IFS Transfer: ಅಮೆರಿಕಾಕ್ಕೆ ಹೋಗಿದ್ದಾಗ ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ ವರ್ಗ: ಅರಣ್ಯ ಸಚಿವರು ದಕ್ಷ ಅಧಿಕಾರಿ ವರ್ಗ ಮಾಡಿದ್ದೇಕೆ-forest news senior ifs officer bpravi transferred when in america tour why immediate order cleared by forest minster kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Ifs Transfer: ಅಮೆರಿಕಾಕ್ಕೆ ಹೋಗಿದ್ದಾಗ ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ ವರ್ಗ: ಅರಣ್ಯ ಸಚಿವರು ದಕ್ಷ ಅಧಿಕಾರಿ ವರ್ಗ ಮಾಡಿದ್ದೇಕೆ

IFS Transfer: ಅಮೆರಿಕಾಕ್ಕೆ ಹೋಗಿದ್ದಾಗ ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ ವರ್ಗ: ಅರಣ್ಯ ಸಚಿವರು ದಕ್ಷ ಅಧಿಕಾರಿ ವರ್ಗ ಮಾಡಿದ್ದೇಕೆ

Karnataka Forest Department ಕರ್ನಾಟಕದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಅಮೆರಿಕಾ ಪ್ರವಾಸದಲ್ಲಿದ್ದಾಗ ಏಕಾಏಕಿ ವರ್ಗಗೊಂಡಿರುವುದು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.

ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಐಎಫ್‌ಎಸ್‌ ಅಧಿಕಾರಿ ಬಿ,ಪಿ.ರವಿ ವರ್ಗಕ್ಕೆ ಅನುಮತಿ ನೀಡಿದ್ದಾರೆ.
ಸಚಿವ ಈಶ್ವರ ಖಂಡ್ರೆ ಅವರು ಹಿರಿಯ ಐಎಫ್‌ಎಸ್‌ ಅಧಿಕಾರಿ ಬಿ,ಪಿ.ರವಿ ವರ್ಗಕ್ಕೆ ಅನುಮತಿ ನೀಡಿದ್ದಾರೆ.

ಬೆಂಗಳೂರು: ಬೆಂಗಳೂರು ದೆಹಲಿ ಆಗಬಾರದು. ಕರ್ನಾಟಕಕ್ಕೂ ಪರಿಸರ ನೀತಿ ಪ್ರಬಲವಾಗಿರಬೇಕು. ಬೆಂಗಳೂರು ನಗರದ ಹವಾಮಾನ, ಪರಿಸರದ ವಿಚಾರದಲ್ಲಿ ಈಗಿನಿಂದಲೇ ಯೋಜಿಸಿದರೆ ಮುಂದಿನ ಮೂರು ದಶಕದಲ್ಲಿ ಜನರ ಆರೋಗ್ಯಕರ ಜೀವನಮಟ್ಟವೂ ಸುಧಾರಿಸಲಿದೆ ಎನ್ನುವುದೂ ಸೇರಿದಂತೆ ಕರ್ನಾಟಕದ ಪರಿಸರ ವಿಚಾರವಾಗಿ ಕಾಳಜಿ ವಹಿಸಿದ ಅಧಿಕಾರಿಗೆ ಕರ್ನಾಟಕ ಸರ್ಕಾರ ನೀಡಿದ್ದು ವರ್ಗಾವಣೆ ಆದೇಶ. ಬರೀ ಕಡತಗಳಿಗೆ ಸಹಿ ಹಾಕಲು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ಸಂಪನ್ಮೂಲಕ್ಕೆ ಒತ್ತು ನೀಡಲಾಗುತ್ತಿದೆ ಎನ್ನುವ ಆರೋಪಗಳ ನಡುವೆ ಅದಕ್ಕೆ ಬ್ರೇಕ್‌ ಹಾಕಿ ಪರಿಸರ ಇಲಾಖೆಯಲ್ಲೂ ಪಾರದರ್ಶಕತೆಗೆ ಒತ್ತು ನೀಡಿದ ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿಗೆ ವರ್ಗಾವಣೆ ಬಳುವಳಿಯನ್ನೇ ನೀಡಿದೆ. ಅಧಿಕಾರಿಯನ್ನು ಹಠಾತ್‌ ವರ್ಗ ಮಾಡಿರುವ ಕರ್ನಾಟಕ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ನಡೆ ಕುರಿತು ಇಲಾಖೆಯಲ್ಲಿ ಭಾರೀ ಚರ್ಚೆಗಳೇ ನಡೆದಿವೆ.

ಕನ್ನಡಿಗ ದಕ್ಷ ಅಧಿಕಾರಿ

ವರ್ಗಾವಣೆಗೊಂಡ ಅಧಿಕಾರಿ ಹೆಸರು ಬಿ.ಪಿ. ರವಿ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. 1992 ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾದ ರವಿ ಅವರು ಪ್ರಾಮಾಣಿಕ ಅಧಿಕಾರಿ ಮಾತ್ರವಲ್ಲ. ದಕ್ಷ ಅಧಿಕಾರಿ ಕೂಡ. ತಾವು ಎಲ್ಲೆಲ್ಲಿ ಕೆಲಸ ಮಾಡಿ ಬಂದಿದ್ದಾರೋ ಅಲ್ಲೆಲ್ಲಾ ವಿಶೇಷ ಛಾಪು ಮೂಡಿಸಿದವರೇ. ಕಾಳಜಿಯಿಂದಲೇ ಕೆಲಸ ಮಾಡುವುದು ಅವರ ವಿಶೇಷ.

ಬೀದರ್‌, ಸಾಗರ, ಮೈಸೂರಿನಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಮೈಸೂರು ಮೃಗಾಲಯ ನಿರ್ದೇಶಕರಾಗಿದ್ದ ಅವರು ಕೈಗೊಂಡ ಸುಧಾರಣಾ ಕ್ರಮಗಳು ದೇಶದ ಹಲವು ಮೃಗಾಲಯಗಳಿಗೂ ಮಾದರಿಯಾಗಿವೆ.

ಆನಂತರ ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಎಂಟು ಮೃಗಾಲಯಗಳಿಗೂ ಚೈತನ್ಯ ನೀಡಿ ಸುಸ್ಥಿರ ಮಾದರಿ ಅಭಿವೃದ್ದಿಗೆ ಒತ್ತು ನೀಡಿದವರು. ಈಗ ಕರ್ನಾಟಕದ ಬಹುತೇಕ ಎಲ್ಲಾ ಮೃಗಾಲಯಗಳಲ್ಲೂ ಹುಲಿ, ಆನೆಗಳಿವೆ. ಉತ್ತರ ಕರ್ನಾಟಕದ ಜನರೂ ವನ್ಯ ಪ್ರಾಣಿಗಳನ್ನು ನೋಡುವಂತಾಗಿದೆ.

ವರ್ಗಕ್ಕೆ ಒಪ್ಪದ ಸಿದ್ದರಾಮಯ್ಯ

ಕೊಂಚ ಖಡಕ್‌ ಅಧಿಕಾರಿ ಎನ್ನುವ ಕಾರಣಕ್ಕೆ ಮೈಸೂರು ಮೃಗಾಲಯದಲ್ಲಿದ್ದಾಗ ಕೆಲವು ದೂರುಗಳು ಬಂದರೂ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ರವಿ ಅವರ ವರ್ಗಾವಣೆಗೆ ಅವಕಾಶ ನೀಡಿರಲಿಲ್ಲ. ಕೆಲಸ ಮಾಡಲು ಸಿದ್ದರಾಮಯ್ಯ ಅವರು ಮುಕ್ತ ವಾತಾವರಣ ಕಲ್ಪಿಸಿದ್ದರಿಂದ ಮುಚ್ಚುವ ಹಂತಕ್ಕೆ ಹೋಗಿದ್ದ ಮೈಸೂರು ಮೃಗಾಲಯ ಈಗ ಸುಸ್ಥಿರ ಮಾದರಿಗೆ ಹೆಸರಾಗಿದೆ.

ಇದರ ಹಿಂದೆ ಇದ್ದುದ್ದು ಬಿ.ಪಿ. ರವಿ ಅವರ ಕನಸು, ಕಾರ್ಯಯೋಜನೆ ಹಾಗೂ ಜಾರಿಯ ಸರಳ ಮಾರ್ಗೋಪಾಯಗಳು. ಈ ಕಾರಣದಿಂದಲೇ ರವಿ ಅವರಿಗೆ ಭಾರತದ ಅತ್ಯುತ್ತಮ ಐಎಫ್‌ಎಸ್‌ ಅಧಿಕಾರಿಗಳ ಪಟ್ಟಿಯಲ್ಲಿ ಸ್ಥಾನವಿದೆ.

ಪರಿಸರ ಪ್ರಧಾನ ಕಾರ್ಯದರ್ಶಿ

ಕಳೆದ ವರ್ಷ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಅರಣ್ಯ ಸಚಿವರಾಗಿ ಈಶ್ವರ ಖಂಡ್ರೆ ಅವರು ಅಧಿಕಾರ ವಹಿಸಿಕೊಂಡರು. ಆನಂತರ ಉತ್ತಮ ಅಧಿಕಾರಿಗಳನ್ನು ನಿಯೋಜಿಸಿದರು. ಅದರಲ್ಲಿ ಬಿ.ಪಿ. ರವಿ ಕೂಡ ಒಬ್ಬರು. ಮುಖ್ಯವಾಗಿ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಬಿ.ಪಿ.ರವಿ ಅವರನ್ನು ನೇಮಿಸಲಾಯಿತು. ಆನಂತರ ಬಡ್ತಿಯೊಂದಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿಯೂ ನಿಯೋಜಿಸಲಾಯಿತು. ಬೆಂಗಳೂರಿನಲ್ಲಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI)ಗೂ ಅವರನ್ನು ಮಹಾನಿರ್ದೇಶಕರಾಗಿ ನೇಮಿಸಲಾಯಿತು. ಪರಿಸರ ಸಂಬಂಧಿ ಚಟುವಟಿಕೆಗಳ ಸಂಯೋಜಿತ ಕೆಲಸಕ್ಕೆ ನೆರವಾಗಲಿದೆ ಎನ್ನುವುದು ಉದ್ದೇಶವಾಗಿತ್ತು. ಅದರಂತೆ ಚೆನ್ನಾಗಿಯೇ ಕೆಲಸ ಮಾಡಿದರು. ಪ್ರತ್ಯೇಕ ಪರಿಸರ ನೀತಿ ಸೇರಿದಂತೆ ಹಲವಾರು ಚಟುವಟಿಕೆಗೆ ಚಾಲನೆ ನೀಡಿದ್ದರು್ ಮುಖ್ಯವಾಗಿ ಪರಿಸರ ಇಲಾಖೆಯಲ್ಲಿನ ಕಡತದ ವಿಶೇಷ ಆಸಕ್ತಿಗೆ ಬ್ರೇಕ್‌ ಹಾಕಿದ್ದರು.

ಅಮೆರಿಕಾ ಪ್ರವಾಸ

ಆಗಸ್ಟ್‌ ತಿಂಗಳಿನಲ್ಲಿ ರವಿ ಅವರು ಕುಟುಂಬ ಸಮೇತರಾಗಿ ಅಮೇರಿಕಾ ಪ್ರವಾಸ ಕೈಗೊಂಡಿದ್ದರು. ಮಗಳ ಶಿಕ್ಷಣ ಡಿಸೆಂಬರ್‌ನಲ್ಲಿ ಮುಗಿಯಲಿದ್ದು., ಆಗ ಚಳಿ ಕಾರಣಕ್ಕೆ ಹೋಗಲು ಆಗುವುದಿಲ್ಲ ಎಂದು ಈಗಲೇ ಹೋಗಿದ್ದರು. ಅಮೆರಿಕಾದಿಂದ ಅವರು ವಾಪಾಸ್‌ ಬಂದಾಗ ಅವರ ವರ್ಗಾವಣೆ ಆದೇಶ ಜಾರಿಯಾಗಿತ್ತು. ಪರಿಸರ ಪ್ರಧಾನ ಕಾರ್ಯದರ್ಶಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಡುಗಡೆಗೊಳಿಸಲಾಗಿತ್ತು. ರವಿ ಅವರನ್ನು ಅರಣ್ಯ ಇಲಾಖೆ ಕಾರ್ಯಯೋಜನೆ ವಿಭಾಗದ ಪಿಸಿಸಿಎಫ್‌ ಹುದ್ದೆಗೆ ವರ್ಗಗೊಳಿಸಾಗಿತ್ತು. ಮೂರು ದಿನದ ಹಿಂದೆ ಅವರು ವಾಪಾಸ್‌ ಬಂದಾಗ ವರ್ಗಾವಣೆ ಆದೇಶ ಜಾರಿಯಾಗಿತ್ತು. ವರ್ಷದ ಹಿಂದೆ ಪರಿಸರ ಇಲಾಖೆಯಲ್ಲಿಯೇ ಇದ್ದ ಮತ್ತೊಬ್ಬ ಐಎಫ್‌ಎಸ್‌ ಅಧಿಕಾರಿ ವಿಜಯಮೋಹನ್‌ ರಾಜ್‌ ಅವರು ಮತ್ತೆ ಅದೇ ಹುದ್ದೆಗೆ ಬಂದಿದ್ದರು. ಅಲ್ಲದೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿಯೂ ನಿಯೋಜನೆಗೊಂಡಿದ್ದರು.

ಪ್ರತಿಕ್ರಿಯೆ ಏನು

ಸರ್ಕಾರ ಕಳೆದ ವರ್ಷ ನನ್ನನ್ನು ಪರಿಸರ ಇಲಾಖೆಗೆ ನೇಮಿಸಿತ್ತು.ಕೆಲಸ ಮಾಡಿದ್ದೇನೆ. ಈಗ ವರ್ಗ ಮಾಡಿದೆ. ಅಮೆರಿಕಾಕ್ಕೆ ಮಗಳ ಶಿಕ್ಷಣದ ಕಾರಣಕ್ಕೆ ಹೋಗಿದ್ದೆ. ಈ ವೇಳೆ ಆದೇಶ ಜಾರಿಯಾಗಿದೆ. ಅರಣ್ಯ ಇಲಾಖೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ ಎಂದಷ್ಟೇ ಬಿಪಿ ರವಿ ಅವರು ಹಿಂದೂಸ್ತಾನ್‌ ಟೈಂಸ್‌ಗೆ ಪ್ರತಿಕ್ರಿಯಿಸಿದರು.

ಪರಿಸರ ಇಲಾಖೆಯ ಕೆಲವು ಕಡತಗಳ ಸಹಿತ ವಿಚಾರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ರವಿ ಅವರ ನಡುವೆ ಭಿನ್ನಾಭಿಪ್ರಾಯವಿತ್ತು. ರವಿ ಅವರು ಅದಕ್ಕೆ ಒಪ್ಪಿರಲಿಲ್ಲ. ಈ ಕಾರಣದಿಂದಲೇ ಅಮೆರಿಕಾ ಪ್ರವಾಸಕ್ಕೆ ಹೋದಾಗ ವರ್ಗ ಮಾಡಲಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಚುರುಕಿನಿಂದ ಕೆಲಸ ಮಾಡುತ್ತಿರುವ ಈಶ್ವರ ಖಂಡ್ರೆ ಅವರ ಈ ನಿರ್ಧಾರದ ಹಿಂದೆ ಬೇರೆ ಕಾರಣಗಳೂ ಇರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

mysore-dasara_Entry_Point