Kodagu Tourism: ಕೊಡಗಿನಲ್ಲಿವೆ 4 ಸಾವಿರ ಹೋಂಸ್ಟೇ, 44 ಲಕ್ಷ ಪ್ರವಾಸಿಗರ ಭೇಟಿ; ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದ ಕೊಡಗು ಜಿಲ್ಲೆ
Kodagu Tourism Updates: ಕೊಡಗು ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು ಪ್ರತಿ ವರ್ಷ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ವಲಯವೂ ಕೊಡಗಿನಲ್ಲಿ ಗಟ್ಟಿಯಾಗಿ ನೆಲೆಯೂರಿದೆ.
ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗು ಜಿಲ್ಲೆ( Kodagu Tourism) ಪ್ರವಾಸಿಗರ ಪ್ರಮುಖ ಆಕರ್ಷಣೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರ ಆಕರ್ಷಣೆ ಇರುವ ಕಾರಣಕ್ಕೆ ಅವರಿಗೆ ಆತಿಥ್ಯ ನೀಡುವ ಹೋಂಸ್ಟೇ ಉದ್ಯಮವೂ ಗಟ್ಟಿಯಾಗಿ ನೆಲೆಯೂರಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿಯಂತೆಯೇ ಕೊಡಗಿನಲ್ಲಿ ಸರಿ ಸುಮಾರು 4 ಸಾವಿರ ಹೋಂಸ್ಟೇಗಳು ಇವೆ. ಕೆಲವು ದೊಡ್ಡಮಟ್ಟದಲ್ಲಿದ್ದರೆ, ಹೆಚ್ಚಿನವು ಒಂದು ಅಥವಾ ಎರಡು ಕುಟುಂಬಕ್ಕೆ ಆತಿಥ್ಯ ನೀಡುವ ಮನೆಗಳೇ ಹೋಂಸ್ಟೇ ರೂಪ ಪಡೆದಿವೆ. ಇದರೊಟ್ಟಿಗೆ ಈ ವರ್ಷವೂ ಗೂಗಲ್ ನಲ್ಲಿ ಹೆಚ್ಚು ಸರ್ಚ್ ಆದ ಜಿಲ್ಲೆಗಳ ಕರ್ನಾಟಕದ ಜಿಲ್ಲೆಗಳ ಪಟ್ಟಿಯಲ್ಲಿ ಕೊಡಗು ಜಿಲ್ಲೆಯೂ ಮುಂಚೂಣಿಯಲ್ಲಿದೆ.
ಇದನ್ನೂ ಓದಿರಿ: ಕಿತ್ತಳೆ ಹಣ್ಣು ತಿನ್ನೋದರಿಂದ ಏನೆಲ್ಲಾ ಪ್ರಯೋಜನೆಗಳಿವೆ
ಕೊಡಗು ಪ್ರವಾಸಿಗರ ಸ್ವರ್ಗ
ಕೊಡಗು ಜಿಲ್ಲೆಗೆ ಪ್ರತೀ ವರ್ಷ 40 ರಿಂದ 50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇಲ್ಲಿನ ಸ್ಥಳೀಯರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ದೊರೆಯುತ್ತಿದೆ. 2023 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಸುಮಾರು 43,69,507 ಮಂದಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ. 2024 ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ 20,67,168 ಮಂದಿ ಪ್ರವಾಸಿಗರು ಭೇಟಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕೊಡಗು ಜಿಲ್ಲೆಯಲ್ಲಿ 4 ಸಾವಿರದಷ್ಟು ಹೋಂ ಸ್ಟೇಗಳಿದ್ದು, ಇಲ್ಲಿಯವರೆಗೆ 2010 ಹೋಂ ಸ್ಟೇಗಳು ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆದಿದ್ದಾರೆ.
ಗೂಗಲ್‍ನಲ್ಲಿ ಅತೀ ಹೆಚ್ಚು ಕೊಡಗಿನ ಪ್ರವಾಸೋದ್ಯಮ ಕ್ಷೇತ್ರವನ್ನು ಹುಡುಕಿರುವುದು ಕಂಡುಬಂದಿದೆ. ಆ ನಿಟ್ಟಿನಲ್ಲಿ ರಾಜ್ಯದ ಪ್ರವಾಸೋದ್ಯಮದಲ್ಲಿ ಕೊಡಗು ಪ್ರಮುಖ ಸ್ಥಾನವನ್ನು ಹೊಂದಿದೆ ಎನ್ನುವುದು ಪ್ರವಾಸೋದ್ಯಮ ಇಲಾಖೆಯ ಅನಿತಾ ಭಾಸ್ಕರ್ ಅವರು ನೀಡುವ ವಿವರಣೆ.
ಅರ್ಥಿಕ ವಹಿವಾಟು ಉತ್ತಮ
ಕೊಡಗು ಜಿಲ್ಲೆಯ ಪ್ರಾಕೃತಿಕ ಸಂಪತ್ತು, ಪರಂಪರೆ, ಸಾಂಪ್ರದಾಯಿಕತೆ ಮತ್ತು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಪವಿತ್ರ ಕ್ಷೇತ್ರಗಳಿಗೆ ವಿಶೇಷ ಸ್ಥಾನ ಹೊಂದಿದೆ. ಹಸಿರನ್ನೇ ಉಸಿರಾಗಿಸಿಕೊಂಡಿರುವ ನಿಸರ್ಗದ ಪ್ರಾಕೃತಿಕ ಹಾಗೂ ಸ್ವಾಭಾವಿಕ ಸಂಪನ್ಮೂಲವನ್ನು ಹೊಂದಿರುವ ಕೊಡಗನ್ನು ಕಾಣುತ್ತೇವೆ. ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿ ಸಸ್ಯ ಸಂಪತ್ತನ್ನು ಹೊಂದಿ ಹಚ್ಚ ಹಸುರಿನಿಂದ ಕೂಡಿರುವ ಜಿಲ್ಲೆಯಾಗಿದೆ. ಮನೋಹರವಾದ ಪ್ರಾಕೃತಿಕ ಸೌಂದರ್ಯ ಆಕರ್ಷಿಸಿರುವುದು ವಿಶೇಷವಾಗಿದೆ.
ಎತ್ತರದ ಪರ್ವತ ಶ್ರೇಣಿಗಳು, ನದಿ, ತೊರೆ, ಹಳ್ಳ ಕೊಳ್ಳಗಳು, ಕಣಿವೆಗಳು, ಜಲಪಾತಗಳನ್ನು ಕೂಡಿದ್ದ ನಿಸರ್ಗ ರಮಣೀಯ ಪ್ರದೇಶವು ಪಶ್ಚಿಮಘಟ್ಟದಲ್ಲಿ ಕಂಡುಬಂದಿರುವುದು ವಿಶೇಷವೇ ಸರಿ. ಪ್ರವಾಸೋದ್ಯಮವು ಭಾರತದಲ್ಲಿ ಅತೀ ದೊಡ್ಡ ಸೇವಾ ವಲಯವಾಗಿದ್ದು, ರಾಷ್ಟ್ರದ ಜಿಡಿಪಿಗೆ ಪ್ರವಾಸೋದ್ಯಮ ಕೊಡುಗೆಗೆ ಶೇ.6 ರಷ್ಟು, ರಾಜ್ಯದ ಕೊಡುಗೆ ಶೇ.14 ರಷ್ಟು ಅಧಿಕವಾಗಿದೆ. 30 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಮಾಡಿರುವುದು ಪ್ರವಾಸೋದ್ಯಮದ ಮಹತ್ವವನ್ನು ಸಾರುತ್ತದೆ.
ಜಾಗೃತಿ ಕಾರ್ಯಾಗಾರ
ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಗಾರವನ್ನೂ ಆಯೋಜಿಸಿ ಆರ್ಥಿಕವಾಗಿ ಲಾಭದಾಯಕ ಹಾಗೂ ಜವಾಬ್ದಾರಿಯಾಗಿ ಹೋಂಸ್ಟೇ ನಡೆಸುವ ಬಗ್ಗೆ ಹಾಗೂ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಬಾರ್ಕೋಡ್ ಅಳವಡಿಸುವ ಬಗ್ಗೆ ಇತರೆ ವಿಷಯದ ಬಗ್ಗೆಯೂ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿರುವ ನೋಂದಾಯಿತ ಹೋಂ-ಸ್ಟೇಗಳಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಜಿಲ್ಲೆಯ ಉತ್ಪನ್ನಗಳಾದ ಕಾಫಿ, ವೈನ್, ಚಾಕೋಲೇಟ್, ಜೇನು, ಮಸಾಲೆ ಪದಾರ್ಥಗಳಿಗೆ ಮೌಲ್ಯ ವರ್ಧನೆ ಮಾಡುವ ಬಗ್ಗೆ ಹಾಗೂ ಮಾರ್ಕೆಟಿಂಗ್ ಮಾಡುವ ಬಗ್ಗೆ ಹಾಗೂ ಸ್ವಾಸ್ಥ್ಯ ಕೇಂದ್ರ ಭಾರತ ಸರ್ಕಾರದ ಎಂಎಸ್‍ಎಂಇ ನೋಂದಣಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.