Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ-forest news mysore repertory rangayana new drama vriksharaja reflects deforestation and global warming effects kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ

Forest Tales: ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಜಾಗೃತಿಗೆ ಮೈಸೂರಿನ ರಂಗಾಯಣದಲ್ಲಿ ವೃಕ್ಷರಾಜನ ರಂಗರೂಪ

ಜಾಗತಿಕ ತಾಪಮಾನದ ಬದಲಾವಣೆಯ ಬಿಸಿ ಪ್ರತಿಯೊಬ್ಬರನ್ನು ತಟ್ಟುತ್ತಿದೆ. ಅನಾಹುತಗಳನ್ನು ನಾವು ತಪ್ಪಿಸುವುದು ಹೇಗೆ, ಮೈಸೂರಿನ ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರ ಇದೇ ನಿಟ್ಟಿನಲ್ಲಿ ರೂಪಿಸಿರುವ ವೃಕ್ಷರಾಜ ನಾಟಕ ಇದಕ್ಕೆ ಉತ್ತರ ನೀಡುತ್ತದೆ.

 ಮೈಸೂರು ರಂಗಾಯಣದಲ್ಲಿ ಜಾಗತಿಕ ತಾಪಮಾನದ ಸಂದೇಶ ಸಾರುವ ವೃಕ್ಷರಾಜ ನಾಟಕ
ಮೈಸೂರು ರಂಗಾಯಣದಲ್ಲಿ ಜಾಗತಿಕ ತಾಪಮಾನದ ಸಂದೇಶ ಸಾರುವ ವೃಕ್ಷರಾಜ ನಾಟಕ

ದಟ್ಟ ಕಾಡಿನ ನಡುವೆ ಬೃಹದಾಕಾರವಾಗಿ ಬೆಳೆದ ಮರವೊಂದು ನೂರಾರು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುವುದಲ್ಲದೆ ಪ್ರಕೃತಿಯಲ್ಲಿ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುವಂತೆ ಮತ್ತು ಜೀವಿಗಳಿಗೆಲ್ಲಾ ಅತ್ಯಗತ್ಯ ಆಮ್ಲಜನಕ ನೀಡಿ ಪ್ರಕೃತಿಯಲ್ಲಿ ಸಮತೋಲನ ಕಾಪಾಡುತ್ತ ವೃಕ್ಷರಾಜನೆಂದು ಹಿರಿಮೆಗೆ ಭಾಜನವಾಗಿರುತ್ತದೆ. ರಾಜನೊಬ್ಬ ದುರಾಸೆಯ ಹಿಂದೆ ಬಿದ್ದು ಬೃಹದಾಕಾರವಾದ ದೋಣಿಯೊಂದನ್ನು ತಯಾರಿಸಲು ಮುಂದಾಗುತ್ತಾನೆ. ಊರಿನ ವೃಕ್ಷರಾಜನೇ ಸುಂದರವಾದ ದೋಣಿ ತಯಾರಿಸಲು ಸೂಕ್ತವಾದ ಮರ ಎಂದು ತೀರ್ಮಾನಿಸುತ್ತಾನೆ. ವೃಕ್ಷರಾಜನ ಸ್ನೇಹಿತರಾದ ಪ್ರಾಣಿ, ಪಕ್ಷಿಗಳು ರಾಜನ ಮರ ಕಡಿಯಲು ಬರುವ ರಾಜನ ಸಹಚರರನ್ನು ವಿರೋಧಿಸುತ್ತವೆ. ಮರದ ಕಡಿತಲೆಯಾಗುತ್ತದೆ. ದೋಣಿ ರೂಪುಗೊಳ್ಳುತ್ತದೆ. ಅಲ್ಲಿಂದಲೇ ಕಷ್ಟಗಳ ಸರಮಾಲೆ ಶುರುವಾಗುತ್ತದೆ. ಮರ ಕಡಿದ ಪರಿಣಾಮವನ್ನು ನಾನಾ ರೂಪದಲ್ಲಿ ಎದುರಿಸ ಬೇಕಾಗುತ್ತದೆ. ಇದು ವೃಕ್ಷರಾಜನ ರೂಪಕ.

///ಕಾಡು ಕಡಿತದ ಸುತ್ತಾ//

ಜಾಗತಿಕ ತಾಪಮಾನದ ಬದಲಾವಣೆಯಿಂದ ಆಗುತ್ತಿರುವ ಪರಿಣಾಮಗಳನ್ನು ನಾವೀಗ ಎದುರಿಸಲು ಶುರುಮಾಡಿಯೇ ದಶಕಗಳು ಕಳೆದಿವೆ. ಅದರ ತೀವ್ರ ಪರಿಣಾಮ ಈ ವರ್ಷ ಬಹುತೇಕರಿಗೆ ಗಂಭೀರವಾಗಿಯೇ ಅರಿವಿಗೆ ಬಂದಿದೆ. ಕುಡಿಯುವ ನೀರಿಗೆ ಕೊಡ ಹಿಡಿದು ಸುತ್ತುವಾಗ, ನಲ್ಲಿಯಲ್ಲಿ ನೀರು ತೊಟ್ಟಿಕ್ಕದ ಸನ್ನಿವೇಶ ಕಂಡಾಗ, ಕೆರೆ ಕಟ್ಟೆ, ನದಿ, ಜಲಾಶಯಗಳು ಒಣಗಿ ನಿಂತಿರುವುದು ಗಮನಕ್ಕೆ ಬಂದಾಗ, ಪರಿಸರದ ಮಹತ್ವ ಪ್ರತಿಯೊಬ್ಬರ ಅರಿವೆಗೆ ಬಾರದೇ ಇರದು. ಕಾಡು ಉಳಿಸಿ, ಹಸಿರು ಉಳಿಸಿ, ಕಾಡಿದ್ದರೆ ಊರು, ನೀರಿದ್ದರೆ ಬದುಕು ಎನ್ನುವ ಘೋಷ ವಾಕ್ಯಗಳ ಅರ್ಥವೂ ನಮಗೆ ನಿಧಾನವಾಗಿ ತಿಳಿಯುತ್ತಿದೆ. ಮಿತಿ ಮೀರಿದ ಅರಣ್ಯ ನಾಶ, ನಗರೀಕರಣ, ಹಸಿರನ್ನು ಒಸರಿ ಹಾಕಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಫಲಾಫಲ, ಬೃಹತ್‌ ಕಟ್ಟಡ, ಹೆದ್ದಾರಿಗಳು, ದೊಡ್ಡ ದೊಡ್ಡ ಯೋಜನೆಗಳ ಜಾರಿಯಿಂದ ಆಗುತ್ತಿರುವ ಬದಲಾವಣೆಗಳು ಒಂದೆರಡು ಅಲ್ಲವೇ ಅಲ್ಲ. ಇದೆಲ್ಲರದ ಫಲವೇ ಬರ, ನೀರಿಲ್ಲದ ಸನ್ನಿವೇಶ.

///ಜಾಗೃತಿಗೆ ನಾನಾ ರೂಪ//

ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗಳು ಜಾಗತಿಕ ತಾಪಮಾನ ಏರಿಕೆಗೆ ಮುಖ್ಯ ಕಾರಣವಾಗಿವೆ. ಇದರ ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಒಂದೇ ಒಂದು ಮರ ಇದ್ದರೆ ಅದರಿಂದ ಆಗುವ ಉಪಯೋಗವೇನು, ಮರ ನಮಗೆ ಬರೀ ನೆರಳನ್ನು ಮಾತ್ರವಲ್ಲದೇ ಗಾಳಿ, ನೀರನ್ನು ನೀಡಬಲ್ಲ ನಿಜವಾದ ಮಾತೆ. ಮರದ ಮಹತ್ವವನ್ನು ತಿಳಿಸುವ ಪ್ರಯತ್ನಗಳು ನಾನಾ ರೂಪದಲ್ಲಿ ನಮ್ಮ ನಡುವೆ ಆಗುತ್ತಲೇ ಇವೆ. ಅದರಲ್ಲೂ ಯುವ ಪೀಳಿಗೆಗೆ ಇದರ ಮಹತ್ವ ತಿಳಿದಷ್ಟೂ ಅದರ ಪರಿಣಾಮವೇ ಬೇರೆ ಎನ್ನುವುದು ತಜ್ಞರ ಅಭಿಮತವೂ ಹೌದು.

///ರಂಗಾಯಣದ ರಾಮನಾಥ ಕಥೆ///

ಮೈಸೂರಿನ ರೆಪರ್ಟರಿ ರಂಗಾಯಣ ಈಗ ಒಂದು ಪೀಳಿಗೆಯನ್ನೇ ಬದಲಿಸಿ ಹೊಸ ತಲೆಮಾರು ಹುಟ್ಟುಹಾಕಿದ ಖುಷಿಯಲ್ಲಿದೆ. ಅಂದರೆ ಬಿ.ವಿ.ಕಾರಂತರು 1989 ರಲ್ಲಿ ಹುಟ್ಟು ಹಾಕಿದ ವಿಶಿಷ್ಟ ಸಂಸ್ಥೆ ರಂಗಾಯಣದ 34 ಯುವ ಕಲಾವಿದರು ಹೆಮ್ಮರವಾಗಿ ಬೆಳೆದವರು. ಬಹುತೇಕರು ನಿವೃತ್ತರಾಗಿ, ನಾಲ್ಕೈದು ಕಲಾವಿದರು ಕಾಲವಾಗಿ ಹೋಗಿದ್ದಾರೆ. ಇನ್ನು ನಾಲ್ಕೈದು ಮಂದಿ ಮಾತ್ರ ಕೊಂಡಿಯಾಗಿ ಉಳಿದುಕೊಂಡಿದ್ದಾರೆ. ಈಗ ಭಾರತೀಯ ರಂಗಶಿಕ್ಷಣ ಕೇಂದ್ರದ ಯುವ ಕಲಾವಿದರು ರಂಗಾಯಣದಲ್ಲಿ ಬೆಳೆಯುತ್ತಿದ್ದಾರೆ. ಹಿರಿಯರಲ್ಲಿ ಒಬ್ಬರಾದ ಎಸ್.ರಾಮನಾಥ ಅವರು ರಚಿಸಿರುವ ನಾಟಕ ಇಂತ ಹಳೆ ಬೇರೆ ಹೊಸ ಚಿಗುರಿನ ಭಾಗವಾಗಿ ರೂಪುಗೊಂಡಿತ್ತು.

ಭಿನ್ನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ರಂಗಾಯಣ ಈ ಬಾರಿ ಜನ ಅನುಭವಿಸುತ್ತಿರುವ ಸಂಕೋಲೆಗಳ ಕಥಾನಕವೇ ಆಗಿತ್ತು. ಅದು ಜಾಗತಿಕ ತಾಪಮಾನದ ಪರಿಣಾಮಗಳನ್ನು ಮನಮುಟ್ಟುವ ಹಾಗೆ ತಿಳಿಸುವ ಮಣಿಪುರಿ ಜಾನಪದ ಕಥೆಯಾಧಾರಿತ ನಾಟಕ. ಅರಣ್ಯದ ಮಹತ್ವವನ್ನು ಮನ ಮುಟ್ಟುವ ಹಾಗೆ ತಿಳಿಸುವ ಪ್ರಯತ್ನದ ನಾಟಕ ವೃಕ್ಷ ರಾಜ. ಇದು ಧರೆಯ ದೀಪದ ಕಥೆಯೂ ಹೌದು.

///ತೋಂಬಾ ನಿರ್ದೇಶನ//

ರಂಗಭೂಮಿಯಲ್ಲೇ ನಾಲ್ಕು ದಶಕ ಕೆಲಸ ಮಾಡಿರುವ ರಾಮನಾಥ ಅವರು ಮಣಿಪುರಿಯ ಜನಪದ ಕಥೆಯೊಂದನ್ನು ಓದಿದ್ದರು. ಅದು ಮರದ ಸಂಕಟ ಸಾರುವ ಕಥೆ. ಮರ ಶತಮಾನಗಳ ಕಾಲ ಜನರಿಗೆ ಎಲ್ಲವನ್ನೂ ನೀಡಿದರೂ ಅದನ್ನು ದುರಾಸೆಗೆ ಕತ್ತರಿಸಿ ಹಾಕಿ ನಂತರ ಅದರ ಪರಿಣಾಮಗಳನ್ನು ಅನುಭವಿಸುವ ಕಥಾನಕ. ಮಹಾರಾಜನೊಬ್ಬನ ಅನಾಚಾರದ ಫಲವಾಗಿ ಮರ ಧರೆಗುರುಳುವ ಸಾರ ಅದರಲ್ಲಿತ್ತು.

ಭಾರತದ ಪ್ರಮುಖ ರಂಗಭೂಮಿ ಕಲಾವಿದರಲ್ಲಿ ಒಬ್ಬರಾದ ಮಣಿಪುರದ ಹೈಸ್ನಾಮ್‌ ತೋಂಬಾ ಅವರೊಂದಿಗೆ ರಾಮನಾಥರಿಗೆ ಒಡನಾಟವಿತ್ತು. ಅರಣ್ಯ, ಮರ, ಪರಿಸರ, ಜಾಗತಿಕ ತಾಪಮಾನದ ಅರಿವು ಮೂಡಿಸುವ ನಾಟಕವನ್ನು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಮಾಡಬಹುದು ಎಂದಾಗ ತೋಂಬಾ ನಿರ್ದೇಶಿಸಲು ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಕಥೆಯೇ ಚೆನ್ನಾಗಿದೆ. ಇದನ್ನು ರಂಗರೂಪಕ್ಕೆ ತಂದರೆ ಹೆಚ್ಚು ಪ್ರಸ್ತುತವೂ ಆಗಲಿದೆ ಎಂದು ಪ್ರತಿಕ್ರಿಯಿಸಿದ್ದರು.

ಇಂತಹ ಕಥೆಯನ್ನು ಕೇಳಿ ನಾಟಕದ ರಂಗಪಠ್ಯ ತಯಾರಿಸಿ ರಂಗವಿನ್ಯಾಸ, ಸಂಗೀತದೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ತೋಂಬಾ ಹೊತ್ತರು. ನಾಟಕದಲ್ಲಿ ವಸ್ತ್ರ ವಿನ್ಯಾಸದ ಹೊಣೆ ಹೊತ್ತವರು ಕಲಾವಿದೆ ರಜನಿ ಗರೂಡ. ಬೆಳಕಿನ ಹೊಣೆ ಮಹೇಶ್‌ ಕಲ್ಲತ್ತಿಯವರದ್ದಾದರೆ, ಸಂಗೀತ ನಿರ್ವಹಣೆಯಲ್ಲಿ ಆರ್‌.ಸಿ.ಧನಂಜಯ, ಎಸ್.‌ಸುಬ್ರಹ್ಮಣ್ಯ, ಎಸ್‌.ಅಂಜುಸಿಂಗ್‌ ಸಾಥ್‌ ನೀಡಿದ್ದಾರೆ. ನಾಟಕ ತಯಾರಿಯೂ ಶುರುವಾಗಿ ಪ್ರದರ್ಶನಕ್ಕೂ ಅಣಿಯಾಯಿತು. ಈಗಾಗಲೇ ರಂಗಾಯಣದಲ್ಲಿಯೇ ಚಿಣ್ಣರ ಮೇಳ ಮಾತ್ರವಲ್ಲದೇ ಮೈಸೂರಿನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಮಕ್ಕಳಿಗೂ ವೃಕ್ಷರಾಜ ನಾಟಕ ಪ್ರದರ್ಶನಗೊಂಡಿದೆ. ವಾರಾಂತ್ಯದಲ್ಲೂ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆ ದೊರೆತಿದೆ .

///ವೃಕ್ಷರಾಜನ ನಲಿವು ನೋವು//

ಅದೋ ವಿಶಾಲವಾದ ಮರದೊಂದರ ಕಣ್ಣೀರ ಕಥೆ. ಶತಮಾನಗಳ ಕಾಲ ವಿಶಾಲವಾಗಿ ಬೆಳೆದು ಸಹಸ್ರಾರು ಮಂದಿಗೆ ಬದುಕು ಕೊಟ್ಟ ಹೆಮ್ಮೆರವದು. ಆ ಮರವನ್ನು ಬಳಸದವರೇ ಇಲ್ಲ. ಮನುಷ್ಯರಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳಿಗೂ ಆ ವೃಕ್ಷ ಮಹಾತಾಯಿ. ಮರದ ಕೆಳಗೆ ಅದೆಷ್ಟು ಸಂಭ್ರಮದ ಕ್ಷಣಗಳು, ತಂಗಾಳಿಯ ನಡುವೆ ನೆಮ್ಮದಿಯ ಮಾತುಕತೆಗಳು, ಊರಿನ ಸಮೃದ್ದತೆಯ ಸಂಕೇತವೇ ಆಗಿತ್ತು ಆ ಮರ. ಜನರಿಗೆ ಯಾವುದರ ಕೊರತೆಯೂ ಇಲ್ಲದಂತೆ ಮರವೇ ಸಲಹಿದ ದಿನಗಳವು. ಎಂತಹ ಪ್ರವಾಹ, ಬಿರುಗಾಳಿ ಬಂದರೂ ತಡೆದ ವೃಕ್ಷ ತಾಯಿ ಕಂಡರೆ ಊರವರಿಗೂ ಗೌರವ. ಅಭಿಮಾನ.

ಆದರೆ ಊರಿನ ರಾಜನೇ ವೃಕ್ಷ ಮಾತೆಗೆ ಅಡ್ಡಿಯಾಗುತ್ತಾನೆ, ಮರವನ್ನು ಕಡಿದು ದೋಣಿ ಮಾಡಿಸಿಟ್ಟುಕೊಳ್ಳುವ ಮೂಲಕ ಶತಮಾನಗಳ ನಂಟಿಗೆ ಕೊಡಲಿ ಹಾಕುತ್ತಾನೆ. ಮುಂದೆ ಊರಲ್ಲಿ ಪ್ರವಾಹವಾದರೆ ನಮ್ಮ ಬದುಕಿಗೆ ದೋಣಿ ಬೇಕಾಗುತ್ತದೆ. ಪ್ರವಾಹ ಬಂದಾಗ ನಾನು ಎಲ್ಲಿ ಹೋಗಲಿ ಎಂದು ಮಹಾರಾಜ ದುರಾಸೆಯ ಸಂಕೇತವಾಗಿ ಮರ ಕಡಿಸಿದಾಗ ಕಾಣುತ್ತಾನೆ. ಇದು ಒಬ್ಬ ಮಹಾರಾಜನ ಕಥೆ ಅಲ್ಲವೇ ಅಲ್ಲ. ಜಗತ್ತಿನೆಲ್ಲೆಡೆ ನಡೆದಿರುವ ನಮ್ಮ ಪ್ರಗತಿಗೆ ಮರ ಕಡಿಸಿ, ಹಸಿರು ಪ್ರದೇಶ ಬರಡು ಮಾಡುವುದನ್ನು ಕಾಣುತ್ತಿದ್ದೇವೆ. ಇದಲ್ಲೆದರ ಸಂಕೇತವಾಗಿಯೇ ಮರ ಹಾಗೂ ಮಹಾರಾಜ ಇಡೀ ನಾಟಕದಲ್ಲಿ ಕಾಣುತ್ತಾರೆ. ಮರ ಕಡಿಯುವುದು. ಊರಿನ ಕೆಲವರು ವಿರೋಧಿಸುವುದು, ಅದಕ್ಕೆ ಮಹಾರಾಜ ಒಪ್ಪಿಗೆ ನೀಡದೇ ತನ್ನ ಆದೇಶ ಜಾರಿ ಮಾಡುವುದು ನಡೆಯುತ್ತದೆ.

ಬರದ ವಾತಾವರಣ, ನೀರು, ಗಾಳಿಗೆ ಹಾಹಾಕಾರ ಉಂಟಾಗುವ ಸನ್ನಿವೇಶವೂ ಎದುರಾಗುತ್ತದೆ. ಪ್ರಾಣಿ, ಪಕ್ಷಿಗಳ ಆಕ್ರಂದನವೂ ಮನ ಮುಟ್ಟುತ್ತದೆ. ಕೊನೆಗೆ ರಾಜನ ಹಠಮಾರಿತನವನ್ನು ಖಂಡಿಸುವವರೆಗೂ ಹೋಗುತ್ತದೆ. ಮರ ಕಡಿಯುವುದು ತಪ್ಪು ಎನ್ನುವ ಸಂದೇಶವನ್ನು ನಾಟಕ ಸಾರುತ್ತದೆ. ಮರ ಕಡಿಸಿದ ವೃಕ್ಷರಾಜನ ಆತ್ಮ ನೋವು ಸಂಕಟದಿಂದ ತತ್ತರಿಸುತ್ತದೆ. ಆ ನೋವಿನ ಪ್ರತಿಫಲನವೇ ಇಂದು ಮನುಷ್ಯ ಎದುರಿಸುತ್ತಿರುವ ಬಿಸಿಲು, ಬರ, ಕುಡಿಯಲೂ ನೀರಿಲ್ಲದ ಬದುಕು. ಈ ದಿನ ಜಗತ್ತು ಎದುರಿಸುತ್ತಿರುವ ಪ್ರಾಕೃತಿಕ ಅತಿವೃಷ್ಠಿ ಹಾಗೂ ಅನಾವೃಷ್ಠಿಗಳಿಗೆ ಮನುಷ್ಯನ ದುರಾಸೆಯೇ ಕಾರಣ ಮತ್ತು ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಹೊಣೆಗೇಡಿತನದಿಂದ ಬದುಕುತ್ತಿರುವುದೇ ಮಾನವನ ದುರಂತ ಎನ್ನುವುದನ್ನು ನಾಟಕ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಸುಮಾರು 75 ನಿಮಿಷಗಳ ಇಡೀ ನಾಟಕ ವೃಕ್ಷ ರಾಜ ಭಾವನಾತ್ಮಕ ಸಂಬಂಧದೊಂದಿಗೆ ಬೆಸೆದು ಗಮನವಂತೂ ಸೆಳೆಯುತ್ತದೆ. ಕಲಾವಿದರ ಅಭಿನಯ ಮನ ತಟ್ಟುತ್ತದೆ.

-ಕುಂದೂರು ಉಮೇಶಭಟ್ಟ, ಮೈಸೂರು

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point