ಕ್ರಿಸ್‌ಮಸ್, ರಜಾದಿನಗಳ ಹಿನ್ನೆಲೆ; ನೈಋತ್ಯ ರೈಲ್ವೆಯಿಂದ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಓಡಾಟ
ಕ್ರಿಸ್‌ಮಸ್ ಹಬ್ಬ ಮತ್ತು ರಜೆಯ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಮಂಗಳೂರು ನಡುವೆ ನೈಋತ್ಯ ರೈಲ್ವೆ ಹೆಚ್ಚುವರಿ ರೈಲನ್ನು ಓಡಿಸುತ್ತಿದೆ. ಹಬ್ಬದ ಸಮಯದಲ್ಲಿ ಹೆಚ್ಚುವರಿ ಟಿಕೆಟ್ ಬೇಡಿಕೆ ಇರುತ್ತದೆ. ಹೆಚ್ಚುವರಿ ಪ್ರಯಾಣಿಕರನ್ನು ನಿಭಾಯಿಸಲು ರೈಲ್ವೆಯು ತಲಾ ಎರಡು ಟ್ರಿಪ್ ಹೆಚ್ಚುವರಿ ರೈಲು ಬಿಟ್ಟಿದೆ.
ಕ್ರಿಸ್‌ಮಸ್ ಹಬ್ಬ ಮತ್ತು ರಜಾದಿನಗಳ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಹಬ್ಬದ ಸಮಯದಲ್ಲಿ ಪ್ರಾಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ರೈಲುಗಳು ಪ್ರಯಾಣಿಸಲಿವೆ. ಈ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಅದರಲ್ಲೂ ಹಬ್ಬದ ಸಮಯದಲ್ಲಿ ಹೆಚ್ಚು ಪ್ರಯಾಣಿಕರು ಉಭಯ ನಗರಗಳು ನಡುವೆ ಸಂಚರಿಸುವುದರಿಂದ, ಬೇಡಿಕೆ ಕೂಡಾ ಹೆಚ್ಚಿರುತ್ತದೆ.
ಯಶವಂತಪುರ (YPR) - ಮಂಗಳೂರು ಜಂಕ್ಷನ್ (MAJN)- ಯಶವಂತಪುರ (YPR)ಕ್ಕೆ ರೈಲು ಸಂಖ್ಯೆ 06505/06506 ಡಿಸೆಂಬರ್ 23/24 ಮತ್ತು 27/28ರಂದು ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಲಿದೆ ಎಂದು ಸಂಸದ ತಿಳಿಸಿದ್ದಾರೆ. ಈ ಕುರಿತಯ ಅವರು ಟ್ವೀಟ್ ಮಾಡಿದ್ದಾರೆ.
ಕ್ರಿಸ್‌ಮಸ್ ಹಬ್ಬಕ್ಕಾಗಿ ರಾಜಧಾನಿಯಿಂದ ತಮ್ಮ ತಮ್ಮ ಊರಿಗೆ ಪ್ರಯಾಣಿಸುವ ಜನರು ಹೆಚ್ಚಾಗಿ ಬಸ್ ಮತ್ತು ರೈಲನ್ನು ಅವಲಂಬಿಸಿರುತ್ತಾರೆ. ಸೀಮಿತ ರೈಲುಗಳ ಓಡಾಟದ ಕಾರಣದಿಂದ ಜನರು ದುಬಾರಿ ಬೆಲೆ ಕೊಟ್ಟು ಬಸ್‌ಗಳಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಹಬ್ಬದ ಸಮಯದಲ್ಲಿ ಬಸ್ ಟೆಕೆಟ್ ದರ ಕೂಡಾ ಹೆಚ್ಚಳವಾಗುತ್ತದೆ. ಸದ್ಯ ಹೆಚ್ಚುವರಿ ರೈಲುಗಳ ಓಡಾಟದಿಂದ ಜನರಿಗೆ ಅನುಕೂಲವಾಗಲಿದೆ.
ರೈಲು ಓಡಾಟದ ದಿನಾಂಕ ಮತ್ತು ಸಮಯ
ರೈಲು ಸಂಖ್ಯೆ 06505 ಯಶವಂತಪುರದಿಂದ ಮಂಗಳೂರಿಗೆ ಡಿಸೆಂಬರ್ 23ರ ಸೋಮವಾರ ಮತ್ತು 27ರ ಶುಕ್ರವಾರ 2 ಟ್ರಿಪ್ ಸಂಚರಿಸಲಿದೆ. ಇದೇ ವೇಳೆ ರೈಲು ಸಂಖ್ಯೆ 06506 ಡಿಸೆಂಬರ್ 24 ಮತ್ತು 28ರ ಮಂಗಳವಾರ ಮತ್ತು ಶನಿವಾರ ಎರಡು ಟ್ರಿಪ್ ಸಂಚಾರ ಮಾಡಲಿದೆ. ಎರಡೂ ಎಕ್ಸ್‌ಪ್ರೆಸ್ ರೈಲುಗಳು ಎರಡು ಟ್ರಿಪ್ ಓಡಾಡುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.
ಜನರ ಪ್ರತಿಕ್ರಿಯೆ
ಹೆಚ್ಚುವರಿ ರೈಲು ಓಡಾಟದ ಬಗ್ಗೆ ಸಂಸದರು ಮಾಡಿರುವ ಟ್ವೀಟ್‌ಗೆ ಕೆಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಹೆಚ್ಚುವರಿ ರೈಲು ಓಡಿಸುವುದಕ್ಕಿಂತ ಮಂಗಳೂರು-ಬೆಂಗಳೂರು ರಸ್ತೆ ಸರಿ ಮಾಡಿಸಿ ಎಂದು ಒಬ್ಬ ಬಳಕೆದಾರ ಮನವಿ ಮಾಡಿದ್ದಾರೆ. "ಸಂಸದರೇ, ದಯವಿಟ್ಟು ಕಲ್ಲಡ್ಕ ಹತ್ತಿರ 2km ಹಾಗು ಸಕಲೇಶಪುರ ಮರೇನಹಳ್ಳಿ ನಡುವೆ 5KM ರಸ್ತೆಗೆ ಕೇವಲ 20 ಲೋಡ್ ಜಲ್ಲಿ ಹಾಗು ಟಾರ್ ಮಿಶ್ರಣ ಹಾಕಿಸಿ ಪುಣ್ಯ ಕಟ್ಟಿಕೊಳ್ಳಿ. ನಿತ್ಯ ಬಸ್ ಹಾಗೂ ಟ್ರಕ್ ಓಡಿಸುವ ಚಾಲಕರ ಕಷ್ಟ ನೋಡಲು ಅಗುತ್ತಿಲ್ಲ. ನೀವೇನೋ ವಿಮಾನದಲ್ಲಿ ಹಾರಿಕೊಂಡು ಹೋಗ್ತೀರಾ. ನಮ್ಮ ಗೋಳು ಯಾರಿಗೆ ಹೇಳೋಣ?" ಎಂದು ಮನವಿ ಮಾಡಿದ್ದಾರೆ.