ಲೋಕಸಭೆ ಚುನಾವಣೆ; ಬೆಂಗಳೂರು ನಗರ ಚುನಾವಣಾಧಿಕಾರಿಗಳ ಕಚೇರಿ ಸುತ್ತ ನಿಷೇಧಾಜ್ಞೆ ಜಾರಿ, ಮೆರವಣಿಗೆ ಸಭೆಗೆ ಇಲ್ಲ ಅವಕಾಶ
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಕರ್ನಾಟಕದಲ್ಲಿ ಇದು ಮೊದಲ ಹಂತವಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯ ಚುನಾವಣಾಧಿಕಾರಿಗಳ ಕಚೇರಿಗಳ ಸುತ್ತ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿದೆ. ಅಲ್ಲಿ 5 ಜನರ ಗುಂಪು ಸೇರುವಂತಿಲ್ಲ, ಮೆರವಣಿಗೆ, ಸಭೆ ನಡೆಸುವಂತಿಲ್ಲ.(ವರದಿ-ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ದೇಶದ ಎರಡನೇ ಹಂತದ ಮತ್ತು ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಹಾಗೂ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸೆ.144 ಜಾರಿಗೊಳಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇಂದು (ಮಾರ್ಚ್ 28) ಬೆಳಗ್ಗೆ 10 ಗಂಟೆಯಿಂದ ಏಪ್ರಿಲ್ 8 ರ ಸಂಜೆ 6 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸ್ವೀಕರಿಸುವ ಚುನಾವಣಾಧಿಕಾರಿಗಳ ಕಚೇರಿಗಳ ಸುತ್ತ ಜಾರಿಯಲ್ಲಿರುತ್ತದೆ.
ಇಂದಿನಿಂದ ನಾಮಪತ್ರ ಸಲ್ಲಿಕೆ; ಚುನಾವಣಾ ನಿಯಮ ಜಾರಿ
ನಾಮಪತ್ರ ಸಲ್ಲಿಸುವ ಮತ್ತು ಹಿಂಪಡೆಯುವ ಪ್ರಕ್ರಿಯೆಯು ನಡೆಯಲಿದ್ದು, ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಚೇರಿಯ ಬಳಿ ಗುಂಪು ಸೇರುವ ಸಾಧ್ಯತೆಗಳಿರುತ್ತವೆ. ರಸ್ತೆತಡೆ, ಮೆರವಣಿಗೆ, ಪ್ರತಿಭಟನೆ ಮೊದಲಾದ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಂಭವವಿರುತ್ತದೆ.
ಹೀಗೆ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಿ ಸರ್ಕಾರಿ ಕಚೇರಿಗಳ ಕಾರ್ಯಕಲಾಪಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳನ್ನು ದುರುಪಯೋಗ ಮಾಡಿಕೊಂಡು ಕೆಲವು ದುಷ್ಕರ್ಮಿಗಳು ಮತ್ತು ಸಮಾಜ ಘಾತುಕ ವ್ಯಕ್ತಿಗಳು ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುವ, ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಈ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಲಿದೆ. ಆದ್ದರಿಂದ ಕೆಲವು ನಿಬಂಧನೆಗಳಿಗೆ ಒಳಪಡುವಂತೆ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಭಂಗವುಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಸಭೆಗಳನ್ನು ನಡೆಸುವುದು ಮತ್ತು ಧ್ವನಿವರ್ದಕಗಳು ಬಳಸುವುದನ್ನು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಮುಂತಾದ ಮಾರಾಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟುಮಾಡುವ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳು ಅಥವಾ ಉಪಕರಣಗಳನ್ನು ಸಾಗಾಟ ಅಥವಾ ಶೇಖರಿಸುವಂತಿಲ್ಲ.
ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕೃತಿಗಳ ಪ್ರರ್ದಶನ ಮಾಡುವುದು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರ, ಸಂಕೇತ, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇದಿಸಲಾಗಿದೆ.
ಭಾರತದಲ್ಲಿ 7 ಹಂತಗಳ ಲೋಕಸಭೆ ಚುನಾವಣೆ, ಕರ್ನಾಟಕದಲ್ಲಿ 2 ಹಂತ
ದೇಶಾದ್ಯಂತ ಸಾರ್ವತ್ರಿಕ ಲೋಕಸಭಾ ಚುನಾವಣೆ ಪ್ರಕ್ರಿಯೆಯು ಮಾರ್ಚ್ 16ಕ್ಕೆ ಶುರುವಾಗಿದ್ದು ಜೂನ್ 6ರ ತನಕ ಏಳು ಹಂತಗಳಲ್ಲಿ ನಡೆಯುತ್ತದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನಕ್ಕೆ ಇಂದು ಅಧಿಸೂಚನೆ ಪ್ರಕಟವಾಗಿದೆ. ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.
(ವರದಿ-ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)