Opinion: ನಾನು ಎನ್ನುವ ಗರಿಮೆಯಿಲ್ಲದ ಜನರಿಂದ ತುಂಬಿದ ದೇಶ ಎಂದಿಗೂ ವಿಶ್ವಗುರುವಾಗಲು ಸಾಧ್ಯವಿಲ್ಲ; ರಂಗಸ್ವಾಮಿ ಮೂಕನಹಳ್ಳಿ ಮಾತಿನ ಮರ್ಮವೇನು
ಮನುಷ್ಯನಿಗೆ ಸ್ವಾಭಿಮಾನಕ್ಕಿಂತ ದೊಡ್ಡದು ಬೇರೇನಿಲ್ಲ. ಆದರೆ ನಮ್ಮಲ್ಲಿ ಅದು ಕೊರತೆಯಾಗಿದೆ. ರಾಜಕಾರಣಿಗಳ ಬೂಟಾಟಿಕೆಯ ಬಲಿಪಶುಗಳು ನಾವಾಗುತ್ತಿದ್ದೇವೆ ಎನ್ನುವ ಅರಿವೆ ಇಲ್ಲವಾಗಿದೆ. ಸ್ವಾಭಿಮಾನದ ಬದುಕನ್ನೇ ಮೂಲೆಗೆ ಎಸೆದು ಎತ್ತಣಿಂದೆತ್ತ ಸಾಗುತ್ತಿದ್ದಾನೆ ಎಂಬುದರ ಕುರಿತು ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ. ಈ ಮುಂದೆ ಓದಿ.
ದೇಶ, ಭಾಷೆಗಳಿಗೆ ಹೇಗೆ ಅಸ್ಮಿತೆ ಎನ್ನುವುದನ್ನು ನಾವು ಕಟ್ಟಿಕೊಂಡಿದ್ದೇವೆ, ಹಾಗೆ ನಾನು ಎನ್ನುವ ಬಗ್ಗೆ ಗೌರವ, ಅಸ್ಮಿತೆ ಬೆಳಸಿಕೊಳ್ಳಬೇಕು. ನಾನು ಎನ್ನುವುದು ಅಹಂ ಆಗಿ ಉಳಿದುಕೊಂಡರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಾನು ಎನ್ನುವುದು ಸ್ವಾಭಿಮಾನವಾಗಬೇಕು. ನಾನು ಎನ್ನುವುದು ಅಂತಃಸತ್ವವನ್ನ ವೃದ್ಧಿಸಬೇಕು. ನಾನು ಎನ್ನುವುದು ಸ್ವಕಲ್ಯಾಣಕ್ಕೆ, ಲೋಕಕಲ್ಯಾಣಕ್ಕೆ ಸ್ವಲ್ಪವಾದರೂ ಕಾಣಿಕೆ ನೀಡುವಂತಿರಬೇಕು. ನಾನು ಎನ್ನುವುದು ಎಂದಿಗೂ ಇತರರ ‘ನಾನು’ವಿನೊಂದಿಗೆ ಗುದ್ದಾಟಕ್ಕೆ ಇಳಿಯಬಾರದು. ನಾನು ಏನು ಎನ್ನುವ ಪ್ರಶ್ನೆ ಆತ್ಮ ಸಾಕ್ಷಾತ್ಕಾರಕ್ಕೆ ದಾರಿಯಾಗಬೇಕು. ನಾನು ಎನ್ನುವ ಗರಿಮೆ, ಹಿರಿಮೆಗಳಿಲ್ಲದ ಮನುಷ್ಯ ಬದುಕಿದ್ದೂ ಸತ್ತಂತೆ! ಬನ್ನಿ ಒಂದಷ್ಟು ಉದಾಹರಣೆಗಳನ್ನ ನೋಡೋಣ. ನಾನು ಎನ್ನುವ ಗರಿಮೆಯಿಲ್ಲದ ಜನರಿಂದ ತುಂಬಿದ ದೇಶ ಎಂದಿಗೂ ವಿಶ್ವಗುರುವಾಗಲು ಸಾಧ್ಯವಿಲ್ಲ.
- ಘಟನೆ 1
ಜಗತ್ತಿನ ಯಾವುದೇ ಏರ್ಪೋರ್ಟ್ ಇಳಿದು ಟಾಯ್ಲೆಟ್ ಪ್ರವೇಶಿಸಿ ಅವು ಸ್ವಚ್ಛವಾಗಿರುತ್ತವೆ. ಅಲ್ಲೇ ಕುಳಿತು ಊಟ ಮಾಡಲು ಯೋಗ್ಯ ಎನ್ನುವಷ್ಟು ಸ್ವಚ್ಛ!! ಅದನ್ನ ಶುಚಿಗೊಳಿಸಿದವರು ನಿಮ್ಮ ಕಣ್ಣಿಗೂ ಬೀಳುವುದಿಲ್ಲ. ಬೆಂಗಳೂರು ಏರ್ಪೋರ್ಟ್ ಇಳಿದು ಟಾಯ್ಲೆಟ್ ಪ್ರವೇಶಿಸಿ, ಸ್ವಚ್ಛತೆ ಪರವಾಗಿಲ್ಲ, ಆದರೆ ಅದನ್ನ ಶುದ್ಧ ಗೊಳಿಸುವವನ ಗುಲಾಮಗಿರಿ, ಕಾಕಾ ಹಿಡಿಯುವಿಕೆ ಬೇಸರಗೊಳಿಸದಿದ್ದರೆ ನೀವೇ ಹೇಳಿ? ಕೈಗೆ ಟಿಶ್ಯೂ ಇಡುವುದಕ್ಕೆ ಬರುವುದು, ಇಲ್ಲಿ ಹೋಗಿ ಎನ್ನುವುದು, ಬೇಡವೆಂದರೂ ಐ ಕಾಂಟಾಕ್ಟ್ ಬೆಳೆಸಿ ನಮಸ್ಕಾರ, ಗುಡ್ ಮಾರ್ನಿಂಗ್ ಹೇಳುವುದು, ಇವೆಲ್ಲ ಏಕೆ ಗೊತ್ತೇ ಕೈಗೆ 10/20 ರೂಪಾಯಿ ಕೊಡಲಿ ಎನ್ನುವುದಕ್ಕೆ ಮಾತ್ರ . ಈ ರೀತಿಯ ಸ್ವಾಭಿಮಾನ ಬಿಟ್ಟವರನ್ನು ಬೇರೆಲ್ಲೂ ಕಂಡ ನೆನಪು ನನಗಿಲ್ಲ.
- ಘಟನೆ 2
ನೀರಿನ ಬಾಟೆಲ್ ಸೆಕ್ಯುರಿಟಿ ನಂತರ ಬಿಡುವುದಿಲ್ಲ, ಇದು ಜಗತ್ತಿನಾದ್ಯಂತ ಪಾಲಿಸುವ ನಿಯಮ. ಇದರ ಬಗ್ಗೆ ಯಾವುದೇ ಮಾತಿಲ್ಲ. ಬಾಟೆಲ್ ಸೀಲ್ ಕೂಡ ಓಪನ್ ಆಗದ ನೀರಿನ ಬಾಟೆಲ್ ಕಸದ ಬುಟ್ಟಿಗೆ ಹಾಕುವುದಕ್ಕೆ ಮನಸ್ಸಾಗದೆ ಅದನ್ನ ತೆಗೆದು ಇಟ್ಟುಕೊಳ್ಳಿ ಬಿಸಾಡಬೇಡಿ ಎನ್ನುವ ರಿಕ್ವೆಸ್ಟ್ ಮಾಡಿದರೆ ಯೂರೋಪಿನಲ್ಲಿ ಯಾವುದೇ ಭಾವುಕತೆಗೆ ಒಳಗಾಗದೆ ಅದನ್ನ ಬಿಸಾಕುತ್ತಾರೆ . ನಮ್ಮಲ್ಲಿ ಕೇಳುವುದೇ ಬೇಡ ಅದನ್ನ ಹಕ್ಕು ಎನ್ನುವಂತೆ ತೆಗೆದಿಟ್ಟುಕೊಳ್ಳುತ್ತಾರೆ. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ , ಸಂಪಾದನೆಯಿದ್ದರೂ 'ನಾನು ' ಎನ್ನುವ ಗರಿಮೆ ಮಾತ್ರ ಶೂನ್ಯ .
- ಘಟನೆ 3
ಸ್ವಿಸ್ ದೇಶದಲ್ಲಿ ಪ್ರಾಯೋಗಿಕವಾಗಿ ಬೇಸಿಕ್ ಯೂನಿವರ್ಸಲ್ ಇನ್ಕಮ್ ಜಾರಿಗೆ ತರುವುದಾಗಿ ಸರ್ಕಾರ 2018ಕ್ಕೂ ಮುಂಚೆ ಘೋಷಣೆ ಮಾಡಿತ್ತು. ಅಂದರೆ ಯಾರಿಗೆ ಕೆಲಸವಿರಲಿ ಬಿಡಲಿ ಸರ್ಕಾರ ಪ್ರತಿಯೊಬ್ಬ ಪ್ರಜೆಯ ಅಕೌಂಟ್ಗೆ ಮಾಸಿಕ 1800 ಸ್ವಿಸ್ ಫ್ರಾಂಕ್ ಹಾಕುವುದಾಗಿ ಹೇಳಿತ್ತು. ಅಲ್ಲಿನ ಜನ ತಕ್ಷಣ ಇದರ ವಿರುದ್ಧ ಪ್ರತಿಭಟನೆಗೆ ಇಳಿದರು. ತಿಂಗಳು ದೊಡ್ಡ ಮಾತು, ದಿನದಲ್ಲಿ ಸರ್ಕಾರ ತನ್ನ ಆದೇಶ ವಾಪಸ್ಸು ಪಡೆಯಿತು. ಜನರಲ್ಲಿರುವ ನಾನು ಎನ್ನುವ ಹಿರಿಮೆ ಅಂತಹದ್ದು.
- ಘಟನೆ 4
ಸ್ಪೇನ್ ದೇಶ ಸೇರಿದಂತೆ ಬಹಳಷ್ಟು ಯೂರೋಪಿಯನ್ ದೇಶಗಳು ಆರ್ಥಿಕವಾಗಿ ಜರ್ಜರಿತವಾಗಿದ್ದ ಕಾಲಘಟ್ಟವದು, 2009ರಿಂದ 2014 ರವರೆಗಿನ ಐದು ವರ್ಷ ಜನರ ಬದುಕಿನಲ್ಲಿ ಬಹಳಷ್ಟು ನೋವು ಉಂಟುಮಾಡಿದ ವರ್ಷಗಳವು. ತೀರಾ ಆರ್ಥಿಕವಾಗಿ ನಿಶಕ್ತವಾಗಿದ್ದ ಜನರು ಬೇರೆ ದಾರಿಯಿಲ್ಲದೆ ಕಮ್ಯುನಿಟಿ ಕಿಚನ್ನಲ್ಲಿ ಆಹಾರವನ್ನ ಪಡೆದುಕೊಳ್ಳುತ್ತಿದ್ದರು. ಉಳ್ಳವರು, ಸರ್ಕಾರ ಜೊತೆಯಾಗಿ ಪುಕ್ಕಟೆ ಊಟ ನೀಡುವ ಜಾಗಕ್ಕೆ ಕಮ್ಯುನಿಟಿ ಕಿಚನ್ ಎನ್ನಲಾಗುತ್ತದೆ. ಬಹಳಷ್ಟು ಜನ ಇಲ್ಲಿ ಆಹಾರ ತಿಂದರೂ ಅದನ್ನ ತಾವೇ ಲೆಕ್ಕವಿಟ್ಟುಕೊಳ್ಳುತ್ತಿದ್ದರು. ಇವತ್ತಿಗಿಲ್ಲ, ನಾಳೆ ಹಣ ಬಂದ ತಕ್ಷಣ ಇದನ್ನು ಹಿಂತಿರುಗಿಸುವೆ ಎನ್ನುವ ಮಾತುಗಳನ್ನ ಕೇಳಿದಕ್ಕೆ ಸಾಕ್ಷಿಯಾಗಿದ್ದೇನೆ.
- ಘಟನೆ 5
ಕರ್ನಾಟಕದಲ್ಲಿ ಬಸ್ ಫ್ರೀ ಎಂದದ್ದೇ ಕಾರಣ ಮಾಡಿಕೊಂಡು ಅದೆಷ್ಟು ಟ್ರೋಲ್ಗಳು, ಬಸ್ ಕಿಟಕಿಯಲ್ಲಿ ಹತ್ತುವುದು, ಬಾಗಿಲು ಮುರಿಯುವುದು ಒಂದೇ ಎರಡೇ? ಅದೆಷ್ಟು ಪ್ರಹಸನಗಳು. ಬಿಟ್ಟಿ ಎಂದತಕ್ಷಣ ನನಗೂ ಇರಲಿ ಸತ್ತಪ್ಪನಿಗೂ ಇರಲಿ, ಹುಟ್ಟದಿರುವ ಮಗುವಿಗೂ ಇರಲಿ ಎನ್ನುವ ಗುದ್ದಾಟಕ್ಕೆ ಜನ ಬೀಳುತ್ತಾರೆ. ಬಿಸ್ಕೆಟ್ ಪ್ಯಾಕೆಟ್ ಎಸೆದರೂ ಕ್ಯಾಚ್ ಹಿಡಿಯುತ್ತಾರೆ. ಎರಡೂವರೆ ಕೋಟಿ ಬೆಲೆಬಾಳುವ ಮನೆಯ ಒಡೆಯರು ಸರದಿಯಲ್ಲಿ ನಿಂತು ಕೋವಿಡ್ ಫುಡ್ ಕಿಟ್ ಪಡೆಯುತ್ತಾರೆ. ಹೇಳುತ್ತಾ ಹೋದರೆ ಅದೇ ಒಂದು ಗ್ರಂಥವಾದೀತು.
ನಾನು = ಸ್ವಾಭಿಮಾನ, ಇದನ್ನ ಬೆಳೆಸದೆ ಕಲಿಸದೇ ಏನೇ ಮಾಡಿದರೂ ಈ ದೇಶದ ಉದ್ದಾರ ಅಸಾಧ್ಯ. ಜಗತ್ತಿನಾದ್ಯಂತ ಭಾರತದ ಅಸ್ಮಿತೆಯನ್ನ ಭಾರತದ ನಾನು ಅಂದರೆ ಸ್ವಾಭಿಮಾನವನ್ನ ಎತ್ತಿ ಹಿಡಿಯುವ ಕೆಲಸವನ್ನ ಪ್ರಧಾನ ಸೇವಕರು ಮಾಡುತ್ತಿದ್ದಾರೆ. ಆದರೇನು ದೇಶದ ಜನರಲ್ಲಿ, ಆತನ ಪಕ್ಷದ ನೇತಾರರಲ್ಲಿ ನಾನು ಎನ್ನುವ ಸಾಭಿಮಾನ ತುಂಬದ ಹೊರತು ಬೇರೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ.
ನಾನು ಎನ್ನುವುದಿಲ್ಲದ ಜೀವ, ದೇಹ ಎರಡೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ದೇಶದ ಜನರಲ್ಲಿ ತನ್ನ ಬಗ್ಗೆ ಗೌರವ ಬಾರದ ಹೊರತು ಭಾರತ ಲೇಖನದಲ್ಲಿ, ಪೇಪರ್ ಹೆಡ್ಲೈನ್ಗಳಲ್ಲಿ ಮಾತ್ರ ವಿಶ್ವ ಗುರುವಾಗಲು ಸಾಧ್ಯ.
- ಹೋಗುವ ಮುನ್ನ
ನಿಜವಾದ ಆಶಕ್ತರಿಗೂ ಪುಕ್ಕಟೆ ಎನ್ನುವುದು ಅಭ್ಯಾಸವಾಗಬಾರದು, ಒಂದಷ್ಟು ಸಹಾಯ ನೀಡಿ ಅವರನ್ನ ಕೂಡ ಮುಂಚೂಣಿಗೆ ತರುವ ಕೆಲಸವಾಗಬೇಕು. ಪುಕ್ಕಟೆ ನೀಡಿ ಬರ್ಬಾದ್ ಆದ ದೇಶಗಳು ಬಹಳಷ್ಟಿವೆ , ಉದ್ದಾರವಾದವು ಯಾವುದೂ ಇಲ್ಲ. ಇನ್ನು ಬೆಲೆಯೇರಿಕೆಯ ಬಗ್ಗೆ ಮತ್ತೊಮ್ಮೆ ಬರೆಯುವೆ. ಜಗತ್ತು ಪೂಜಿಸುವ ಶಕ್ತಿಶಾಲಿಯಾಗಬೇಕು. ನಾನು ಎನ್ನುವ ಆತ್ಮಾಭಿಮಾನ ಬೆಳಸಿಕೊಳ್ಳಬೇಕು. ನಿರ್ವಿಯತೆಯೇ ಸಾವು. ಆತ್ಮಾಭಿಮಾನವೇ ಬದುಕು.
-ಬರಹಗಾರ ರಂಗಸ್ವಾಮಿ ಮೂಕನಹಳ್ಳಿ (ಈ ಮಾಹಿತಿ ಅವರ ಫೇಸ್ಬುಕ್ ಪೋಸ್ಟ್ನಲ್ಲಿ ಇದ್ದದ್ದು)