ಕನ್ನಡ ಸುದ್ದಿ  /  ಕರ್ನಾಟಕ  /  ಪರಿಸರ ಮಾರಕ ಪಟಾಕಿ, ಪಿಓಪಿ ಮೂರ್ತಿಗಳಿಗೆ ಕಡಿವಾಣ, ಮಾರಾಟಗಾರರಿಗೆ 7 ತಿಂಗಳ ಮೊದಲೇ ಕರ್ನಾಟಕ ನೋಟಿಸ್

ಪರಿಸರ ಮಾರಕ ಪಟಾಕಿ, ಪಿಓಪಿ ಮೂರ್ತಿಗಳಿಗೆ ಕಡಿವಾಣ, ಮಾರಾಟಗಾರರಿಗೆ 7 ತಿಂಗಳ ಮೊದಲೇ ಕರ್ನಾಟಕ ನೋಟಿಸ್

ಪರಿಸರದ ವಿಚಾರದಲ್ಲಿ ಕೊನೆ ಕ್ಷಣದಲ್ಲಿ ನೊಟೀಸ್‌ ನೀಡುವುದು ಕರ್ನಾಟಕದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಪಿಒಪಿ ಗಣೇಶ ಮೂರ್ತಿ ತಯಾರಿಕರು ಹಾಗೂ ಪರಿಸರ ಮಾಲಿನ್ಯ ಮಾಡುವ ಪಟಾಕಿ ತಯಾರಿಸುವವರಿಗೆ ನೊಟೀಸ್‌ ನೀಡುವ ಕೆಲಸ ಈಗಲೇ ಶುರುವಾಗಿದೆ.

ಕರ್ನಾಟಕದಲ್ಲಿ ಪಿಇಪಿ ಗಣೇಶ, ಪರಿಸರ ಮಾಲಿನ್ಯ ಮಾಡುವ ಪಟಾಕಿ ತಯಾರಿ ಮಾಲೀಕರಿಗೆ ನೊಟೀಸ್‌ ನೀಡುವಂತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪಿಇಪಿ ಗಣೇಶ, ಪರಿಸರ ಮಾಲಿನ್ಯ ಮಾಡುವ ಪಟಾಕಿ ತಯಾರಿ ಮಾಲೀಕರಿಗೆ ನೊಟೀಸ್‌ ನೀಡುವಂತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಪಟಾಕಿ ದುರಂತಗಳು ನಡೆಯುತ್ತಲೇ ಇವೆ. ಕೆಲ ತಿಂಗಳ ಅಂತರದಲ್ಲೇ ನಾಲ್ಕೈದು ಪ್ರಕರಣ ವರದಿಯಾಗಿವೆ. ಕಳೆದ ವರ್ಷ ಆನೇಕಲ್‌ ನಲ್ಲಿ ನಡೆದ ಪಟಾಕಿ ದುರಂತದಲ್ಲಿ ಹಲವರು ಮೃತಪಟ್ಟು ಭಾರೀ ಅನಾಹುತವೇ ಸಂಭವಿಸಿತ್ತು. ಕೋಟ್ಯಂತರ ರೂ. ನಷ್ಟ ಕೂಡ ಆಗಿತ್ತು. ಆಗ ಕರ್ನಾಟಕ ಸರ್ಕಾರ ಹಲವರ ವಿರುದ್ದ ಕ್ರಮ ಕೈಗೊಂಡಿತ್ತು. ಈ ಬಾರಿ ದೀಪಾವಳಿಗೆ ಇನ್ನೂ ಸಾಕಷ್ಟು ಸಮಯವಿದೆ. ಅಲ್ಲದೇ ಗಣೇಶನ ಹಬ್ಬಕ್ಕೂ ಕಾಲಾಕಾಶವಿದೆ. ಆದರೆ ಕರ್ನಾಟಕ ಪರಿಸರ ಇಲಾಖೆ ಮಾತ್ರ ಈಗಿನಿಂದಲೇ ಪಟಾಕಿ ಮಾರಾಟ ಮಾಡುವವರು, ಉತ್ಪಾದಕರು, ಗಣೇಶ ಮೂರ್ತಿ ತಯಾರಿಸುವವರನ್ನು ಎಚ್ಚರಿಸುವ ಕೆಲಸ ಶುರು ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಬಾರಿ 7 ತಿಂಗಳ ಮೊದಲೇ ಕಾರ್ಯೋನ್ಮುಖರಾಗಿದ್ದು, ಪಿಓಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದಾರೆ. ಈಗಾಗಲೇ ಪರಿಸರ ಇಲಾಖೆ ಅಧಿಕಾರಿಗಳು ಕರ್ನಾಟಕದಲ್ಲಿರುವ ನಾನಾ ಭಾಗದ ಪಟಾಕಿ ಮಾರಾಟಗಾರರು, ಗಣೇಶ ತಯಾರಕರನ್ನು ಪಟ್ಟಿ ಮಾಡಿ ಅವರಿಗೆ ನೊಟೀಸ್‌ ನೀಡುವ ಪ್ರಕ್ರಿಯೆ ಆರಂಭಿಸುತ್ತಿದ್ದಾರೆ.

ಸಚಿವರ ಸೂಚನೆ ಏನು

ಈ ಸಂಬಂಧ ಪರಿಸರ ಇಲಾಖೆಯ ಪ್ರಧಾನಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಪ್ರಕೃತಿ ಪರಿಸರ ಉಳಿದರಷ್ಟೇ ನಾವು ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಜಲ ಮೂಲಗಳನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.) ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಈ ಬಗ್ಗೆ ತಯಾರಕರಿಗೆ ಹಬ್ಬಕ್ಕೆ 7 ತಿಂಗಳು ಮುಂಚಿತವಾಗಿಯೇ ಸೂಕ್ತ ತಿಳಿವಳಿಕೆಯೊಂದಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.

ಪ್ರತಿಬಾರಿ ನೀರಿನಲ್ಲಿ ವಿಸರ್ಜನೆ ಮಾಡುವ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಮೂರ್ತಿಗಳ ತಯಾರಕರು ತಮಗೆ ಮೊದಲೇ ನೋಟಿಸ್ ನೀಡಿದ್ದರೆ, ತಾವು ತಯಾರಿಕೆಯನ್ನೇ ಮಾಡುತ್ತಿರಲಿಲ್ಲ. ಈಗ ತಯಾರಿಸುವ ಮೂರ್ತಿ ಏನು ಮಾಡುವುದು, ತಮಗೆ ನಷ್ಟವಾಗುತ್ತದೆ ಎಂದು ಸಬೂಬು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ 7 ತಿಂಗಳ ಮೊದಲೇ ಎಲ್ಲ ಪಿಓಪಿ ತಯಾರಕರಿಗೆ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಮಾಡುವಂತೆ ಮತ್ತು ಅದಕ್ಕೆ ರಾಸಾಯನಿಕ ಬಣ್ಣ ಲೇಪನ ಮಾಡದಂತೆ ಸೂಚಿಸಿ ನೋಟಿಸ್ ನೀಡುವಂತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಹಸಿರು ಪಟಾಕಿಗೆ ಮಾತ್ರ ಅವಕಾಶ

ಅದೇ ರೀತಿ ಹೆಚ್ಚು ವಾಯು ಮಾಲಿನ್ಯಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ಸಾಂಪ್ರದಾಯಿಕ ಪಟಾಕಿಗಳು ಸಹ ಪರಿಸರಕ್ಕೆ ಮಾರಕವಾಗಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನುಸರಣೆಯ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಮಾರಾಟಗಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳಿಂದ ಪಡೆದು, ಅವರೆಲ್ಲರಿಗೂ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಮತ್ತು ಮಾರಾಟ ಮಾಡುವಂತೆ ನೋಟಿಸ್ ನೀಡಲು ಆದೇಶಿಸಿದ್ದಾರೆ.

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಬೇರೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಂತೆ ಈಗಿನಿಂದಲೇ ಕಟ್ಟೆಚ್ಚರ ವಹಿಸುವಂತೆ ಮತ್ತು ಪಟಾಕಿ ಸಗಟು ದಾಸ್ತಾನುದಾರರಿಗೆ ಮತ್ತು ಮಾರಾಟಗಾರರಿಗೆ ಸೂಕ್ತ ತಿಳಿವಳಿಕೆ ನೀಡುವಂತೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ಆಗಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಕರ್ನಾಟಕದಲ್ಲಿ ಪರಿಸರ ಮಾಲಿನ್ಯ ತಡೆಯಲು ಪರಿಸರ ಇಲಾಖೆ ಮುಂದಡಿ ಇಟ್ಟಿದೆ. ಸಚಿವರು ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಈ ಕುರಿತು ಜಾಗೃತಿ ಮೂಡಿಸಲಾಗುವುದು ಎನ್ನುವುದು ಪರಿಸರ ಇಲಾಖೆ ಹಿರಿಯ ಅಧಿಕಾರಿಗಳ ವಿವರಣೆ.

ಸೂಚನೆ ಏನು

  • ಗಣೇಶ ಮೂರ್ತಿ ತಯಾರಿಸುವವರಿಗೆ ಪರಿಸರ ಮಾಲಿನ್ಯದ ಅರಿವು ಮೂಡಿಸಿ
  • ಪಿಒಪಿ ಗಣೇಶನನ್ನು ಮಾರಾಟ ಮಾಡದಂತೆ ತಿಳಿಸಿ
  • ಈಗಾಗಲೇ ಪಿಒಪಿ ಗಣೇಶಗಳ ಸಂಗ್ರಹ ಇದ್ದರೆ ತೆರವುಗೊಳಿಸಿ
  • ಪರಿಸರ ಸ್ನೇಹಿ ಗಣೇಶನ ವಿಗ್ರಹ ಸ್ಥಾಪನೆಗೆ ಈಗಿನಿಂದಲೇ ತಯಾರಿ ನಡೆಸಿ
  • ಆದಷ್ಟು ಮಣ್ಣಿನಿಂದ ತಯಾರಿಸಿದ ಗಣೇಶನಿಗೆ ಒತ್ತು ಕೊಡಿ
  • ದೀಪಾವಳಿಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು
  • ಜನರೂ ಹಸಿರು ಪಟಾಕಿ ಕೇಳಿ ಪಡೆಯುವಂತೆ ಜಾಗೃತಿ ಮೂಡಿಸಬೇಕು
  • ಮಾರಾಟ ಮಾಡುವವರಿಗೆ ಈಗಲೇ ನೊಟೀಸ್‌ ನೀಡಿರಿ

IPL_Entry_Point