ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಉಲ್ಬಣ; ಕ್ಯಾನ್‌ ನೀರಿನ ಬೇಡಿಕೆ ಗಗನಕ್ಕೆ, ನೀರು ವ್ಯರ್ಥ ಮಾಡೋರು ಕಂಡ್ರೆ ಈ ಸಂಖ್ಯೆಗೆ ಕರೆ ಮಾಡಿ

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಉಲ್ಬಣ; ಕ್ಯಾನ್‌ ನೀರಿನ ಬೇಡಿಕೆ ಗಗನಕ್ಕೆ, ನೀರು ವ್ಯರ್ಥ ಮಾಡೋರು ಕಂಡ್ರೆ ಈ ಸಂಖ್ಯೆಗೆ ಕರೆ ಮಾಡಿ

Bangalore Water Crisis: ಉದ್ಯಾನನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ಇದೇ ಸಮಯದಲ್ಲಿ ವಾಟರ್‌ ಕ್ಯಾನ್‌ ಬೇಡಿಕೆ ಗಮರ್ನಾಹವಾಗಿ ಏರಿಕೆ ಕಂಡಿದೆ. ನೀರು ವ್ಯರ್ಥ ಮಾಡುವವರಿಗೆ 5,000 ರೂ. ದಂಡವನ್ನು ಬೆಂಗಳೂರಿನಲ್ಲಿ ವಿಧಿಸಲಾಗುತ್ತಿದೆ. (ವರದಿ: ಪ್ರಿಯಾಂಕ ಗೌಡ)

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಉಲ್ಬಣ
ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಉಲ್ಬಣ (Photo by Idrees MOHAMMED / AFP)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ದಿನನಿತ್ಯ ಬಳಕೆಯ ನೀರು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ನೀರಿನ ಬಿಕ್ಕಟ್ಟು ನಡುವೆ ಇದೀಗ ಪ್ಯಾಕೇಜ್ ನೀರಿನ ಬೇಡಿಕೆ ಗಗನಕ್ಕೇರಿದೆ. ಅದರಲ್ಲೂ 20 ಲೀಟರ್ ನೀರಿನ ಕ್ಯಾನ್‌ಗಳಿಗೆ ಬೇಡಿಕೆ ಹೆಚ್ಚಿದೆ. ನಗರದಲ್ಲಿ ಜನತೆ ನೀರಿಲ್ಲದೆ ಟ್ಯಾಂಕರ್ ನೀರಿಗೆ ಕಾದರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಸೂಪರ್ ಮಾರ್ಕೆಟ್ ಗಳಲ್ಲಿ ಮಾತ್ರ ಈ ಕ್ಯಾನ್ ನೀರುಗಳು ಯಥೇಚ್ಚವಾಗಿ ಸಿಗುತ್ತಿವೆ. ಬಿಕ್ಕಟ್ಟಿನ ನಡುವೆಯೂ ಸೂಪರ್ ಮಾರ್ಕೆಟ್ ಗಳು ಸ್ಥಿರ ಬೆಲೆಯಲ್ಲೇ ನೀರಿನ ಕ್ಯಾನ್ ಗಳನ್ನು ಮಾರಾಟ ಮಾಡುತ್ತಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಬಿಸ್ಲೆರಿ ಕಂಪನಿಯ 20 ಲೀಟರ್ ನೀರಿನ ಕ್ಯಾನ್‌ಗೆ 85 ರೂಪಾಯಿಗಳಷ್ಟಿದ್ದರೆ, ಆಕ್ವಾ ಸುರ್ ಮತ್ತು ಬೈಲಿ ಕ್ರಮವಾಗಿ 50 ಮತ್ತು 80 ರೂ.ಗಳಿವೆ. ಸೂಪರ್ ಮಾರ್ಕೆಟ್‌ಗಳು ಕಂಪನಿಯ ಡೀಲರ್‌ಶಿಪ್‌ಗಳಿಂದ ನೇರವಾಗಿ ನೀರಿನ ಕ್ಯಾನ್ ಗಳನ್ನು ಪಡೆಯುತ್ತವೆ. ಅಲ್ಲದೆ, ತಯಾರಕರ ಶಿಫಾರಸು ಬೆಲೆಯನ್ನು ನಿರ್ವಹಿಸುತ್ತವೆ.

ಸುಮಾರು 100ರಷ್ಟು 20 ಲೀಟರ್ ನೀರಿನ ಕ್ಯಾನ್‌ಗಳನ್ನು ತಲಾ 40 ರೂ.ಗೆ ಮಾರಾಟ ಮಾಡಿರುವುದಾಗಿ ಬಾಣಸವಾಡಿಯ ಸೂಪರ್ ಮಾರ್ಕೆಟ್ ಮಾಲೀಕರೊಬ್ಬರು ತಿಳಿಸಿದ್ದಾರೆ. ಸ್ಥಳೀಯ ಡೀಲರ್‌ಗಳು ಕುಡಿಯುವ ನೀರು ತುಂಬಿ ನಿರಂತರವಾಗಿ ಸರಬರಾಜು ಮಾಡುತ್ತಿರುವುದಿಂದ ಬೇಡಿಕೆಯನ್ನು ಪೂರೈಸಲು ನಮಗೆ ಸಾಧ್ಯವಾಗುತ್ತಿದೆ. ಹೀಗಾಗಿ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾಗಿಲ್ಲ ಎಂದು ಅವರು ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಪ್ಯಾಕೇಜ್ಡ್ ನೀರಿಗೆ ಉಂಟಾಗಿರುವ ಬೇಡಿಕೆಯನ್ನು ಹಲವಾರು ಸೂಪರ್‌ಮಾರ್ಕೆಟ್‌ಗಳು ಒಪ್ಪಿಕೊಂಡಿವೆ. ನೀರಿನ ಬಿಕ್ಕಟ್ಟಿನಿಂದಾಗಿ ಈ ಬೇಡಿಕೆ ಹೆಚ್ಚಿದ್ದಲ್ಲ. ಬದಲಾಗಿ ಬೇಸಿಗೆಯಲ್ಲಿ ಇದು ಸಾಮಾನ್ಯ ಎಂದು ಮತ್ತೊಬ್ಬ ಸೂಪರ್ ಮಾರ್ಕೆಟ್ ಮಾಲೀಕರು ತಿಳಿಸಿದರು.

ನೀರು ವ್ಯರ್ಥ ಮಾಡುವವರಿಗೆ ಭಾರಿ ದಂಡ

ಇನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ ಬಿ) ಕುಡಿಯುವ ನೀರಿನ ಅಗತ್ಯವಲ್ಲದ ಬಳಕೆಯನ್ನು ನಿಷೇಧಿಸಿದೆ. ವಾಹನ ಸ್ವಚ್ಛಗೊಳಿಸುವಿಕೆ, ತೋಟಗಾರಿಕೆ, ನಿರ್ಮಾಣ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ನೀರು ಬಳಸದಂತೆ ಆದೇಶಿಸಿದೆ. ಇದನ್ನು ಉಲ್ಲಂಘಿಸುವವರಿಗೆ 5,000 ರೂ. ದಂಡವನ್ನು ವಿಧಿಸುತ್ತದೆ. ಯಾರಾದರೂ ನೀರು ವ್ಯರ್ಥ ಮಾಡಿದರೆ ಅವರು ಬಿಡಬ್ಲ್ಯೂಎಸ್ಎಸ್ ಬಿ ಸಹಾಯವಾಣಿ ಸಂಖ್ಯೆ 1916ಕ್ಕೆ ವರದಿ ಮಾಡಬಹುದು.

ಕಾರು ತೊಳೆಯುವ ಸೆಂಟರ್‌ಗಳ ಸಮಸ್ಯೆ

ನಗರದಲ್ಲಿ ನೀರಿನ ಬಿಕ್ಕಟ್ಟಿನಿಂದ ಕಾರು ತೊಳೆಯುವುದನ್ನು ಈಗಾಗಲೇ ನಿಷೇಧಿಸಿರುವುದು ಕಾರು ತೊಳೆಯುವ ಸೆಂಟರ್ ಗಳ ಹೊಸ ಸಮಸ್ಯೆಗೆ ಕಾರಣವಾಗಿದೆ. ಇದರಿಂದಲೇ ಜೀವನ ಸಾಗಿಸುತ್ತಿರುವವರಿಗೆ ಸಂಕಷ್ಟ ತಂದೊಡ್ಡಿದೆ.

ಈ ನಿರ್ಬಂಧಗಳ ಹೊರತಾಗಿಯೂ, ನಗರದಾದ್ಯಂತ ಅನೇಕ ಕಾರು ತೊಳೆಯುವ ಸಂಸ್ಥೆಗಳು ಖಾಸಗಿ ಟ್ಯಾಂಕರ್‌ಗಳು ಮತ್ತು ಬೋರ್‌ವೆಲ್‌ಗಳಿಂದ ನೀರನ್ನು ಪಡೆಯಲು ಮುಂದಾಗಿವೆ. ದಂಡದ ಭಯವಿದ್ದರೂ ತಮ್ಮ ಜೀವನೋಪಾಯಕ್ಕಾಗಿ ಇದನ್ನು ಮಾಡಬೇಕಾಗಿ ಬಂದಿದೆ. ಕಾರು ತೊಳೆಯಲು ಪರ್ಯಾಯ ಸಂಸ್ಕರಿಸಿದ ನೀರನ್ನು ಬಳಸಲು ಸಾಧ್ಯವಿಲ್ಲ. ಅದರ ಹೆಚ್ಚಿನ ಉಪ್ಪಿನ ಅಂಶದಿಂದಾಗಿ ವಾಹನಗಳ ಬಣ್ಣ ಮತ್ತು ಗುಣಮಟ್ಟವನ್ನು ಹಾನಿಗೊಳಿಸುತ್ತದೆ ಎಂಬುದು ಈ ಕೇಂದ್ರಗಳ ವಾದವಾಗಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಈ ಸಂದಿಗ್ಧತೆ ಪರಿಸ್ಥಿತಿಯು ವ್ಯಾಪಾರದಲ್ಲಿ ತೀವ್ರ ಕುಸಿತವನ್ನು ಉಂಟುಮಾಡಿದೆ. ಪ್ರತಿವರ್ಷ ಹೆಚ್ಚಾಗಿ ಫೆಬ್ರವರಿಯಿಂದ ಏಪ್ರಿಲ್ ಅವಧಿಯಲ್ಲಿ, ಕಾರು ತೊಳೆಯಲು ಬರುವ ವಾಹನಗಳ ಸಂಖ್ಯೆ ಕಡಿಮೆಯಿರುತ್ತದೆ. ಆದರೀಗ ಬಿಡಬ್ಲ್ಯೂ ಎಸ್ಎಸ್ ಬಿಯು ನಿರ್ಬಂಧ ಹೇರಿರುವುದು ಸಮಸ್ಯೆಯು ಮತ್ತಷ್ಟು ಉಲ್ಬಣಗೊಂಡಿದೆ.

ನೀರಿನ ಟ್ಯಾಂಕರ್‌ಗಳ ಬೆಲೆ ಹೆಚ್ಚಳ ಮತ್ತು ನೀರಿನ ಕೊರತೆಯ ನಡುವೆಯೂ ವಾಹನಗಳನ್ನು ತೊಳೆಯುವ ವೆಚ್ಚವು ಮೊದಲಿನಂತೆ ಸ್ಥಿರವಾಗಿದೆ. ದ್ವಿಚಕ್ರ ವಾಹನಗಳನ್ನು ತೊಳೆಯಲು 100 ರಿಂದ 250 ರೂಪಾಯಿವರೆಗೆ ಬೆಲೆ ನಿಗದಿಯಿದೆ. ನಾಲ್ಕು ಚಕ್ರಗಳ ಬೆಲೆಯು ಗಾತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಮೊದಲಿಗಿಂತ ವ್ಯಾಪಾರದಲ್ಲಿ ಸಂಪೂರ್ಣ ಇಳಿಕೆಯಾಗಿದೆ. ಕಾರು ತೊಳೆಯಲು ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದ ನಂತರ ಗ್ರಾಹಕರ ಸಂಖ್ಯೆ ಭಾರಿ ಕಡಿಮೆಯಾದಿದೆ ಎಂದು ಇಂದಿರಾನಗರದಲ್ಲಿರುವ ಯೂನಿಕ್ ವೀಲ್ ಕಾರ್ ವಾಶ್ ಸೆಂಟರ್‌ನ ಮ್ಯಾನೇಜರ್ ಅಶ್ಫಾಕ್ ಅವರು ತಿಳಿಸಿದ್ದಾರೆ.

ಒಟ್ಟಾರೆ ನಗರವು ನೀರಿನ ಬಿಕ್ಕಟ್ಟಿನ ನಡುವೆ ಹೋರಾಡುತ್ತಿದ್ದರೆ, ಇದರಿಂದ ಕಾರು ತೊಳೆಯುವ ಕೇಂದ್ರಗಳು ತಮ್ಮ ಹೊಟ್ಟೆಪಾಡಿಗಾಗಿ ಹೊಸ ಸಮಸ್ಯೆ ಎದುರಿಸುವಂತಾಗಿದೆ.

  • ವರದಿ: ಪ್ರಿಯಾಂಕ ಗೌಡ

IPL_Entry_Point