Lok Sabha Elections2024: ಬದಲಾದ ಮೈತ್ರಿ, ಕಾಂಗ್ರೆಸ್‌ಗೆ ಮರಳಿದ ಮುದ್ದಹನುಮೇಗೌಡ; ತುಮಕೂರು ಟಿಕೆಟ್ ಸಾಧ್ಯತೆ
Tumkur Politics ತುಮಕೂರು ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಕಳೆದ ಲೋಕಸಭೆ ಚುನಾವಣೆ ವೇಳೆ ಮೈತ್ರಿ ಕಾರಣಕ್ಕೆ ಕಾಂಗ್ರೆಸ್ ತೊರೆದಿದ್ದರು. ಈಗ ಮೈತ್ರಿ ಮತ್ತೆ ಬದಲಾಗಿದೆ. ಕಾಂಗ್ರೆಸ್‌ಗೆ ಮರಳಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳ ಇರುವಾಗಲೇ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹಲವು ನಾಯಕರು ಸೇರುತ್ತಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಯಾಗಿರುವ ಮಾಜಿ ಸಂಸದರೂ ಆಗಿರುವ ಎಸ್.ಪಿ. ಮುದ್ದ ಹನುಮೇಗೌಡ ಅವರು ಗುರುವಾರ ಕಾಂಗ್ರೆಸ್ ಗೆ ಮರಳಿದ್ಧಾರೆ.
ಮೈತ್ರಿ ಬದಲು
ಈ ಹಿಂದೆ ಸಂಸದರಾಗಿದ್ದ ಮುದ್ದಹನುಮೇಗೌಡ ಅವರು ಕಳೆದ ಬಾರಿ ಜಾ.ದಳದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದ ಪಕ್ಷ ಬಿಟ್ಟಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಲ್ಲಿ ಸಮ್ಮಿಶ್ರ ಅಭ್ಯರ್ಥಿಯಾಗಿ ಸೋತಿದ್ದರು. ಈಗ ಮುದ್ದಹನುಮೇಗೌಡರು ಬಿಜೆಪಿಯಲ್ಲಿದ್ದರು. ಮೈತ್ರಿ ಬದಲಾಗಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿರುವುದರಿಂದ ಅವರು ಕಾಂಗ್ರೆಸ್‌ಗೆ ಮರಳಿದ್ದಾರೆ. ಮುದ್ದಹನುಮೇಗೌಡರು ಒಮ್ಮೆ ಕುಣಿಗಲ್ ಶಾಸಕರೂ ಆಗಿದ್ದರು. ತುಮಕೂರಿನ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರಿಬ್ಬರೂ ಮುದ್ದ ಹನುಮೇಗೌಡ ಅವರ ಪರವಾಗಿ ಟಿಕೆಟ್‌ಗೆ ದನಿ ಎತ್ತಿರುವುದರಿಂದ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ಚರ್ಚೆಗಳು ನಡೆದಿವೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುದ್ದ ಹನುಮೇಗೌಡ ಅವರನ್ನು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿತರರು ಬರ ಮಾಡಿಕೊಂಡರು.
ಕ್ಷಮೆ ಕೇಳಿದ್ದಾರೆ
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮರೆತು ಗೆಲ್ಲಲೇಬೇಕು ಎಂಬ ಛಲ ದಿಂದ ಕೆಲಸ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಮುದ್ದಹನುಮೇಗೌಡರು ಮೂಲತಃ ಕಾಂಗ್ರೆಸ್ ನವರು. ಕಳೆದ ವಿಧಾನಸಭೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರ ತಪ್ಪಿನ ಅರಿವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಯಾಗಿದ್ದಾರೆ. ತಪ್ಪು ಮಾಡಿದ್ದೇನೆ, ಕ್ಷಮೆ ಇರಲಿ ಎಂದು ಅವರು ಹೇಳಿದ್ದಾರೆ. ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪ ಮುಖ್ಯ. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ. ಪಕ್ಷಕ್ಕೆ ಯಾರೇ ಬಂದರೂ, ಬೇರೆ ನಮ್ಮ ಪಕ್ಷದವರನ್ನೂ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಪಕ್ಷದ ಅಧ್ಯಕ್ಷರು ಹೇಳಿದ್ದಾರೆ. ಎಲ್ಲಾ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಅವರನ್ನು ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎಂದರು.
ಒಳ್ಳೆಯ ವಾತಾವರಣ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯವರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಅಭ್ಯರ್ಥಿ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ ಗೆಲ್ಲಲು ಅವಕಾಶವಿದೆ. ಒಳ್ಳೆಯ ವಾತಾವರಣವಿದೆ. ಸರ್ಕಾರ ಕೂಡ ನಾವು ಜನಪರವಾದ ಕೆಲಸಗಳನ್ನು ಮಾಡಿದೆ. ಐದು ಗ್ಯಾರಂಟಿಗಳನ್ನು ನುಡಿದಂತೆ ಜಾರಿ ಮಾಡಿದೆ. ಮಾತನ್ನು ಉಳಿಸಿಕೊಂಡಿದ್ದೇವೆ. ಆದ್ದರಿಂದ ಇಡೀ ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ ಎಂದರು.
ನಮ್ಮ ಕೆಲಸಗಳ ಬಗ್ಗೆ ಜನರಿಗೆ ಸಮಾಧಾನವಿದೆ
ಇತ್ತೀಚೆಗೆ ವಿವಿಧೆಡೆ ಹಮ್ಮಿಕೊಂಡಿದ್ದ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಬಹಳ ಜನ ಸೇರಿದ್ದರು. ಜನ ಸುಮ್ಮನೆ ಸೇರುವುದಿಲ್ಲ. ಜನರಿಗೆ ನಾವು ಮಾಡಿರುವ ಕೆಲಸಗಳ ಬಗ್ಗೆ ಸಮಾಧಾನ ಇದೆ. ಆ ಸಮಾಧಾನ ಇರುವುದರಿಂದಲೇ ಎಲ್ಲೇ ಸಭೆಗಳನ್ನು ಆಯೋಜಿಸಿದರೂ ಜನ ಸೇರಿದ್ದರು. ಮಂಗಳೂರು, ಮಳ ವಳ್ಳಿಯಲ್ಲಿಯೂ ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದು ಜನ ನಮ್ಮ ಪರವಾಗಿ ಇದ್ಧಾರೆ ಎನ್ನುವುದಕ್ಕೆ ಉದಾಹರಣೆಳು ಎಂದು ಹೇಳಿದರು.
ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್, ವೆಂಕಟರವಣಪ್ಪ ಮತ್ತಿತರರು ಹಾಜರಿದ್ದರು.