Karnataka weather: ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಚಳಿ: ದಕ್ಷಿಣ ಭಾಗದ ಕೆಲವೆಡೆ ನಾಳೆ ಮಳೆ
Karnataka Weather updates ಕರ್ನಾಟಕದಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕೊಂಚ ಹೆಚ್ಚಿದೆ. ಕರಾವಳಿ ಭಾಗದಲ್ಲಿ ಅಂತಹ ಚಳಿಯಿಲ್ಲ. ಮುಂದಿನ ನಾಲ್ಕೈದು ದಿನದಲ್ಲಿ ಮಳೆಯ ವಾತಾವರಣವಿಲ್ಲ.
ಬೆಂಗಳೂರು: ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಎರಡು ದಿನದಿಂದ ಕನಿಷ್ಠ ಉಷ್ಣಾಂಶ ಕುಸಿತದಿಂದ ಉತ್ತರ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಚಳಿ ಅಧಿಕವಾಗಿದೆ. ಕನಿಷ್ಠ ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆ ಇರುವುದು ಕಂಡು ಬರುತ್ತಿರುವುದು ಚಳಿ ಹೆಚ್ಚಳಕ್ಕೆ ಕಾರಣ.
ಕರ್ನಾಟಕದ ದಕ್ಷಿಣ ಭಾಗದ ಕೆಲವೆಡೆ ಗುರುವಾರ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಉಳಿದಂತೆ ಮುಂದಿನ ಐದು ದಿನಗಳ ಕಾಲ ಬೆಂಗಳೂರು, ಕರಾವಳಿ ಭಾಗದ ಜಿಲ್ಲೆಗಳು, ಉತ್ತರ ಕರ್ನಾಟಕದ ಯಾವ ಭಾಗದಲ್ಲೂ ಮಳೆಯ ಸೂಚನೆಯಿಲ್ಲ.
ಚಳಿಯ ವಾತಾವರಣ
ಉತ್ತರ ಕರ್ನಾಟಕ ಭಾಗದ ವಿಜಯಪುರದಲ್ಲಿಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಂಗಳವಾರ ವಿಜಯಪುರದಲ್ಲಿ 14.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದರೆ, ಬೀದರ್‌ನಲ್ಲಿ 15 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಬಾಗಲಕೋಟೆಯಲ್ಲಿ 17.9 ಡಿಗ್ರಿ ಸೆಲ್ಸಿಯಸ್, ಗದಗ ಹಾಗೂ ಧಾರವಾಡದಲ್ಲಿ 18 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ವಿಮಾನ ನಿಲ್ದಾಣದಲ್ಲಿ 18.6 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಕಂಡು ಬಂದಿತು. ಕಲಬುರಗಿಯಲ್ಲಿ 18.8 ಡಿಗ್ರಿ ಸೆಲ್ಸಿಯಸ್, ಕೊಪ್ಪಳದಲ್ಲಿ 19.2 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ನಗರದಲ್ಲಿ 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ 20 ಡಿಗ್ರಿ, ಹಾವೇರಿಯಲ್ಲಿ 20.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿತು.
ದಕ್ಷಿಣ ಒಳನಾಡಿನಲ್ಲೂ ಕೆಲ ದಿನಗಳಿಂದ ಚಳಿಯ ವಾತಾರಣವೇ ಇದೆ. ಬೆಂಗಳೂರಿನಲ್ಲಿ 17.7 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ 17.1 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರಿನಲ್ಲಿ 14.4 ಡಿಗ್ರಿ, ಚಿಂತಾಮಣಿಯಲ್ಲಿ 15.8 ಡಿಗ್ರಿ, ಚಿತ್ರದುರ್ಗದಲ್ಲಿ 17.8 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದಲ್ಲಿ 19.6 ಡಿಗ್ರಿ. ಮಡಿಕೇರಿಯಲ್ಲಿ18.9 ಡಿಗ್ರಿ, ಚಾಮರಾಜನಗರದಲ್ಲಿ 18.7 ಡಿಗ್ರಿ, ದಾವಣಗೆರೆಯಲ್ಲಿ 19 ಡಿಗ್ರಿ, ಮಂಡ್ಯದಲ್ಲಿ 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದಿತು.
ಕರಾವಳಿಯಲ್ಲಿ ಭಿನ್ನ ವಾತಾವರಣ. ಇಲ್ಲಿ ಕನಿಷ್ಠ ಉಷ್ಣಾಂಶ ಕೊಂಚ ಹೆಚ್ಚೇ ಇದೆ. ಅಂದರೆ ಉತ್ತರ ಕನ್ನಡದ ಶಿರಾಲಿಯಲ್ಲಿ21 ಡಿಗ್ರಿ ಸೆಲ್ಸಿಯಸ್, ಹೊನ್ನಾವರದಲ್ಲಿ 25.4 ಡಿಗ್ರಿ, ಕಾರವಾರದಲ್ಲಿ 25.7 ಡಿಗ್ರಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ 24.9 ಡಿಗ್ರಿ ಹಾಗೂ ಪಣಂಬೂರಿನಲ್ಲಿ 24.1 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಹೇಗಿದೆ ಮಳೆ ಸೂಚನೆ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಡಿ. 20, ಡಿ. 22 ಡಿ.23, ಡಿ.24 ರಂದು ಕರ್ನಾಟಕದ ರಾಜ್ಯದ ಎಲ್ಲಾ ಭಾಗಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಕರಾವಳಿ ಭಾಗದ ಮೂರು ಜಿಲ್ಲೆಗಳು, ಉತ್ತರ ಕರ್ನಾಟಕದ ಹಲವು ಭಾಗಗಳು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಒಣ ಹವೆ ಇರಬಹುದು ಎಂದು ತಿಳಿಸಲಾಗಿದೆ.
ಆದರೆ ಡಿ.21 ರ ಗುರುವಾರದಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರವಾಗಿ ಮಳೆಯಾಗುವ ಸಾಧ್ಯತೆಯಿದೆ. ಆದರೆ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದಲ್ಲಿ ಒಣ ಹವೆಯಿರಲಿದ್ದು, ಮಳೆಯಾಗುವ ಸೂಚನೆಗಳಿಲ್ಲ.
ಬೆಂಗಳೂರು ಹವಾಮಾನ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಹಾಗೂ ಗುರುವಾರ ಮಳೆಯಾಗುವ ವಾತಾವರಣವಿಲ್ಲ. ಈ ಭಾಗದಲ್ಲಿ ಮೋಡ ಕವಿದ ವಾತಾವರಣವೇ ಹೆಚ್ಚು ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಮುಂಜಾನೆಯೇ ಮಂಜು ಮುಸುಕುವ ಸಾಧ್ಯತೆಗಳು ಅಧಿಕ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ.