ಕನ್ನಡ ಸುದ್ದಿ  /  ಕರ್ನಾಟಕ  /  Hassan Sex Scandal: ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು; ರಹಮತ್ ತರೀಕೆರೆ ಸೇರಿ ಕನ್ನಡ ಚಿಂತಕರ ಅಭಿಮತದ ಸಂಗ್ರಹ ಇದು

Hassan Sex Scandal: ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು; ರಹಮತ್ ತರೀಕೆರೆ ಸೇರಿ ಕನ್ನಡ ಚಿಂತಕರ ಅಭಿಮತದ ಸಂಗ್ರಹ ಇದು

ಹಾಸನದ ಮಹಿಳೆಯರ ಪರವಾಗಿ ಕರ್ನಾಟಕದ ಹಲವು ಚಿಂತಕರು ದನಿ ಎತ್ತಿದ್ದಾರೆ. ಈ ಪೈಕಿ ಅರುಣ್ ಜೋಳದ ಕೂಡ್ಲಿಗಿ, ರಹಮತ್ ತರೀಕೆರೆ ಮತ್ತು ಸುಧಾ ಅಡುಕುಳ ಅವರ ಫೇಸ್‌ಬುಕ್‌ ಬರಹವನ್ನು ಇಲ್ಲಿ ನೀಡಲಾಗಿದೆ.

ರಹಮತ್‌ ತರಿಕೆರೆ, ಅರುಣ್‌ ಜೋಳದ ಕೂಡ್ಲಿಗಿ, ಸುಧಾ ಅಡುಕುಳ
ರಹಮತ್‌ ತರಿಕೆರೆ, ಅರುಣ್‌ ಜೋಳದ ಕೂಡ್ಲಿಗಿ, ಸುಧಾ ಅಡುಕುಳ

ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದೇಶಾದ್ಯಂತ ಸದ್ದು ಮಾಡುತ್ತಿದೆ. ಅಮಾನುಷವಾಗಿ ನಡೆದುಕೊಂಡಿರುವ ಪ್ರಜ್ವಲ್‌ ರೇವಣ್ಣ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು. ಕೂಡಲೇ ಅವರನ್ನು ಬಂಧಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ. ಹಲವಾರು ಸಂಘಟನೆಗಳು ಹೋರಾಟ ಕೂಡ ಮಾಡಿವೆ. ಇದರ ನಡುವೆಯೇ ಕರ್ನಾಟಕದ ಹಲವಾರು ಹಿರಿಯ ಸಾಹಿತಿಗಳು, ಲೇಖಕರು, ಚಿಂತಕರು ಕೂಡ ಇಂತಹ ಘಟನೆ ನಿಜಕ್ಕೂ ತಲೆ ತಗ್ಗಿಸುವಂಥದ್ದು. ತಪ್ಪು ಮಾಡಿರುವವರ ವಿರುದ್ದ ಶಿಕ್ಷೆಯಾಗಲಿ. ಮಹಿಳೆಯರಿಗೆ ನ್ಯಾಯ ಸಿಗುವಂತಾಗಲಿ ಎನ್ನುವ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹೀಗಿವೆ. ಅವರ ಫೇಸ್‌ಬುಕ್ ಪೋಸ್ಟ್‌ಗಳನ್ನು ಇಲ್ಲಿ ಸಂಗ್ರಹಿಸಿಕೊಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆತ್ಮಾಲೋಕನದ ಸಮಯ:ಡಾ. ರಹಮತ್‌ ತರಿಕೆರೆ, ಚಿಂತಕ

ಹಾಸನದ ಎನ್ ಡಿಎ ಅಭ್ಯರ್ಥಿಯ ಅಮಾನುಷ ಅತ್ಯಾಚಾರಗಳಿಗೆ ತಕ್ಕ ಶಿಕ್ಷೆಯಾಗಲಿ. ಸಂತ್ರಸ್ತ ಮಹಿಳೆಯರ ಭಾವನೆಗಳ ಜತೆ ನಾವೆಲ್ಲ ನಿಲ್ಲಬೇಕು.

ಆದರೆ, ಇಂತಹ ಪ್ರಕರಣದ ಇದರ ಹಿಂದೆ ಕೇವಲ‌‌ ವ್ಯಕ್ತಿಯೊಬ್ಬನ ವೈಯಕ್ತಿಕ ಕಾಮುಕ ವಿಕೃತಿಗಳು ಮಾತ್ರ ಇರುತ್ತವೆಯೇ? ರಾಜಕೀಯ ಕುಟುಂಬದಿಂದ ಬಂದ ಪಾಳೆಗಾರತನ, ಜಾತಿಯ ಅಹಮಿಕೆ, ಕಣ್ಮುಂದೆ ಗುಡ್ಡೆಬಿದ್ದಿರುವ ಅಪಾರ ಸಂಪತ್ತು ಮತ್ತು ರಾಜಕೀಯ ಅಧಿಕಾರಗಳಿಂದ ದೊರಕುವ ಧಾರ್ಷ್ಟ್ಯಗಳೂ ಸೇರಿರುತ್ತವೆ. ಇದು ಮನುಷ್ಯರನ್ನು ಸೈತಾನರಾಗಿಸುವ ಪರಿಸರ. ಇಂತಹ ಪರಿಸರವನ್ನು ನಾನಾ ನೆಪಗಳಿಂದ ಸಹಿಸಿಕೊಂಡು ಪೋಷಿಸಿಕೊಂಡು ಬಂದ ನಾಗರಿಕರಾದ ನಾವು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕಠಿಣ ಶಿಕ್ಷೆಯಾಗಲಿ: ಡಾ. ಅರುಣ್‌ ಜೋಳದ ಕೂಡ್ಲಿಗಿ

ಸಮಾಜದ ಮೇಲ್ಜಾತಿ/ಮೇಲ್ವರ್ಗಗಳ ಪುರುಷ ಪ್ರಧಾನ ಸಮಾಜದಲ್ಲಿ ಕೆಳಜಾತಿ‌‌ ಅಥವಾ ಮುಸ್ಲಿಂನಂತಹ ಧರ್ಮದ ಹೆಣ್ಣುಗಳ‌ ಮೇಲೆ ಅತ್ಯಾಚಾರ ಶೋಷಣೆಗಳಾದರೆ ಅದೊಂದು ತೀರಾ ಸಾಮಾನ್ಯ ಸಂಗತಿ. ಇದೇ ಗಂಡುಗಳು ಮೇಲ್ಜಾತಿ ಹೆಣ್ಣುಗಳ ಮೇಲೆ ಶೋಷಣೆ ಮಾಡಿದರೆ ಅದೊಂದು ಬಹುದೊಡ್ಡ ಅಪರಾಧ. ಮೇಲ್ಜಾತಿ ಗಂಡುಗಳು ಕೆಳಜಾತಿ ಅಲ್ಪಸಂಖ್ಯಾತ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರೆ ಅದು ಪೌರುಷದ ವ್ಯಾಖ್ಯಾನ ಪಡೆಯುತ್ತದೆ. ಕೆಳಜಾತಿ/ಮುಸ್ಲೀಂ ಗಂಡಸರ ವಯಕ್ತಿಕ ನೆಲೆಯ ಅಪರಾಧವನ್ನು ಇಡಿಇಡಿಯಾದ ಸಮುದಾಯಕ್ಕೆ ಆರೋಪವನ್ನು ವಿಸ್ತರಿಸಲಾಗುತ್ತದೆ. ಇದು ಯಾಕೆ ಮೇಲ್ಜಾತಿ‌ ಗಂಡಸು ಮಾಡಿದಾಗ ಮಾತ್ರ ಅಪರಾಧ ಅವರೊಬ್ಬರದೇ 'ವಯಕ್ತಿಕ' ಆಗುತ್ತದೆ?

ಇಂದಿನ ದಿ ಹಿಂದೂ ಪತ್ರಿಕೆಯ ವರದಿ ಪ್ರಕಾರ ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳು ಎಸ್‌ಐಟಿ ತನಿಖೆಗೆ ಆದೇಶಿಸಿರುವುದು ವರದಿಯಾಗಿದೆ. ಇಷ್ಟಾದರೂ ಮೇಲ್ಜಾತಿ ಗಂಡಸರು/ಮಹಿಳೆಯರು ಯಾಕೆ ಬಾಯಿ ಬಿಡುತ್ತಿಲ್ಲ? ಇದೇ ಪ್ಲೇಸಲ್ಲಿ ಒಬ್ಬ ದಲಿತ ಅಥವಾ ಮುಸ್ಲಿಂ ಸಂಸದ ಇದ್ದಿದ್ದರೆ ಈ ಪ್ರಕರಣ ಇಷ್ಟೊತ್ತಿಗೆ ಪಡೆಯುತ್ತಿದ್ದ ಹೈಪ್ ಊಹೆಗೂ ನಿಲುಕದ್ದು. ಸಾವಿರಾರು ಮಹಿಳೆಯರ ಬದುಕಿನ ಜತೆ ಆಟ ಆಡಿದ ಇಂತಹ ನೀಚ ಕೃತ್ಯದ ಬಗ್ಗೆ, ಈ ನೀಚನ ಬಗ್ಗೆ ಪ್ರಜ್ಞಾವಂತರು ಮಾತನಾಡಬೇಕಿದೆ. ಕರ್ನಾಟಕದ ಮಹಿಳ ಸಂಘಟನೆಗಳು ಈ ಪ್ರಕರಣದ ವಿರುದ್ಧ ಧ್ವನಿ ಎತ್ತಬೇಕಾಗಿದೆ.

ಎದುರಿಸುವ ಧೈರ್ಯ ಬರಲಿ: ದಾದಾಪೀರ್‌ ನವಿಲೆಹಾಳ್‌,

ಹೆಣ್ಣು ಧೈರ್ಯದಿಂದ, ಭಂಡತನದಿಂದಲ್ಲ, ಎದುರಿಸುವ ವಾತಾವರಣ ಬೇಕು. ತನ್ನನ್ನು ಅನುಭೋಗದ ವಸ್ತು ಎನ್ನುವವರಿಗೆ ಹಾಗಲ್ಲ ಎಂದು ಸ್ಥಾಪಿಸುವುದು. ಲೈಂಗಿಕತೆ ಒಂದು ಸಮಸ್ಯೆಯೇ ಅಲ್ಲ ಅನ್ನುವಂತಿರುವ ಧೋರಣೆಯನ್ನು ವ್ಯಕ್ತಿ ನೆಲೆಯಿಂದಲೇ ಎದುರಿಸುವುದು. ರಾಜಕಾರಣ, ಲಾಭ, ಸಮಯಸಾಧಕತನಗಳನ್ನೆಲ್ಲ ದಾಟಿ ಇಬ್ಬರಿಗೂ ಬೇಕಿತ್ತು, ಅಲ್ಲಿಗೆ ಮುಗಿಯಿತು ಎನ್ನುವ ನೀತಿ ಅನೀತಿಗಳ ಆಚೆಗಿನ ಸಂಬಂಧಗಳಿಗೆ ಪಾವಿತ್ರ್ಯದ ಮುದ್ರೆ ಬಯಸುವುದು. ಏನೇನೆಲ್ಲಾ ನಡೆದರೂ ಸುಮ್ಮನಿರುವ ಕಂಫರ್ಟ್ ಜೋನಿನ ಜನ ಅನೀತಿಗಳ ಅನುಷ್ಠಾನದ ನಿಜ ಭಾಗಿದಾರರು.

ಹೆಣ್ಮಕ್ಳು ಬಲೆಯಿಂದ ಹೊರ ಬರಲಿ: ಸುಧಾ ಆಡುಕಳ

ದೊಡ್ಡೋರ ಮಕ್ಳು ಹೆಂಗೆಂಗೋ ಇರ್ತಾರೆ. ಬಚಾವಾಗಿ ಬರ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂಚಿನಲ್ಲಿ ಸಿಲುಕಿದ ಹೆಣ್ಮಕ್ಳು ಈ ಬಲೆಯಿಂದ ಹೊರಬಂದು ನಿರಾಳವಾಗಿರಲಿ.

IPL_Entry_Point

ವಿಭಾಗ