Bengaluru: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಪ್ರಾಧ್ಯಾಪಕರಿಂದ 2.25 ಕೋಟಿ ರೂ ಸುಲಿಗೆ ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಪ್ರಾಧ್ಯಾಪಕರಿಂದ 2.25 ಕೋಟಿ ರೂ ಸುಲಿಗೆ ಆರೋಪಿಗಳ ಬಂಧನ

Bengaluru: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಪ್ರಾಧ್ಯಾಪಕರಿಂದ 2.25 ಕೋಟಿ ರೂ ಸುಲಿಗೆ ಆರೋಪಿಗಳ ಬಂಧನ

ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ರೇವಣ್ಣ ಕುಟುಂಬಕ್ಕೆ ಮತ್ತೆ ಹಿನ್ನಡೆಯಾಗಿದೆ. (ವರದಿ: ಎಚ್.ಮಾರುತಿ)

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಅರ್ಜಿದಾರರ ಪರ ವಕೀಲ ಅರುಣ್‌ ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರಾದರೂ ನ್ಯಾಯಲಯ ದೂರನ್ನು ಆಧರಿಸಿ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ತಿಳಿಸಿತು. ರೇವಣ್ಣ ವಿರುದ್ಧದ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆಗಸ್ಟ್‌ನಲ್ಲಿ 2,144 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು.

ಜನಪ್ರತಿನಿಧಿ ಮಹಿಳೆಯೊಬ್ಬರು ದೂರು ನೀಡಿ, 2021ರಲ್ಲಿ ಹಾಸನದಲ್ಲಿ ವಸತಿ ನಿಲಯ ಸಂಬಂಧ ಚರ್ಚಸಿಲು ಪ್ರಜ್ವಲ್ ರೇವಣ್ಣ ಅವರ ಕಚೇರಿಗೆ ತೆರಳಿದ್ದೆ. ಆಗ ಅವರು ಪಿಸ್ತೂಲು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಆನಂತರವೂ ವಿಡಿಯೋ ತೋರಿಸಿ ನಗ್ನವಾಗುವಂತೆ ಬೆದರಿಸಿದ್ದರು. ಈ ವಿಷಯವನ್ನು ಬಾಯಿ ಬಿಟ್ಟರೆ ವಿಡಿಯೋ ಲೀಕ್‌ ಮಾಡುವುದಾಗಿಯೂ ಹೆದರಿಸಿದ್ದರು ಎಂದು ದೂರು ಸಲ್ಲಿಸಿದ್ದರು.

ಈ ಸಂಬಂಧ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ದೂರು ದಾಖಲಾಗಿತ್ತು. ಜೆಡಿಎಸ್ ನಾಯಕರೂ ಆಗಿರುವ ಪ್ರಜ್ವಲ್ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ. ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರ ಪುತ್ರ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಮೊಮ್ಮಗ. ಈಗ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಕಾರಣ ಪ್ರಜ್ವಲ್ ರೇವಣ್ಣಗೆ ಭಾರಿ ಹಿನ್ನೆಡೆಯಾಗಿದೆ.

ಖಾಸಗಿ ವಿಡಿಯೋ ಇಟ್ಟುಕೊಂಡು ಹಣ ಸುಲಿಗೆ ಮಾಡಿದ್ದ ಮಹಿಳೆ ಸೇರಿ ಮೂವರ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬೆಂಗಳೂರಿನ ಪ್ರಾಧ್ಯಾಪಕರೊಬ್ಬರಿಂದ ಸುಮಾರು 2.25 ಕೋಟಿ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 46 ವರ್ಷದ ಸಂತ್ರಸ್ತ ಪ್ರಾಧ್ಯಾಪಕ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳಾದ ಆರ್‌ಟಿ ನಗರ ನಿವಾಸಿ ತಬಸ್ಸುಮ್ ಬೇಗಂ (38), ಆಕೆಯ ಸಹೋದರ ಅಜೀಂ ಉದ್ದೀನ್ (41) ಮತ್ತು ಅಭಿಷೇಕ್ ಅಲಿಯಾಸ್ ಪೊಲೀಸ್ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳ

ವಿರುದ್ಧ ಸುಲಿಗೆ, ವಂಚನೆ ಹಾಗೂ ಜೀವ ಬೆದರಿಕೆ ಆರೋಪಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿರುವ ಆನಂದ್‌ ಎಂಬಾತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

2018ರಲ್ಲಿ ಆರ್‌ಟಿ ನಗರದ ಗ್ರೂಪ್ ಎಕ್ಸ್ ಫಿಟ್ಟೆಸ್ ಸೆಂಟರ್‌ಗೆ ಜಿಮ್‌ ಮಾಡಲು ಹೋಗುತ್ತಿದ್ದಾಗ ಜಿಮ್‌ ಮಾಲೀಕ ಅಜೀಂ ಉದ್ದೀನ್‌ ಎಂಬಾತನ ಸಹೋದರಿ ತಬಸ್ಸುಮ್ ಬೇಗಂ ಪರಿಚಯವಾಗಿತ್ತು. ಇಬ್ಬರ ನಡುವೆ ಪರಿಚಯವಾಗಿ ಇಬ್ಬರೂ ಖಾಸಗಿಯಾಗಿ ಕಾಲ ಕಳೆಯುತ್ತಿದ್ದರು. ತಬುಸ್ಸುಂ ತನಗೆ ಮದುವೆ ಆಗಿಲ್ಲ ಎಂದು ಸುಳ್ಳು ಹೇಳಿ ಮಗುವೊಂದನ್ನು ದತ್ತು ಪಡೆದು ಸಾಕುತ್ತಿರುವುದಾಗಿ ಹೇಳಿಕೊಂಡಿದ್ದಳು. ಮಗುವನ್ನು ಸಾಕಲು ಮತ್ತು ಉನ್ನತ ಶಿಕ್ಷಣ ನೀಡುವ ಹೆಸರಿನಲ್ಲಿ ನನ್ನಿಂದ ಹಣ ಪಡೆದುಕೊಂಡಿದ್ದಳು ಎಂದು ಪ್ರಾಧ್ಯಾಪಕ ದೂರಿನಲ್ಲಿ ತಿಳಿಸಿದ್ದಾರೆ. ಕೆಲವು ದಿನಗಳ ನಂತರ ತಬಸ್ಸುಮ್

ವಿವಾಹಿತೆ ಎನ್ನುವುದು ತಿಳಿದು ಬಂದಿತ್ತು. ಈ ವಿಷಯವನ್ನು ಪ್ರಶ್ನಿಸಿದಾಗ ಆಕೆಯ ಜತೆಗಿದ್ದ ಖಾಸಗಿ ಫೋಟೊ ಮತ್ತು ವಿಡಿಯೊವನ್ನು ನನ್ನ ಮೊಬೈಲ್‌ಗೆ ಕಳುಹಿಸಿ ಅವುಗಳನ್ನು ನನ್ನ ಕುಟುಂಬದವರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದಿದ್ದಾರೆ.

2.25 ಕೋಟಿ ರೂ ವಸೂಲಿ

ತಬಸ್ಸುಮ್, ಆಕೆಯ ಸಹೋದರ ಅಜೀಂ ಉದ್ದೀನ್ ಮತ್ತು ಪೊಲೀಸ್ ಮತ್ತು ವಕೀಲನೆಂದು ಪರಿಚಯಿಸಿಕೊಂಡಿದ್ದ ಆನಂದ್ ಹಾಗೂ ಅಭಿಷೇಕ್ ಎಲ್ಲರೂ ಸೇರಿಕೊಂಡು ಹಂತ ಹಂತವಾಗಿ ಒಟ್ಟು ರೂ.2.25 ಕೋಟಿ ವಸೂಲಿ ಮಾಡಿದ್ದಾರೆ. ಆರೋಪಿಗಳಿಗೆ ಹಣ ನೀಡಲು ಕೋಟ್ಯಂತರ ರೂ. ಸಾಲ ಮಾಡಿ ಕಷ್ಟ ಅನುಭವಿಸುತ್ತಿದ್ದೇನೆ ಎಂದು ದೂರಿನಲ್ಲಿ ನಿವೇದಿಸಿಕೊಂಡಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಆರು ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಖಾಸಗಿ ವಿಡಿಯೊ, ಫೋಟೊ ಕಳುಹಿಸಿ, ಹನಿಟ್ರ್ಯಾಪ್ ಮಾಡಿ ಹಣ ವಸೂಲು ಮಾಡಲಾಗಿದೆ. ಅಂದಾಜು 3 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ. ಆರೋಪಿಗಳು ಇತರರಿಗೂ ವಂಚನೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Whats_app_banner