ಕನ್ನಡ ಸುದ್ದಿ  /  Karnataka  /  Karwar News Shree Swarnavalli Matha 55 Yathi Ananda Bodhendra Saraswathi Swami Sirsi Sonda Pcp

ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ: 55 ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ನಿಯೋಜನೆ

ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ 55ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಅವರು ಗುರುವಾರ ನಿಯೋಜನೆಗೊಂಡಿದ್ದಾರೆ. ಶಂಕರಾಚಾರ್ಯ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ ಬ್ರಹ್ಮಚಾರಿ ವಿದ್ವಾನ್ ನಾಗರಾಜ ಭಟ್ಟ ಗಂಗೆಮನೆ ಅವರು ಆಯ್ಕೆಗೊಂಡಿದ್ದರು.

ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ: 55 ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ
ಶಿರಸಿ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ: 55 ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ

ಕಾರವಾರ: ಸುಮಾರು ಸಾವಿರದ ಮುನ್ನೂರು ವರ್ಷದಷ್ಟು ಇತಿಹಾಸ ಇದೆ ಎಂದು ಹೇಳಲಾಗುವ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ 55ನೇ ಯತಿಗಳಾಗಿ ಆನಂದಬೋಧೇಂದ್ರ ಸರಸ್ವತಿ ಸ್ವಾಮೀಜಿ ಅವರು ಗುರುವಾರ ನಿಯೋಜನೆಗೊಂಡಿದ್ದಾರೆ.

ಶಂಕರಾಚಾರ್ಯ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ ಬ್ರಹ್ಮಚಾರಿ ವಿದ್ವಾನ್ ನಾಗರಾಜ ಭಟ್ಟ ಗಂಗೆಮನೆ ಅವರು ಆಯ್ಕೆಗೊಂಡಿದ್ದರು.

ಕಳೆದ ಫೆ.18ರಿಂದ ನಡೆಯುತ್ತಿದ್ದ ಶಿಷ್ಯಸ್ವೀಕಾರ ಮಹೋತ್ಸವದ ಕಾರ್ಯಕ್ರಮದ ಕೊನೇ ದಿನವಾದ ಶೋಭನ ಸಂವತ್ಸರದ ಮಾಘ ಶುಕ್ರ ತ್ರಯೋದಶಿ ಗುರುವಾರ ಬೆಳಗ್ಗೆ 10 ಗಂಟೆಯಿಂದ 10.10ರ ಅವಧಿಯಲ್ಲಿ ನೂತನ ಶ್ರೀಗಳಿಗೆ ಸನ್ಯಾಸ ದೀಕ್ಷೆ ಮಾಡಲಾಯಿತು.

ಇದರ ಅಂಗವಾಗಿ ನಿಯೋಜಿತ ಯತಿಗಳಿಗೆ ಶಾಲ್ಮಲಾ ನದಿಯಲ್ಲಿ ಜಲಾಶಯಗಮನ, ಸಾವಿತ್ರಿಪ್ರವೇಶ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರಧಾರಣೆ, ಪ್ರಣವ ಮಹಾವಾಕ್ಯೋಪದೇಶದಂಥ ಧಾರ್ಮಿಕ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆದವು.

ರಾಜ್ಯದ ನಾನಾಭಾಗಗಳಿಂದ ಆಗಮಿಸಿದ ಯತಿಗಳಾದ ಯಡತೊರೆ ಶ್ರೀ ಶಂಕರ ಭಾರತಿ ಮಹಾಸ್ವಾಮೀಜಿ, ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವರೂಪಿ ಮಹಾಸ್ವಾಮೀಜಿ, ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ವಿಶ್ವೇಶ್ವರ ಭಾರತಿ ಮಹಾಸ್ವಾಮೀಜಿ ಸಮ್ಮುಖ ಸ್ವರ್ಣವಲ್ಲೀ ಪೀಠದ 54ನೇ ಯತಿಗಳಾದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ನೂತನ ಯತಿಗಳಿಗೆ ಆನಂದಬೋದೇಂದ್ರ ಸರಸ್ವತಿ ಸ್ವಾಮೀಜಿ ಎಂದು ಮೂರು ಬಾರಿ ಘೋಷಿಸುವ ಮೂಲಕ ನಾಮಕರಣ ಮಾಡಿದರು.

ಮುಂಜಾನೆ 5 ಗಂಟೆಯಿಂದಲೇ ನಾನಾ ಧಾರ್ಮಿಕ ಹಾಗೂ ಕಾರ್ಯಶೋಧನ ಕಾರ್ಯಕ್ರಮಗಳು ಶ್ರೀಮಠದಲ್ಲಿ ನಡೆದವು. ಬೆಳಗ್ಗೆ 9.40ರಸುಮಾರಿಗೆ ಶ್ರೀಮಠದಿಂದ ಸುಮಾರು 1 ಕಿ.ಮೀ. ದೂರದ ಶಾಲ್ಮಲಾ ನದಿಯತ್ತ ಜಲಾಶಯಗಮನ ಮಾಡಲಾಯಿತು. ಬಳಿಕ ನೂತನ ಉತ್ತರಾಧಿಕಾರಿಗಳು ಸ್ನಾನ ಪೂರ್ಣಗೊಳಿಸಿ, ಮೇಲ್ಮುಖವಾಗಿ ಜನಿವಾರ ತೆಗೆದು, ಶಿರದ ಮೇಲಿನ ಆರು ಕೂದಲು ಹರಿದು, ಸಂಸಾರದ ಬಂಧ ಸಹಿತ ಸರ್ವಸ್ವವನ್ನೂ ತ್ಯಾಗ ಮಾಡಿ ಏಳು ಹೆಜ್ಜೆ ಇಟ್ಟರು. ಪ್ರಪಂಚ ಬಂಧನ ಬಿಟ್ಟ ಅವರಿಗೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಾಷಾಯ ವಸ್ತ್ರ ನೀಡಿದರು.

ಈ ಸಂದರ್ಭ ಸೇರಿದ್ದ ಸಾವಿರಾರು ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಬಳಿಕ ಧಾರ್ಮಿಕ ಕಾರ್ಯಕ್ರಮಗಳಾದ ಪರ್ಯಂಕ ಶೌಚ, ಯೋಗ ಪಟ್ಟ, ಬ್ರಹ್ಮವಿದಾರ್ಶೀರ್ವಚನ ಕಾರ್ಯಕ್ರಮಗಳು ನಡೆದವು.

  • ವರದಿ: ಹರೀಶ್‌ ಮಾಂಬಾಡಿ

IPL_Entry_Point