ಮ್ಯಾಕ್‌ಬುಕ್ ಮೇಲೆ ಕಾಫಿ ಚೆಲ್ಲಿ ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ ಬೆಂಗಳೂರು ಮಹಿಳೆಗೆ ಭಾರಿ ನಿರಾಸೆ
ಕನ್ನಡ ಸುದ್ದಿ  /  ಕರ್ನಾಟಕ  /  ಮ್ಯಾಕ್‌ಬುಕ್ ಮೇಲೆ ಕಾಫಿ ಚೆಲ್ಲಿ ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ ಬೆಂಗಳೂರು ಮಹಿಳೆಗೆ ಭಾರಿ ನಿರಾಸೆ

ಮ್ಯಾಕ್‌ಬುಕ್ ಮೇಲೆ ಕಾಫಿ ಚೆಲ್ಲಿ ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ ಬೆಂಗಳೂರು ಮಹಿಳೆಗೆ ಭಾರಿ ನಿರಾಸೆ

ಮ್ಯಾಕ್‌ಬುಕ್‌ ಮೇಲೆ ಆಕಸ್ಮಿಕವಾಗಿ ಕಾಫಿ ಚೆಲ್ಲಿದ್ದ ಬೆಂಗಳೂರಿನ ಮಹಿಳೆಯೂಬ್ಬರು ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿದ್ದರು. ಆದರೆ ಪ್ರಕರಣದಲ್ಲಿ ಇವರಿಗೆ ನಿರಾಸೆಯಾಗಿದೆ.

ಆ್ಯಪಲ್ ಮ್ಯಾಕ್‌ಬುಕ್
ಆ್ಯಪಲ್ ಮ್ಯಾಕ್‌ಬುಕ್

ಬೆಂಗಳೂರು: ಯಾವುದೇ ವಿಚಾರದಲ್ಲಿ ನಾವು ಕೈಗೊಳ್ಳುವ ನಿರ್ಧಾರಗಳಿಗೂ ಮುನ್ನ ಮೂರ್ನಾಲ್ಕು ಬಾರಿ ಯೋಚನೆ ಮಾಡಬೇಕು. ಸಾಧಕ ಬಾಧಕಗಳನ್ನು ನೋಡಿಕೊಂಡೇ ಮುಂದೆ ಸಾಗುಬೇಕು. ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯೊಬ್ಬರು ಆ್ಯಪಲ್ ಕಂಪನಿ ವಿರುದ್ಧ ಕೇಸ್ ಹಾಕಿ ನಿರಾಸೆ ಅನುಭವಿಸಿದ್ದಾರೆ.

ಏನಿದು ಮಹಿಳೆ, ಮ್ಯಾಕ್‌ಬುಕ್, ಆ್ಯಪಲ್ ಕಂಪನಿಯ ಘಟನೆ

ಬೆಂಗಳೂರಿನ ಮಹಿಳೆಯೊಬ್ಬರು ಕಳೆದ ವರ್ಷ 1,74,307 ರೂಪಾಯಿ ಕೊಟ್ಟು ಆ್ಯಪಲ್ ಕಂಪನಿಯ ಮ್ಯಾಕ್‌ಬುಕ್ ಖರೀದಿಸಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ 22,900 ರೂಪಾಯಿ ನೀಡಿ ಆ್ಯಪಲ್ ಕೇರ್ ಪ್ಲಸ್‌ನ ವಿಮಾ ಮಾದರಿಯ ಸೌಲಭ್ಯವನ್ನು ಪಡೆದುಕೊಂಡಿದ್ದರು. ಈ ಪ್ಲಾನ್‌ನಲ್ಲಿ ಮ್ಯಾಕ್‌ಬುಕ್ ಕೆಟ್ಟುಹೋದರೆ, ಕಳೆದುಕೊಂಡರೆ, ಆಕಸ್ಮಿಕವಾಗಿ ಹಾನಿಯಾಗುವುದು ಸೇರಿದಂತೆ ಅನಿರೀಕ್ಷಿತ ಘಟನೆಗಳಿಗೆ ಉಚಿತ ರಿಪೇರಿ ಸೇರಿದಂತೆ ಹಲವು ಸೌಲಭ್ಯ ಸೇರಿದ್ದವು.

ಕಳೆದ ವರ್ಷದ ಜನವರಿಯಲ್ಲಿ 31 ವರ್ಷದ ಮಹಿಳೆ ತಮ್ಮ ಮ್ಯಾಕ್‌ಬುಕ್ ಪ್ರೊ 13 ಇಂಚಿನ ಲ್ಯಾಪ್‌ಟಾಟ್‌ನ ಕೀಬೋರ್ಡ್‌ ಮೇಲೆ ಆಕಸ್ಮಿಕವಾಗಿ ಕಾಫಿ ಚೆಲ್ಲಿದ್ದಾಳೆ. ಆ ನಂತರ ಲ್ಯಾಪ್‌ಟ್ಯಾಪ್ ವರ್ಕ್ ಆಗದ ಕಾರಣ ಭಯಭೀತಳಾಗಿ ಕೂಡಲೇ ರಿಪೇರಿಗೆಂದು ಆ್ಯಪಲ್ ಸ್ಟೋರ್‌ಗೆ ತಂದಿದ್ದಾಳೆ. ಆ್ಯಪಲ್ ಕೇರ್ ಪ್ಲಸ್ ಚಂದಾದಾರಿಕೆಯನ್ನು ಪಡೆದಿದ್ದ ಈಕೆಗೆ ಇಲ್ಲಿ ಭಾರಿ ನಿರಾಸೆಯಾಗಿತ್ತು. ಕಂಪನಿಯವರು ಉಚಿತವಾಗಿ ರಿಪೇರಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ದ್ರವಗಳಿಂದ ಉಂಟಾದ ಹಾನಿ ಆ್ಯಪಲ್ ಕೇರ್ ಪ್ಲಸ್ ಅಡಿಯಲ್ಲಿ ಬರುವುದಿಲ್ಲ ಎಂಬ ಉತ್ತರ ಸಿಕ್ಕಿದೆ. ಇದರಿಂದ ಬೇಸರಗೊಂಡ ಈಕೆ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾಳೆ.

ವ್ಯಾಪಾರದಲ್ಲಿ ಆ್ಯಪಲ್ ಕಂಪನಿ ತಪ್ಪಾಗಿ ನಡೆದುಕೊಳ್ಳುತ್ತಿರುವ ಆರೋಪ

2023ರ ಜನವರಿ 23 ರಂದು ಬೆಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ. ಆ್ಯಪಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಐಕೇರ್ ಆ್ಯಪರ್ ಟೆಕ್ನಾಲಜೀಸ್ ಹಾಗೂ ಇಮ್ಯಾಜಿನ್ ಸ್ಟೋರ್‌ಗಳು ತಮ್ಮ ವ್ಯಾಪಾರ ವ್ಯವಹಾರಗಳಲ್ಲಿ ತಪ್ಪಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ವಿಚಾರಣೆ ನಡೆಸಿದ ಗ್ರಾಹಕ ಕೋರ್ಟ್ ದೂರದಾರ ಮಹಿಳೆ ಹಾಗೂ ಆ್ಯಪಲ್ ಕಂಪನಿಯ ವಾದ ಪ್ರತಿವಾದಗಳನ್ನು ಆಲಿಸಿದೆ. ಅಂತಿಮವಾಗಿ ಮಹಿಳೆಯ ಅರ್ಜಿಯನ್ನು ವಜಾ ಮಾಡಿದೆ.

ಆ್ಯಪಲ್ ಕಂಪನಿ ಹೇಳುವ ಪ್ರಕಾರ, ಸಂಸ್ಥೆಯ ಮ್ಯಾಕ್‌ಬುಕ್‌ಗೆ ಸೀಮಿತ ವಾರಂಟಿ ಇರುತ್ತದೆ. ತಾಂತ್ರಿಕವಾಗಿ ಸಮಸ್ಯೆಗಳಿಗೆ 90 ದಿನ, ಹಾರ್ಡ್‌ವೇರ್ ರಿಪೇರಿ ಕವೇರಜ್‌ 1 ವರ್ಷದವರೆಗೆ ಇರುತ್ತದೆ. ಇನ್ನು ಮ್ಯಾಕ್‌ಬುಕ್‌ಗೆ ಆ್ಯಪಲ್ ಕೇರ್‌ಪ್ಲಸ್‌ನಲ್ಲಿ ಉತ್ಪನ್ನ ಖರೀದಿಸಿದ ದಿನಾಂಕದಿಂದ 3 ವರ್ಷದೊಳಗೆ ಆಕಸ್ಮಿಕ ಹಾನಿಗೆ ರಿಪೇರಿಯಂತಹ ಸೌಲಭ್ಯಗಳಿರುತ್ತವೆ. ಆದರೆ ಈ ಪ್ಲಾನ್ ಪಡೆಯದಿದ್ದರೆ ಮ್ಯಾಕ್‌ಬುಕ್‌ನ ಡಿಸ್‌ಪ್ಲೇ ಹಾನಿಯಾದರೆ ಅಥವಾ ಬಾಹ್ಯ ಹಾನಿಗೆ 8,900 ರೂಪಾಯಿ ಸೇವಾ ಶುಲ್ಕ ಪಾವತಿಸಬೇಕು. ಇತರೆ ಹಾನಿಗಳಾದರೆ 25,900 ರೂಪಾಯಿ ವರೆಗೆ ಚಾರ್ಜ್ ಮಾಡಲಾಗುತ್ತದೆ. ಅಂತಿಮವಾಗಿ ಬೆಂಗಳೂರಿನ ಮಹಿಳೆ ತನ್ನ ಮ್ಯಾಕ್‌ಬುಕ್ ಪ್ರಕರಣದಲ್ಲಿ ನಿರಾಸೆ ಅನುಭವಿಸಿದ್ದಾರೆ.

Whats_app_banner