Milk Price Hike: ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಿಸಲು ಸರ್ಕಾರದ ಸಮ್ಮತಿ, ಲೀಟರ್ ನಂದಿನಿ ಹಾಲಿನ ದರ 3 ರೂ ಹೆಚ್ಚಳ
Nandini Milk Price Hike: ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಬೆಂಗಳೂರು: ಬಹಳಷ್ಟು ಚರ್ಚೆಗೆ ಒಳಗಾಗಿದ್ದ ನಂದಿನ ಹಾಲಿನ ದರ ಏರಿಕೆ (Nandini Milk Price Hike) ವಿಚಾರ ಇಂದು (ಜು.21) ಇತ್ಯರ್ಥವಾಗಿದೆ. ಪ್ರತಿ ಲೀಟರಿಗೆ 5 ರೂಪಾಯಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಚರ್ಚೆಗೆ ಒಳಗಾಗಿದ್ದು, ಕೊನೆಗೆ 3 ರೂಪಾಯಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ (KMF) ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದೆ.
ಪರಿಷ್ಕೃತ ದರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ನಂದಿನ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಿಂದೆ 2022 ನವಂಬರ್ 15 ರಿಂದ ಹಾಲಿನ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲಾಗಿತ್ತು.
ನಂದಿನಿ ಹಾಲಿನ ದರ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ ಮುಸ್ಸಂಜೆ 7 ಗಂಟೆ ಸುಮಾರಿಗೆ ಶುರುವಾಗಿತ್ತು. ಎರಡು ಗಂಟೆ ಕಾಲ ನಡೆದ ಸಭೆಯಲ್ಲಿ ಬಹಳಷ್ಟು ವಿಚಾರಗಳು ಚರ್ಚೆ ಆಗಿವೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ, ಪಶುಸಂಗೋಪನ ಇಲಾಖೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್, ಆಡಳಿತ ಮಂಡಳಿ ಸದಸ್ಯರು ಮತ್ತು ಕೆಎಂಎಫ್ ಅಧಿಕಾರಿಗಳು ಭಾಗವಹಿಸಿದ್ದರು.
ಕೆಎಂಎಫ್ ಹಾಲಿನ ದರ ಹೆಚ್ಚಳ (ಆಗಸ್ಟ್ 1 ರಿಂದ ಜಾರಿ)
ಹಾಲಿನ ಉತ್ಪನ್ನ | ಈಗಿನ ದರ (ರೂಪಾಯಿ) | ಪರಿಷ್ಕೃತ ದರ (ರೂಪಾಯಿ) |
ಟೋನ್ಡ್ ಹಾಲು | 39 | 42 |
ಹೋಮೋಜಿನೈಸ್ಡ್ ಟೋನ್ಡ್ ಹಾಲು | 40 | 43 |
ಸ್ಪೆಷಲ್ ಹಾಲು | 45 | 48 |
ಹೋಮೋಜಿನೈಸ್ಡ್ ಸ್ಟಾಂಡರ್ಡೈಸ್ಡ್ ಹಾಲು | 46 | 49 |
ಸಂತೃಪ್ತಿ ಹಾಲು | 52 | 55 |
ಡಬಲ್ ಟೋನ್ಡ್ ಹಾಲು | 38 | 41 |
ನಂದಿನಿ ಹಾಲಿನ ದರ ಹೆಚ್ಚಳ; ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ
ನಂದಿನಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ. ಆಗಸ್ಟ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಬಗ್ಗೆ ಕ್ಯಾಬಿನೆಟ್ನಲ್ಲಿಟ್ಟು ಒಪ್ಪಿಗೆ ಪಡೆದು ನಿರ್ಧಾರವನ್ನು ಸರ್ಕಾರ ಪ್ರಕಟಿಸಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಾವು 5 ರೂಪಾಯಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದೆವು. ಹಾಲಿನ ಉಪ ಉತ್ಪನ್ನಗಳ ದರ ನಂತರ ತೀರ್ಮಾನ ಆಗಲಿದೆ. ಹಾಲಿನ ಪುಡಿ ದರ ಏರಿಕೆಗೂ ಪ್ರಸ್ತಾವನೆ ಇಡಲಾಗಿದೆ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.
ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ. ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ, ಮುಖ್ಯಮಂತ್ರಿಯವರು ಅಂತಿಮವಾಗಿ 3 ರೂ. ಹೆಚ್ಚಳಕ್ಕೆ ಸಭೆಯಲ್ಲಿ ಸಮ್ಮತಿಸಿದರು. ಹೆಚ್ಚಳವಾದ 3 ರೂ. ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ತಿಳಿಸಿದ್ದಾಗಿ ಕೆಎಂಎಫ್ ನಿರ್ದೇಶಕ ಹೆಚ್.ಡಿ.ರೇವಣ್ಣ ಹೇಳಿದರು.
ಹಾಲು ಉತ್ಪಾದಕರ ಹಿತ ಕಾಯಲು ದರ ಏರಿಕೆ ಅನಿವಾರ್ಯ
ಪ್ರಸ್ತುತ ಸನ್ನಿವೇಶದಲ್ಲಿ ಹಾಲು ಉತ್ಪಾದಕರ ಹಿತ ಕಾಯುವುದಕ್ಕಾಗಿ ಹಾಲಿನ ದರ ಏರಿಕೆ ಅನಿವಾರ್ಯ. ಕರ್ನಾಟಕದಲ್ಲಿ ಅತಿ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡುತ್ತಿದ್ದೇವೆ. ಹಾಲು ಉತ್ಪಾದಕರಿಂದ ಹಾಲು ಖರೀದಿ ಮಾಡುವ ದರವೂ ಕಡಿಮೆ ಇದೆ. ರೈತರಿಗೆ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕೆಎಂಎಫ್ ಅಧಿಕಾರಿಗಳು, ಆಡಳಿತ ಮಂಡಳಿ ಜತೆಗಿನ ಸಭೆಯ ಬಳಿಕ ವಿವರಿಸಿದರು.
ಕ್ಷೀರ ಭಾಗ್ಯಕ್ಕೆ 10 ವರ್ಷ
ಕರ್ನಾಟಕದಲ್ಲಿ ಕ್ಷೀರ ಭಾಗ್ಯ ಯೋಜನೆ ಶುರುವಾಗಿ 10 ವರ್ಷ ಆಗಿದೆ. ಹೀಗಾಗಿ ಅದರ ದಶಮಾನೋತ್ಸವ ಆಚರಣೆಗೆ ತೀರ್ಮಾನವಾಗಿದೆ. ಹಾಲಿನ ದರ ಲೀಟರಿಗೆ 5 ರೂಪಾಯಿ ಏರಿಸಬೇಕೆಂಬ ಒತ್ತಾಯ ಇದೆ. ಸದ್ಯ 3 ರೂಪಾಯಿ ದರ ಏರಿಸಲು ಒಪ್ಪಿಗೆ ಸಿಕ್ಕಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಹೊಸ ದರದ ವಿಚಾರಕ್ಕೆ ಅಂತಿಮ ಒಪ್ಪಿಗೆ ಸಿಗಲಿದೆ. ಲೀಟರಿಗೆ 39 ರೂಪಾಯಿ ದರದಲ್ಲಿ ಹಾಲು ಮಾರಾಟವಾಗುತ್ತಿದೆ. ಬೇರೆ ರಾಜ್ಯಗಳಲ್ಲೂ ಹಾಲಿನ ದರ ಏರಿಕೆ ಆಗಿದೆ. ಹಾಲು ಉತ್ಪಾದಕರ ಹಿತ ಕಾಪಾಡುವುದು ಸರ್ಕಾರದ ಹೊಣೆಗಾರಿಕೆ ಹೀಗಾಗಿ ಅನಿವಾರ್ಯವಾಗಿ ದರ ಏರಿಕೆಗೆ ಸರ್ಕಾರ ಮುಂದಾಗಿದೆ ಎಂದು ಸಚಿವ ರಾಜಣ್ಣ ಸ್ಪಷ್ಟಪಡಿಸಿದರು.