲೀಸ್‌ ಮಾಡಿಸಲಾಗಿದೆ. ಮ್ಯಾಕ್ಸ್‌ ಚಿತ್ರದಲ್ಲಿ ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್‍ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್ ಸೇರಿ ಹಲವರು ನಟಿಸಿದ್ದಾರೆ.

ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರ ಡಿಸೆಂಬರ್ 25ರಂದು‌ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಆ ನಂತರ ಸಿನಿಮಾ ತಂಡದಿಂದ ಅಚ್ಚರಿಯ ಮಾಹಿತಿ ಹೊರಬಿದ್ದಿದ್ದು ದಕ್ಷಿಣ ಭಾರತದ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಬಿಡುಗಡೆಗೆ ಸಜ್ಜಾಗಿದೆ. ಅಂದರೆ ಕನ್ನಡ, ತೆಲುಗು, ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆ. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ಕಲೈಪುಲಿ ದಾನು ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇಲ್ಲಿದೆ ಟ್ರೇಲರ್

ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಚಿತ್ರಕ್ಕೆ ಅಜನೀಶ್‍ ಲೋಕನಾಥ್‍ ಸಂಗೀತ ನೀಡಿದರೆ, ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಚೇತನ್‍ ಡಿಸೋಜ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಶಿವಕುಮಾರ್ ಅವರ ಕಲಾ ನಿರ್ದೇಶನ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.

ಫ್ಯಾನ್ಸ್‌ ಪ್ರತಿಕ್ರಿಯೆ

ಯೂಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾದ ಒಂದು ಗಂಟೆಯೊಳಗೆ 1 ಲಕ್ಷ 67 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ಟ್ರೇಲರ್‌ ನೋಡಿದ ಅಭಿಮಾನಿಗಳು ಕಿಚ್ಚನಿಗೆ ಶುಭಹಾರೈಸಿದ್ದಾರೆ. ಗೂಸ್‌ಬಮ್ಸ್ ಬರ್ತಿದೆ ಎಂದು ಫ್ಯಾನ್ಸ್‌ ಹೇಳಿದ್ದಾರೆ. ಮ್ಯಾಕ್ಸ್ ಹತ್ರ ಮಾತಾಡ್ತಿದ್ದೀರಿ, ಮ್ಯಾಕ್ಸಿಮಮ್ ಸೈಲೆಂಟ್ಸ್ ಇರಲಿ‌ ಎಂಬ ಕಿಚ್ಚನ ಡೈಲಾಗ್‌ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

ಮ್ಯಾಕ್ಸ್ ಚಿತ್ರದ ಕುರಿತು ಮಾತನಾಡಿರುವ ಕಿಚ್ಚ ಸುದೀಪ್‍, "ಎರಡೂವರೆ ವರ್ಷಗಳ ನಂತರ ನನ್ನ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ನಿಧಾನವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಎರಡೂವರೆ ವರ್ಷ ಸಿನಿಮಾ ಬಿಡುಗಡೆ ಆಗದಿರುವುದು ದೊಡ್ಡ ವಿಷಯವಲ್ಲ. ನೀವು ತೋರಿಸುವ ಪ್ರೀತಿಯನ್ನು ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಲೇಟ್‍ ಆಗಿ ಬಂದರೂ, ಲೇಟೆಸ್ಟ್ ಆಗಿ ಬರ್ತೀವಿ. ಚಿತ್ರದಲ್ಲಿ ತುಂಬಾ ಜನ ಹೊಸ ಕಲಾವಿದರಿದ್ದಾರೆ. ಅವರಿಗೆ ನಿಮ್ಮ ಪ್ರೋತ್ಸಾಹ ಬೇಕು" ಎಂದು ಹೇಳಿದ್ದಾರೆ.

Whats_app_banner