Dalit Leaders joined Congress: ಬೆಂಗಳೂರಿನಲ್ಲಿ 'ಕೈ' ಹಿಡಿದ ದಲಿತ ಸಂಘಟನೆ ಮುಖಂಡರು; ಬಿಜೆಪಿ ವಿರುದ್ಧ ಸುರ್ಜೇವಾಲ ಕಿಡಿ
ದಲಿತ ಸಂಘನೆಗಳ ವಿವಿಧ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿಂದು ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಇದರ ನಡುವೆ ಪಕ್ಷಾಂತರ ಪರ್ವ ಕೂಡ ಮುಂದುವರಿದಿದೆ.
ದಲಿತ ಸಂಘಟನೆಯ ಅನೇಕ ಮುಖಂಡರು ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೇವಾಲ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ದಲಿತ ಮುಖಂಡರಾದ ಸುದಾಮ್ ದಾಸ್, ನಿಂಬಣ್ಣ, ಬಿ ಗೋಪಾಲ, ಹೆಣ್ಣೂರು ಶ್ರೀನಿವಾಸ್ ಸೇರಿದಂತೆ ಅನೇಕ ದಲಿತ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ‘ಕೈ’ ಹಿಡಿದಿದ್ದಾರೆ.
ಕೆಪಿಸಿಸಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ, ಮಾಜಿ ಸಚಿವ ಹೆಚ್ ಆಂಜನೇಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ರಂದೀಪ್ ಸುರ್ಜೇವಾಲ, ಕಾಂಗ್ರೆಸ್ ಪಕ್ಷದ ಹೊರಗಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಪರವಾಗಿ ಧ್ವನಿ ಎತ್ತಿರುವ ಈಗ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಿ ಶೋಷಿತ ವರ್ಗದ ಪರವಾಗಿ ಕೆಲಸ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ದೌರ್ಜನ್ಯಕ್ಕೆ ಒಳಗಾಗಿರುವ ಪರಿಶಿಷ್ಟ ಸಮುದಾಯದ ನಾಯಕರು ಇಂದು ಪಕ್ಷದ ಜತೆ ಕೆಲಸ ಮಾಡಲು ಮುಂದಾಗಿದ್ದಾರೆ. ಈ ನಾಯಕರು ಇಷ್ಟು ದಿನ ರಾಜಕೀಯ ಪಕ್ಷಗಳಿಂದ ಹೊರಗಿದ್ದು ಕೆಲಸ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ವರ್ಗದವರಿಗೆ ನ್ಯಾಯ ಸಿಗಲಿದೆ ಎಂದು ಅರಿತು ಇಂದು ಪಕ್ಷ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೋಸ ಮಾಡಿದೆ
ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ವಿಚಾರದಲ್ಲಿ ಮೋಸ ಮಾಡಿದೆ. ಬೊಮ್ಮಾಯಿ ಅವರ ಸರ್ಕಾರ ದಲಿತರಿಗೆ ದ್ರೋಹ ಬಗೆದಿದೆ. ಈ ಹಿಂದೆ ಸಂಸತ್ತಿನಲ್ಲಿ ದಲಿತರಿಗೆ ಮೀಸಲಾತಿ ನಿರಾಕರಿಸಿದೆ. ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಾಗಮೋಹನ್ ದಾಸ್ ವರದಿ ಶಿಫಾರಸ್ಸಿನ ಮೇರೆಗೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಪರಿಶಿಷ್ಟ ಪಂಗಡ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಏರಿಸುವ ಕುರಿತು ರಾಜ್ಯ ಬಿಜೆಪಿ ಸರ್ಕಾರ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ.
ಸಂವಿಧಾನದಲ್ಲಿ ಮೀಸಲಾತಿ ವಿಚಾರವನ್ನು ಜಾರಿಗೆ ತರಬೇಕಾದರೆ ಅದನ್ನು ಸಂವಿಧಾನದ 9ನೇ ಶೆಡ್ಯುಲ್ ಗೆ ಸೇರಿಸಿದರೆ ಮಾತ್ರ ಅದಕ್ಕೆ ಮಾನ್ಯತೆ ಇರುತ್ತದೆ. ಆದರೆ ಬೊಮ್ಮಾಯಿ ಅವರ ಸರ್ಕಾರ ಮೀಸಲಾತಿ ಹೆಚ್ಚಳ ಆದೇಶವನ್ನು ಶೆಡ್ಯುಲ್ 9ಕ್ಕೆ ಸೇರಿಸದ ಹಿನ್ನೆಲೆಯಲ್ಲಿ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿರುವ ಕಾಯ್ದೆ ಒಂದು ಬೋಗಸ್ ಕಾಯ್ದೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಹಾಲಿ ಮೀಸಲಾತಿ ಪ್ರಮಾಣವನ್ನು 50% ರಿಂದ 56%ಕ್ಕೆ ಏರಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸಿಎಂ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ
ಹೀಗಾಗಿ ಬೊಮ್ಮಾಯಿ ಅವರು ಮಂಡಿಸಿರುವ ಬೋಗಸ್ ಕಾನೂನಿಗೆ ಯಾವುದೇ ಮಾನ್ಯತೆ ಇಲ್ಲ. ಅದರಿಂದ ಯಾವುದೇ ಪ್ರಯೋಜನವೂ ಇಲ್ಲ. ಪರಿಶಿಷ್ಟರಿಗೆ ಮೋಸ ಮಾಡಿರುವ ಬೊಮ್ಮಾಯಿ ಅವರಲ್ಲಿ ಸ್ವಲ್ಪವಾದರೂ ಮಾನ ಮರ್ಯಾದೆ ಉಳಿದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ರಾಜ್ಯದಿಂದ ಆಯ್ಕೆಯಾಗಿರುವ ನಾಲ್ವರು ಕೇಂದ್ರ ಸಚಿವರು ಪರಿಶಿಷ್ಟರಿಗೆ ಆಗಿರುವ ಅನ್ಯಾಯಕ್ಕೆ ಪ್ರತಿಯಾಗಿ ತಮ್ಮ ರಾಜೀನಾಮೆ ನೀಡಜಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಾಸಕರು ಹಾಗೂ ಸಂಸದರು ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವುದಕ್ಕೆ ಅವರೂ ಕೂಡ ರಾಜೀನಾಮೆ ನೀಡಬೇಕು. ರಾಜ್ಯದ ಪರಿಶಿಷ್ಟ ವರ್ಗದ ಜನರು ಇವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.