Research on Areca: ಅಡಕೆಯಿಂದ ಮಾನವನ ಆರೋಗ್ಯಕ್ಕೆ ಏನು ಲಾಭ, ಕೇಂದ್ರ ಸರ್ಕಾರದಿಂದಲೇ ನಡೆಯಲಿದೆ ಅಧ್ಯಯನ, ವಿವಿಧ ತಂಡಗಳು ಭಾಗಿ
ಕನ್ನಡ ಸುದ್ದಿ  /  ಕರ್ನಾಟಕ  /  Research On Areca: ಅಡಕೆಯಿಂದ ಮಾನವನ ಆರೋಗ್ಯಕ್ಕೆ ಏನು ಲಾಭ, ಕೇಂದ್ರ ಸರ್ಕಾರದಿಂದಲೇ ನಡೆಯಲಿದೆ ಅಧ್ಯಯನ, ವಿವಿಧ ತಂಡಗಳು ಭಾಗಿ

Research on Areca: ಅಡಕೆಯಿಂದ ಮಾನವನ ಆರೋಗ್ಯಕ್ಕೆ ಏನು ಲಾಭ, ಕೇಂದ್ರ ಸರ್ಕಾರದಿಂದಲೇ ನಡೆಯಲಿದೆ ಅಧ್ಯಯನ, ವಿವಿಧ ತಂಡಗಳು ಭಾಗಿ

Research on Areca: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯವು ಅಡಕೆ ಸೇವನೆಯಿಂದ ಆಗಬಹುದಾದ ಆರೋಗ್ಯ ಪರಿಣಾಮಗಳ ಕುರಿತು ಸಂಶೋಧನೆ ನಡೆಸಲಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳು ಕೆಲಸ ಮಾಡಲಿವೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಅಡಕೆ ಬಳಸುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಸಂಶೋಧನೆಗೆ ಮುಂದಾಗಿದೆ.
ಅಡಕೆ ಬಳಸುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ಸಂಶೋಧನೆಗೆ ಮುಂದಾಗಿದೆ.

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವೊಂದರಲ್ಲಿ ಅಡಕೆಯೂ ಕ್ಯಾನ್ಸರ್ ಕಾರಕ ಎಂಬ ಅಂಶವನ್ನು ಹೇಳಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಬೆಳೆಗಾರರಲ್ಲಿ ಎದ್ದಿರುವ ಆತಂಕ ಶಮನಕ್ಕೆ ಕೇಂದ್ರ ಮುಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರಕಾರವು ಅಡಕೆ ಮತ್ತು ಮಾನವನ ಆರೋಗ್ಯ ಎಂಬ ವಿಷಯದಲ್ಲಿ ಸಾಕ್ಷಿ ಆಧರಿತ ಅಧ್ಯಯನ ಕೈಗೊಳ್ಳಲು ಮುಂದಾಗಿದೆ. ಆ ಮೂಲಕ ಅಡಕೆ ಬೆಳೆಗಾರರ ಹಿತರಕ್ಷಣೆ ಕುರಿತು ಭರವಸೆಯನ್ನು ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಕ್ಯಾನ್ಸರ್ ಕಾರಕ ಎಂಬ ವರದಿ ನೀಡಿದ ಹಿನ್ನೆಲೆಯಲ್ಲಿ ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಈ ಲಿಖಿತ ಪ್ರಶ್ನೆಗೆ ಕೃಷಿ ಸಚಿವಾಲಯ ಉತ್ತರ ನೀಡಿದೆ. ಅಡಕೆಯ ಔಷಧೀಯ ಗುಣಗಳ ಕುರಿತು ಸಂಶೋಧನೆ ಮಾಡುವುದಾಗಿ ಸಚಿವಾಲಯವು ಲಿಖಿತವಾಗಿ ಉತ್ತರ ನೀಡಿದೆ.

ಅಡಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಮಂಗಳವಾರ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವ ಭಗೀರಥ್ ಚೌಧರಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಡಕೆಯ ಔಷಧೀಯ ಗುಣಗಳ ಕುರಿತು ಆಸಕ್ತಿ ಹೊಂದಿದೆ. ಅಡಕೆ ಕುರಿತು ವೈಜ್ಞಾನಿಕ ಸಂಶೋಧನೆ ಹಾಗೂ ಮಾನವನ ಆರೋಗ್ಯ ಎಂಬ ಶೀರ್ಷಿಕೆಯಡಿ ಅಧ್ಯಯನ ಕೈಗೊಳ್ಳಲು ಯೋಜಿಸಲಾಗಿದೆ. ಈ ಅಧ್ಯಯನವು ಸುಮಾರು 16 ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಆಲ್ ಇಂಡಿಯಾ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ವೈದ್ಯಕೀಯ ಸಂಶೋಧನೆಯೊಂದಿಗೆ ಇತರ ಸಂಸ್ಥೆಗಳು ಅಡಕೆಯ ಪರಿಣಾಮದ ಕುರಿತ ವಿವರವಾದ ಸಂಶೋಧನೆ ನಡೆಸಲಿದ್ದಾರೆ ಎಂದು ಲಿಖಿತ ಉತ್ತರ ನೀಡಲಾಗಿದೆ.

ಕೇಂದ್ರ ಕೃಷಿ ಸಚಿವರು ಏನಂದರು?

ಅಡಕೆ ಬೆಳೆಗಾರರು ಈಗ ಎದುರಿಸುತ್ತಿರುವ ಸವಾಲುಗಳ ಕುರಿತು ಸರಕಾರಕ್ಕೆ ಅರಿವಿದೆ. ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸಿರುವ ಅಡಕೆಯ ಆರೋಗ್ಯದ ಪರಿಣಾಮಗಳ ಕುರಿತು ಕೆಲವು ಸಂಶೋಧನಾ ಪ್ರಬಂಧಗಳಲ್ಲಿ ಕೆಲ ಮಿತಿಗಳಿವೆ. ಹೀಗಾಗಿ ಆಗಾಗ ಕೆಲವು ವ್ಯತಿರಿಕ್ತವಾದ ವರದಿಗಳಿಗೆ ಕಾರಣವಾಗಿವೆ. ಈ ಕಾರಣದಿಂದ ಇನ್ನೊಮ್ಮೆ ಪ್ರತ್ಯೇಕವಾದ ಅಧ್ಯಯನ ನಡೆಯಲಿದೆ. ಹೆಚ್ಚಿನ ಅಧ್ಯಯನಗಳು ಹುಡಿ ಅಡಕೆ (ಕ್ವಿಡ್ ) ಮತ್ತು ಗುಟ್ಕಾದಂಥ ಮಿಶ್ರಣಗಳ ಆರೋಗ್ಯದ ಪರಿಣಾಮಗಳ ಮೇಲೆ ಕೆಂದ್ರೀಕರಿಸಿದೆ. ಇಲ್ಲಿ ಇತರ ಪದಾರ್ಥಗಳೊಂದಿಗೆ ಅಡಕೆ ಒಳಗೊಂಡಿದೆ. ಈ ಅಧ್ಯಯನಗಳು ಮಾನವನ ಆರೋಗ್ಯದ ಮೇಲೆ ಅಡಕೆಯ ಪ್ರತ್ಯೇಕ ಸೇವನೆಯ ಪರಿಣಾಮಗಳ ಕುರಿತು ಉಲ್ಲೇಖಿಸಿಲ್ಲ. ಹೀಗಾಗಿ ಪ್ರತ್ಯೇಕ ಅಧ್ಯಯನ ನಡೆಸಲಾಗುತ್ತದೆ. 2023ರ ನವೆಂಬರ್ ನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸಿಟಿಟ್ಯೂಟ್ ಕಾಸರಗೋಡು ಕೈಗೊಂಡಿರುವ ಅಧ್ಯಯನಗಳ ಪ್ರಕಾರ, ಅಡಕೆಯಲ್ಲಿ ಅರೆಕೊಲೈನ್ ಇರುವ ಕುರಿತು ಉಲ್ಲೇಖಿಸಿದ್ದವು. ಈ ಪ್ರಯೋಗಗಳಲ್ಲಿ ಬಳಸಲಾದ ಅರೆಕೊಲೀನ್ ಡೋಸೇಜ್ ಸಾಮಾನ್ಯ ಜಗಿಯುವ ಸಮಯದಲ್ಲಿ ಬಿಡುಗಡೆಯಾದ ಪ್ರಮಾಣಕ್ಕೆ ಹೋಲಿಸಿದರೆ, ಸ್ವಲ್ಪ ಹೆಚ್ಚಿದೆ ಎಂದು ಹೇಳಿತ್ತು ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿನ ಎಲ್ಲ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಡಕೆ ಪ್ರಮುಖ ಸ್ಥಾನ ಪಡೆದಿದೆ. ಆಯುರ್ವೇದದಲ್ಲೂ ಅಡಕೆ ಔಷಧೀಯವಾಗಿ ಬಳಕೆಯಾಗುತ್ತದೆ ಎಂದು ಸಚಿವಾಲಯದ ಉತ್ತರದಲ್ಲಿ ತಿಳಿಸಲಾಗಿದೆ. ವೀಳ್ಯದೆಲೆಯೊಂದಿಗೆ ಅಡಕೆಯನ್ನು ಸಾಂಪ್ರದಾಯಿಕವಾಗಿಯೂ ಬಳಸಲಾಘುತ್ತದೆ. ಆಹಾರದ ನಂತರ ತಾಂಬೂಲ ಸೇವನೆಗೂ ಅಡಕೆ ಬಳಸಲಾಗುತ್ತದೆ. ಎಂದು ಸಚಿವರು ತಿಳಿಸಿದ್ದಾರೆ.

ಕ್ಯಾಂಪ್ಕೊ ಪತ್ರ ಬರೆದಿತ್ತು

ಅಡಕೆ ಸುರಕ್ಷೆ, ಕ್ಯಾನ್ಸರ್ ರೋಗ ಶಮನಗೊಳಿಸುವ ಕುರಿತ ಆಯುರ್ವೇದ ಗುಣಗಳ ಕುರಿತು ಸಮಗ್ರ ಸಂಶೋಧನೆ ನಡೆಸಬೇಕು ಹಾಗೂ ಇದಕ್ಕಾಗಿ ಬಜೆಟ್ ನಲ್ಲಿ ಅನುದಾನ ನಿಗದಿಗೊಳಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು.

ವರದಿ: ಹರೀಶ ಮಾಂಬಾಡಿ. ಮಂಗಳೂರು

Whats_app_banner