Health News: ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಡುತ್ತಿದೆ ಡೆಂಗ್ಯೂ, ಶಂಕಿತ ಪ್ರಕರಣಕ್ಕೆ ಓರ್ವ ಬಲಿ, ಜಿಲ್ಲೆಯಲ್ಲಿ 23 ಸಕ್ರಿಯ ಪ್ರಕರಣ
Dakshin Kannada News ಡೆಂಗ್ಯೂ ಪ್ರಕರಣಗಳು( Dengue cases) ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.ವರದಿ: ಹರೀಶ ಮಾಂಬಾಡಿ,ಮಂಗಳೂರು
ಮಂಗಳೂರು:ಕರ್ನಾಟಕದ ಹಲವೆಡೆ ಇರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಜುಲೈ 13ಕ್ಕೆ ಒಟ್ಟು 23 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಖಾಸಗಿಯಾಗಿ ಚಿಕಿತ್ಸೆ ಪಡೆಯುವವರನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ. ಇದೀಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರಿಗೆ ಡೆಂಗ್ಯೂ ಇರಬಹುದು ಎಂಬ ಶಂಕೆ ಇದೆ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಯತೀಶ್ (52) ಪುತ್ತೂರಿನಲ್ಲಿ ವಾಸಿಸುತ್ತಿದ್ದರು. ಪತ್ನಿ, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಬಿ.ಸಿ.ರೋಡಿನ ಭಾರತ್ ಬೀಡಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯತೀಶ್ ಜತೆ ಸಿಬಂದಿಯೊಂದಿಗೆ ಜ್ವರದಿಂದ ಜುಲೈ 10ರಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಜ್ವರ ಉಲ್ಬಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಅಲ್ಲಿಯೂ ಸ್ಪಂದಿಸದೇ ಇದ್ದ ಕಾರಣ, ಅದೇ ದಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ. ಇದೀಗ ಯತೀಶ್ ಸಾವಿಗೆ ಡೆಂಗ್ಯೂ ಕಾರಣವೇ ಅಥವಾ ಬೇರಾವುದಾದರೂ ಕಾರಣವಿದೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗರಡಿ ನಿವಾಸಿಯಾಗಿರುವ ಯತೀಶ್ ಪುತ್ತೂರಿನ ಬಡಗನ್ನೂರಿನಲ್ಲಿ ಮನೆ ಮಾಡಿ ಅಲ್ಲಿ ವಾಸವಾಗಿದ್ದರು. ಭಾರತ್ ಬೀಡಿ ಕಂಪೆನಿಯ ಬಿಸಿರೋಡಿನ ಶಾಖೆಯಲ್ಲಿ ಸಿಬ್ಬಂದಿಯಾಗಿದ್ದರು.
ಜ್ವರದಿಂದ ದಾಖಲಾಗಿದ್ದರು
ಈ ಕುರಿತು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ‘HTಕನ್ನಡ’ ಪ್ರತಿನಿಧಿಗೆ ಮಾಹಿತಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ ಡೆಂಗ್ಯೂ 345 ಪ್ರಕರಣಗಳು ಇವೆ, ಇದೀಗ ಜಿಲ್ಲೆಯಲ್ಲಿ 23 ಸಕ್ರಿಯ ಪ್ರಕರಣಗಳು ಇವೆ. ಯತೀಶ್ ಸಾವಿಗೆ ನಿರ್ದಿಷ್ಟವಾಗಿ ಡೆಂಗ್ಯೂ ಕಾರಣವೇ ಅಥವಾ ಇನ್ನಾವುದಾದರೂ ಸಮಸ್ಯೆಗಳು ಇವೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಜ್ವರ ಹಾಗೂ ಮೆದುಳಿನ ಊತದಿಂದ ಅವರು ಬಳಲಿದ್ದರು ಎಂಬುದು ಗೊತ್ತಾಗಿದೆ. ಇನ್ನಷ್ಟೇ ಇದರ ಕುರಿತು ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ನೀಡಿದ ಮಾಹಿತಿಯಂತೆ ಯತೀಶ್ ಅವರು ಎರಡು ದಿನಗಳ ಹಿಂದೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಅವರು ಜ್ವರದಿಂದ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರಿನವರಾಗಿರುವ ಅವರು ಡೆಂಗ್ಯೂನಿಂದ ಮೃತಪಟ್ಟರೇ ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳು ಒಂದು ಇದ್ದು, ಅವರ ಆರೋಗ್ಯ ಸ್ಥಿರವಿದೆ. ಉಳಿದಂತೆ ಡೆಂಗ್ಯೂ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಬಂಟ್ವಾಳದಾದ್ಯಂತ ರೋಗ ಬಾರದಂತೆ ಸೊಳ್ಳೆ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದವರು ಹೇಳಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನೀಶಿಯನ್ ನೇಮಕ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಬ್ ಟೆಕ್ನಿಶಿಯನ್ ಕೊರತೆ ಇದ್ದು, ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಂಡು, ಮೂರು ತಿಂಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಸೂಚಿಸಿದ್ದಾರೆ. ಡೆಂಗ್ಯೂ ನಿಯಂತ್ರಣ ನಿಟ್ಟಿನಲ್ಲಿ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅವರು ಸಭೆ ನಡೆಸಿದರು. ಡೆಂಗ್ಯೂ ಪ್ರಕರಣ ಏರಿಕೆ ಸಂದರ್ಭ ತ್ವರಿತ ವರದಿ ಬರುವುದೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪ್ಲೇಟ್ ಲೆಟ್, ರಕ್ತದ ಕೊರತೆ ಆಗದಂತೆ ನೋಡಿಕೊಳ್ಳಬೇಕು, ರೋಗಿಗಳ ಚಿಕಿತ್ಸೆ ವಿಳಂಬವಾಗದಂತೆ ಗಮನಿಸಬೇಕು ಎಂದು ಖಾದರ್ ಸಲಹೆ ನೀಡಿದ್ದಾರೆ.
ವೆನ್ಲಾಕ್ ರಕ್ತನಿಧಿ ಕೇಂದ್ರದಲ್ಲಿ ಪ್ಲೇಟ್ ಲೆಟ್ ಲಭ್ಯ
ಮಂಗಳೂರಿನ ವೆನ್ಲಾಕ್ ರಕ್ತನಿಧಿ ಕೇಂದ್ರದಲ್ಲಿ ಅವಶ್ಯಕ ಪ್ಲೇಟ್ ಲೆಟ್ ಲಭ್ಯವಿದೆ. ವೆನ್ಲಾಕ್ ನಲ್ಲಿ ಪ್ಲೇಟ್ ಲೆಟ್ ವರ್ಗಾವಣೆಗೆ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಇತರರಿಗೆ ಒಂದು ಯುನಿಟ್ ಗೆ 200 ರೂ ದರ ವಿಧಿಸಲಾಗುತ್ತದೆ. ಕೆಲ ಖಾಸಗಿ ಆಸ್ಪತ್ರೆಗೆ ವರ್ಗಾವಣೆಗೆ 1600 ರೂಗಳನ್ನು ವಿಧಿಸಲಾಗುತ್ತಿದೆ, ಈ ಹಿನ್ನೆಲೆಯಲ್ಲಿ ದರ ಇಳಿಕೆ ಮಾಡುವಂತೆ ಖಾಸಗಿ ಆಸ್ಪತ್ರೆ ಆಡಳಿತದೊಂದಿಗೆ ಚರ್ಚಿಸಬೇಕು ಎಂದು ಜಿಲ್ಲಾಡಳಿತಕ್ಕೆ ಸ್ಪೀಕರ್ ಸೂಚಿಸಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು