Mahantesh Kadadi: ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿಗೆ 'ಯಂಗ್ ಚಾಲೆಂಜ್': ಯಾರು ಈ ಡಾ. ಮಹಾಂತೇಶ್ ಕಡಾಡಿ?
ಇಂದು ಬಿಡುಗಡೆಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ, ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್ ಕ್ಷೇತ್ರದಲ್ಲಿ ಡಾ. ಮಹಾಂತೇಶ ಕಡಾಡಿ ಎಂಬ ಹೊಸ ಮುಖವನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ,ಮಹಾಂತೇಶ್ ಕಡಾಡಿ, ಪಂಚಮಸಾಲಿ ಲಿಂಗಾಯತ ಸಮಯದಾಯಕ್ಕೆ ಸೇರಿದವರು ಎಂಬುದು ವಿಶೇಷ. ಈ ಕುರಿತು ಇಲ್ಲಿದೆ ಮಾಹಿತಿ..
ಗೋಕಾಕ್: ರಮೇಶ್ ಜಾರಕಿಹೊಳಿ.. ಈ ಹೆಸರು ರಾಜ್ಯ ರಾಜಕಾರಣದಲ್ಲಿ ಚಿರಪರಿಚಿತ. ಬಹುತೇಕವಾಗಿ ವಿವಾದಗಳಿಂದಲೇ ಖ್ಯಾತಿ ಪಡೆದಿರುವ ರಮೇಶ್ ಜಾರಕೊಹೊಳಿ, ತಮ್ಮ ನೇರ ನಡೆಯಿಂದಲೂ ಜನರಿಗೆ ಮೆಚ್ಚುಗೆಯಾದವರು. ಅದರಲ್ಲೂ ಗೋಕಾಕ್ ಭಾಗದ ಜನ
'ರಮೇಶ್ ಸಾಹುಕಾರ್' ಎಂದೇ ಇವರನ್ನು ಪ್ರೀತಿಯಿಂದ ಕರೆಯುವುದು. ಹಾಗೆ ನೋಡಿದರೆ ಜಾರಕಿಹೊಳಿ ಕುಟುಂಬದ ಎಲ್ಲ ಧುರೀಣರನ್ನೂ ಇಲ್ಲಿನ ಜನ ಅವರ ಹೆಸರಿನ ಮುಂದೆ 'ಸಾಹುಕಾರ್' ಎಂದು ಸೇರಿಸಿಯೇ ಕರೆಯುವುದು.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಕ್ಷೇತ್ರಗಳ ಪೈಕಿ ಗೋಕಾಕ್ ಕ್ಷೇತ್ರವೂ ಒಂದು. ಫೈರ್ ಬ್ರ್ಯಾಂಡ್ ರಮೇಶ್ ಜಾರಕಿಹೊಳಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟ. ಬಿಜೆಪಿ ಇದುವರೆಗೂ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿಲ್ಲವಾದರೂ, ಗೋಕಾಕ್ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಅವರಿಗೆ ಟಿಕೆಟ್ ಖಚಿತವಾಗಲಿದೆ. ಹೀಗಾಗಿ ಸಹಜವಾಗಿಯೇ ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.
ಇಂದು ಬಿಡುಗಡೆಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಈ ಪ್ರಶ್ನೆಗೆ ಉತ್ತರ ದೊರೆತಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ್‌ನಲ್ಲಿ ಡಾ. ಮಹಾಂತೇಶ ಕಡಾಡಿ ಎಂಬ ಹೊಸ ಮುಖವನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ ಮೂಲಕ ಟಿಕೆಟ್ ಆಕಾಂಕ್ಷೆಯಲ್ಲಿ ಅಶೋಕ್ ಪೂಜಾರಿ ಅವರಿಗೆ ಕಾಂಗ್ರೆಸ್ ನಿರಾಸೆ ಮೂಡಿಸಿದೆ.
ಜೆಡಿಎಸ್‌ನಲ್ಲಿದ್ದ ಅಶೋಕ್ ಪೂಜಾರಿ ಅವರನ್ನು ಟಿಕೆಟ್ ನೀಡುವ ಭರವಸೆ ನೀಡಿಯೇ ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಕೊನೆಯ ಹಂತದಲ್ಲಿ ಅಶೋಕ್ ಪೂಜಾರಿ ಬದಲು ಡಾ. ಮಹಾಂತೇಶ್ ಕಡಾಡಿ ಅವರಿಗೆ ಕಾಂಗ್ರೆಸ್ ಮಣೆ ಹಾಕಿರುವುದು ಅಚ್ಚರಿ ಮೂಡಿಸಿದೆ.
ಹಾಗೆ ನೋಡಿದರೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ, 2008ರಿಂದಲೂ ರಮೇಶ್ ಜಾರಕಿಹೊಳಿ ಅವರಿಗೆ ಅಶೋಕ್ ಪೂಜಾರಿ ಅವರೇ ಪೈಪೋಟಿ ನೀಡುತ್ತಾ ಬಂದಿದ್ದಾರೆ. 2008 ಮತ್ತು 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. 2019ರಲ್ಲಿ ಸ್ವತಃ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ ಮೇಲೆ, ಅಶೋಕ್ ಪೂಜಾರಿ ಮತ್ತೆ ಜೆಡಿಎಸ್‌ಗೆ ಮರಳಿದ್ದರು.
ಆದರೆ ಈ ಬಾರಿ ಅಶೋಕ್ ಪೂಜಾರಿ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್, ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿತ್ತು ಎನ್ನಲಾಗಿದೆ. ಆದರೆ ಇದೀಗ ಯುವ ನಾಯಕ ಡಾ. ಮಹಾಂತೇಶ್ ಕಡಾಡಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಅಶೋಕ್ ಪೂಜಾರಿ ಮುನಿಸಿಕೊಂಡು ಮತ್ತೆ ಜೆಡಿಎಸ್‌ಗೆ ಮರಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂಬುದು ಸ್ಥಳೀಯ ರಾಜಕಾರಣ ಗೊತ್ತಿರುವವರ ಅಭಿಪ್ರಾಯವಾಗಿದೆ.
ಯಾರು ಈ ಮಹಾಂತೇಶ್ ಕಡಾಡಿ?
ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ,ಮಹಾಂತೇಶ್ ಕಡಾಡಿ, ಪಂಚಮಸಾಲಿ ಲಿಂಗಾಯತ ಸಮಯದಾಯಕ್ಕೆ ಸೇರಿದವರು. ಗೋಕಾಕ್ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಡಾ. ಮಹಾಂತೇಶ್ ಕಡಾಡಿ, ಯುವ ನಾಯಕ ಎಂಬ ಹಣೆಪಟ್ಟಿ ಕೂಡ ಹೊತ್ತಿದ್ದಾರೆ. ಈಗಾಗಲೇ ಕ್ಷೇತ್ರದಾದ್ಯಂತ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿರುವ ಡಾ. ಮಹಾಂತೇಶ ಕಡಾಡಿ, ಯುವ ವಿದ್ಯಾವಂತ ಹಾಗೂ ವೈದ್ಯ ವೃತ್ತಿಯಲ್ಲಿ ಪರಿಣಿತ ಎಂಬ ಇಮೇಜ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಈ ಬಾರಿಯ ಗೋಕಾಕ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರಲಿದ್ದು, ರಮೇಶ್ ಜಾರಕಿಹೊಳಿ ಮತ್ತು ಡಾ. ಮಹಾಂತೇಶ್ ಕಡಾಡಿ ನಡುವಿನ ಸ್ಪರ್ಧೆ ಖಂಡಿತವಾಗಿಯೂ ರೋಚಕವಾಗಿರಲಿದೆ. ಇನ್ನು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಇಂದು ಬಿಡುಗಡೆಗೊಂಡಿರುವ ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ, ಸವದತ್ತಿ ಕ್ಷೇತ್ರದಿಂದ ವಿಶ್ವಾಸ ವೈದ್ಯ, ನಿಪ್ಪಾಣಿ ಕ್ಷೇತ್ರಕ್ಕೆ ಕಾಕಾಸಾಹೇಬ ಪಾಟೀಲ್ ಮತ್ತು ಕಿತ್ತೂರು ಕ್ಷೇತ್ರದಿಂದ ಬಾಬಾಸಾಹೇಬ ಪಾಟೀಲ್ ಟಿಕೆಟ್ ಪಡೆದುಕೊಂಡಿದ್ದಾರೆ.