Belthangady Crime: ಪತ್ನಿಯ ಕಣ್ಣು, ಮುಖಕ್ಕೆ ಕಚ್ಚಿದ ಕುಡುಕ ಪತಿ: ದಕ್ಷಿಣ ಕನ್ನಡದಲ್ಲೊಂದು ವಿಲಕ್ಷಣ ಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕುಡುಕ ಪತಿಯೊಬ್ಬ, ತನ್ನ ಪತ್ನಿಯ ಕಣ್ಣು ಮುಖ ಕಚ್ಚಿ ವಿಕಾರಗೊಳಿಸಿದ ಭಯಂಕರ ಘಟನೆ ವರದಿಯಾಗಿದೆ. ನಿನ್ನೆ (ಡಿ.18) ರಾತ್ರಿ ಆತ ಈ ಕೃತ್ಯವೆಸಗಿದ್ದು, ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಮಗಳ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದ ಘಟನೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ನಿವಾಸಿ ಸುರೇಶ್ ಗೌಡ(55) ಎಂಬಾತ ಶಿಶಿಲ ಸಮೀಪ ಕೋಟೆಬಾಗಿಲಿನಲ್ಲಿ ತನ್ನ ಪತ್ನಿಯ ತಂದೆ ನೀಡಿದ ಜಾಗದಲ್ಲಿ ಮನೆ ಮಾಡಿ ವಾಸವಾಗಿದ್ದ, ಸೋಮವಾರ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರತೆಗೆದು, ಕಣ್ಣಿಗೂ ಕಚ್ಚಿ ಬಳಿಕ ಕೋಲಿನಿಂದ ಹೊಡೆದು ಎಡ ಭಾಗದ ಕಣ್ಣನ್ನು ಸಂಪೂರ್ಣ ಹಾನಿಗೊಳಿಸಿದ್ದಾನೆ.
ಮಗಳ ತಲೆಯ ಭಾಗಕ್ಕೆ ಮತ್ತು ಕಣ್ಣಿಗೆ ಹೊಡೆದಿದ್ದು ಇಬ್ಬರಿಗೂ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ತಂದೆಯ ಹೊಡೆತದಿಂದ ತಪ್ಪಿಸಿಕೊಂಡ ಮಗಳು ನೆರೆಮನೆಗೆ ಓಡಿ ವಿಷಯ ತಿಳಿಸಿದ್ದಾಳೆ. ಈ ಸಂದರ್ಭ ಆರೋಪಿ ಸುರೇಶ್ ತೋಟದೊಳಗೆ ತಪ್ಪಿಸಿಕೊಂಡಿದ್ದಾನೆ.
ಸ್ಥಳಕ್ಕೆ ಬಂದ ನೆರೆಮನೆಯವರು, ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಆರೋಪಿ ಸುರೇಶ್‌ನನ್ನು ಹುಡುಕಾಡಿದ್ದಾರೆ. ಕೊನೆಗೂ ಸತತ ಹುಡುಕಾಟದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ. ಸದ್ಯ ವಿಪರೀತ ಗಾಯಗೊಂಡ ತಾಯಿ ಮಗಳು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು ತಾಯಿ ಮಗಳ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕೇವಲ ಕುಡಿತ ಕಾರಣವೇ ಅಥವಾ ಬೇರೇನಾದರೂ ಅಮಲು ಪದಾರ್ಥ ಸೇವನೆ ಇತ್ತೇ?
ಘಟನೆಗೆ ಕೇವಲ ಕುಡಿತ ಕಾರಣವೇ ಅಥವಾ ಈತ ಬೇರೇನಾದರೂ ಅಮಲುಪದಾರ್ಥ ಸೇವನೆ ಮಾಡಿದ್ದನೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏಕೆಂದರೆ, ಕಂಠಪೂರ್ತಿ ಕುಡಿದು ಬಂದಿರುವ ಸುರೇಶ್ ಗೌಡ, ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಇದು ನಿತ್ಯದ ರೂಢಿಯೂ ಆಗಿತ್ತು.
ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಗಲಾಟೆ ತಾರಕಕ್ಕೇರಿ ಸುರೇಶ್ ಗೌಡ ಪತ್ನಿಯ ಕಣ್ಣು ಹಾಗೂ ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಬಳಿಕ ಕೋಲಿನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾನೆ ಎಂದು ದೂರಲಾಗಿದೆ.
ಪತಿಯ ಹಲ್ಲೆಯಿಂದಾಗಿ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿತ್ತು. ಪ್ರತಿ ಬಾರಿ ಕುಡಿದು ಬಂದಾಗಲೂ ಗಲಾಟೆ ಮಾಮೂಲು. ಆದರೆ ಇದು ತಾರಕಕ್ಕೇರಿ ಇಂಥ ಕೃತ್ಯವೆಸಗಲು ಕಾರಣವಾಗಿದೆ. ಹೀಗಾಗಿ ಇದರಲ್ಲಿ ಮದ್ಯದ ನಶೆ ಅಲ್ಲದೆ, ಬೇರೇನೋ ಘಾಟು ಇದೆ ಎಂಬ ಸಂಶಯವೂ ಸ್ಥಳೀಯರಲ್ಲಿ ವ್ಯಕ್ತವಾಗಿದೆ. ಈ ಎಲ್ಲ ವಿಚಾರಗಳ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.